ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಯವರ ಪುತ್ರ ರಾಹುಲ್ ಖರ್ಗೆ (Rahul Kharge) ಅವರ ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ಗೆ ಏರೋಸ್ಪೇಸ್ ಪಾರ್ಕ್‌ನಲ್ಲಿರುವ ಸಿಎ ನಿವೇಶನವನ್ನು ಕಾನೂನಿನ ಪ್ರಕಾರವೇ ನಿಗದಿತ ಬೆಲೆಗೆ ಕೊಡಲಾಗಿದೆ. ಅವರು ಅಲ್ಲಿ ಸಂಶೋಧನೆ ಮತ್ತು ತರಬೇತಿ ಕೇಂದ್ರ ಸ್ಥಾಪಿಸುವುದಾಗಿ ಹೇಳಿದ್ದಾರೆ. ಇದರಲ್ಲಿ ಬಿಜೆಪಿ ನಾಯಕ ಲೆಹರ್ ಸಿಂಗ್ ಆರೋಪಿಸಿರುವಂತೆ ಯಾವ ನಿಯಮವೂ ಉಲ್ಲಂಘನೆ ಆಗಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (M B Patil) ಹೇಳಿದ್ದಾರೆ.ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಖರ್ಗೆ ಅವರು ಐಐಟಿ ಪದವೀಧರರು. ಅವರ ಕುಟುಂಬವು ನಾನಾ ಬಗೆಯ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಕೆಐಎಡಿಬಿ ನಿಯಮಗಳ ಪ್ರಕಾರ ಸಿಎ ನಿವೇಶನಗಳಲ್ಲಿ ಆರ್ & ಡಿ ಕೇಂದ್ರಗಳು, ಉತ್ಕೃಷ್ಟತಾ ಕೇಂದ್ರಗಳು, ತಾಂತ್ರಿಕ ಸಂಸ್ಥೆಗಳು, ಕೌಶಲ್ಯಾಭಿವೃದ್ಧಿ, ಸರ್ಕಾರಿ ಕಚೇರಿಗಳು, ಬ್ಯಾಂಕು, ಆಸ್ಪತ್ರೆ, ಹೋಟೆಲ್, ಪೆಟ್ರೋಲ್ ಬಂಕ್, ಕ್ಯಾಂಟೀನ್, ವಸತಿ ಸೌಲಭ್ಯ ಇತ್ಯಾದಿಗಳ ಅಭಿವೃದ್ಧಿಗೆ ಅವಕಾಶವಿದೆ. ಆಸಕ್ತರು ಯಾರು ಬೇಕಾದರೂ ಇದಕ್ಕೆ ಪ್ರಯತ್ನಿಸಬಹುದು. ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯ ಶಿಫಾರಸಿನ ನಂತರವಷ್ಟೇ ಇವುಗಳ ಹಂಚಿಕೆಯಾಗುತ್ತದೆ. ಏರೋಸ್ಪೇಸ್ ಪಾರ್ಕಿನಲ್ಲಿ ರಾಹುಲ್ ಅವರಿಗೆ ಕೈಗಾರಿಕಾ ನಿವೇಶನವನ್ನೇನೂ ಕೊಟ್ಟಿಲ್ಲ. ಬದಲಿಗೆ, ಸಿಎ ನಿವೇಶನವನ್ನು ಆರ್ & ಡಿ ಕೇಂದ್ರ ಸ್ಥಾಪನೆಗಾಗಿ ನಿಗದಿತ ಬೆಲೆಗೆ ಕೊಡಲಾಗಿದೆ. ಇದರಲ್ಲಿ ಅವರಿಗೆ ಯಾವ ರಿಯಾಯಿತಿಯನ್ನೂ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಕೈಗಾರಿಕಾ ಪ್ರದೇಶದಲ್ಲೇ 116 ಎಕರೆಯನ್ನು ಬರೀ 50 ಕೋಟಿ ರೂ.ಗೆ ಕೊಡಲಾಗಿದೆ. ಅದರಿಂದ 137 ಕೋಟಿ ರೂ. ಬೊಕ್ಕಸಕ್ಕೆ ನಷ್ಟವಾಗಿದೆ. ಲೆಹರ್ ಸಿಂಗ್ ಅವರು ಈ ಬಗ್ಗೆಯೂ ಚಕಾರ ಎತ್ತಬಹುದಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.ಹಿಂದೆಲ್ಲ ಕೆಐಎಡಿಬಿ ಮಂಡಳಿಯೇ ಸಿ.ಎ. ನಿವೇಶನಗಳನ್ನು ಹಂಚುತ್ತಿತ್ತು. ಆದರೆ ನಾನು ಸಚಿವನಾದ ಮೇಲೆ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಅನುಮೋದನೆ ನೀಡುವ ಹಾಗೆ ಪಾರದರ್ಶಕ ವ್ಯವಸ್ಥೆ ಜಾರಿ ಮಾಡಲಾಗಿದೆ. ಅಲ್ಲದೆ ಮೊದಲ ಬಾರಿಗೆ ಸಿ.ಎ ನಿವೇಶನಗಳ ಹಂಚಿಕೆಯಲ್ಲೂ ಪರಿಶಿಷ್ಟರಿಗೆ ಶೇ 24.10ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಲೆಹರ್ ಸಿಂಗ್ ಈ ಸತ್ಯವನ್ನು ಅರಿತು ಮಾತನಾಡುವುದು ಒಳ್ಳೆಯದು ಎಂದು ಹೇಳಿದ್ದಾರೆ.Sign in to your account
Username or Email Address


Password

 Remember Me


