ಬೆಂಗಳೂರು: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ದುಪ್ಪಟ್ಟಾಗ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಒಂದರಲ್ಲೇ 1 ಕೋಟಿಗೂ ಹೆಚ್ಚು ವಾಹನಗಳಿವೆ. ಈ ಮಧ್ಯೆ ಪ್ರತಿದಿನ ರಸ್ತೆ ಗುಂಡಿಗಳು (Potholes) ಹಾಗೂ ಪಾರ್ಕಿಂಗ್ (Parking) ಸಮಸ್ಯೆ ತಲೆದೂರುತ್ತಿದೆ. ಹೀಗಾಗಿ ನಗರದಲ್ಲಿ ವಾಹನ ಸವಾರರು ಸಂಚಾರ ದಟ್ಟಣೆ ಸಮಸ್ಯೆಯಿಂದಾಗಿ ಪ್ರತಿದಿನ ಪರದಾಡುತ್ತಿದ್ದಾರೆ. ಈ ಕಿರಿಕಿರಿಗೆ ಶಾಶ್ವತ ಪರಿಹಾರಕ್ಕಾಗಿ ಈಗ ಬಿಬಿಎಂಪಿ (BBMP) ಹಾಗೂ ಟ್ರಾಫಿಕ್ ಪೊಲೀಸ್ ಇಲಾಖೆ ನಯಾ ಪ್ಲಾನ್ ರೂಪಿಸಿದೆ.ಪಾಲಿಕೆ, ಸಂಚಾರಿ ಪೊಲೀಸರು ಗುರ್ತಿಸಿರುವ ನಗರದ 12 ಪ್ರಮುಖ ರಸ್ತೆಗಳಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ಇದೆ. ಹೀಗಾಗಿ ಈ ರಸ್ತೆಗಳಲ್ಲಿ ಟ್ರಾಫಿಕ್ (Bengaluru Traffic) ತಗ್ಗಿಸಲು ಯೋಜನೆ ರೂಪಿಸಲಾಗಿದೆ. 273 ಕೋಟಿ ವೆಚ್ಚದಲ್ಲಿ ಫ್ರೀ ಕಾರಿಡಾರ್ ರಸ್ತೆಗಳನ್ನ ನಿರ್ಮಿಸಲು ಸಜ್ಜಾಗಿದ್ದು, 3 ವರ್ಷದೊಳಗೆ ಈ ಯೋಜನೆ ಮುಗಿಸಲು ಸರ್ಕಾರ ಸೂಚನೆ ನೀಡಿದೆ.ಸದ್ಯ ಸಂಚಾರ ಪೊಲೀಸರು ಸಿದ್ಧಪಡಿಸಿರುವ ವರದಿ ಪ್ರಕಾರ, ಮ್ಯಾನ್‍ಹೋಲ್ (Manhole) ಹಾಗೂ ಮಳೆ ನೀರು (Rain Water) ಸರಾಗವಾಗಿ ಹರಿಯದೆ ರಸ್ತೆಯಲ್ಲಿ ನಿಲ್ಲುವುದರಿಂದಲೂ ಟ್ರಾಫಿಕ್ ಸಮಸ್ಯೆ ಜಾಸ್ತಿಯಾಗಿದೆ. ಸಂಚಾರ ಪೊಲೀಸರ ಪ್ರಕಾರ ನಗರದಲ್ಲಿ 11 ಮ್ಯಾನ್‍ಹೋಲ್‍ಗಳು ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡಿವೆ. ಜೊತೆಗೆ 206 ಕಡೆ ಮಳೆ ನೀರು ರಸ್ತೆಯಲ್ಲಿ ನಿಲ್ಲುತ್ತಿದ್ದು, ಮಳೆಗಾಲದಲ್ಲಿ ವಾಹನಗಳ ಓಡಾಟಕ್ಕೆ ಸಮಸ್ಯೆ ಎದುರಾಗಿದೆ.ಯಾವ ರಸ್ತೆಗಳಲ್ಲಿ ಹೆಚ್ಚು ಟ್ರಾಫಿಕ್..!? 
* ಬಳ್ಳಾರಿ ರಸ್ತೆ:- ಚಾಲುಕ್ಯ ವೃತ್ತದಿಂದ ಹೆಬ್ಬಾಳವರೆಗೆ
* ಹಳೇ ಮದ್ರಾಸ್ ರಸ್ತೆ:- ಟ್ರಿನಿಟಿ ವೃತ್ತದಿಂದ ಕೆ.ಆರ್ ಪುರದವರೆಗೆ
* ಹಳೇ ವಿಮಾನನಿಲ್ದಾಣ ರಸ್ತೆ:- ಎಎಸ್‍ಸಿ ಕೇಂದ್ರದಿಂದ ಕಾಡುಗೋಡಿವರೆಗೆ
* ಸರ್ಜಾಪುರ ರಸ್ತೆ:- ಹೊಸೂರು ರಸ್ತೆಯ ಸೇಂಟ್ ಜಾನ್ಸ್ ಆಸ್ಪತ್ರೆಯಿಂದ ಕಾರ್ಮೆಲ್ ರಾಂ ಮೇಲ್ಸೇತುವೆವರೆಗೆ
* ಹೊಸೂರು ರಸ್ತೆ:- ವೆಲ್ಲಾರ ಜಂಕ್ಷನ್‍ನಿಂದ ಕೇಂದ್ರ ರೇಷ್ಮೆ ಮಂಡಳಿವರೆಗೆ
* ಬನ್ನೇರುಘಟ್ಟ ರಸ್ತೆ:- ಡೇರಿ ವೃತ್ತದಿಂದ ನೈಸ್ ರಸ್ತೆವರೆಗೆ
* ಕನಕಪುರ ರಸ್ತೆ:- ಕೆ.ಆರ್ ರಸ್ತೆಯಿಂದ ನೈಸ್ ರಸ್ತೆವರೆಗೆ
* ಮೈಸೂರು ರಸ್ತೆ:- ಹಡ್ಸನ್ ವೃತ್ತದಿಂದ ನೈಸ್ ರಸ್ತೆವರೆಗೆ
* ಮಾಗಡಿ ರಸ್ತೆ:- ಹಳೇ ಬಿನ್ನಿಮಿಲ್‍ನಿಂದ ನೈಸ್ ರಸ್ತೆವರೆಗೆ
* ತುಮಕೂರು ರಸ್ತೆ:- ಓಕಳಿಪುರದಿಂದ ಗೊರಗುಂಟೆಪಾಳ್ಯವರೆಗೆ
* ವೆಸ್ಟ್ ಆಫ್ ಕಾರ್ಡ್ ರಸ್ತೆ:- ಸ್ಯಾಂಡಲ್ ಸೋಪ್ ಕಾರ್ಖಾನೆಯಿಂದ ಮೈಸೂರು ರಸ್ತೆವರೆಗೆ
* ಹೊರವರ್ತುಲ ರಸ್ತೆ:- ಹೆಬ್ಬಾಳದಿಂದ ಕೆಆರ್ ಪುರ, ಕೇಂದ್ರ ರೇಷ್ಮೆ ಮಂಡಳಿ, ನಾಯಂಡಹಳ್ಳಿ ಜಂಕ್ಷನ್ ಮಾರ್ಗವಾಗಿ ಗೊರಗುಂಟೆ ಪಾಳ್ಯವರೆಗೆ ಟ್ರಾಫಿಕ್ ಜಾಮ್ ಹೆಚ್ಚಿರುತ್ತದೆ ಎಂದು ಗುರುತಿಸಲಾಗಿದೆ.ಹೀಗಾಗಿ ಈ ರಸ್ತೆಗಳಲ್ಲಿ ಮಳೆ ನೀರು ನಿಲ್ಲುವುದನ್ನು ತಡೆಯಲು ಗ್ರೇಟಿಂಗ್‍ಗಳ ಅಳವಡಿಕೆ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ 273 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಿಸಲಾಗುವುದು ಅಂತ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ತಿಳಿಸಿದ್ದಾರೆ. ಒಟ್ಟಿನಲ್ಲಿ ಸದ್ಯದಲ್ಲೆ ಈ ಕೆಲಸವೂ ಆರಂಭವಾಗಲಿದ್ದು, ಮೂರು ವರ್ಷದಲ್ಲಿ ಟ್ರಾಫಿಕ್ ದಟ್ಟಣೆಗೆ ಕಡಿವಾಣ ಬೀಳುತ್ತಾ ಅಥವಾ ಇದು ಮಗದೊಂದು ಭರವಸೆ ಕೊಟ್ಟು ಕೈತೊಳೆದುಕೊಳ್ಳುವ ಯೋಜನೆಯ ಕಾದು ನೋಡಬೇಕು.
Join our Whatsapp group by clicking the below link
https://chat.whatsapp.com/E6YVEDajTzH06LOh77r25kSign in to your account
Username or Email Address


Password

 Remember Me


