ಬೆಂಗಳೂರು: ಯಾರೂ ಯಾರನ್ನು ಮುಗಿಸಲು ಸಾಧ್ಯವಿಲ್ಲ. ನನಗೆ ನನ್ನದೇ ಆದ ಶಕ್ತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.ಕೊಪ್ಪಳಕ್ಕೆ ಹೊರಡುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ (BJP) ಯಡಿಯೂರಪ್ಪರನ್ನ (BS Yediyurappa) ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಈ ಆರೋಪದಲ್ಲಿ ಸತ್ಯಾಂಶ ಇಲ್ಲ. ನಾನು ಪಕ್ಷ ಕಟ್ಟಿ ಬೆಳೆಸಿದ್ದೇನೆ. ಪಕ್ಷ ಅಧಿಕಾರಕ್ಕೆ ತರಲು ಶ್ರಮ ಹಾಕಿದ್ದೇನೆ. ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಇದನ್ನೆ ಮುಂದುವರಿಸುತ್ತೇನೆ ಎಂದರು.ಕೊಪ್ಪಳದಲ್ಲಿ (Koppala) ನಡೆಯುವ ಕಾರ್ಯಕ್ರಮದ ಕುರಿತು ಮಾತನಾಡಿ, ಬೇರೆ ಕಾರಣಕ್ಕೆ ನಾನು ಇಂದು ಕಾರ್ಯಕ್ರಮಕ್ಕೆ ಹೋಗದೇ ಇರುವ ಸ್ಥಿತಿ ಇತ್ತು. ಆದರೆ ಈಗ ಹೋಗಲೇ ಬೇಕು ಅನ್ನೋ ಸ್ಥಿತಿ ಬಂತು. ಹೀಗಾಗಿ ಹೋಗುತ್ತಿದ್ದೇನೆ. ಈ ಕಾರ್ಯಕ್ರಮ ಕೊನೆ ಘಳಿಗೆಯಲ್ಲಿ ಆಹ್ವಾನ ಬಂದಿಲ್ಲ. ನಾನು ಹೋಗೋ ಸ್ಥಿತಿಯಲ್ಲಿ ಇರಲಿಲ್ಲ ಅದಕ್ಕೆ ಹೋಗಿರಲಿಲ್ಲ ಎಂದು ಹೇಳಿದರು.ಆದರೆ ನಡ್ಡಾ (JP Nadda) ಅವರು ಕೊಪ್ಪಳಕ್ಕೆ ಬರುತ್ತಿದ್ದಾರೆ. ಅವರ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ಸಿಎಂ ಕೂಡಾ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಇಬ್ಬರು ಒಟ್ಟಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಗೊಂದಲಗಳು ಇಲ್ಲ. ಮಾಧ್ಯಮ ಸ್ನೇಹಿತರು ಯಾವುದನ್ನು ಸೃಷ್ಟಿ ಮಾಡಲು ಹೋಗಬೇಡಿ ಎಂದು ಮನವಿ ಮಾಡಿದರು.ನಾವೆಲ್ಲ ಒಟ್ಟಾಗಿ ಇದ್ದೇವೆ. ಒಂದಾಗಿ ಇದ್ದೇವೆ. ನಮ್ಮದು ಒಂದೇ ಅಜೆಂಡಾ ಮುಂದೆ ಚುನಾವಣೆ ಇದೆ. ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿದೆ. ಅದಕ್ಕೆ ಬೇಕಾದ ಎಲ್ಲಾ ಶ್ರಮ ಹಾಕುತ್ತೇನೆ. ರಾಜ್ಯದ ಉದ್ದಗಲಕ್ಕೂ ಓಡಾಡುತ್ತೇನೆ. ಬಿಜೆಪಿ ಪರ ರಾಜ್ಯದಲ್ಲಿ ವಾತಾವರಣ ಇದೆ. ಮೋದಿ, ಅಮಿತ್ ಶಾ ನಡ್ಡಾ ನೇತೃತ್ವದಲ್ಲಿ ಹೆಚ್ಚು ಕಾರ್ಯಕ್ರಮ ರಾಜ್ಯದಲ್ಲಿ ನಡೆಯುತ್ತದೆ. ಇದೆಲ್ಲದರ ಪರಿಣಾಮ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನನ್ನನ್ನ ಪಕ್ಷ ನೆಗಲೆಟ್ ಮಾಡುತ್ತಿಲ್ಲ. ಇದ್ರಲ್ಲಿ ಯಾವುದೇ ಸತ್ಯಾಂಶವಿಲ್ಲ. ಎಲ್ಲಾ ಕಾರ್ಯಕ್ರಮಗಳಿಗೆ ನಾನು ಹೋಗ್ತಾ ಇದ್ದೇನೆ. ಆದರೆ ಸರ್ಕಾರಿ ಕಾರ್ಯಕ್ರಮಕ್ಕೆ ನಾನು ಹೋಗುವುದು ಸರಿಯಲ್ಲ ಅಂತ ಹೋಗಿಲ್ಲ. ಆದರೆ ಸಾರ್ವಜನಿಕ ಸಭೆ ಸಮಾರಂಭಗಳಿಗೆ ನನ್ನನ್ನು ಯಾರು ಕರೆಯಬೇಕಾಗಿಲ್ಲ. ನನ್ನ ಕರ್ತವ್ಯ ನಾನು ಮಾಡುತ್ತೇನೆ ಎಂದು ಹೇಳಿದರು.
Sign in to your account
Username or Email Address


Password

 Remember Me


