ಅಂಜನಾ ಕನ್ನಡದ ಜನಪ್ರಿಯ ಚಲನಚಿತ್ರ ನಟಿ. ೧೯೯೦ರ ದಶಕದಲ್ಲಿ ಸಕ್ರಿಯರಾಗಿದ್ದ ಅಂಜನಾ ಅಜಗಜಾಂತರ(೧೯೯೧), ಒಂದು ಸಿನಿಮಾ ಕಥೆ(೧೯೯೨), ಲೂಟಿ ಗ್ಯಾಂಗ್(೧೯೯೪) ಮತ್ತು ಬಂಗಾರದ ಕಳಶ(೧೯೯೫) ಚಿತ್ರಗಳಲ್ಲಿನ ಸ್ಮರಣೀಯ ಅಭಿನಯದಿಂದ ಗುರುತಿಸಿಕೊಂಡಿದ್ದಾರೆ. == ವೃತ್ತಿಜೀವನ == ಶಬರಿಮಲೆ ಸ್ವಾಮಿ ಅಯ್ಯಪ್ಪ(೧೯೯೦) ಚಿತ್ರದಲ್ಲಿನ ಶ್ರೀಹರಿ ಮಾಯೆಯ ಅವತಾರ ಎಂಬ ಹಾಡಿನಲ್ಲಿ ನೃತ್ಯ ಮಾಡುವ ಮೂಲಕ ಕನ್ನಡ-ಬೆಳ್ಳಿತೆರೆಗೆ ಅಡಿ ಇಟ್ಟ ಅಂಜನಾ ಶಶಿಕುಮಾರ್ ಮತ್ತು ಮಾಲಾಶ್ರೀ ಅಭಿನಯದ ಪೋಲಿಸ್‍ನ ಹೆಂಡ್ತಿ(೧೯೯೦) ಚಿತ್ರದಲ್ಲಿ ಪೋಲಿಸ್ ಅಧಿಕಾರಿಯ ದುರಹಂಕಾರಿ ಹೆಂಡತಿಯಾಗಿ ಗಮನಾರ್ಹ ಅಭಿನಯ ನೀಡಿದರು. ಪ್ರಸಿದ್ಧ ನಟ ನಿರ್ದೇಶಕ ಕಾಶಿನಾಥ್ ನಿರ್ದೇಶನದ ಅಜಗಜಾಂತರ(೧೯೯೧) ಚಿತ್ರದಲ್ಲಿ ಹಣದ ದುರಾಸೆಯುಳ್ಳ ಮಧ್ಯಮ ವರ್ಗದ ಗೃಹಿಣಿಯಾಗಿ ಅಂಜನಾ ಅವರ ಅಭಿನಯ ಗಮನ ಸೆಳೆದಿತ್ತು. ಮಾದಕ ದೃಶ್ಯಗಳು ಮತ್ತು ಹಾಸ್ಯಮಯ ಸಂಭಾಷಣೆಗಳ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಗಳಿಸಿದ ಈ ಚಿತ್ರ ತೆಲುಗು, ಹಿಂದಿ ಭಾಷೆಗಳಲ್ಲಿ ಪುನರ್ನಿರ್ಮಾಣಗೊಂಡು ಅಲ್ಲಿಯೂ ಭಾರಿ ಯಶಸ್ಸು ಪಡೆಯಿತು. ಈ ಚಿತ್ರದ ಹಿಂದಿ ಅವತರಣಿಕೆಯಾದ ಜುದಾಯಿ(೧೯೯೭)ಯಲ್ಲಿ ಅಂಜನಾ ನಿರ್ವಹಿಸಿದ್ದ ಪಾತ್ರವನ್ನು ಪ್ರಖ್ಯಾತ ತಾರೆ ಶ್ರೀದೇವಿ ನಿರ್ವಹಿಸಿದ್ದರು. ಅನಂತ್ ನಾಗ್ ಅಭಿನಯದ ಒಂದು ಸಿನಿಮಾ ಕಥೆ(೧೯೯೨) ಚಿತ್ರದಲ್ಲಿ ಚಿತ್ರಸಾಹಿತಿಯ ಪತ್ನಿಯಾಗಿ ಸಮರ್ಥ ಅಭಿನಯ ನೀಡಿದ ಅಂಜನಾ ಟೈಗರ್ ಪ್ರಭಾಕರ್ ಅವರೊಂದಿಗೆ ಕಿಲಾಡಿ ತಾತ(೧೯೯೦) ಮತ್ತು ಸೆಂಟ್ರಲ್ ರೌಡಿ(೧೯೯೧) ಚಿತ್ರಗಳಲ್ಲಿ ಮೋಹಕ ಪಾತ್ರಗಳಲ್ಲಿ ಮಿಂಚಿದ್ದಾರೆ. ಸುನಿಲ್ ಕುಮಾರ್ ದೇಸಾಯಿ ಅವರ ನಿರ್ದೇಶನದ ನಿಷ್ಕರ್ಷ ಚಿತ್ರದಲ್ಲಿ ಖಳನಟಿಯಾಗಿ ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದಾರೆ. ದೇವರಾಜ್‌ ಅಭಿನಯದ ರೋಷಗಾರ(೧೯೯೨) ಚಿತ್ರದಲ್ಲಿ ಪತ್ರಕರ್ತೆಯಾಗಿ, ಲೂಟಿ ಗ್ಯಾಂಗ್(೧೯೯೪) ಚಿತ್ರದಲ್ಲಿ ವಕೀಲೆಯಾಗಿ ಶಕ್ತ ಅಭಿನಯ ನೀಡಿರುವ ಅಂಜನಾ ಅಂಬರೀಶ್ ಅವರೊಂದಿಗೆ ಮೇಘ ಮಂದಾರ(೧೯೯೨) ಮತ್ತು ಮೈಸೂರು ಜಾಣ(೧೯೯೨) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಹದವರಿತ ಅಭಿನಯ ನೀಡಿದ್ದಾರೆ. ವಿಷ್ಣುವರ್ಧನ್ ಮತ್ತು ಸಿತಾರ ಅಭಿನಯದ ಬಂಗಾರದ ಕಳಶ(೧೯೯೫) ಚಿತ್ರದಲ್ಲಿ ತ್ಯಾಗಮಯಿಯಾಗಿ ಸ್ಮರಣೀಯ ಅಭಿನಯ ನೀಡಿದ್ದಾರೆ. ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್, ಟೈಗರ್ ಪ್ರಭಾಕರ್, ಕಾಶಿನಾಥ್ ಮತ್ತು ದೇವರಾಜ್‌ರಂತಹ ಜನಪ್ರಿಯ ನಟರೊಂದಿಗೆ ಅಭಿನಯಿಸಿರುವ ಅಂಜನಾ ಭಾರ್ಗವ, ಕೆ.ವಿ.ಜಯರಾಂ, ಓಂ ಸಾಯಿಪ್ರಕಾಶ್, ಎ.ಟಿ.ರಘು ಮತ್ತು ಫಣಿ ರಾಮಚಂದ್ರ ಮುಂತಾದ ಸೃಜನಶೀಲ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. == ಅಂಜನಾ ಅಭಿನಯದ ಚಿತ್ರಗಳು == == ಉಲ್ಲೇಖಗಳು == ಅಂಜನಾ ಐ ಎಮ್ ಡಿ ಬಿನಲ್ಲಿ