ಅಕ್ರಿಡಿನ್ ಸಾರಜನಕದ ಪರಮಾಣುವೊಂದನ್ನುಳ್ಳ ಮಿಶ್ರಚಕ್ರೀಯ (ಹೆಟೆರೋಸೈಕ್ಲಿಕ್) ಸಂಯುಕ್ತ ಇದನ್ನು ಪಕ್ಕಕ್ಕೆ ತೋರಿಸಿರುವ ಅಣುಸೂತ್ರದಿಂದ ನಿರೂಪಿಸಬಹುದು. ಒಂದಕ್ಕೊಂದು ಸೇರಿಕೊಂಡಿರುವ ಮೂರು ಚಕ್ರಗಳನ್ನುಳ್ಳ ಈ ಸಂಯುಕ್ತ ರಚನೆ (ರಿಂಗ್ ಸ್ಟ್ರಕ್ಚರ್) ಆ್ಯಂಥ್ರಸೀನ್ ರಚನೆಯನ್ನು ಹೋಲುತ್ತದೆ. == ತಯಾರಿಕೆ == ಕಲ್ಲಿದ್ದಲಿನಿಂದ ಉತ್ಪತ್ತಿಯಾಗುವ ಟಾರೆಣ್ಣೆಯಲ್ಲಿ ಈ ಸಂಯುಕ್ತ ಅಲ್ಪ ಪ್ರಮಾಣದಲ್ಲಿ ದೊರೆಯುತ್ತದೆ. ಕೃತಕವಾಗಿಯೂ ಇತರ ಸಂಯುಕ್ತಗಳಿಂದಲೂ ಅಕ್ರಿಡಿನ್ನನ್ನು ತಯಾರಿಸಬಹುದು. == ಗುಣಗಳು == ಶುದ್ಧ ಅಕ್ರಿಡಿನ್ನಿನ ರೂಪ ವರ್ಣ ರಹಿತ ಸೂಜಿಯಾಕಾರದ ಹರಳುಗಳಂತಿರುತ್ತದೆ. ಅಕ್ರಿಡಿನ್ ಮತ್ತು ಅದರ ಇತರ ಸಂಯುಕ್ತಗಳೆಲ್ಲವೂ ತಮ್ಮದೇ ಆದ ಒಂದು ವಿಶಿಷ್ಟ ವಾಸನೆಯನ್ನು ಹೊಂದಿವೆ. ದ್ರಾವಣ ರೂಪದಲ್ಲಿದ್ದಾಗ ಹಳದಿ ಹಸಿರುಮಿಶ್ರಿತವಾಗಿ ಗೋಚರಿಸುವ ಕಿರಣಸ್ಫುರಣ ಅಥವಾ ಪ್ರತಿದೀಪ್ತಿಯನ್ನು (ಫೋರಸೆನ್ಸ್) ಇವು ಪ್ರದರ್ಶಿಸಬಲ್ಲುವು. == ಉಪಯೋಗಗಳು == ಅಕ್ರಿಡಿನ್ನಿನಿಂದ ನೇರವಾಗಿ ಹೆಚ್ಚು ಉಪಯೋಗವಿಲ್ಲದಿದ್ದರೂ ಬಣ್ಣಗಳಾಗಿ ಉಪಯೋಗಿಸಲಾಗುತ್ತಿರುವ ಅಕ್ರಿಡಿನ್ ಆರೆಂಜ್, ಅಕ್ರಿಡಿನ್ ಯೆಲ್ಲೋ, ಕ್ರೈಸಾನಿಲಿನ್, ಟ್ರಿಪಫ್ಲೇವಿನ್ ಮತ್ತು ಬೆಂಜೋಫ್ಲೇವಿನ್‍ಗಳಲ್ಲಿ ಅಕ್ರಿಡಿನ್ನಿನ ಮಾತೃವೃತ್ತ (ಪೇರೆಂಟ್ ರಿಂಗ್ ) ಇದೆ. ಮಲೇರಿಯಾ ಜ್ವರಕ್ಕೆ ಮದ್ದಾಗಿರುವ ಅಟೆಬ್ರಿನ್ ಮತ್ತು ಅಮೀಬದ ರಕ್ತಭೇದಿಯ ಚಿಕಿತ್ಸೆಯಲ್ಲಿ ಉಪಯೋಗಿಸುವ ರಿವನಾಲ್ ಸಂಯುಕ್ತಗಳು ಅಕ್ರಿಡಿನ್ ರಚನೆಯಿಂದ ಜನ್ಯವಾದವು. == ಬಾಹ್ಯ ಸಂಪರ್ಕಗಳು ==