ಅಥರ್ಗಾ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿದೆ. == ಭೌಗೋಳಿಕ == ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦" ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ. == ಇತಿಹಾಸ == ರೇವಣಸಿದ್ದಪ್ಪ ಮಾಸ್ತರರ ಪಲ್ಲಕ್ಕಿ ಬರುತ್ತೆ ಎಂದರೆ ಗ್ರಾಮದ ಚಿಕ್ಕವರು, ದೊಡ್ಡವರು ಎಂಬ ಬೇಧವಿಲ್ಲದೆ ಎಲ್ಲರೂ ರಸ್ತೆಯ ಮೇಲೆ ಅಡ್ಡಲಾಗಿ ಮಲಗುತ್ತಾರೆ. ರಸ್ತೆಗೆ ಅಡ್ಡಲಾಗಿ ಮಲಗಿದ ಜನರನ್ನು ದಾಟುತ್ತಾ ಪಲ್ಲಕ್ಕಿ ಮುಂದೆ ಸಾಗುತ್ತದೆ. ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಶಿಕ್ಷಕ ದಿ. ರೇವಣಸಿದ್ದಪ್ಪ ಮಾಸ್ತರರ ಬಗ್ಗೆ ಜನರಲ್ಲಿ ಎಷ್ಟು ಗೌರವ, ಭಕ್ತಿ ಇದೆ ಎನ್ನುವುದಕ್ಕೆ ಇದು ಸಾಕ್ಷಿ. ಗ್ರಾಮಸ್ಥರು ಶಿಕ್ಷಕನನ್ನು ದೇವರ ಸ್ಥಾನದಲ್ಲಿ ಕಂಡಿದ್ದು ನೋಡಿದರೆ, ಒಬ್ಬ ಶಿಕ್ಷಕ ಸರಿಯಾಗಿ ವೃತ್ತಿ ನಿರ್ವಹಿಸಿದರೆ ಜನತೆ ಅವರನ್ನು ಯಾವ ರೀತಿ ಕಾಣುತ್ತಾರೆ ಎಂಬುದಕ್ಕೆ ಇವರು ಒಂದು ನಿದರ್ಶನ. ಲೋಕಕ್ಕೆ ಶಿಕ್ಷಣದ ಬೆಳಕನ್ನು ಹರಡಿ, ಜನ ಮೆಚ್ಚುಗೆಗೆ ಪಾತ್ರನಾಗಿ, ಆದರ್ಶ ಶಿಕ್ಷಕನಾಗಿ ಬಾಳಿದ ರೇವಣಸಿದ್ದಪ್ಪ ಮಾಸ್ತರರ ನೆನಪಿಗಾಗಿ ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ 1925ರಲ್ಲಿ ದೇವಸ್ಥಾನ ನಿರ್ಮಿಸಿ, ಪ್ರತಿ ವರ್ಷ ಶಿವರಾತ್ರಿಯಂದು ರೇವಣಸಿದ್ಧೇಶ್ವರ ಜಾತ್ರೆಯಂದು ಪಲ್ಲಕ್ಕಿ ಉತ್ಸವ ನಡೆಸುತ್ತಾರೆ. ರೇವಣಸಿದ್ದಪ್ಪ ಮಾಸ್ತರ ಪಲ್ಲಕ್ಕಿ ಮೆರವಣಿಗೆ ಬರುವುದನ್ನು ದೂರದಿಂದಲೇ ನೋಡಿ ಮನೆ ಮುಂದೆ ನಿಲ್ಲುವ ಗ್ರಾಮಸ್ಥರು, ಪಲ್ಲಕ್ಕಿ ಹತ್ತಿರ ಬರುತ್ತಿದ್ದಂತೆ ರಸ್ತೆಯ ಮೇಲೆ ಅಡ್ಡಲಾಗಿ ಮಲಗುತ್ತಾರೆ. ಪಲ್ಲಕ್ಕಿ ಹೊತ್ತವರು ಜನರನ್ನು ದಾಟಿ ಮುಂದೆ ಹೋಗುತ್ತಾರೆ. ಶಿಕ್ಷಕರೊಬ್ಬರನ್ನು ಭಕ್ತಿಯಿಂದ ದೇವರ ಸ್ಥಾನದಲ್ಲಿರಿಸಿ ಪೂಜಿಸುತ್ತಾರೆ ಎಂದರೆ ಆ ಶಿಕ್ಷಕ ಹೇಗಿದ್ದರು ಊಹಿಸಿಕೊಳ್ಳಿ! ಆಧ್ಯಾತ್ಮದಲ್ಲಿ ಅಪಾರ ಆಸಕ್ತಿ ಹೊಂದಿದ್ದ ರೇವಣಸಿದ್ದಪ್ಪ ಮಾಸ್ತರ ಅವರು, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ ಗ್ರಾಮದ ಅವರಸಂಗ ಮನೆತನದ ಶಿವಪ್ಪ ಹಾಗೂ ಲಕ್ಷ್ಮೀಬಾಯಿ ದಂಪತಿ ಪುತ್ರ. ಜನನ- ಮೇ 26, 1889. ಶಿಕ್ಷಣ ಮುಗಿಸಿ ಅಥರ್ಗಾ ಗ್ರಾಮದ ಶಾಲೆಗೆ ಶಿಕ್ಷಕರಾಗಿ 1910ರಲ್ಲಿ ಸೇವೆ ಆರಂಭ. ನಿಧನರಾಗುವ ತನಕ ಸೇವೆಯಲ್ಲಿ ಇದ್ದರು. ರೇವಣಸಿದ್ದಪ್ಪ ಅವರ ಪ್ರಾಮಾಣಿಕತೆ, ಪಾಠ ಮಾಡುವ ರೀತಿ, ಗ್ರಾಮದ ಪ್ರತಿ ಮನೆಗೂ ತೆರಳಿ ನೀಡುತ್ತಿದ್ದ ಆಧ್ಯಾತ್ಮಿಕ ಪ್ರವಚನದಿಂದ ಪ್ರಭಾವಿತರಾದ ಗ್ರಾಮಸ್ಥರು, ರೇವಣಸಿದ್ದಪ್ಪ ಅವರನ್ನು ತಮ್ಮೂರಿನ ದೇವರೆಂದು ಭಾವಿಸಿದ್ದರು. ಇಂತಹ ಆದರ್ಶ, ಪ್ರಮಾಣಿಕ ಶಿಕ್ಷಕ 1925 ಫೆಬ್ರುವರಿ 23ರಂದು ನಿಧನರಾದರು. ಅವರ ನೆನಪಿಗಾಗಿ ಅದೇ ವರ್ಷ ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಿ ಜಾತ್ರೆ ನಡೆಸುತ್ತಿದ್ದಾರೆ. ಗ್ರಾಮದ ಪ್ರತಿಯೊಬ್ಬರೂ ಇಂದಿಗೂ ತಮ್ಮ ದೈನಂದಿನ ಚಟುವಟಿಕೆಗಳನ್ನು ಮಾಡುವ ಮೊದಲು ರೇವಣಸಿದ್ದಪ್ಪ ಮಾಸ್ತರ ಗುಡಿಗೆ ಭೇಟಿ ನೀಡುತ್ತಾರೆ. ದೇವಸ್ಥಾನದಲ್ಲಿ ರೇವಣಸಿದ್ದಪ್ಪ ಮಾಸ್ತರರ ಆಳೆತ್ತರದ ಪಂಚಲೋಹದಿಂದ ಮೂರ್ತಿಗೆ ಪ್ರತಿನಿತ್ಯ ಪೂಜೆ ನಡೆಸಲಾಗುತ್ತದೆ. ಅದಕ್ಕಾಗಿಯೇ ಒಬ್ಬ ಪೂಜಾರಿಯನ್ನು ಗ್ರಾಮಸ್ಥರು ನೇಮಿಸಿದ್ದಾರೆ. == ಹವಾಮಾನ == ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ. ಬೇಸಿಗೆಕಾಲ - ೩೫°-೪೨° ಡಿಗ್ರಿ ಸೆಲ್ಸಿಯಸ್ ಚಳಿಗಾಲ ಮತ್ತು ಮಳೆಗಾಲ - ೧೮°-೨೮° ಡಿಗ್ರಿ ಸೆಲ್ಸಿಯಸ್. ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ. ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ. == ಜನಸಂಖ್ಯೆ == ಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 10075 ಇದೆ. ಅದರಲ್ಲಿ 5180 ಪುರುಷರು ಮತ್ತು 4895 ಮಹಿಳೆಯರು ಇದ್ದಾರೆ. == ಆಹಾರ == ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ. == ಕಲೆ ಮತ್ತು ಸಂಸ್ಕೃತಿ == ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. == ಧರ್ಮ == ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ. == ಭಾಷೆ == ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ ಹಾಗೂ ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ. == ದೇವಾಲಯ == ಶ್ರೀ ಮಹಾಲಕ್ಷ್ಮಿ ದೇವಾಲಯ ಶ್ರೀ ದುರ್ಗಾದೇವಿ ದೇವಾಲಯ ಶ್ರೀ ಮಲ್ಲಿಕಾರ್ಜುನ ದೇವಾಲಯ ಶ್ರೀ ಬಸವೇಶ್ವರ ದೇವಾಲಯ ಶ್ರೀ ವೆಂಕಟೇಶ್ವರ ದೇವಾಲಯ ಶ್ರೀ ಪಾಂಡುರಂಗ ದೇವಾಲಯ ಶ್ರೀ ಹಣಮಂತ ದೇವಾಲಯ ಶ್ರೀ ಕುಲಂಕಾರೇಶ್ವರ ದೇವಾಲಯ ಶ್ರೀ ರೇವಣಸಿದ್ದೇಶ್ವರ ದೇವಾಲಯ == ಮಸೀದಿ == ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ. == ನೀರಾವರಿ == ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ. == ಕೃಷಿ ಮತ್ತು ತೋಟಗಾರಿಕೆ == ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ. == ಆರ್ಥಿಕತೆ == ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ. == ಉದ್ಯೋಗ == ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ. == ಬೆಳೆ == ಆಹಾರ ಬೆಳೆಗಳು ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ ವಾಣಿಜ್ಯ ಬೆಳೆಗಳು ದಾಳಿಂಬೆ, ನಿಂಬೆ, ದ್ರಾಕ್ಷಿ, ಕಬ್ಬು, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ. ತರಕಾರಿ ಬೆಳೆಗಳು ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ. == ಸಸ್ಯ == ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ. == ಪ್ರಾಣಿ == ತೋಳ, ನರಿ, ಹಾವು, 'ಮೊಲ', ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ. == ಹಬ್ಬ == ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ. == ಶಿಕ್ಷಣ == ಸರಕಾರಿ ಹಿರಿಯ ಬಾಲಕರ ಪ್ರಾಥಮಿಕ ಶಾಲೆ, ಅಥರ್ಗಾ ಸರಕಾರಿ ಹಿರಿಯ ಬಾಲಕಿಯರ ಪ್ರಾಥಮಿಕ ಶಾಲೆ, ಅಥರ್ಗಾ ಜ್ಞಾನೋದಯ ಕಿರಿಯ ಪ್ರಾಥಮಿಕ ಶಾಲೆ, ಅಥರ್ಗಾ ಜ್ಞಾನ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ಅಥರ್ಗಾ ವೇದಾಂತ ಕೇಸರಿ ಕಿರಿಯ ಪ್ರಾಥಮಿಕ ಶಾಲೆ, ಅಥರ್ಗಾ ಡಿ.ಬಿ.ಈ. ಪ್ರೌಢ ಶಾಲೆ, ಅಥರ್ಗಾ ಆರ್.ಎಮ್.ಬಿರಾದಾರ ಪದವಿ ಪೂರ್ವ ಮಹಾವಿದ್ಯಾಲಯ, ಅಥರ್ಗಾ ಶ್ರೀ ಗುರುಬಸವ ಕಲಾ ಮಹಾವಿದ್ಯಾಲಯ, ಅಥರ್ಗಾ == ಸಾಕ್ಷರತೆ == ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ. == ರಾಜಕೀಯ == ಗ್ರಾಮವು ಬಿಜಾಪುರ ಲೋಕಸಭಾ ಕ್ಷೇತ್ರ ಮತ್ತು ಇಂಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. == ಸೇವಾ ಸಂಸ್ಥೆಗಳು == ಮಳೆ ಮಾಪನ ಕೇಂದ್ರ, ಅಥರ್ಗಾ ಸಿಂಡಿಕೇಟ್ ಬ್ಯಾಂಕ್, ಅಥರ್ಗಾ ಗ್ರಾಮ ಪಂಚಾಯತಿ, ಅಥರ್ಗಾ ದೂರವಾಣಿ ವಿನಿಮಯ ಕೇಂದ್ರ, ಅಥರ್ಗಾ ಅಂಚೆ ಕಚೇರಿ, ಅಥರ್ಗಾ- 586112 (ಆಹೇರಿ, ಅಲಿಬಾದ್, ಬೆನಕನಹಳ್ಳಿ, ದ್ಯಾಬೇರಿ, ಹೊನ್ನಳ್ಳಿ, ಜಂಬಗಿ, ಕೆಂಗಿನಾಳ, ನಾಗಠಾಣ, ಶಿರ್ಕನಹಳ್ಳಿ, ತಡವಲಗಾ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಅಥರ್ಗಾ ಹಾಲು ಉತ್ಪಾದಕ ಸಹಕಾರಿ ಸಂಘ, ಅಥರ್ಗಾ ಪ್ರಾಥಮಿಕ ಆರೋಗ್ಯ ಕೇಂದ್ರ, ಅಥರ್ಗಾ ನೆಮ್ಮದಿ ಕೇಂದ್ರ, ಅಥರ್ಗಾ ಪಶು ಆಸ್ಪತ್ರೆ, ಅಥರ್ಗಾ ಮೀನುಗಾರಿಕೆ ಸಹಕಾರ ಸಂಘ, ಅಥರ್ಗಾ 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಅಥರ್ಗಾ == ಉಲ್ಲೇಖ == ವಿಜಯಪುರ ಕರ್ನಾಟಕ