ಅಮೃತಶಿಲೆ ಇದೊಂದು ರೂಪಾಂತರ ಶಿಲೆ (ಮಾರ್ಬಲ್). ಕ್ಯಾಲ್ಸಿಯಂ ಕಾರ್ಬೊನೇಟ್ ಅಥವಾ ಮ್ಯಾಗ್ನೀಸಿಯಂ ಕಾರ್ಬೊನೇಟ್ ಇದರ ಮೂಲವಸ್ತು. == ಗಡಸುತನ == ಹೆಚ್ಚು ಗಡುಸಲ್ಲದ ಈ ಶಿಲೆಯನ್ನು ಭೂಮಿಯಿಂದ ಹಲಗೆಗಳಾಗೂ ದಿಮ್ಮಿಗಳಾಗೂ ಸೀಳಿ ತೆಗೆಯಬಹುದು. ಗರಗಸದಿಂದ ಕೊಯ್ದು ಬೇಕಾದ ಅಳತೆಗಳನ್ನು ಪಡೆಯಬಹುದು. ಸಾಣೆ ಹಿಡಿದು ತುಂಬ ನಯವಾಗಿ ಹೊಳೆಯುವಂತೆ ಮಾಡಬಹುದು. ಇದು ಒಳ್ಳೆ ಅಲಂಕಾರದ ಕೆತ್ತನೆ ಕೆಲಸಕ್ಕೆ ಉಪಯುಕ್ತವಾದುದು. == ಉತ್ಪನ್ನ == ಶುದ್ಧ ಸುಣ್ಣಕಲ್ಲು ರೂಪಾಂತರಗೊಂಡು ಬಿಳಿಯ ಅಮೃತಶಿಲೆಯಾಗಿ ಮಾರ್ಪಡುತ್ತದೆ. ಅಶುದ್ಧ ಸುಣ್ಣಕಲ್ಲು ಮತ್ತು ಡಾಲೊಮೈಟುಗಳಿಂದ ಬಗೆಬಗೆಯ ಬಣ್ಣದ ಅಮೃತಶಿಲೆಗಳಾಗುತ್ತವೆ. ಬಣ್ಣದ ಹರಲು ಮತ್ತು ಸ್ವಭಾವ ಮೂಲ ಕಶ್ಮಲಗಳನ್ನು ಅನುಸರಿಸಿವೆ. ಬೂದು. ನೀಲಿಬೂದು, ಹಳದಿ, ಕಂದು ಬಣ್ಣ, ಕೆಂಪುಹಸಿರು, ಹಸಿರುಕಪ್ಪು ಈ ರೀತಿ ಬಣ್ಣಗಳು ಬಗೆಬಗೆಯಾಗಿವೆ. ಗಣನೀಯವಾದ ಅಮೃತಶಿಲಾಭೇದಗಳಾವುವೆಂದರೆ ವಿಗ್ರಹಗಳನ್ನು ಕಡೆಯಲು ಯೋಗ್ಯವಾದ ಅಮೃತಶಿಲೆ ಮತ್ತು ಸೂಕ್ಷ್ಮವಾದ ಹೆಣಿಗೆಯುಳ್ಳ ಶುದ್ಧಬಿಳಿಯ ಶಿಲೆ. ಕಟ್ಟಡಗಳಿಗೆ ಯೋಗ್ಯವಾದ ಬಣ್ಣ ಮತ್ತು ಬಲವನ್ನುಳ್ಳ ಅಮೃತಶಿಲೆಗಳು ಶಿಲ್ಪಾರ್ಹಶಿಲೆಗಳೆನಿಸಿಕೊಂಡಿವೆ. ಸರ್ಪೆಂಟೀನ್ ಯುಕ್ತ ಅಮೃತಶಿಲೆಗಳು ಹಳದಿ ಮತ್ತು ಕಪ್ಪು ಕಲೆಗಳಿಂದ ಕೂಡಿವೆ; ರೂಯಿನ್ ಎಂಬುದು ಅಸಮವಾಗಿರುವ ಮೂಲೆ ಮೂಲೆಯ ರೇಖಾವಿನ್ಯಾಸದಿಂದ ಕೂಡಿದೆ. == ಭಾರತದಲ್ಲಿ == ಭಾರತದಲ್ಲಿ ಅಮೃತಶಿಲಾ ನಿಕ್ಷೇಪಗಳು ರಾಜಾಸ್ಥಾನ ಮತ್ತು ಮಧ್ಯ ಪ್ರದೇಶಗಳಲ್ಲಿವೆ. ಹಿಂದಿನ ಕಾಲದ ಅನೇಕ ಅರಮನೆಗಳು, ದೇವಾಲಯಗಳು, ವಿಗ್ರಹಗಳು ಮತ್ತು ಸಮಾಧಿಭವನಗಳು ಪೂರ್ಣವಾಗೋ ಸ್ವಲ್ಪವೋ ಅಮೃತಶಿಲೆಯಿಂದ ಕಟ್ಟಲ್ಪಟ್ಟಿವೆ. ತಾಜ್ ಮಹಲ್ ಇಂಥ ಶಿಲ್ಪಕ್ಕೆ ಪ್ರಸಿದ್ಧ ನಿದರ್ಶನ. ಯೂರೋಪು ಮತ್ತು ಅಮೆರಿಕಗಳಲ್ಲೂ ಉತ್ತಮ ನಿದರ್ಶನಗಳಿವೆ. ಈ ಶಿಲ್ಪಕಲೆ ಈಗಲೂ ಪ್ರಸಿದ್ಧವಾಗಿದೆ. == ಛಾಯಾಂಕಣ == == ಬಾಹ್ಯ ಸಂಪರ್ಕಗಳು == – 2005 : , 2005 : , 2006 : , 2006 : ,