ಸಿದ್ಧಿಯೆಂದರೆ ಕೆಲಸ ಕೈಗೂಡುವುದು (ಕ್ರಿಯಾಸಿದ್ಧಿ). ಸಾಮಾನ್ಯವಾಗಿ ಈ ಮಾತನ್ನು ಅಲೌಕಿಕವಾಗಿರುವ ಕೌಶಲಗಳನ್ನು ಪಡೆಯುವುದಕ್ಕೆ ಬಳಸುತ್ತಾರೆ. ಸಿದ್ಧಿಯೆಂದರೆ ತುಂಬ ಚಮತ್ಕಾರದ ಅದ್ಭುತಶಕ್ತಿ. ತಪಶ್ಚರ್ಯೆಯಿಂದಲೋ ಮಂತ್ರತಂತ್ರಗಳ ಅನುಸಂಧಾನದಿಂದಲೋ ದೈವಿಕ ಅನುಗ್ರಹದಿಂದಲೋ ಮನುಷ್ಯರು ಪಡೆಯುವ ವಿಶೇಷಸಾಮರ್ಥ್ಯ. ಇದನ್ನು ಎಂಟೆಂದು ಪರಿಗಣಿಸಿದ್ದಾರೆ. ಹಿಂದೂ ಧರ್ಮದ ಪ್ರಕಾರ ಅಷ್ಟಸಿದ್ಧಿಗಳೆಂದರೆ ಅಣಿಮಾ - ದೇಹವನ್ನು ಅತಿ ಚಿಕ್ಕ (ಪರಮಾಣುವಿನ) ಗಾತ್ರಕ್ಕೆ ಇಳಿಸುವದು ಲಘಿಮಾ - ಅತಿ ಕಡಿಮೆ (ಭಾರರಹಿತ) ಹಗುರಾಗುವದು ಮಹಿಮಾ - ದೇಹವನ್ನು ಅತಿ ದೊಡ್ಡ (ಅನಂತವಾದ) ಗಾತ್ರಕ್ಕೆ ಹೆಚ್ಚಿಸುವದು ಗರಿಮಾ - ಅತಿ (ಅನಂತದಷ್ಟು) ಭಾರವಾಗಿರುವದು ಪ್ರಾಪ್ತಿ - ಎಲ್ಲ ಸ್ಥಳಗಳಿಗೂ ಅನಿರ್ಬಂಧಿತವಾದ ಪ್ರವೇಶ ದೊರಕಿಸಿಕೊಳ್ಳುವದು ಪ್ರಾಕಾಮ್ಯ - ಇಷ್ಟಪಟ್ಟಿದ್ದನ್ನು ದೊರಕಿಸಿಕೊಳ್ಳುವದು ಈಶಿತ್ವ - ಎಲ್ಲದರ ಮೇಲೆ ಸಂಪೂರ್ಣವಾದ ಒಡೆತನ ಹೊಂದುವದು ವಶಿತ್ವ - ಎಲ್ಲವನ್ನು ಜಯಿಸುವ ಶಕ್ತಿ ಹೊಂದುವದು ಯೋಗಮಾರ್ಗದಲ್ಲಿ ಹಠಯೋಗವನ್ನು ಹಿಡಿದವರು ಈ ಸಿದ್ಧಿಗಳನ್ನು ಪಡೆಯುತ್ತಾರೆಂದು ನಂಬಿಕೆ. ಹನುಮಾನ್ ಚಾಲೀಸ ಪಠಿಸುವವರು ಈ ಅಷ್ಟಸಿದ್ಧಿಗಳನ್ನು ಹನುಮಂತ ನೀಡುವನೆಂದು ನಂಬುತ್ತಾರೆ.