ಎನ್. ಶಂಕರಯ್ಯ (೧೫ ಜುಲೈ ೧೯೨೧ - ೧೫ ನವೆಂಬರ್ ೨೦೨೩)ಒಬ್ಬ ಭಾರತೀಯ ಕಮ್ಯುನಿಸ್ಟ್ ಪಕ್ಷದ ರಾಜಕಾರಣಿ ಮತ್ತು ಸ್ವಾತಂತ್ರ್ಯ ಹೋರಾಟಗಾರ. == ಆರಂಭಿಕ ಜೀವನ == ಮೆಟ್ರಿಕ್ಯುಲೇಷನ್ ನಂತರ, ಶಂಕರಯ್ಯ ಮಧುರೈನ ಅಮೇರಿಕನ್ ಕಾಲೇಜಿನಿಂದ ೧೯೩೭ರಲ್ಲಿ ಇತಿಹಾಸವನ್ನು ಅಧ್ಯಯನ ಮಾಡಿದರು. ಅವರು ಮದ್ರಾಸ್ ವಿದ್ಯಾರ್ಥಿಗಳ ಸಂಘಟನೆಯ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು ಮತ್ತು ಮಧುರೈ ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಈ ಸಮಯದಲ್ಲಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ೧೯೪೧ ರಲ್ಲಿ ಅವರ ಅಂತಿಮ ವರ್ಷದ ಅಧ್ಯಯನದಲ್ಲಿ ಅವರನ್ನು ಮೊದಲು ಬಂಧಿಸಲಾಯಿತು. ಅವರ ರಾಜಕೀಯ ಜೀವನವು ಏಳು ದಶಕಗಳವರೆಗೆ ಮುಂದುವರಿದಿತ್ತು ಮತ್ತು ಸುಮಾರು ಎಂಟು ವರ್ಷಗಳ ಜೈಲುವಾಸವನ್ನು ಒಳಗೊಂಡಿತ್ತು. ಆಗಸ್ಟ್ ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನಾ ದಿನ ಬಿಡುಗಡೆಯಾದ ಅನೇಕ ಕಮ್ಯುನಿಸ್ಟರಲ್ಲಿ ಒಬ್ಬರಾಗಿದ್ದ ಶಂಕರಯ್ಯ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಮ್ಯುನಿಸ್ಟ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದರು. ೧೧ ಎಪ್ರಿಲ್ ೧೯೬೪ ರಂದು ನಡೆದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನ್ಯಾಷನಲ್ ಕೌನ್ಸಿಲ್ ಸಭೆಯಿಂದ ಹೊರನಡೆದ ೩೨ ರಾಷ್ಟ್ರೀಯ ಕೌನ್ಸಿಲ್ ಸದಸ್ಯರಲ್ಲಿ ಅವರೂ ಒಬ್ಬರಾಗಿದ್ದರು. ನಂತರ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)ದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದರು. ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)ದ ಕೇಂದ್ರ ಸಮಿತಿಯ ಸದಸ್ಯರಾಗಿದ್ದರು. ಅವರು ಅಖಿಲ ಭಾರತ ಕಿಸಾನ್ ಸಭಾದ ನಾಯಕತ್ವದ ಭಾಗವಾಗಿದ್ದರು. ಅವರು ೧೯೯೫ ರಿಂದ ೨೦೦೨ ರವರೆಗೆ ಸಿಪಿಐ(ಎಂ) ತಮಿಳುನಾಡು ರಾಜ್ಯ ಕಾರ್ಯದರ್ಶಿಯಾಗಿದ್ದರು. ಶಂಕರಯ್ಯ ಅವರು ೧೯೬೭ ರಲ್ಲಿ ಮಧುರೈ ಪಶ್ಚಿಮ ಕ್ಷೇತ್ರದಿಂದ ಮತ್ತು ೧೯೭೭ ಮತ್ತು ೧೯೮೦ ರಲ್ಲಿ ಮಧುರೈ ಪೂರ್ವ ಕ್ಷೇತ್ರದಿಂದ ಎರಡು ಬಾರಿ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾದರು. ಅವರು ೧೯೬೨ ಮತ್ತು ೧೯೫೭ ರ ಚುನಾವಣೆಗಳಲ್ಲಿ ಮಧುರೈ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿ ವಿಫಲರಾದರು. == ವೈಯಕ್ತಿಕ ಜೀವನ ಮತ್ತು ಸಾವು == ಶಂಕರಯ್ಯ ಅವರು ನವಮಣಿ ಅವರನ್ನು ವಿವಾಹವಾದರು. ಅವರ ಇಬ್ಬರು ಪುತ್ರರಾದ ಚಂದ್ರಶೇಖರ್ ಮತ್ತು ನರಸಿಮ್ಮನ್ ಪಕ್ಷದ ನಾಯಕರಾಗಿದ್ದರು. ಜುಲೈ ೨೦೨೧ ರಲ್ಲಿ ಅವರು ೧೦೦ ನೇ ವರ್ಷಕ್ಕೆ ಕಾಲಿಟ್ಟರು. ಶಂಕರಯ್ಯ ಅವರು ೧೫ ನವೆಂಬರ್ ೨೦೨೩ ರಂದು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ೧೦೨ನೇ ವಯಸ್ಸಿನಲ್ಲಿ ನಿಧನರಾದರು. ಅವರು ಜ್ವರ ಮತ್ತು ಉಸಿರಾಟದ ತೊಂದರೆಗೆ ಚಿಕಿತ್ಸೆ ಪಡೆಯುತ್ತಿದ್ದರು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ೧೯೭೭ ತಮಿಳುನಾಡು ಚುನಾವಣಾ ಫಲಿತಾಂಶಗಳು, ಭಾರತದ ಚುನಾವಣಾ ಆಯೋಗ ೧೯೮೦ ತಮಿಳುನಾಡು ಚುನಾವಣಾ ಫಲಿತಾಂಶಗಳು, ಭಾರತದ ಚುನಾವಣಾ ಆಯೋಗ ಶಂಕರಯ್ಯನವರ ಕುರಿತು ದಿನಮಣಿ ಲೇಖನ