ಒರ್ವ್ಯೇಟೊ: ಮಧ್ಯ ಇಟಲಿಯ ಟೆರ್ನಿ ಪ್ರಾಂತ್ಯದ ಅಂಬ್ರಿಯ ಪ್ರದೇಶದಲ್ಲಿರುವ ಐತಿಹಾಸಿಕ ನಗರ. ರೋಮಿನಿಂದ 126 ಕಿಮೀ ದೂರದಲ್ಲಿದೆ. ಇದು ಟುಫಾ ಜ್ವಾಲಾಮುಖಿ ಪ್ರದೇಶದಲ್ಲಿ, ಸಮತಟ್ಟಾದ ಎತ್ತರವಾದ ಬೆಟ್ಟದ ಕಿರೀಟದಂತೆ, ಟೈಬರ್ನದಿಯ ಉಪನದಿಯಾದ ಪಾಗ್ಲಿಯದ ದಂಡೆಯ ಮೇಲಿದೆ. 12-13ನೆಯ ಶತಮಾನದಲ್ಲಿ ಕಟ್ಟಿದ ಮಧ್ಯಯುಗೀನ ಕಟ್ಟಡಗಳಿಗೂ ಇಕ್ಕಟ್ಟಾದ ಅಂಕುಡೊಂಕಾದ ರಸ್ತೆಗಳಿಗೂ ಇದು ಪ್ರಸಿದ್ಧ. == ವ್ಯಾಪಾರ ವ್ಯವಹಾರ == ಈ ನಗರದ ಸುತ್ತಮುತ್ತ ಅತ್ಯುತ್ತಮ ಬೇಸಾಯ ನಡೆಯುವುದರಿಂದ ಇದು ಮುಖ್ಯವಾದ ಸ್ಥಳೀಯ ವ್ಯಾಪಾರಕೇಂದ್ರ. ರುಚಿಮಧುರ ವೈನ್ ಇಲ್ಲಿ ತಯಾರಾಗುತ್ತದೆ. ಕಲಾತ್ಮಕ ಹಂಚು, ಕಬ್ಬಿಣದ ಸಾಮಾನು, ಅಲಂಕಾರಯುಕ್ತವಾದ ಕಲಾಬತ್ತಿನ ದಾರ-ಇವನ್ನೂ ಇಲ್ಲಿ ತಯಾರಿಸಲಾಗುತ್ತದೆ. ರೋಮಿನಿಂದ ಫ್ಲಾರೆನ್ಸಿಗೆ ಹೋಗುವ ರೈಲುಮಾರ್ಗ ಈ ಕಣಿವೆ ಪ್ರದೇಶವನ್ನು ಹಾದುಹೋಗುತ್ತದೆ. == ಪ್ರೇಕ್ಷಣೀಯ ಸ್ಥಳಗಳು == ಇಲ್ಲಿರುವ ಪ್ರಸಿದ್ಧ ಕೆಥೆಡ್ರಲನ್ನು ಕಟ್ಟಲಾರಂಭಿಸಿದ್ಧು 1290ರಲ್ಲಿ. ಮಧ್ಯಯುಗದ ಅನೇಕ ಚಿತ್ರಕಲಾವಿದರು ಇದನ್ನಲಂಕರಿಸಿದ್ದಾರೆ. ಉಳಿದ ಪ್ರೇಕ್ಷಣೀಯ ಮಂದಿರಗಳೆಂದರೆ ಸಾನ್ ಅಂಡ್ರ್ಯೊ ಚರ್ಚ್, ಪ್ಲಾಜೋ ಕಮ್ಯೂನೇಲ್ ಮತ್ತು ಪ್ಲಾಜೊ ಡೆಲ್ ಪೊಪೊಲೊ. ಆರನೆಯ ಕ್ಲೆಮೆಂಟಿನ ಕಾಲದಲ್ಲಿ ಕಟ್ಟಿದ ಸಾನ್ ಪ್ರೆಟ್ರಿಜಿಯೊ ಕೂಡ ಪ್ರೇಕ್ಷಣೀಯ. == ಇತಿಹಾಸ == ಈ ನಗರ ಹಿಂದೆ ಎಟ್ರುಸ್ಕನರದಾಗಿದ್ದು ಅನಂತರ ರೋಮನರ ಕೈಸೇರಿತು. ಇಲ್ಲಿ ಗಾಥಿಕರೂ ಬೈಜಾಂಟಿಯನ್ನರೂ ಲೊಂಬಾರ್ಡರೂ ಆಳಿದರು. == ಉಲ್ಲೇಖಗಳು ==