ಒಲಂಪಿಯ: ಗ್ರೀಸಿನ ಪಶ್ಚಿಮ ಪೆಲಿಪೊನೀಸ್ನ ಒಂದು ಸ್ಥಳ, ಪುರಾತನ ಗ್ರೀಕರ ಜ್ಯೂಸ್ ದೇವತಾಕ್ಷೇತ್ರ. ಸಮುದ್ರದಿಂದ ಸುಮಾರು 16 ಕಿಮೀ ದೂರದಲ್ಲಿ, ಆಲ್ಫೀಯಸ್ ಮತ್ತು ಕ್ಲೇಡಿಯಸ್ ನದಿಗಳ ಸಂಗಮದ ಬಳಿ, ಕ್ರೋನಿಯಸ್ ಬೆಟ್ಟದ ತಪ್ಪಲಿನ ವಿಶಾಲ ಕಣಿವೆಯ ಹಸಿರು ನೆಲದ ಮೇಲೆ, ಪ್ರಾಚೀನ ವೈಭವದ ಮೂಕಸಾಕ್ಷಿಯಾಗಿ ಪವಡಿಸಿದೆ. ಅನೇಕ ದೃಷ್ಟಿಗಳಲ್ಲಿ ಇದು ಅಧಿಕೃತ ಗ್ರೀಕ್ ಧರ್ಮದ ಕೇಂದ್ರವಾಗಿತ್ತು. ಅಖಿಲ ಗ್ರೀಕರ ಮಾನ್ಯಧರ್ಮವೆನಿಸಬೇಕೆಂದು ಸೆಣಸಾಡುತ್ತಿದ್ದ ಕೆಲವು ಪಂಗಡಗಳ ಪೈಕಿ ಇಲ್ಲಿಯದೂ ಒಂದು. ಅಷ್ಟೇ ಅಲ್ಲ, ಇದೇ ಪ್ರಧಾನವಾಗಿತ್ತು; ನಾಲ್ಕು ವರ್ಷಗಳಿಗೊಮ್ಮೆ ಇಲ್ಲಿ ನಡೆಯುತ್ತಿದ್ದ ಕ್ರೀಡೆಗಳಲ್ಲಿ ಪಾಲ್ಗೊಳ್ಳಲೂ ಅವನ್ನು ವೀಕ್ಷಿಸಲೂ ಇಡೀ ಗ್ರೀಕ್ ಪ್ರಪಂಚದಿಂದಲೇ ಅಲ್ಲದೆ ಹೊರಗಿನಿಂದಲೂ ಜನ ಬರುತ್ತಿದ್ದರು. ಪರಸ್ಪರವಾಗಿ ಕಾದಾಡುತ್ತಿದ್ದ ಗ್ರೀಕ್ ರಾಜ್ಯಗಳ ನಡುವೆ ಆಗ್ಗೆ ತಾತ್ಕಾಲಿಕವಾಗಿ ಶಾಂತಿ ಏರ್ಪಾಡಾಗುತ್ತಿತ್ತು. ಒಲಿಂಪಿಯದ ದೇವಾಲಯದ ಐತಿಹ್ಯ ಅಷ್ಟೇನೂ ಸ್ಫುಟವಾಗಿಲ್ಲ. ಇದು ಆಶ್ಚರ್ಯಕರ, ಪ್ರ.ಶ.ಪು.ಸು. 11ನೆಯ ಶತಮಾನದಲ್ಲಿ, ಡೋರಿಯನ್ ಆಕ್ರಮಣ ಕಾಲದಲ್ಲಿ ಇಲ್ಲಿಯ ಪಂಥ ಆರಂಭವಾಗಿರಬೇಕು. ಚತುರ್ವಾರ್ಷಿಕ ಕ್ರೀಡಾ ವ್ಯವಸ್ಥೆ ಪ್ರ.ಶ.ಪು. 776ರಲ್ಲಿ ಸ್ಥಾಪಿತವಾದಾಗ ಗ್ರೀಕ್ ಪ್ರಪಂಚ ಈ ಚರ್ತುವಾರ್ಷಿಕ ಎಣಿಕೆ ಕ್ರಮವನ್ನು ಒಪ್ಪಿಕೊಂಡಿತು; ಸ್ಥಳೀಯ ಪಂಚಾಂಗ ಯಾವುದೇ ಇರಲಿ, ಪ್ರತಿಯೊಬ್ಬರೂ ಒಲಿಂಪಿಕ್ ಹಬ್ಬಗಳಿಗೆ ಅನುಗುಣವಾದ ಕಾಲಗಣನೆಯನ್ನು ಸ್ವೀಕರಿಸಿದರು. ಅಲ್ಲಿಂದ ಮುಂದೆ ಧಾರ್ಮಿಕವಾಗಿಯೂ ಶಿಲ್ಪದೃಷ್ಟಿಯಿಂದಲೂ ಇಲ್ಲಿಯ ದೇವಾಲಯ ಪರಿಪರಿಯಾಗಿ ಶೋಭಿಸಿತು. ಮ್ಲೇಂಛರ ಪವಿತ್ರ ಮಂದಿರಗಳನ್ನೆಲ್ಲ ನೆಲಸಮ ಮಾಡಬೇಕೆಂಬ ಥಿಯೋಡೋಷಿಯಸನ ಆಜ್ಞೆಗೆ ಅನುಸಾರವಾಗಿ ಇಲ್ಲಿಯ ದೇವಾಲಯಗಳು ಪ್ರ.ಶ. 426ರಲ್ಲಿ ನಾಶವಾದವು. ಪ್ರ.ಶ. 393ರಲ್ಲಿ ನಡೆದದ್ದೇ ಪುರಾತನ ಒಲಿಂಪಿಯದ ಕೊಟ್ಟಕೊನೆಯ ಕ್ರೀಡೋತ್ಸವ. == ಉಲ್ಲೇಖಗಳು ==