ಓತಿ (ಕ್ಯಾಲೋಟಿಸ್): ಸರೀಸೃಪ ವರ್ಗದ ಸ್ಕ್ವಮೇಟ ಗಣದ ಲ್ಯಾಸರ್ತಿಲಿಯ ಉಪಗಣಕ್ಕೆ ಸೇರಿದ ಪ್ರಾಣಿ. ತೋಟದ ಹಲ್ಲಿ (ಗಾರ್ಡನ್ ಲಿಝರ್ಡ್) ಎಂದೂ ಕರೆಯುತ್ತಾರೆ. ಮನೆಯ ಹಿತ್ತಲು, ತೋಟ ಗದ್ದೆಗಳ ಬೇಲಿಗಳಲ್ಲಿ ಲಂಟಾನದ ಮೆಳೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಇರುವ ಓತಿ ಕೆಲೊಟಿಸ್ ವರ್ಸಿಕಲ್ಸಾರ್ ಎಂಬ ಪ್ರಭೇದಕ್ಕೆ ಸೇರುತ್ತದೆ. == ಲಕ್ಷಣಗಳು == ಇದು ಕೀಟಾಹಾರಿ, ಇದರ ದೇಹವನ್ನು ಶಿರ, ಎದೆ ಮತ್ತು ಬಾಲ ಎಂದು ವಿಂಗಡಿಸಬಹುದು. ತಲೆ ಮತ್ತು ಎದೆಯ ನಡುವೆ ನಿರ್ದಿಷ್ಟವಾದ ಕುತ್ತಿಗೆಯಿದೆ. ದೇಹದಮೇಲೆ ಹುರುಪೆಗಳ ಹೊದಿಕೆಯುಂಟು. ಹುರಪೆಗಳು ಒಂದರ ತುದಿ ಇನ್ನೊಂದರ ಬುಡವನ್ನು ಮುಚ್ಚುವಂತೆ (ಮನೆಯ ಹಂಚುಗಳಂತೆ) ಜೋಡಿಸಲ್ಪಟ್ಟಿವೆ. ಕುತ್ತಿಗೆ ಮತ್ತು ಮುಂಡದ ನಡು ಬೆನ್ನಿನ ಭಾಗದಲ್ಲಿರುವ ಹುರುಪೆಗಳ ಉದ್ದವಾದ ಮುಳ್ಳು ಶಿಖೆಗಳ ಸಾಲಿನಂತೆ ಬೆಳೆದಿವೆ. ಋತುಮಾಸದಲ್ಲಿ ಕತ್ತಿನ ತಳಭಾಗ ಗಂಡುಗಳಲ್ಲಿ ರಾಗರಂಜಿತವಾಗುತ್ತದೆ. ಈ ಬಣ್ಣದಿಂದಾಗಿ ಅವು ರಕ್ತಪಿಪಾಸುಗಳು ಎಂಬ ತಪ್ಪು ಭಾವನೆ ಬೆಳೆದುಬಂದಿದೆ. ತಲೆಯ ಅಗ್ರಭಾಗದಲ್ಲಿ ಬಾಯಿ ಅಡ್ಡ ಸೀಳಿಕೆಯಂತಿದೆ. ಬಾಯಿಯ ಮೇಲ್ಗಡೆ ಒಂದು ಜೊತೆ ಹೊರನಾಸಿಕ ರಂಧ್ರಗಳೂ ತಲೆಯ ಪಕ್ಕಗಳಲ್ಲಿ ಒಂದು ಜೊತೆ ಕಣ್ಣುಗಳೂ ಇವೆ. ಒಂದೊಂದು ಕಣ್ಣಿಗೂ ದಪ್ಪವಾದ ಮೇಲು ರೆಪ್ಪೆ, ತೆಳುವಾದ ಕೆಳರೆಪ್ಪೆ ಮತ್ತು ಪಾರದರ್ಶಕವಾದ ಮೂರನೇ ಪಟಲಗಳಿವೆ. ಕಣ್ಣುಗಳ ಹಿಂಭಾಗದಲ್ಲಿ ಕಿವಿಯ ತಮಟೆಯುಂಟು. ಇದು ಕಪ್ಪೆಯಂತೆ ದೇಹದ ಚರ್ಮದ ಮಟ್ಟದಲ್ಲಿಯೇ ಇಲ್ಲದೆ ಸ್ವಲ್ಪ ತಗ್ಗಾದ ಕುಳಿಯಲ್ಲಿದೆ. ಈ ಕುಳಿಗೆ ಕರ್ಣರಂಧ್ರ ಎಂದು ಹೆಸರು. ಮುಂಡದ ತಳಭಾಗಕ್ಕೆ ಅಂಟಿದಂತೆ ಎರಡು ಜೊತೆ ಕಾಲುಗಳಿವೆ. ಮುಂಗಾಲುಗಳಲ್ಲಿ ತೋಳು, ಮುಂಗೈ, ಹಸ್ತ ಮತ್ತು ನಖಗಳುಳ್ಳ ಐದೈದು ಕೈಬೆರಳುಗಳಿವೆ. ಹಿಂಗಾಲುಗಳಲ್ಲಿ ತೊಡೆ, ಮುಂಗಾಲು, ಪಾದ ಮತ್ತು ಉಗುರಿರುವ ಐದು ಬೆರಳುಗಳಿವೆ. ಬುಡದ ಬಳಿ ಬಾಲ ದಪ್ಪನಾಗಿದ್ದು ಕ್ರಮೇಣ ಚೂಪಾಗುತ್ತ ಹೋಗುವುದು. ರುಂಡ ಮುಂಡಗಳ ಒಟ್ಟು ಉದ್ದದಷ್ಟೇ ಸುಮಾರಾಗಿ ಬಾಲದ ಉದ್ದವೂ ಇದೆ. ಬಾಲದ ಬುಡದ ಬಳಿ ಕ್ಲೋಯಕ ರಂಧ್ರವುಂಟು. ಇದು ಅಡ್ಡನಾಗಿ ಹರಡಿದ ಸೀಳಿಕೆಯಂತೆ ಕಾಣಬರುತ್ತದೆ. ಇದರ ಮೂಲಕ ಮಲಾಶಯ ಮತ್ತು ಮೂತ್ರ ಜನನೇಂದ್ರೀಯಗಳು ಹೊರಕ್ಕೆ ತೆರೆಯುತ್ತವೆ. == ರಕ್ತಪರಿಚಲನೆ ಮತ್ತು ಹೃದಯ == ಓತಿಕೇತದ ಹೃದಯದಲ್ಲಿ ನಾಲ್ಕು ಕೋಣೆಗಳಿವೆ. ಪೂರ್ಣವಾದ ಅಂತರ ಭಿತ್ತಿಯಿಂದಾಗಿ ಹೃತ್ಕುಕ್ಷಿ ಎರಡು ಭಾಗಗಳಾಗಿ ವಿಭಾಗವಾಗಿರುವುದರಿಂದ ಹೃದಯದಲ್ಲಿ ಒಟ್ಟು ನಾಲ್ಕು ಕೋಣೆಗಳಿವೆ. ಸೈನಸ್ ವಿನೋಸಸ್ ಸಣ್ಣದಾಗಿದೆ. ಈ ಕೋಣೆಗೆ ಮೂರು ಪ್ರಧಾನ ಅಭಿಧಮನಿಗಳಾದ ಕೇವಲ್‌ಗಳು ಮಲಿನ ರಕ್ತವನ್ನು ತರುತ್ತವೆ. ಸೈನಸ್ ವಿನೋಸಸ್ ಬಲ ಹೃತ್ಕರ್ಣಕ್ಕೆ ಒಂದು ರಂಧ್ರದ ಮೂಲಕ ತೆರೆಯುತ್ತದೆ. ಈ ರಂಧ್ರವನ್ನು ಸೈನು ಆರಿಕ್ಯುಲಾರ್ ಕವಾಟ ಕಾಪಾಡುತ್ತದೆ. ಎಡ ಹೃತ್ಕರ್ಣಕ್ಕೆ ಪಲ್ಮನರಿ ಅಭಿಧಮನಿ ತೆರೆಯುತ್ತದೆ. ಇದು ಪುಪ್ಪುಸಗಳಿಂದ ಶುದ್ಧರಕ್ತವನ್ನು ತರುತ್ತದೆ. ಎರಡು ಹೃತ್ಕರ್ಣಗಳಿಂದಲೂ ಹೃತ್ಕುಕ್ಷಿಗಳಿಗೆ ರಕ್ತ ಬೇರೆ ಬೇರೆಯಾಗಿಯೇ ಹರಿಯುತ್ತದೆ. ಹೃತ್ಕುಕ್ಷಿ ಬಲವಾದ ದಪ್ಪ ಸ್ಪಂಜಿನ ಮಾಂಸಲ ಭಿತ್ತಿಯಿಂದಾಗಿದೆ. ಬಲಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿಗಳಲ್ಲಿ ಮಲಿನರಕ್ತವೂ ಎಡಹೃತ್ಕರ್ಣ ಮತ್ತು ಹೃತ್ಕುಕ್ಷಿಗಳಲ್ಲಿ ಆಕ್ಸಿಜನೀಕೃತವಾದ ರಕ್ತವೂ (ಶುದ್ಧರಕ್ತ) ಇರುತ್ತದೆ. ಹೃತ್ಕುಕ್ಷಿಯ ಅಂತರ ಭಿತ್ತಿ ಅಪೂರ್ಣವಾಗಿದ್ದರೂ ಸಾಧಾರಣವಾಗಿ ಮಲಿನ ರಕ್ತ ಮತ್ತು ಶುದ್ಧರಕ್ತಗಳು ಬೆರೆಯುವುದಿಲ್ಲ. ಟ್ರಂಕಸ್ ಆರ್ಟೀರಿಯೋಸಸ್ ಬುಡದಲ್ಲೇ ಕವಲೊಡೆದಿರುವುದರಿಂದ ಎಲ್ಲ ಮಹಾಪಧಮನಿಗಳು, ಬಲ ಮತ್ತು ಎಡ ಸಿಸ್ಟಮಿಕ್ ಮತ್ತು ಪಲ್ಮನರಿ ಅಪಧಮನಿಗಳು ಹೃತ್ಕುಕ್ಷಿಯಿಂದಲೇ ಹೊರಡುತ್ತವೆ. ಇವೆಲ್ಲವೂ ಸಂಯೋಜಿತ ಅಂಗಕೋಶದಿಂದ ಆವೃತವಾಗಿವೆ. ಪಲ್ಮನರಿ ಅಪಧಮನಿಯೂ ಬಲಹೃತ್ಕುಕ್ಷಿಯ ಮೇಲ್ಭಾಗದಿಂದ ಹುಟ್ಟುತ್ತದೆ. ಬಲ ಸಿಸ್ಟಮಿಕ್ ಅಪಧಮನಿ ಎಡ ಹೃತ್ಕುಕ್ಷಿಯಿಂದಲೂ ಎಡ ಸಿಸ್ಟಮಿಕ್ ಅಪಧಮನಿ ಬಲ ಹೃತ್ಕುಕ್ಷಿಯಿಂದಲೂ ಹುಟ್ಟುತ್ತವೆ. ಈ ಎರಡು ಸಿಸ್ಟಮಿಕ್ ಅಪಧಮನಿಗಳು ಮುಂಭಾಗಕ್ಕೆ ಹೋಗುವಾಗ ಒಂದರ ಮೇಲೊಂದು ಅಡ್ಡಹಾಯುವುದರಿಂದ ಟ್ರಂಕಸ್ ಆರ್ಟೀರಿಯೋಸಸ್ ಸ್ವಲ್ಪ ತಿರುಚಿಕೊಂಡಿದೆ. ಇದರಿಂದ ಇವುಗಳ ಹಾದಿ ಬೇರೆಯಾಗಿದೆ. ಅಂದರೆ ಬಲ ಸಿಸ್ಟಮಿಕ್ ಎಡಗಡೆಗೂ ಎಡ ಸಿಸ್ಟಮಿಕ್ ಬಲಗಡೆಗೂ ಹೋಗುತ್ತವೆ. ಅಪಧಮನಿಗಳ ಬುಡಗಳಲ್ಲಿ ಒಂದು ಜೋಡಿ ಅರ್ಧಚಂದ್ರಾಕಾರದ ಕವಾಟಗಳಿವೆ. ಎಡ ಸಿಸ್ಟಮಿಕ್ ಅಪಧಮನಿ ಅಪೂರ್ಣ ಅಂತರ ಭಿತ್ತಿಯ ಮುಂಭಾಗದಲ್ಲೇ ಇರುತ್ತದೆ. ಅಪಧಮನಿಯಲ್ಲಿ ಮಲಿನ ಮತ್ತು ಶುದ್ಧರಕ್ತಗಳು ಬೆರೆತು ಹರಿಯುತ್ತವೆ. == ಸಂತಾನಾಭಿವೃದ್ಧಿ == ಓತಿಗಳು ಭಿನ್ನಲಿಂಗಿಗಳು, ಗಂಡುಗಳಲ್ಲಿ ಕ್ಲೋಯಕದಿಂದ ಹಿಂದಕ್ಕೆ ಹರಡಿದಂತೆ, ಬಾಲದ ಅಧೋ ಭಾಗದಲ್ಲೆ, ಚರ್ಮದ ಒಳಗೆ ಒಂದು ಜೊತೆ ಆಲಿಂಗನಾಂಗಗಳಿವೆ, ಓತಿ ಅಂಡಜ, ಹೆಚ್ಚು ಭಂಡಾರವಿರುವ, ಬಿಳಿಯ ಸುಣ್ಣ ಚಿಪ್ಪಿನಿಂದಾವೃತವಾದ ಹತ್ತಾರು ಮೊಟ್ಟೆಗಳನ್ನಿಡುತ್ತದೆ. == ಛಾಯಾಂಕಣ == == ಹೊರಸಂಪರ್ಕ == ಅಪ್ರತಿಮ ಬೀಸಣಿಗೆ ಕತ್ತಿನ ಓತಿ’ ಯ ಬಣ್ಣದ ತೊಗಲಿನ ಕಥೆ;ಪ್ರಜಾವಾಣಿ ವಾರ್ತೆ;29 , 2017 == ಉಲ್ಲೇಖಗಳು ==