ಕಜ್ಜಿ ಎಂಬುದು ಮೇಲ್ಚರ್ಮ ಪದರದಲ್ಲಿ ಮಾನವನ ಮಾಂಸದಿನಿ (ಸಾರ್ಕಾಪ್ಟೀಸ್) ಕಜ್ಜಿಹುಳು ನೆಲೆಸಿದ್ದರಿಂದ ಏಳುವ ಒಂದು ಅಂಟುರೋಗ (ಸ್ಕೇಬೀಸ್). ಇಸಬು, ತುರಿಗಜ್ಜಿ, ಹುರುಕು ಪರ್ಯಾಯ ಪದಗಳು. ಒಂದು ಜಾತಿಯ ಉಣ್ಣಿಗಳ ಕಡಿತದಿಂದ ಹರಡುವ ರೋಗವಿದು. ಬೆರಳ ಸಂದುಗಳು, ಕಂಕುಳು, ಗಜ್ಜಲುಗಳ ಚರ್ಮದೊಳಕ್ಕೆ ಬಿಲದಂತೆ ತೋಡಿಕೊಂಡು ಕ್ರಿಮಿ ಒಳಸೇರಿ ಮೇಲೆ ದದ್ದು ಗುಳ್ಳೆ ಎದ್ದಿರಬಹುದು. ಚಿಕ್ಕಮಕ್ಕಳಲ್ಲಿ, ಮಾನಸಿಕ ರೋಗಿಗಳಲ್ಲಿ, ನಿಬಿಡ ಜನವಸತಿ ಇರುವಲ್ಲಿ ಇದು ವ್ಯಾಪಕವಾಗಿ ಹಬ್ಬಿರುತ್ತದೆ. ರಾತ್ರಿ ಹೊತ್ತು ಇದರ ಚಟುವಟಿಕೆ ಬಹಳ. ಇದರಿಂದ ಕೆರೆತ, ತುರಿಕೆಯಾಗಿ ಇನ್ನಷ್ಟು ತೊಡಕಾಗಿ ಕೀವುಗೂಡುವುದೂ ಉಂಟು. ಬರಗಾಲ, ಯುದ್ಧಕಾಲಗಳಲ್ಲಿ ಇದು ಸಾಂಕ್ರಾಮಿಕವಾಗಬಹುದು. ಮನುಷ್ಯರಿಗೆ ಮಾತ್ರ ಹತ್ತುವ ಕಜ್ಜಿಯೇ ಬೇರೆ. ಬೆಕ್ಕು, ನಾಯಿ, ಕುರಿಗಳ ತೆರನ ಸ್ತನಿಗಳಿಗೆ ಹತ್ತುವವೇ ಬೇರೆ. ಪ್ರಾಣಿಗಳವು ಜನರಿಗೆ ಹತ್ತಿದರೆ ಕಜ್ಜಿಯ ಲಕ್ಷಣಗಳು ಬೇರೆಯಾಗಿರುತ್ತವೆ. ರಂಧ್ರದೊಳಗೆ ತಾಯಿ ಉಣ್ಣಿ, ಮೊಟ್ಟೆ ಮತ್ತು ಮರಿಗಳಿರುತ್ತವೆ. ಯುಕ್ತ ಕಾಲ ಬಂದಾಗ ತಾಯಿ ಉಣ್ಣಿ ತನ್ನ ಸ್ರವಿಕೆಯನ್ನು ಸೂಸುತ್ತದೆ. ಆಗ ವ್ಯಕ್ತಿಗೆ ಆ ಭಾಗದಲ್ಲಿ ತುರಿಕೆ ಉಂಟಾಗುತ್ತದೆ. ಅಲ್ಲಿ ಆತ ಕೈ ಆಡಿಸಿ ಕೆರೆದಾಗ ಗುಳ್ಳೆ ಒಡೆದು ಮರಿಗಳು ಹೊರಬಂದು ಅದೇ ವ್ಯಕ್ತಿಯ ದೇಹದ ಬೇರೊಂದು ಭಾಗಕ್ಕೆ ವಲಸೆಹೋಗಬಹುದು ಅಥವಾ ಆತನೊಡನೆ ಸಂಪರ್ಕಕ್ಕೆ ಬರುವ ಇತರರ ದೇಹಗಳಿಗೆ ವರ್ಗಾವಣೆಗೊಳ್ಳಬಹುದು. ಕಜ್ಜಿಗೆ ಅವಶ್ಯವಾದ ಮದ್ದು, ಲೇಪ, ಮುಲಾಮುಗಳು ಹೇರಳವಾಗಿ ಲಭ್ಯ. ಇವನ್ನು ಉಪಯೋಗಿಸಿ ಸ್ಕೇಬಿಸ್‌ನಿಂದ ಮುಕ್ತರಾಗಬಹುದು. == ಉಲ್ಲೇಖಗಳು == == ಹೊರಗಿನ ಕೊಂಡಿಗಳು ==