ರೈತ ಬೆಳೆದ ಬೆಳೆಗಳನ್ನು ಹಸನು ಮಾಡಿ, ತೂಕ ಮಾಡಿ ಮಾರುಕಟ್ಟೆಗೆ ಕಳುಹಿಸಬೇಕಾಗುತ್ತದೆ. ಹಾಗೆ ಕಳುಹಿಸುವ ಮೊದಲು ಸಂತೋಷದಿಂದ ಹಬ್ಬದ ಸಂಭ್ರಮದಲ್ಲಿರುತ್ತಾನೆ. ಇದಕ್ಕೆ ಕಣಹಬ್ಬವೆಂದು ಹೆಸರು.ಸುಮಾರಾಗಿ ಇಂಥ ಸುಗ್ಗಿ ಬೇಸಗೆಯಲ್ಲಿಯೇ ಬರುತ್ತದೆ. ಮನೆಮಂದಿ, ಕೆಲಸಗಾರರು ಮತ್ತು ಬಂಧುಗಳೂ ಕೂಡ ಈ ಕಣಹಬ್ಬದಲ್ಲಿ ಭಾಗವಹಿಸುತ್ತಾರೆ. == ಕಣದಲ್ಲಿಯೇ ಊಟ == ಕಣಹಬ್ಬದಂದು ಮನೆಯವರೆಲ್ಲರೂ ಕಣದಲ್ಲಿಯೇ ಕೆಲಸ ಮಾಡುತ್ತಿರುತ್ತಾರೆ. ಮನೆಗೆ ಹೋಗಲೂ ಬಿಡುವಿರುವುದಿಲ್ಲ. ಹಾಗಾಗಿ ಊಟದ ವ್ಯವಸ್ಥೆಯನ್ನೂ ಕಣದಲ್ಲಿಯೇ ಮಾಡುತ್ತಾರೆ. ಕೆಲಸಗಾರರು, ಬಂಧುಗಳು ಎಲ್ಲರೂ ಅಲ್ಲಿಯೇ ಸೇರುತ್ತಾರೆ. ಆಸಕ್ತಿ ಹಾಗೂ ಅರ್ಹತೆ ಇದ್ದವರು ಹಾಡುತ್ತಾರೆ, ಮಕ್ಕಳು ಕುಣಿಯುತ್ತಾರೆ. ಎಲ್ಲರೂ ಒಂದಾಗಿ ಕಣದಲ್ಲಿಯೇ ಊಟಮಾಡುತ್ತಾರೆ. == ಕಣದಲ್ಲಿಯೇ ತೂಕ == ರೈತರಿಗೆ ಸಹಜವಾಗಿಯೇ ಒಂದು ಹುಮ್ಮಸ್ಸಿರುತ್ತದೆ. ತಾವು ಬೆಳೆದ ಬೆಳೆಗಳನ್ನೆಲ್ಲ ತಾವೇ ತೂಕ ಮಾಡಿ, ಚೀಲಗಳಿಗೆ ತುಂಬುತ್ತಾರೆ. ಅನುಕೂಲವಿದ್ದವರು ತಮ್ಮ ವಾಹನಗಳಲ್ಲಿಯೇ ಪೇಟೆಗೆ ಸಾಗಿಸುತ್ತಾರೆ. ಕೊನೆಗೆ ಕಣದಲ್ಲಿ ಏನೂ ಉಳಿದಿಲ್ಲವೆಂದು ಖಾತ್ರಿ ಮಾಡಿಕೊಂಡೇ ಕಣವನ್ನು ಬಿಟ್ಟು ಹೊರಡುತ್ತಾರೆ. == ಉಳ್ಳವರು ಇಲ್ಲದವರಿಗೆ == ಒಂದು ಊರಿನ ಎಲ್ಲರೂ ಕಣಮಾಡಿಕೊಳ್ಳುವಷ್ಟು ಶ್ರೀಮಂತರಾಗಿರುವುದಿಲ್ಲ. ಅಥವಾ ಅವರ ಬೆಳೆಯೂ ಅತ್ಯಂತ ಕಡಿಮೆಯಿರಬಹುದು. ಆದರೂ ಒಕ್ಕಲುತನ ಮಾಡಲೇಬೇಕಲ್ಲವೇ? ಅಂಥವರಿಗಾಗಿ ಉಳ್ಳವರು ಇಲ್ಲದವರಿಗೆ ಕಣ ಬಿಟ್ಟುಕೊಡುವ ಸಹೃದಯರೂ ಇದ್ದಾರೆ. = ಅಪಾಯಗಳೂ, ಅನಾಹುತಗಳೂ = ಕಣ ಹಬ್ಬಗಳ ಸಮಯದಲ್ಲಿ ಅನೇಕ ಅಪಾಯಗಳು ಆಗಬಹುದು. ಅಕಾಲಿಕ ಮಳೆ ಬಂದು ಎಲ್ಲವೂ ನೀರಿನಲ್ಲಿ ಕೊಚ್ಚಿಹೋಗಬಹುದು. ಅಪರೂಪಕ್ಕೆ ಬೆಂಕಿ ತಾಗಿ ಎಲ್ಲವೂ ಸುಟ್ಟು ಹೋಗಬಹುದು. ಭತ್ತ ಅಥವಾ ಧಾನ್ಯ ತೂರುವಾಗ ಪುಟ್ಟ ಮಕ್ಕಳ ಕಣ್ಣಿಗೆ ತಾಗಿ ದೃಷ್ಟಿ ದೋಷ ಆಗಲೂಬಹುದು. == ಕಣದ ರಕ್ಷಣೆ ಸಂಸ್ಕೃತಿಯ ರಕ್ಷಣೆ == ಕಣದ ಮತ್ತೊಂದು ವಿಶೇಷವೆಂದರೆ ಇಲ್ಲಿ ಹಾಡುಗಾರರು, ಕೋಲಾಟವಾಡುವವರು, ಬಸವನಾಡಿಸುವವರು ಮೊದಲಾದವರೆಲ್ಲರೂ ಸೇರುತ್ತಾರೆ.ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಹೀಗೆ ಕಣದ ರಕ್ಷಣೆಯೊಂದಿಗೆ ಸಂಸ್ಕೃತಿಯ ರಕ್ಷಣೆಯೂ ಆಗುತ್ತದೆ. == ಇದು ಕಣ ಹಬ್ಬದ ಆಶಯ == ಓಂ ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ ನಮಃ ಪೃಥಿವೈ ನಮ ಓಷಧೀಭ್ಯಃ ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಬೃಹತೇ ಕರೋಮಿ.