ಕಪೈಬರಾವು ದಂಶಕಗಳಲ್ಲಿಯೇ ಅತಿ ದೊಡ್ಡದಾದ ಪ್ರಾಣಿ. ಅಗೌಟಿ, ಚಿಂಚಿಲ್ಲಾ, ಗಿನಿ ಹಂದಿ ಮೊದಲಾದವು ಈ ಪ್ರಾಣಿಯ ಅತ್ಯಂತ ಸಮೀಪ ಸಂಬಂಧಿಗಳು. ಇದರ ಸ್ವಾಭಾವಿಕ ಆವಾಸ ಸ್ಥಾನ ದಕ್ಷಿಣ ಅಮೆರಿಕಾ ಆಗಿದ್ದು, ಸವನ್ನಾ ಹುಲ್ಲುಗಾವಲು, ಅರಣ್ಯ ಪ್ರದೇಶ ಮೊದಲಾದೆಡೆಗಳಲ್ಲಿ ಜಲಮೂಲದ ಸಮೀಪ ವಾಸಿಸುತ್ತವೆ. ಇವು ಸಾಮಾನ್ಯವಾಗಿ ಗುಂಪಿನಲ್ಲಿ ವಾಸಿಸುವುದಾಗಿದ್ದು, ಕೆಲವೊಂದು ಗುಂಪುಗಳಲ್ಲಿ ಸುಮಾರು ೧೦೦ರಷ್ಟು ಪ್ರಾಣಿಗಳನ್ನೂ ಕಾಣಬಹುದಾಗಿದೆ. ಆದರೆ ಸಾಮಾನ್ಯವಾಗಿ ಒಂದು ಗುಂಪಿನಲ್ಲಿ ೧೦ರಿಂದ ೧೫ ಪ್ರಾಣಿಗಳು ಇರುವುದು ವಾಡಿಕೆ. ಅವುಗಳ ಚರ್ಮ ಹಾಗೂ ಮಾಂಸಕ್ಕಾಗಿ ಬೇಟೆಯಾಡುತ್ತಿದ್ದರೂ, ಅವು ಅಪಾಯದಂಚಿನಲ್ಲಿರುವ ಪ್ರಾಣಿಗಳಾಗಿಲ್ಲ.