ಕರುಹಾಲೆ: ಅಲ್ಮೇಸೀ ಕುಟುಂಬಕ್ಕೆ ಸೇರಿದ ಸಣ್ಣಗಾತ್ರದ ಮರ. ಇದರ ಶಾಸ್ತ್ರೀಯನಾಮ ಟ್ರೀಮ ಓರಿಯಂಟ್ಯಾಲಿಸ್. ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಜಿಲ್ಲೆಗಳ ತೇವಮಯ ಹಾಗೂ ಒಣಹವೆಯ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. == ಲಕ್ಷಣಗಳು == ಪರ್ಯಾಯವಾಗಿ ಜೋಡಣೆಗೊಂಡಿರುವ ಹಾಗೂ ಗರಗಸದ ಹಲ್ಲಿನಂಥ ಅಂಚುಳ್ಳ ಎಲೆಗಳಿವೆ. ಎಲೆಗಳ ಬುಡ ಕೊಂಚ ಅಸಮವಾಗಿದೆ. ಎಲೆಯ ಅಲಗಿನ ಬುಡಭಾಗದಲ್ಲಿ ಪ್ರಮುಖವಾದ ಮೂರು ನಾಳಗಳಿವೆ. ಹೂಗೊಂಚಲು ಮಧ್ಯಾರಂಭಿ ಮಾದರಿಯದು; ಎಲೆಗಳ ಕಂಕುಳಲ್ಲಿ ಹುಟ್ಟುತ್ತದೆ. ಹೂಗಳು ಏಕಲಿಂಗಿಗಳು; ಹೆಣ್ಣು ಗಂಡು ಹೂಗಳು ಒಂದೇ ಮರದಲ್ಲಿರಬಹುದು ಅಥವಾ ಬೇರೆ ಬೇರೆ ಮರಗಳಲ್ಲಿರಬಹುದು. ಪುಷ್ಟಪತ್ರಗಳು ಹೂದಳಗಳು ಬೇರೆ ಬೇರೆಯಾಗಿಲ್ಲ; ಒಂದೇ ಬಗೆಯ ಪೆರಿಯಾಂತುಗಳಾಗಿ ರೂಪಿತವಾಗಿವೆ. ಇವುಗಳ ಸಂಖ್ಯೆ 4-5. ನೋಡಲು ಪುಷ್ಟಪತ್ರಗಳಂತಿವೆ. ಇವು ಗಂಡುಹೂಗಳಲ್ಲಿ ಬಹಳ ಪುಟ್ಟಗಾತ್ರದವಾಗಿವೆ. ಗಂಡುಹೂಗಳಲ್ಲಿ 4-5 ಕೇಸರಗಳೂ ಒಂದು ಬರಡು ಅಂಡಾಶಯವೂ (ಪಿಸ್ಪಿಲೋಡ್) ಇವೆ. ಹೆಣ್ಣುಹೂವಿನಲ್ಲಿ ಎರಡು ಕಾರ್ಪೆಲುಗಳಿಂದಾದ ಉಚ್ಚ ಸ್ಥಾನದ ಅಂಡಾಶಯವಿದೆ. ಶಲಾಕೆ ಎರಡು ಭಾಗವಾಗಿ ಕವಲೊಡೆದಿದೆ. ಅಂಡಕೋಶದಲ್ಲಿ ಒಂದೇ ಕೋಣೆಯೂ ಅದರೊಳಗೆ ಒಂದೇ ಅಂಡಕವೂ ಇವೆ. ಕಾಯಿ ಒಂದೇ ಬೀಜವನ್ನುಳ್ಳ ಅಷ್ಟಿಫಲ ಮಾದರಿಯದು. == ಉಪಯೋಗಗಳು == ಕರುಹಾಲೆ ಮರದ ಚೌಬೀನೆ ಕೆಂಪು ಮಿಶ್ರಿತ ಬೂದುಬಣ್ಣದ್ದಾಗಿದ್ದು ಬಹಳ ನಯವಾಗಿದೆ. ಬಂದೂಕಿನ ಮದ್ದಿನ ತಯಾರಿಕೆಗೆ ಬೇಕಾಗುವಂಥ ಇದ್ದಲನ್ನು ತಯಾರಿಸಲು ಇದು ಉತ್ತಮ ದರ್ಜೆಯ ಮರವೆಂದು ಹೆಸರಾಗಿದೆ. ಕೆಲವೆಡೆ ನೆರಳಿನ ಮರವಾಗಿಯೂ ಬೆಳೆಸುತ್ತಾರೆ. == ಛಾಯಾಂಕಣ == == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == . 2014-11-29 ವೇಬ್ಯಾಕ್ ಮೆಷಿನ್ ನಲ್ಲಿ. - .