ಕರ್ಮೇಂದ್ರಿಯ : ಇಂದ್ರಿಯಗಳನ್ನು ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯ ಎಂದು ಎರಡು ಬಗೆಯಾಗಿ ವಿಂಗಡಿಸಿದ್ದಾರೆ. ಜ್ಞಾನವನ್ನುಂಟುಮಾಡುವ ಸಾಮರ್ಥ್ಯವುಳ್ಳ ಇಂದ್ರಿಯಗಳು ಜ್ಞಾನೇಂದ್ರಿಯಗಳು (ಕಣ್ಣು, ಕಿವಿ, ನಾಲಗೆ, ಮೂಗು, ಚರ್ಮ). ಉಚ್ಚಾರಣೆ ಮೊದಲಾದ ಕ್ರಿಯೆಗಳಲ್ಲಿ ಯಾವುದಾದರೊಂದನ್ನು ಮಾಡುವ ಸಾಮರ್ಥ್ಯವುಳ್ಳ ಇಂದ್ರಿಯಗಳು ಕರ್ಮೇಂದ್ರಿಯಗಳು. ಕರ್ಮೇಂದ್ರಿಯಗಳು ಐದು ಬಗೆಯಾಗಿವೆ: ವಾಕ್, ಪಾಣಿ, ಪಾದ, ಪಾಯು ಮತ್ತು ಉಪಸ್ಥ. ವರ್ಣೋಚ್ಚಾರಣೆಗೆ ಸಾಧನವಾದ ಇಂದ್ರಿಯವೇ ವಾಕ್ಕು. ಇದು ಹೃದಯ, ಗಂಟಲು, ಜಿಹ್ವಾಮೂಲ, ನಾಲಗೆ, ಹಲ್ಲು, ತುಟಿ, ಮೂಗು ಮತ್ತು ಮೂರ್ಧ ಎಂಬ ಎಂಟು ಸ್ಥಾನಗಳಲ್ಲಿದೆ. ಪಶು ಪ್ರಾಣಿಗಳಲ್ಲಿ ಇದು ಸ್ಪಷ್ಟವಾಗಿಲ್ಲ. ಕೈಕೆಲಸ ಮೊದಲಾದುವನ್ನು ಮಾಡಲು ಸಾಧನವಾದ ಇಂದ್ರಿಯ ಪಾಣಿ. ಸಂಚಾರಕ್ಕೆ ಸಾಧನವಾದ ಇಂದ್ರಿಯವೇ ಪಾದ. ಮಲಮೂತ್ರಾದಿಗಳ ವಿಸರ್ಜನೆಗೆ ಸಾಧನವಾದ ಇಂದ್ರಿಯಗಳೇ ಪಾಯು ಎನಿಸುತ್ತವೆ. ಆನಂದವಿಶೇಷಕ್ಕೆ ಸಾಧನವಾದ ಇಂದ್ರಿಯ ಉಪಸ್ಥ; ಇದು ಜನನಾಂಗಗಳಲ್ಲಿದೆ. ಈ ಇಂದ್ರಿಯಗಳು ಸೂಕ್ಷ್ಮವಾದವು. ಜೀವನೊಡನೆ ಇವೂ ದೇಹಾಂತರಗಳಿಗೆ ಬರುವುವು. ಸೂಕ್ಷ್ಮ ರೂಪದಲ್ಲಿ ಇವು ಸ್ವಭಾವತಃ ಸಮರ್ಥವಾಗಿಯೇ ಇದ್ದರೂ ಆಯಾ ಜೀವರುಗಳ ಅದೃಷ್ಟದ ಕಾರಣ ದೋಷಯುಕ್ತವಾಗಿರುವುವು. (ನೋಡಿ- ಇಂದ್ರಿಯಗಳು)