ಕೊಂಕಣಿಯು ಭಾರತ ದೇಶದ ಪಶ್ಚಿಮ ಕರಾವಳಿಯ ಒಂದು ಆಡುಭಾಷೆಯಾಗಿದೆ. ಗೋವಾ ರಾಜ್ಯದ ಅಧಿಕೃತ ಭಾಷೆ ಕೊಂಕಣಿಯಾಗಿದೆ. ಕೊಂಕಣಿಗೆ ತನ್ನದೇ ಆದ ಲಿಪಿಯಿಲ್ಲ. ಕೊಂಕಣಿಯು ಭಾರತದ ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಸೇರಿಸಲ್ಪಟ್ಟ ೨೨ಭಾಷೆಗಳಲ್ಲಿ ಒಂದಾಗಿದೆ.ಕೊಂಕಣಿಯು ಅನೇಕ ಉಪಭಾಷೆಗಳನ್ನು ಹೊಂದಿದೆ. ಸಮಕಾಲೀನ ಕೊಂಕಣಿ ಸಮಕಾಲೀನ ಕೊಂಕಣಿಯನ್ನು ದೇವನಾಗರಿ, ಕನ್ನಡ, ಮಲಯಾಳಂ, ಪರ್ಷಿಯನ್ ಮತ್ತು ಲ್ಯಾಟಿನ್ ಬರವಣಿಗೆಗಳಲ್ಲಿ ಬರೆಯಲಾಗುತ್ತದೆ. ಇದನ್ನು ತಮ್ಮ ತಮ್ಮ ಸ್ಥಳೀಯ ಭಾಷೆಗಳ ಲಿಪಿಯಲ್ಲಿ ಹೆಚ್ಚಾಗಿ ಬರೆಯುತ್ತಾರಾದರೂ ದೇವನಾಗರಿ ಲಿಪಿಯಲ್ಲಿ ಗೋವಾದವರ ಭಾಷೆ ಸ್ಟ್ಯಾಂಡರ್ಡ್ ಕೊಂಕಣಿ ಎಂದು ಗುರುತಿಸಲಾಗಿದೆ. ಕೊಂಕಣಿಯ ಪುನರುಜ್ಜೀವನ ಗೋವಾದ ಕ್ರಿಶ್ಚಿಯನ್ ಸಮುದಾಯದವರು ಅಧಿಕೃತವಾಗಿ ಹಾಗು ಸಾಮಾಜಿಕವಾಗಿ ಪೋರ್ಚುಗೀಸ್ ಭಾಷೆಯನ್ನು ಬಳಸುತ್ತಿದ್ದರಾದ್ದರಿಂದ ಕೊಂಕಣಿಯ ಸ್ಥಿತಿ ದಯನೀಯವಾಗಿತ್ತು.ಕೊಂಕಣಿಯಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ವಿಭಾಗಗಳಿತ್ತು. ಅದಲ್ಲದೆ ಹಿಂದೂಗಳ ಕೊಂಕಣಿಯ ಮೇಲೆ ಮರಾಠಿಯ ಪ್ರಾಬಲ್ಯವಿತ್ತು.ಹೀಗಿರಲು ವಾಮನ ರಘುನಾಥ ಶೆಣೈ ವರ್ದೆ ವಲೌಲಿಕರ್ ಅವರು ಜಾತಿ ಧರ್ಮದ ಭೇಧವಿಲ್ಲದೆ ಕೊಂಕಣಿ ಸಮುದಾಯದವರನ್ನು ಒಗ್ಗೂಡಿಸಲು ಶ್ರಮಿಸಿದರು . ಪೋರ್ಚುಗೀಸರ ವಿರುದ್ಧ ಮತ್ತು ಮರಾಠಿ ಪ್ರಾಬಲ್ಯತೆಯ ವಿರುದ್ಧ ಬಹುತೇಕ ಏಕಾಂಗಿಯಾಗಿ ಹೋರಾಡಿದರು.ಕೊಂಕಣಿಯಲ್ಲಿ ಅನೇಕ ಲೇಖನಗಳನ್ನು ಬರೆದರು.ಹಾಗಾಗಿ ಅವರನ್ನು ಆಧುನಿಕ ಕೊಂಕಣಿ ಸಾಹಿತ್ಯದ ಪ್ರವರ್ತಕರೆಂದು ಪರಿಗಣಿಸಲಾಗಿದೆ.ಅವರು ನಿಧನ ಹೊಂದಿದ ದಿನದಂದು(ಏಪ್ರಿಲ್ ೯) "ವಿಶ್ವ ಕೊಂಕಣಿ ದಿನ"ವನ್ನು ಆಚರಿಸಲಾಗುತ್ತಿದೆ. === ಸ್ವಾತಂತ್ರ್ಯನಂತರದ ಅವಧಿಯಲ್ಲಿ === ೧೯೬೧ ರಲ್ಲಿ ಪೋರ್ಚುಗೀಸರಿಂದ ಸ್ವಾಧೀನಪಡಿಸಿಕೊಂಡ ನಂತರ ಗೋವಾ ರಾಜ್ಯವು ಕೇಂದ್ರದ ಆಡಳಿತಕ್ಕೊಳಪಟ್ಟಿತು.ಕೊಂಕಣಿ ಸ್ವತಂತ್ರ ಭಾಷೆಯೊ ಅಥವಾ ಮರಾಠಿಯ ಉಪಭಾಷೆಯೊ ಎಂಬ ಬಗ್ಗೆ ಚರ್ಚಿಸಲಾಯಿತು.ಜನಾಭಿಪ್ರಾಯ ಸಂಗ್ರಹಿಸಿದ ನಂತರ ಗೋವಾವನ್ನು ಸ್ವತಂತ್ರ ರಾಜ್ಯವಾಗಿಯೆ ಉಳಿಸಲಾಯಿತು. === ಸ್ವತಂತ್ರ ಭಾಷೆಯಾಗಿ ಗುರುತಿಸುವಿಕೆ === ಕೊಂಕಣಿ ಮರಾಠಿ ಪ್ರಾಂತ್ಯ ಮತ್ತು ಒಂದು ಸ್ವತಂತ್ರ ಭಾಷೆಯಲ್ಲ ಎಂದು ಕೆಲವು ಮರಾಠಿಗರ ಒತ್ತಾಯ ಮುಂದುವರಿಯಿತು.ವಿವಾದ ಇತ್ಯರ್ಥಗೊಳಿಸಲು ಭಾಷಾ ತಜ್ಞರ ಒಂದು ಸಮಿತಿಯನ್ನು ನೇಮಿಸಲಾಯಿತು. ೨೬ ಫೆಬ್ರವರಿ ೧೯೭೫ ರಂದು ಸಮಿತಿಯು ಕೊಂಕಣಿಯು ಒಂದು ಸ್ವತಂತ್ರ ಮತ್ತು ಸಾಹಿತ್ಯಕ ಭಾಷೆ ಮತ್ತು ಅದರ ಮೇಲೆ ಪೋರ್ಚುಗೀಸ್ ಭಾಷೆಯ ಗಾಢ ಪ್ರಭಾವವಿದೆ ಎಂಬ ತೀರ್ಮಾನಕ್ಕೆ ಬಂದಿತು. === ಅಧಿಕೃತ ಭಾಷೆಯ ಸ್ಥಾನಮಾನ === ಕೊಂಕಣಿ ಪ್ರೇಮಿಗಳು ೧೯೮೬ ರಲ್ಲಿ ಕೊಂಕಣಿಗೆ ಅಧಿಕೃತ ಸ್ಥಾನಮಾನದ ಬೇಡಿಕೆಯೊಂದಿಗೆ ಚಳುವಳಿ ಪ್ರಾರಂಭಿಸಿದರು. ವಿವಿಧೆಡೆ ಚಳುವಳಿ ಹಿಂಸೆಗೆ ತಿರುಗಿತು. ಕ್ಯಾಥೋಲಿಕ್ ಸಮುದಾಯದ ಎಲ್ಲಾ ಆರು ಚಳುವಳಿಗಾರರ ಸಾವು ಸಂಭವಿಸುತು.ಅಂತಿಮವಾಗಿ ೪ ಫೆಬ್ರುವರಿ ೧೯೮೭ ರಂದು ಗೋವಾ ಶಾಸಕಾಂಗ ಕೊಂಕಣಿ ಯನ್ನುಗೋವಾದ ಅಧಿಕೃತಭಾಷೆ ಎಂದು ಘೋಷಿಸಿತು.೨೦ ಆಗಸ್ಟ್ ೧೯೯೨ ರಂದು ಭಾರತದ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಕೊಂಕಣಿಯನ್ನು ಸೇರಿಸಿದಾಗ ಅದು ಭಾರತದ ರಾಷ್ಟ್ರೀಯ ಅಧಿಕೃತ ಭಾಷೆಗಳಲ್ಲಿ ಒಂದಾಯಿತು. == ಉಲ್ಲೇಖಗಳು == === ಬಾಹ್ಯ ಕೊಂಡಿಗಳು === ಚಿಲುಮೆ.ಕಾಂ, ಕೊಂಕಣಿ ಸಾಹಿತ್ಯ ಜಾಲ ತಾಣ ಕಿಟಾಳ್ 2014-11-15 ವೇಬ್ಯಾಕ್ ಮೆಷಿನ್ ನಲ್ಲಿ., ಕೊಂಕಣಿ ಸಾಹಿತ್ಯ ಜಾಲ ತಾಣ ವಿಶ್ವ ಕೊಂಕಣಿ ಕೇಂದ್ರ 2021-02-10 ವೇಬ್ಯಾಕ್ ಮೆಷಿನ್ ನಲ್ಲಿ.