ಕ್ಯೂಫಿಯ ಲೈತ್ರೇಸೀ ಕುಟುಂಬದ ಕ್ಯೂಫಿಯ ಮಿನಿಯೇಟ ಎಂಬ ವೈಜ್ಞಾನಿಕ ಹೆಸರಿನ ವಾರ್ಷಿಕ ಸಸ್ಯ. ಇದರ ಹೊಳಪಿನ ಎಲೆಗಳ ಮತ್ತು ನಸುಗೆಂಪು ಹೂವಿನ ಅಲಂಕಾರಕ್ಕಾಗಿ ಈ ಸಸ್ಯ ತೋಟಗಾರಿಕೆಯಲ್ಲಿ ಪ್ರಾಮುಖ್ಯ ಪಡೆದಿದೆ. 12"-15" ಎತ್ತರಕ್ಕೆ ಬೆಳೆಯುವ ಈ ಸಸ್ಯವನ್ನು ಕುಂಡದಲ್ಲಿ ಅಥವಾ ಮಡಿಗಳಲ್ಲಿ ಬೆಳೆಸಬಹುದು. == ಲಕ್ಷಣಗಳು == ಅಭಿಮುಖ ಜೋಡಣೆಯನ್ನು ತೋರುವ ಅಂಡಾಕಾರದ ಇಲ್ಲವೆ ಭರ್ಜಿಯಾಕಾರದ ಸರಳ ಎಲೆಗಳು, ರೆಸೀಮ್ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿರುವ ದ್ವಿಲಿಂಗಿ ಹೂಗಳು ಕ್ಯೂಫಿಯದ ಮುಖ್ಯ ಲಕ್ಷಣಗಳಲ್ಲಿ ಕೆಲವು. ದಳಗಳ ಸಂಖ್ಯೆಯಲ್ಲಿ ಗಮನಾರ್ಹವಾದ ವ್ಯತ್ಯಾಸಗಳನ್ನು ನೋಡಬಹುದು. == ಪ್ರಬೇಧಗಳು == ಕ್ಯೂ.ಇಗ್ನಿಯ ಎಂಬ ಪ್ರಭೇದದಲ್ಲಿ ದಳಗಳೇ ಇಲ್ಲ. ಬದಲಿಗೆ ಕಣ್ಣುಕೋರೈಸುವಂಥ ಬಣ್ಣವುಳ್ಳ ಪುಷ್ಪಗಳಿವೆ. ಕ್ಯೂ. ಹಿಸೋಪಿಫೋಲಿಯ ಎಂಬುದರಲ್ಲಿ ಸಮಗಾತ್ರದ 6 ದಳಗಳಿವೆ. ಇವೆರಡು ಬಗೆಗಳ ನಡುವೆ 2 ದೊಡ್ಡ ಹಾಗೂ 4 ಚಿಕ್ಕ ದಳಗಳನ್ನು ಪಡೆದಿರುವ ಪ್ರಭೇದಗಳೂ (ಕ್ಯೂ.ಪ್ರೊಕಂಬೆನ್ಸ್) ಎರಡು ದಳಗಳನ್ನು ಮಾತ್ರ ಹೊಂದಿರುವ ಪ್ರಭೇದಗಳೂ (ಕ್ಯೂ.ಲಾವಿಯ) ಇವೆ. 12 ದಳಗಳಿರುವ ಭೇದಗಳೂ ಇಲ್ಲದಿಲ್ಲ (ಉದಾ: ಕ್ಯೂ.ಮೈಕ್ರೊಪೆಟಾಲ). == ಅಭಿವೃದ್ಧಿ == ಕ್ಯೂಫಿಯವನ್ನು ಬೀಜಗಳ ಮೂಲಕ ವೃದ್ಧಿಸಲಾಗುತ್ತದೆ. ಬೀಜಗಳನ್ನು ಮೊದಲು ಬಿತ್ತನೆ ಮಾಡಿ, 25-26ನೆಯ ದಿನದ ಸಸಿಗಳನ್ನು, 12"ನ ಕುಂಡಗಳಲ್ಲೊ ಇಲ್ಲವೆ ಮಡಿಗಳಲ್ಲಿ 9"-12" ಅಂತರ ಕೊಟ್ಟೊ ನೆಡಬೇಕು. 45, 60 ಮತ್ತು 75ನೆಯ ದಿನ ಒಂದು ಸಾರಿ ತುದಿಯನ್ನು ಜಿಗುಟ ಬೇಕು. 90-105 ದಿನಗಳಲ್ಲಿ ಗಿಡ ಹೂ ಬಿಡಲು ಆರಂಭಿಸುತ್ತದೆ. 140 ದಿನಗಳಲ್ಲಿ ಬೀಜವನ್ನು ಬಿಡಿಸಬಹುದು. == ಉಪಯೋಗಗಳು == ಇದನ್ನು ಅಲಂಕಾರಕ್ಕಾಗಿ ಬೆಳೆಸುತ್ತಾರೆ. == ಉಲ್ಲೇಖಗಳು ==