ಚಿ. ನ. ಮಂಗಳಾಏಪ್ರಿಲ್ ೧೦, ೧೯೩೮ – ಮೇ ೩೦, ೧೯೯೭ ಅವರು ಕನ್ನಡದ ಮೊದಲ ಮಹಿಳಾ ಪತ್ರಕರ್ತೆ, ಸಾಹಿತಿ, ಪ್ರಕಾಶಕಿ, ತಿರುಮಲಾಂಬ ಅವರ ನೆನಪಿಗಾಗಿ ಶಾಶ್ವತಿ ಸಂಸ್ಥೆಯನ್ನು ಸ್ಥಾಪಿಸಿದರು. ಈ ಮೂಲಕ ವಸ್ತು ಸಂಗ್ರಹಾಲಯ, ಮಹಿಳಾ ಅಧ್ಯಯನ ಕೇಂದ್ರಗಳ ಸ್ಥಾಪನೆ ಯೇ ಅಲ್ಲದೆ ಸಾಹಿತ್ಯ, ಸಂಶೋಧನೆ ಮತ್ತು ಸಮಾಜಕಾರ್ಯ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗಳನ್ನು ಮಾಡಿದ ಮಹಿಳೆಯರಿಗೆ ಈ ಸಂಸ್ಥೆಯವತಿಯಿಂದ ಸದೋದಿತ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಶಿಕ್ಷಣ ತಜ್ಞರಾಗಿ, ಸ್ತ್ರೀವಾದಿ ಚಿಂತಕರಾಗಿ, ಬರಹಗಾರರಾಗಿ ಹೆಸರಾಗಿದ್ದಾರೆ. == ಜನನ/ಜೀವನ == ಖ್ಯಾತ ಶಿಕ್ಷಣ ತಜ್ಞೆ, ಸ್ತ್ರೀವಾದಿ ಚಿಂತಕರೂ ಆಗಿದ್ದ ಚಿ.ನ. ಮಂಗಳಾ ಅವರು ಏಪ್ರಿಲ್ ೧೦, ೧೯೩೮ರ ವರ್ಷದಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ಸಿ. ನರಸಿಂಹಮೂರ್ತಿಯವರು ಸರ್ಕಾರಿ ಇಲಾಖೆಯಲ್ಲಿ ಕಾರ್ಯದರ್ಶಿಗಳಾಗಿದ್ದರು. ತಾಯಿ ರಾಜೇಶ್ವರಿಯವರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಪೂರೈಸಿದ ಮಂಗಳಾ ಅವರು ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸವನ್ನು ಮಂಡ್ಯದಲ್ಲಿ ಪೂರೈಸಿದರು. ಮುಂದೆ ಅವರು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಹಾಗೂ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಆನರ್ಸ್‌ (ಇಂಗ್ಲಿಷ್) ಪದವಿ ಮತ್ತು ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಎಂ.ಎ. ಪದವಿ. ಪದವಿಗಳನ್ನು ಗಳಿಸಿದರು. == ಅಧ್ಯಾಪಕಿಯಾಗಿ/ಪ್ರಾಂಶುಪಾಲರಾಗಿ == ಚಿ.ನ. ಮಂಗಳಾ ಅವರು ೧೯೫೯ರ ವರ್ಷದಲ್ಲಿ ಅಧ್ಯಾಪಕಿಯಾಗಿ ಬೆಂಗಳೂರಿನ ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಮುಂದೆ ಅವರು ಎನ್ ಎಮ್ ಕೆ ಆರ್ ವಿ ಕಾಲೇಜು ಎಂದು ಪ್ರಖ್ಯಾತವಾಗಿರುವ ರಾಷ್ಟ್ರೀಯ ಶಿಕ್ಷಣ ಟ್ರಸ್ಟ್ ಪ್ರಾರಂಭಿಸಿದ ನಾಗರತ್ನಮ್ಮ ಮೇಡಾ ಕಸ್ತೂರಿ ರಂಗಶೆಟ್ಟಿ ರಾಷ್ಟ್ರೀಯ ವಿದ್ಯಾಲಯ ಮಹಿಳಾ ಕಾಲೇಜಿನ (....) ಪ್ರಾಂಶುಪಾಲರ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ವಿದ್ಯಾರ್ಥಿಗಳು, ಪೋಷಕರು, ಅಧ್ಯಾಪಕರು, ವಿಶ್ವವಿದ್ಯಾಲಯ ಎಲ್ಲರೊಡನೆ ಉತ್ತಮ ಸಂಬಂಧ ದೊಂದಿಗೆ ಅವರು ಕಾರ್ಯನಿರ್ವಹಿಸಿದ ರೀತಿ ಶ್ಲಾಘನೀಯ. == ವಿಶ್ವ ಶಿಕ್ಷಣ ಕ್ಷೇತ್ರದ ಅಧ್ಯಯನ == ದೆಹಲಿಯ ಅಮೆರಿಕ ಶಿಕ್ಷಣ ಪ್ರತಿಷ್ಠಾನ, ವಾಷಿಂಗ್‌ಟನ್ ವಿದ್ವಾಂಸರ ಅಂತಾರಾಷ್ಟ್ರೀಯ ವಿನಿಮಯ ಪರಿಷತ್ತು, ಬ್ರಿಟಿಷ್ ಕೌನ್ಸಿಲ್‌ಗಳ ಸಹಯೋಗದಿಂದ ವಿದೇಶದಲ್ಲಿನ ವಿದ್ಯಾಭ್ಯಾಸ ಪದ್ಧತಿ ಅಧ್ಯಯನ ಮಾಡಲು ೧೯೮೨ರಲ್ಲಿ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಪ್ರವಾಸ ಕೈಗೊಂಡರು. ೧೯೮೪ರ ವರ್ಷದಲ್ಲಿ ಮತ್ತೆ ಅಮೆರಿಕ, ಇಂಗ್ಲೆಂಡ್ ಪ್ರವಾಸದ ಜೊತೆ ಯುರೋಪಿನ ಆಸ್ಟ್ರಿಯ, ಬೆಲ್ಜಿಯಂ, ಲಕ್ಸನ್‌ಬರ್ಗ, ಫ್ರಾನ್ಸ್, ಇಟಲಿ, ಸ್ವಿಟ್ಸರ್‌ಲೆಂಡ್ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಶಿಕ್ಷಣ ಕ್ಷೇತ್ರದಿಂದ ಅಪಾರವಾದ ಅನುಭವಗಳನ್ನು ಹೊತ್ತು ತಂದರು. == ಶೈಕ್ಷಣಿಕ ಚಿಂತನೆಗಳು == ಚಿ.ನ.ಮಂಗಳಾ ಅವರ ಬರಹಗಳಲ್ಲಿ ಅವರ ಸುದೀರ್ಘ ಅವಧಿಯ ಅಧ್ಯಾಪನ ಮತ್ತು ಪ್ರಾಂಶುಪಾಲ ಜವಾಬ್ಧಾರಿ ನಿರ್ವಹಣೆಯಲ್ಲಿ ದೊರೆತ ಅನುಭವಗಳು ವ್ಯಾಪಕವಾಗಿ ಸಂಚಲನಗೊಂಡಿವೆ. ಹೀಗಾಗಿ ಅವರ ಬರಹಗಳು ಸರ್ಕಾರಿ ಧೋರಣೆ, ವಿಶ್ವವಿದ್ಯಾಲಯದಲ್ಲಿ ಕುಗ್ಗುತ್ತಿರುವ ವಿದ್ಯಾಭ್ಯಾಸದ ಮಟ್ಟ, ವಿದ್ಯಾರ್ಥಿನಿಯರ ಅಪೇಕ್ಷೆ, ಆಶೋತ್ತರಗಳು, ಪೋಷಕರ ಅಸಹಾಯಕತೆ ಇವೆಲ್ಲದರ ವಿಶಿಷ್ಟ ಅವಲೋಕನಗಳನ್ನು ಕಟ್ಟಿಕೊಡುವಂತ ವಿಶಿಷ್ಟ ಕೃತಿಗಳಾಗಿ ಹೊರಹೊಮ್ಮಿವೆ. == ಸ್ತ್ರೀಪರ ಕಾಳಜಿಗಳು ಮತ್ತು ಇತರ ಬರಹಗಳು == ಚಿ.ನ.ಮಂಗಳಾ ಅವರು ‘ಭಾರತೀಯ ಸ್ತ್ರೀ’ ಲೇಖನ ಮಾಲಿಕೆಯಲ್ಲಿ ಅವರು ಹಲವಾರು ವಿದ್ವತ್ಪೂರ್ಣ ಲೇಖನಗಳನ್ನು ಸಹಾ ಪ್ರಸ್ತುತ ಪಡಿಸಿದ್ದಾರೆ. 'ಭಾರತೀಯ ಪರಿಕಲ್ಪನೆಯಲ್ಲಿ ಸರಸ್ವತಿ', ಕರ್ನಾಟಕದ ಮಹಿಳೆಯರು ಮಾಲಿಕೆಯಲ್ಲಿ 'ಆಧುನಿಕ ಕನ್ನಡ ಬರಹಗಾರ್ತಿಯರು' ಮುಂತಾದ ಹಲವಾರು ಪುಸ್ತಕಗಳು, ನ್ಯೂ ವರ್ಲ್ಡ್ ಲಿಟರೇಚರ್ ಸರಣಿಯ ಹಲವಾರು ಪುಸ್ತಕಗಳು, ಆರ್. ಕೆ. ನಾರಾಯಣರ ವೆಟಿಂಗ್ ಫಾರ್ ಮಹಾತ್ಮ ಪುಸ್ತಕದ ಅನುವಾದವಾದ ‘ಮಹಾತ್ಮರ ಬರವಿಗಾಗಿ’, 'ಹೆಲೆನ್ ಕೆಲರ್', 'ಅಭಾಗಿನಿ', 'ಹುಲಿಯ ಬೆನ್ನೇರಿದಾಗ', 'ಕೆನಡಾ ಕವನಗಳು', 'ಎಲ್ಲರೂ ನನ್ನವರು' ಮುಂತಾದವು ಚಿ. ನ. ಮಂಗಳಾ ಅವರ ವೈವಿಧ್ಯಪೂರ್ಣ ಬರಹಗಳಲ್ಲಿ ಸೇರಿವೆ. == ತಿರುಮಲಾಂಬ ನೆನಪಿಗಾಗಿ ಶಾಶ್ವತಿ == ಚಿ.ನ.ಮಂಗಳಾ ಅವರು ಕನ್ನಡದ ಮೊದಲ ಮಹಿಳಾ ಪತ್ರಕರ್ತೆ, ಸಾಹಿತಿ, ಪ್ರಕಾಶಕಿ, ತಿರುಮಲಾಂಬ ಅವರ ನೆನಪಿಗಾಗಿ ಶಾಶ್ವತಿ ಸಂಸ್ಥೆಯನ್ನು ಸ್ಥಾಪಿಸಿದರು. ಈ ಮೂಲಕ ವಸ್ತು ಸಂಗ್ರಹಾಲಯ, ಮಹಿಳಾ ಅಧ್ಯಯನ ಕೇಂದ್ರಗಳ ಸ್ಥಾಪನೆಯೇ ಅಲ್ಲದೆ ಸಾಹಿತ್ಯ, ಸಂಶೋಧನೆ ಮತ್ತು ಸಮಾಜ ಕಾರ್ಯ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗಳನ್ನು ಮಾಡಿದ ಮಹಿಳೆಯರಿಗೆ ಈ ಸಂಸ್ಥೆಯವತಿಯಿಂದ ಸದೋದಿತ ಪ್ರಶಸ್ತಿಯನ್ನು ನೀಡಲಾಗುತ್ತಿದೆ. == ಪ್ರಶಸ್ತಿ ಗೌರವಗಳು == ಚಿ.ನ.ಮಂಗಳಾ ಅವರಿಗೆ ಅನೇಕ ಪ್ರಶಸ್ತಿ ಗೌರವಗಳು ಸಂದವು. ಮಾತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜ್ಯ ಸರಕಾರದ ಬಹುಮಾನ, ಕರ್ನಾಟಕ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ , ಕರ್ನಾಟಕ ನಾಟಕ ಅಕಾಡೆಮಿ ಫೆಲೋಷಿಪ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದವು ಇವುಗಳಲ್ಲಿ ಸೇರಿವೆ. == ಕೃತಿಗಳು == == ವಿದಾಯ == ಈ ಮಹಾನ್ ಸಾಧಕಿ ಮೇ ೩೦, ೧೯೯೭ರ ವರ್ಷದಲ್ಲಿ ಈ ಲೋಕವನ್ನಗಲಿದರು. == ಉಲ್ಲೇಖಗಳು == == ಮಾಹಿತಿ ಕೃಪೆ == ಕಣಜ 2016-05-20 ವೇಬ್ಯಾಕ್ ಮೆಷಿನ್ ನಲ್ಲಿ.