ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ (ಫೆಬ್ರುವರಿ ೭,೧೯೨೬ - ಡಿಸೆಂಬರ್ ೨೩, ೨೦೧೩), ಜಿ. ಎಸ್. ಶಿವರುದ್ರಪ್ಪ ಅಥವಾ ಜಿ.ಎಸ್.ಎಸ್ ಎಂದೇ ಪರಿಚಿತರಾದ ಕನ್ನಡದ ಕವಿ, ವಿಮರ್ಶಕ, ಸಂಶೋಧಕ, ನಾಟಕಕಾರ ಮತ್ತು ಪ್ರಾಧ್ಯಾಪಕ. ಗೋವಿಂದ ಪೈ, ಕುವೆಂಪು ನಂತರ 'ರಾಷ್ಟ್ರಕವಿ' ಗೌರವಕ್ಕೆ ಪಾತ್ರರಾದವರು. ನವೆಂಬರ್ ೧, ೨೦೦೬ ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು. ಅವರನ್ನು ಸಮನ್ವಯ ಕವಿ ಎಂದೇ ಗುರುತಿಸಲಾಗುತ್ತದೆ. == ಓದು/ವಿದ್ಯಾಭ್ಯಾಸ == ಡಾ.ಜಿ.ಎಸ್.ಶಿವರುದ್ರಪ್ಪ ಶಿವಮೊಗ್ಗಜಿಲ್ಲೆಯ ಶಿಕಾರಿಪುರದ ತಾಲೂಕಿನ ಈಸೂರುಗ್ರಾಮದಲ್ಲಿ ಫೆಬ್ರವರಿ ೭, ೧೯೨೬ ರಂದು ಜನಿಸಿದರು. ತಂದೆ ಶಾಂತವೀರಪ್ಪ ಅಲ್ಲಿನ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ತಾಯಿ ವೀರಮ್ಮ. ತಂದೆಯಿಂದ ಸಾಹಿತ್ಯದ ಗೀಳು ಹತ್ತಿಸಿಕೊಂಡ ಶಿವರುದ್ರಪ್ಪನವರು ಹೊನ್ನಾಳಿ, ಕೋಟೆಹಾಳಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು, ರಾಮಗಿರಿ, ಬೆಲಗೂರಲ್ಲಿ ಮಾಧ್ಯಮಿಕ ಶಿಕ್ಷಣವನ್ನು, ದಾವಣಗೆರೆ, ತುಮಕೂರುಗಳಲ್ಲಿ ಪ್ರೌಢಶಾಲಾ, ಇಂಟರ್ ಮೀಡಿಯಟ್ ಶಿಕ್ಷಣವನ್ನೂ ಮುಗಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ (೧೯೪೯) ಪದವಿ ಪಡೆದರು. ಕೆಲಕಾಲ ದಾವಣಗೆರೆಯ ಡಿ.ಆರ್.ಎಮ್. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದು ನಂತರ ಎಂ.ಎ. (೧೯೫೩) ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಮೂರು ಸುವರ್ಣ ಪದಕಗಳನ್ನು ಪಡೆದರು. ೧೯೫೫ರಲ್ಲಿ ಭಾರತ ಸರಕಾರದ ಸಂಶೋಧನಾ ಶಿಷ್ಯ ವೇತನದ ಸಹಾಯದಿಂದ ಕುವೆಂಪುರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದರು. ಮೈಸೂರು ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ದೊರಕಿಸಿ ಕೊಟ್ಟ ಇವರ ಪ್ರೌಢ ಪ್ರಬಂಧ -ಸೌಂದರ್ಯ ಸಮೀಕ್ಷೆ. ಕುವೆಂಪುರವರ ಮೆಚ್ಚಿನ ಶಿಷ್ಯರಾಗಿ ಅವರ ಬರವಣಿಗೆ ಮತ್ತು ಜೀವನದಿಂದ ಪ್ರಭಾವಿತರಾಗಿದ್ದರು. ಕುವೆಂಪು ಅವರ ಮಾರ್ಗದರ್ಶನದಲ್ಲಿ ಸೌಂದರ್ಯ ಸಮೀಕ್ಷೆ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದರು. == ವೃತ್ತಿ ಜೀವನ/ನಿರ್ವಹಿಸಿರುವ ಜವಾಬ್ದಾರಿಗಳು == ೧೯೫೫ ರಲ್ಲಿ ಭಾರತ ಸರಕಾರದ ಸಂಶೋಧನಾ ಶಿಷ್ಯ ವೇತನದ ಸಹಾಯದಿಂದ ಕುವೆಂಪುರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ದೊರಕಿಸಿ ಕೊಟ್ಟ ಇವರ ಪ್ರೌಢ ಪ್ರಬಂಧ -ಸೌಂದರ್ಯ ಸಮೀಕ್ಷೆ. ಡಾ.ಜಿ.ಎಸ್.ಶಿವರುದ್ರಪ್ಪ ನವರು ಮೈಸೂರು ವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ೧೯೬೩ರ ನವೆಂಬರ್‌ನಿಂದ ೨ ವರ್ಷಗಳ ಕಾಲ ಹೈದರಾಬಾದಿನ ಉಸ್ಮಾನಿಯಾ ವಿಶ್ವ ವಿದ್ಯಾಲಯದಲ್ಲಿ ಕನ್ನಡ ವಿಭಾಗದ ಉಪ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ೧೯೭೧ರ ನವೆಂಬರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾದ ಅವರು, ಮುಂದೆ ಅದು "ಕನ್ನಡ ಅಧ್ಯಯನ ಕೇಂದ್ರ" ವಾಗಿ ಪರಿವರ್ತಿತವಾದಾಗ, ಅದರ ನಿರ್ದೇಶಕರೂ ಆದರು. ಹಸ್ತಪ್ರತಿಗಳ ಸಂಗ್ರಹಣೆ, ಅವುಗಳ ರಕ್ಷಣೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಶಿವರುದ್ರಪ್ಪನವರು ೧೯೭೧ರಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ 'ಹಸ್ತಪ್ರತಿ ವಿಭಾಗ' ವನ್ನು ಪ್ರಾರಂಭಿಸಿದರು. ಕೇವಲ ೪ ವರ್ಷಗಳಲ್ಲಿ ೩೦೦೦ಕ್ಕೂ ಹೆಚ್ಚು ಓಲೆಗರಿಯ ಹಾಗೂ ೧೦೦೦ಕ್ಕೂ ಹೆಚ್ಚು ಕಾಗದದ ಹಸ್ತ ಪ್ರತಿಗಳ ಸಂಗ್ರಹಣೆಯಾಯಿತು. ತಾವು ಓದಿದ ಮೈಸೂರು ವಿಶ್ವವಿದ್ಯಾನಿಲಯದಲ್ಲೇ ೧೯೪೯ರಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದರು. ೧೯೬೩ರಲ್ಲಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ರೀಡರ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿ ೧೯೬೬ರ ವರೆವಿಗೂ ಅಲ್ಲಿ ಸೇವೆ ಸಲ್ಲಿಸಿದರು. ೧೯೬೬ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿ ಆಯ್ಕೆಯಾಗಿ ೧೯೮೭ ರವರೆವಿಗೂ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು. ಅವರ ಕಾಲದಲ್ಲೇ ಕನ್ನಡ ವಿಭಾಗವು ಕನ್ನಡ ಅಧ್ಯಯನ ಕೇಂದ್ರವಾಯಿತು. ನಿವೃತ್ತಿಯ ನಂತರವೂ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಕುವೆಂಪು ಪೀಠ ದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಗಣನೀಯ ಸೇವೆ ಸಲ್ಲಿಸಿರುತ್ತಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ದೆಹಲಿಯ ರಾಷ್ಟ್ರೀಯ ಕವಿ ಸಮ್ಮೇಳನ, ತುಮಕೂರಿನ ಸಾಹಿತ್ಯ ಸಮ್ಮೇಳನ ದ ಕವಿಗೋಷ್ಠಿಯ ಅಧ್ಯಕ್ಷರಾಗಿ, ಮದರಾಸಿನ ಕನ್ನಡ ಸಮ್ಮೇಳನ ದ ಅಧ್ಯಕ್ಷರಾಗಿ, ೧೯೯೨ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಗೌರವಿಸಲ್ಪಟ್ಟಿದ್ದಾರೆ. == ಕೃತಿಗಳು == == ಪ್ರಶಸ್ತಿ/ಪುರಸ್ಕಾರಗಳು ಮತ್ತು ಪಡೆದ ಇಸವಿ == ಜಿ.ಎಸ್.ಶಿವರುದ್ರಪ್ಪನವರಿಗೆ ವಿಮರ್ಶೆಗಾಗಿ ೧೯೮೪ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತು. ಇದಲ್ಲದೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೨), ರಾಜ್ಯೋತ್ಸವ ಪ್ರಶಸ್ತಿ, ಸೋವಿಯತ್ ಲ್ಯಾಂಡ ನೆಹರೂ ಪ್ರಶಸ್ತಿ (೧೯೭೩)ಸಹ ಶಿವರುದ್ರಪ್ಪನವರಿಗೆ ದೊರೆತಿವೆ. ೨೦೦೬ನೆಯ ಸಾಲಿನಲ್ಲಿ ಜರಗುತ್ತಿರುವ ಸುವರ್ಣ ಕರ್ನಾಟಕ ಉತ್ಸವದ ಸಂದರ್ಭದಲ್ಲಿ ಜಿ.ಎಸ್.ಶಿವರುದ್ರಪ್ಪನವರಿಗೆ ಕರ್ನಾಟಕ ಸರಕಾರವು ರಾಷ್ಟ್ರಕವಿ (೨೦೦೬) ಎನ್ನುವ ಗೌರವವನ್ನು ಪ್ರಧಾನಿಸಿದೆ. == ಇತರೆ ಪ್ರಶಸ್ತಿಗಳು == ಪಂಪ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಜಿ.ಎಸ್.ಶಿವರುದ್ರಪ್ಪನವರು ೧೯೯೨ ರಲ್ಲಿ ದಾವಣಗೆರೆಯಲ್ಲಿ ಜರುಗಿದ ೬೧ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.ಸ್ನೇಹ ಕಾರ್ತೀಕ,ಗೌರವ,ಹಣತೆ, ಇವು ಜಿ.ಎಸ್.ಎಸ್ ಅವರಿಗೆ ಅಭಿಮಾನಿಗಳು ಸಲ್ಲಿಸಿದ ಅಭಿನಂದನಾ ಗ್ರಂಥಗಳು. == ನಿಧನ == ಅನಾರೋಗ್ಯದಿಂದ ಬಳಲುತ್ತಿದ್ದ ಜಿ.ಎಸ್.ಶಿವರುದ್ರಪ್ಪನವರು 23 ಡಿಸೆಂಬರ್ 2013ರಂದು ತಮ್ಮ ಬನಶಂಕರಿಯ ನಿವಾಸದಲ್ಲಿ ಸ್ವರ್ಗಸ್ಥರಾದರು. ಜಿ.ಎಸ್. ಶಿವರುದ್ರಪ್ಪನವರ ಆಣತಿಯಂತೆಯೆ ಅವರ ಅಂತ್ಯ ಸಂಸ್ಕಾರದ ವಿಧಿ ವಿಧಾನವನ್ನು ಬೆಂಗಳೂರು ವಿ.ವಿ. ಸಮೀಪವಿರುವ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಾದರಗಳೊಂದಿಗೆ 24 ಡಿಸೆಂಬರ್ 2013ರಂದು ನೇರವೇರಿಸಲಾಯಿತು. == ಓದು ಬರಹ == ಬಿ. ಪಿ. ಆಶಾಕುಮಾರಿ ಅವರ ‛ಸುವರ್ಣ ಚೇತನ: ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ’ == ಉಲ್ಲೇಖಗಳು == ಪ್ರಕೃತಿ ಸೊಬಗಿಗೆ ಮಾರುಹೋಗಿದ್ದ ಜಿಎಸ್ಎಸ್‌ 2016-08-30 ವೇಬ್ಯಾಕ್ ಮೆಷಿನ್ ನಲ್ಲಿ. ಜಿಎಸ್ಎಸ್ ನಿಧನಕ್ಕೆ ಕಂಬನಿ ಮಿಡಿದ ದಾವಣಗೆರೆ 2022-09-07 ವೇಬ್ಯಾಕ್ ಮೆಷಿನ್ ನಲ್ಲಿ. ಕಲಾಗ್ರಾಮದಲ್ಲಿ ಜಿಎಸ್ಎಸ್‌ ಅಂತ್ಯಸಂಸ್ಕಾರ 2022-09-08 ವೇಬ್ಯಾಕ್ ಮೆಷಿನ್ ನಲ್ಲಿ. ಕಾವ್ಯ ಮೀಮಾಂಸೆಗೆ ಜಿಎಸ್‌ಎಸ್ ಕೊಡುಗೆ ಅಪಾರ 2022-09-07 ವೇಬ್ಯಾಕ್ ಮೆಷಿನ್ ನಲ್ಲಿ. ಚಿಂತನಶೀಲ, ಚಲನಶೀಲ ಗುರು... ಬರಗೂರು ರಾಮಚಂದ್ರಪ್ಪ 2022-09-07 ವೇಬ್ಯಾಕ್ ಮೆಷಿನ್ ನಲ್ಲಿ. ‘ಚೈತ್ರ’ದಲ್ಲಿ ನೋವು–ನಲಿವು ಭಾವ ಸಮ್ಮಿ ಲನ 2022-09-07 ವೇಬ್ಯಾಕ್ ಮೆಷಿನ್ ನಲ್ಲಿ. ರಾಷ್ಟ್ರಕವಿ ಜಿ. ಎಸ್ ಶಿವರುದ್ರಪ್ಪ ಇನ್ನಿಲ್ಲ 2022-09-07 ವೇಬ್ಯಾಕ್ ಮೆಷಿನ್ ನಲ್ಲಿ. ಕೋಟೆ ನಾಡಿನಲ್ಲಿ ರಾಷ್ಟ್ರಕವಿಯ ಹೆಜ್ಜೆಗಳು... 2022-09-07 ವೇಬ್ಯಾಕ್ ಮೆಷಿನ್ ನಲ್ಲಿ. ಜಿಎಸ್‌ಎಸ್‌ಗೆ ಜಯದೇವಶ್ರೀ ಪ್ರಶಸ್ತಿ ಪ್ರದಾನ 2022-09-07 ವೇಬ್ಯಾಕ್ ಮೆಷಿನ್ ನಲ್ಲಿ. , ಪ್ರಜಾವಾಣಿ ವಾರ್ತೆ , 02/25/2013 - 01:38 ನಮ್ಮ ಕಾಲದ ಸಾಂಸ್ಕೃತಿಕ ನಾಯಕ , ನರಹಳ್ಳಿ ಬಾಲಸುಬ್ರಹ್ಮಣ್ಯ 2022-09-08 ವೇಬ್ಯಾಕ್ ಮೆಷಿನ್ ನಲ್ಲಿ. ರಾಷ್ಟ್ರಕವಿಗೆ ಸಾಹಿತ್ಯಾಭಿಮಾನಿಗಳ ಸಂತಾಪ 2022-09-08 ವೇಬ್ಯಾಕ್ ಮೆಷಿನ್ ನಲ್ಲಿ. 60 ವರ್ಷದ ಒಡನಾಡಿ ಜಿಎಸ್‌ಎಸ್‌ ನಿಧನಕ್ಕೆ ಕಂಬನಿ, ಒಡಲೆರಡು, ಜೀವವೂಂದೇ: ಕಣವಿ; ಶ್ರೇಷ್ಠ ಸಂಘಟಕ : ಕಲಬುರ್ಗಿ 2022-09-07 ವೇಬ್ಯಾಕ್ ಮೆಷಿನ್ ನಲ್ಲಿ. == ಹೊರಗಿನ ಸಂಪರ್ಕಗಳು == ತ ಸು ಶಾಮರಾಯರ ಬಗ್ಗೆ ಜಿ ಎಸ್ ಎಸ್ ಬರೆದ ಲೇಖನ ಓ ಎಲ್ ಎನ್ ಸ್ವಾಮಿಯವರು ನಡೆಸಿಕೊಟ್ಟ ಜಿ ಎಸ್ ಶಿವರುದ್ರಪ್ಪನವರ ಶ್ರಾವ್ಯ ಸಂದರ್ಶನ - ಸಂಪದದಲ್ಲಿ 2007-02-27 ವೇಬ್ಯಾಕ್ ಮೆಷಿನ್ ನಲ್ಲಿ.