ಝಾಬುವಾ- ಮಧ್ಯಪ್ರದೇಶದ ಇಂದೌರ್ ವಿಭಾಗದ ಒಂದು ಜಿಲ್ಲೆ ಹಾಗೂ ಅದರ ಆಡಳಿತ ಕೇಂದ್ರ, ಜಿಲ್ಲಾ ಪ್ರದೇಶ ಹಿಂದೆ ಮಧ್ಯಭಾರತದ ಒಂದು ಸಂಸ್ಥಾನವಾಗಿದ್ದು, ಜೋಧಪುರದ ರಾಠೌರ್ ವಂಶದವರ ಆಳ್ವಿಕೆಗೆ ಒಳಪಟ್ಟಿತ್ತು. == ನಗರ == ರತ್ಲಂ ರೈಲು ನಿಲ್ದಾಣಕ್ಕೆ 40 ಮೈ. ದೂರದಲ್ಲಿರುವ ಝಾಬುವ ನಗರ ಸಮುದ್ರಮಟ್ಟದಿಂದ 1.171' ಎತ್ರರದಲ್ಲಿದೆ, ಬಹಾದುರ್ ಸಾಗರವೆಂಬ ಸರೋವರದ ದಡದಲ್ಲಿ ಈ ನಗರ ಹರಡಿಕೊಂಡಿದೆ. ಕಿರಿದಾದ, ಕಡಿದಾದ ಹಾಗೂ ಸುತ್ತುಬಳಸಿದ ದಾರಿಗಳು ಈ ನಗರದ ವಿಶೇಷ. ಬಹಾದುರ್ ಸಾಗರದ ಉತ್ತರ ದಡದಲ್ಲಿ ನೆಲೆಗೊಂಡಿರುವ ಅರಮನೆ ಮಣ್ಣಿನ ಗೋಡೆಯಿಂದ ಆವೃತವಾಗಿದೆ. ಬತ್ತ, ಹತ್ತಿ ಇಲ್ಲಿಯ ಮುಖ್ಯ ಬೆಳೆಗಳು, ಇಲ್ಲಿ ಅನೇಕ ಅಕ್ಕಿ ಗಿರಣಿಗಳೂ, ನೂಲು ತೆಗೆಯುವ ಕೇಂದ್ರಗಳು ಇವೆ. ಇಲ್ಲೊಂದು ಕಾಲೇಜೂ ಇದೆ. ಪಟ್ಟಣದ ಜನಸಂಖ್ಯೆ 10,487(1971). == ಜಿಲ್ಲೆ == ಝಾಬುವಾ ಜಿಲ್ಲೆಯ ವಿಸ್ತೀರ್ಣ 6,781 ಚ. ಕಿಮೀ. ಜನಸಂಖ್ಯೆ 6,67,811 (1971). ಮಾಳವದ ಬೆಟ್ಟಗಾಡಿನ ಭಾಗವಾಗಿರುವ ಈ ಜಿಲ್ಲೆ ಮಧ್ಯ ಪ್ರದೇಶ ರಾಜ್ಯದ ಪಶ್ಚಿಮದ ತುತ್ತತುದಿಯಲ್ಲಿದೆ. ಮಾಹೀ ಮತ್ತು ಅದರ ಉಪನದಿಯಾದ ಆನಸ್ ಇಲ್ಲಿಯ ಮುಖ್ಯ ನದಿಗಳು. ಈ ನದಿಗಳ ಪ್ರದೇಶದಲ್ಲಿ ಬೇಸಾಯ ಆಗುತ್ತದೆ. ಜಿಲ್ಲೆಯ ಉಳಿದ ಬಹುಭಾಗ ಪರ್ವತಮಯ ಅರಣ್ಯ. ಬೇಸಾಯಕ್ಕೆ ಯೋಗ್ಯವಲ್ಲ. ಬತ್ತ, ಕಡಲೆ, ಗೋದಿ, ಜೋಳ ಮತ್ತು ಹತ್ತಿ ಇಲ್ಲಿಯ ಮುಖ್ಯ ಬೆಳೆಗಳು. ಈ ಜಿಲ್ಲೆಯ ಪಶ್ಚಿಮಕ್ಕಿರುವ ರಂಭಾಪುರ ವಲಯದಲ್ಲಿ ಮ್ಯಾಂಗನೀಸ್ ಅದುರಿನ ನಿಕ್ಷೇಪಗಳು ದೊರೆತಿವೆ. ಜಿಲ್ಲೆಯ ಬಹುಪಾಲು ಜನ ಆದಿವಾಸಿಗಳು. ಭಿಲ್ಲರು, ಭಿಲಬ್ಬರು ಹಾಗೂ ಪಾಟ್ಲಿಯಾಗಳು ಇವರಲ್ಲಿ ಮುಖ್ಯರು. ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಈ ಜಿಲ್ಲೆ ಹೆಚ್ಚಿನ ಪ್ರಗತಿ ಸಾಧಿಸಿಲ್ಲ.