ತುಂಗನಾಥ ಭಾರತದ ಉತ್ತರಾಖಂಡ ರಾಜ್ಯದಲ್ಲಿನ ಒಂದು ಪವಿತ್ರ ಕ್ಷೇತ್ರ. ತುಂಗನಾಥ ಪಂಚ ಕೇದಾರಗಳ ಪೈಕಿ ಒಂದು. ಸಮುದ್ರಮಟ್ಟದಿಂದ ೩೬೮೦ ಮೀಟರ್‌ ಎತ್ತರದಲ್ಲಿರುವ ತುಂಗನಾಥ ದೇವಾಲಯವು ಹಿಮಾಲಯದ ಅದ್ಭುತ ಪ್ರಕೃತಿಯ ಮಧ್ಯೆ ಇರುವ ಶಿವಾಲಯವಾಗಿದೆ. ಅಲ್ಲದೆ ಇದು ಹಿಮಾಲಯದಲ್ಲಿ ಅತಿ ಎತ್ತರದಲ್ಲಿರುವ ದೇವಾಲಯವು ಸಹ ಆಗಿದೆ. ತುಂಗನಾಥ ಶಿಖರದಿಂದ ಉಗಮಿಸುವ ಮೂರು ಝರಿಗಳು ಒಗ್ಗೂಡಿ ಮುಂದೆ ಆಕಾಶಕಾಮಿನಿ ನದಿಯಾಗುವುದು. ಚೋಪ್ಟಾ ಪಟ್ಟಣದಿಂದ ೩ ಕಿ.ಮೀ. ಗಳಷ್ಟು ಪರ್ವತದ ಏರುದಾರಿಯನ್ನು ಕಾಲುನಡೆಯಲ್ಲಿ ಕ್ರಮಿಸಿ ತುಂಗನಾಥವನ್ನು ತಲುಪಬಹುದು. ಚಂದ್ರಶಿಲಾ ಶಿಖರದ ಕೊಂಚ ಕೆಳಭಾಗದಲ್ಲಿರುವ ತುಂಗನಾಥ ದೇವಾಲಯವು ಕರಿಕಲ್ಲಿನಿಂದ ನಿರ್ಮಾಣಗೊಂಡಿದ್ದು ಪ್ರಾಚೀನ ವಾಸ್ತುಶೈಲಿಯ ಉತ್ತಮ ಪ್ರತೀಕವೆನಿಸಿದೆ. ಈ ಪ್ರದೇಶದಿಂದ ಹಿಮಾಲಯದ ಶಿಖರಮಾಲೆಗಳ ಸುಂದರ ನೋಟ ಲಭ್ಯ. ತುಂಗನಾಥಕ್ಕೆ ೨೩೨ ಕಿ.ಮೀ. ದೂರದಲ್ಲಿರುವ ಡೆಹ್ರಾಡೂನ್ ಅತಿ ಸಮೀಪದ ವಿಮಾನನಿಲ್ದಾಣವಾಗಿದ್ದರೆ ೨೧೫ ಕಿ.ಮೀ. ದೂರದ ರಿಷಿಕೇಶ ಅತ್ಯಂತ ನಿಕಟವಾದ ರೈಲು ನಿಲ್ದಾಣ. == ಉಲ್ಲೇಖಗಳು ==