ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ಧರಾದವರು ಶ್ರೀಮತಿ ಅನಸೂಯ ಶಂಕರ್. ಇವರು ಕನ್ನಡದ ಪ್ರಮುಖ ಕಾದಂಬರಿಕಾರರಲ್ಲೊಬ್ಬರು. ಹಲವಾರು ಜನಪ್ರಿಯ ಕಾದಂಬರಿಗಳ ಮೂಲಕ ಪ್ರಸಿದ್ಧಿಯಾಗಿದ್ದಾರೆ. ಕನ್ನಡ ಸಾಹಿತ್ಯದ ಪ್ರಮುಖ ಬರಹಗಾರ್ತಿಯಾಗಿ ಗುರುತಿಸಲ್ಪಟ್ಟಿದ್ದಾರೆ. == ಪರಿಚಯ == ತ್ರಿವೇಣಿಯವರು ಸೆಪ್ಟಂಬರ್ ೧, ೧೯೨೮ರಂದು ಮಂಡ್ಯದಲ್ಲಿ ಜನಿಸಿದರು. ತಂದೆ ಬಿ.ಎಮ್.ಕೃಷ್ಣಸ್ವಾಮಿ ಪ್ರಸಿದ್ಧ ವಕೀಲರು, ತಾಯಿ ತಂಗಮ್ಮ. ಇವರ ಹೈಸ್ಕೂಲ್‍ವರೆಗಿನ ಶಿಕ್ಷಣ ಮಂಡ್ಯದಲ್ಲಿ ಆಯಿತು. ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಆಯಿತು. ೧೯೪೭ರಲ್ಲಿ ಮಹಾರಾಣಿ ಕಾಲೇಜಿನಿಂದ ಮನಃಶಾಸ್ತ್ರದಲ್ಲಿ ಸಿದ್ದೇಗೌಡ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪಡೆದರು. ನಂತರ ಮೈಸೂರಿನಿಂದ ಮಂಡ್ಯಕ್ಕೆ ಬಂದು ಅಲ್ಲಿ ಪ್ರೌಢಶಾಲೆಯಲ್ಲಿ ಅಧ್ಯಾಪಕಿಯಾಗಿ ಸೇವೆ ಆರಂಭಿಸಿದರು. ಕನ್ನಡದ ಕಣ್ವ ಬಿ.ಎಂ.ಶ್ರೀಯವರು ಇವರ ದೊಡ್ಡಪ್ಪ. ಹೆಸರಾಂತ ಕಾದಂಬರಿಗಾರ್ತಿ ಆರ್ಯಾಂಬಾ ಪಟ್ಟಾಭಿ ಇವರ ತಂಗಿ. ಮತ್ತೊಬ್ಬ ಪ್ರಸಿದ್ಧ ಕಾದಂಬರಿಗಾರ್ತಿ 'ವಾಣಿ' (ಬಿ.ಎಸ್.ಸುಬ್ಬಮ್ಮ) ಇವರ ಚಿಕ್ಕಮ್ಮ. ಉತ್ತಮ ಕತೆಗಾರ 'ಅಶ್ವತ್ಥ' ರವರು ತ್ರಿವೇಣಿಯವರ ಪತಿಯ ಭಾವ. ಹೀಗೆ ಹತ್ತಿರದ ಬಂಧುಗಳು ಕನ್ನಡ ಸಾಹಿತ್ಯದಲ್ಲಿ ಹೆಸರು ಮಾಡಿದವರು. ತ್ರಿವೇಣಿಯವರ ಜನ್ಮನಾಮ ಭಾಗೀರಥಿ. ಶಾಲೆಯಲ್ಲಿ ದಾಖಲಾದ ಹೆಸರು 'ಅನಸೂಯ'. ಅವರನ್ನು ಹತ್ತಿರದವರು 'ಅಂಚು' ಎಂದು ಕರೆಯುತ್ತಿದ್ದರು. 'ತ್ರಿವೇಣಿ' ಹೆಸರಿನಲ್ಲಿ ತಮ್ಮ ಮೊದಲ ಕಥೆಯನ್ನು ಪತ್ರಿಕೆಗೆ ಕಳಿಸಿದರು. ನಂತರ ಸಂಪಾದಕರಿಗೆ ಇವರ ನಿಜ ಹೆಸರು ತಿಳಿದರೂ 'ತ್ರಿವೇಣಿ' ಹೆಸರೇ ಚೆನ್ನಾಗಿದೆ ಅದನ್ನೇ ಮುಂದುವರಿಸಿ ಎಂದು ಹೇಳಿದರು. ಹಾಗೆ ಅನುಸುಯಾ ಅವರಿಗೆ ಕಾವ್ಯನಾಮ 'ತ್ರಿವೇಣಿ' ಎಂಬ ಹೆಸರೇ ಪ್ರಸಿದ್ಧವಾಯಿತು. ಮೊದಲು ತ್ರಿವೇಣಿಯವರು ಬರೆದ ಕಥೆಗಳನ್ನು ಹಾಗೆಯೇ ಇಡುತ್ತಿದ್ದರು. ಒಮ್ಮೆ ಅವರ ತಾಯಿ ಅದನ್ನು ನೋಡಿ ಓದಿ ಪತ್ರಿಕೆಗಳಿಗೆ ಕಳಿಸಲು ಒತ್ತಾಯಿಸಿದರು. ಹಾಗೆ ಅವರು ಕಳಿಸಿದ ಕಥೆಗಳು ಪ್ರಕಟಗೊಂಡಾಗ ಆನಂದಪಟ್ಟರು. ಸಂಪಾದಕರೂ ಇವರನ್ನು ಪ್ರೋತ್ಸಾಹಿಸಿದರು. ತ್ರಿವೇಣಿಯವರ ವಿವಾಹ ೧೯೫೦ರಲ್ಲಿ ಮೈಸೂರಿನ ಶಾರದಾವಿಲಾಸ ಮಹಾವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕ ಎನ್. ಶಂಕರ್ ಅವರೊಡನೆ ಆಯಿತು. ಅವರು ಇವರ ಬರವಣಿಗೆಗೆ ಪ್ರೋತ್ಸಾಹ ಕೊಟ್ಟರಲ್ಲದೆ, ಇವರು ಅಧ್ಯಾಪಕ ವೃತ್ತಿಗೆ ರಾಜಿನಾಮೆ ಕೊಟ್ಟು ಬರವಣಿಗೆಯನ್ನು ಮುಂದುವರಿಸಿದರು. ಮನಃಶಾಸ್ತ್ರದ ಪದವೀಧರೆಯಾದ ತ್ರಿವೇಣಿಯವರ ಅನೇಕ ಕೃತಿಗಳು ಮನಃಶಾಸ್ತ್ರಕ್ಕೆ ಸಂಬಂಧಪಟ್ಟವು. ಮನಃಶಾಸ್ತ್ರದ ಅಧ್ಯಯನಕ್ಕೆ ಸಂಬಂಧಪಟ್ಟ ಸನ್ನಿವೇಶಗಳು ಹಾಗೂ ಉದಾಹರಣೆಗಳು ಅವರ ಅನೇಕ ಸಣ್ಣ ಕಥೆಗಳು ಹಾಗೂ ಕಾದಂಬರಿಗಳಲ್ಲಿ ಕಂಡುಬರುತ್ತವೆ. ಕನ್ನಡಕ್ಕೆ ಈ ಹೊಸಬಗೆಯ ಕಥಾವಸ್ತು ವಿರುವ ಕಥೆಗಳು ಕಾದಂಬರಿಗಳು ಬಹಳ ಜನಪ್ರಿಯವಾದವು. == ಕೃತಿಗಳು == === ಕಾದಂಬರಿಗಳು === === ಕಥಾಸಂಕಲನಗಳು === ಸಮಸ್ಯೆಯ ಮಗು ಎರಡು ಮನಸ್ಸು ಹೆಂಡತಿಯ ಹೆಸರು == ಅನುವಾದಗೊಂಡ ಕೃತಿಗಳು == "ಅಪಸ್ವರ"ಮತ್ತು "ಅಪಜಯ" ಕಾದಂಬರಿಗಳನ್ನು ಮತ್ತು "ತ್ರಿವೇಣಿ ಸಪ್ತಕ್" ಎಂಬ ಹೆಸರಿನಲ್ಲಿ ಏಳು ಸಣ್ಣ ಕತೆಗಳನ್ನು ಹಿಂದಿಗೆ ಎಸ್.ಎಮ್.ರಾಮಸ್ವಾಮಿ ಅವರು ಅನುವಾದ ಮಾಡಿದ್ದಾರೆ. ಮೀರಾ ನರ್ವೆಕರ್ ಎನ್ನುವವರು "ಶರಪಂಜರ"ವನ್ನು " " ಎಂಬ ಹೆಸರಿನಲ್ಲಿ ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. "ಬೆಕ್ಕಿನ ಕಣ್ಣು " ಕಾದಂಬರಿಯನ್ನು ಶರ್ವಾಣಿಯವರು ತೆಲುಗಿಗೆ ಅನುವಾದಿಸಿದ್ದಾರೆ. === ಚಲನಚಿತ್ರಗಳಾದ ಕೃತಿಗಳು === ತ್ರಿವೇಣಿಯವರ 6 ಕಾದಂಬರಿಗಳು ಚಲನಚಿತ್ರಗಳಾಗಿವೆ. ಹಣ್ಣೆಲೆ ಚಿಗುರಿದಾಗ (೧೯೬೮) ಬೆಳ್ಳಿಮೋಡ (೧೯೭೦) ಶರಪಂಜರ (೧೯೭೧) ಮುಕ್ತಿ ಹೂವು ಹಣ್ಣು (೧೯೯೩) ಕಂಕಣ (೧೯೭೫) ಬೆಕ್ಕಿನ ಕಣ್ಣು ಕಾದಂಬರಿಯನ್ನು ಚಲಚ್ಚಿತ್ರವನ್ನಾಗಿ ನಿರ್ದೇಶಿಸಲು ಶ್ರೀ ಪುಟ್ಟಣ್ಣ ಕಣಗಾಲ್'ರು ಬಯಸಿದ್ದರು. ಆದರೆ ಕಾರಣಾಂತರದಿಂದ ಅದನ್ನು ಕನ್ನಡದಲ್ಲಿ ಮಾಡದೆ ಮಲಯಾಳಂನಲ್ಲಿ "ಪೂಚಕಣ್ಣಿ" ಎಂಬ ಹೆಸರಿನಲ್ಲಿ ನಿರ್ದೇಶಿಸಿದರು. ಪ್ರೇಮ್ ನಜೀರ್, ಅಡೂರ್ ಭಾಸಿ, ತಿಕ್ಕುರಿಸಿ ಸುಕುಮಾರನ್ ನಾಯರ್ ಮೊದಲಾದವರು ಅಭಿನಯಿಸಿದ ಈ ಚಿತ್ರ ೧೯೬೬ರಲ್ಲಿ ಬಿಡುಗಡೆಯಾಗಿ ಬಹಳ ಜನಪ್ರಿಯತೆಯನ್ನು ಗಳಿಸಿತ್ತು. == ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ ಲಭ್ಯವಿರುವ ಕೃತಿಗಳು == ಮೊದಲ ಹೆಜ್ಜೆ ಬಾನು ಬೆಳಗಿತು ಸೋತು ಗೆದ್ದವಳು == ಕಿರುತೆರೆ ಧಾರವಾಹಿಗಳಾಗಿ ತ್ರಿವೇಣಿ ಕಾದಂಬರಿಗಳು == ತ್ರಿವೇಣಿ ಅವರ ಕಾದಂಬರಿ ಮತ್ತು ಕತೆಗಳನ್ನು ಆಧರಿಸಿ ನಟ ಶ್ರೀನಿವಾಸ ಮೂರ್ತಿ ಅವರು ಈ ಟೀವಿಗಾಗಿ ಧಾರಾವಾಹಿ ಸರಣಿ ಮಾಡಿದ್ದಾರೆ. ತ್ರಿವೇಣಿ ಅವರ 'ಅವಳ ಮನೆ', 'ಅಪಸ್ವರ', 'ಅಪಜಯ' ಮುಂತಾದ ಕಾದಂಬರಿಗಳನ್ನು ದೂರದರ್ಶನ ಮಾಧ್ಯಮಕ್ಕೆ ಅಳವಡಿಸಿದ್ದಾರೆ. ಈ ಧಾರಾವಾಹಿ ಜನವರಿ ೨೯ ೨೦೦೭ ರಿಂದ ಪ್ರಸಾರವಾದವು. == ಪುರಸ್ಕಾರ == ಅವಳ ಮನೆ ಕಾದಂಬರಿಗೆ ೧೯೬೦ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಸಣ್ಣಕತೆಗಳ ಸಂಕಲನವಾದ ಸಮಸ್ಯೆಯ ಮಗು ಪುಸ್ತಕಕ್ಕೆ ೧೯೬೨ರಲ್ಲಿ 'ದೇವರಾಜ್ ಪ್ರಶಸ್ತಿ' . == ನಿಧನ == ತ್ರಿವೇಣಿಯವರು ತಮ್ಮ ಮೂವತ್ತೈದನೆಯ ವಯಸ್ಸಿನಲ್ಲಿಯೇ ಜುಲೈ ೨೯, ೧೯೬೩ರಂದು ತಮ್ಮ ಹನ್ನೊಂದು ದಿನದ ಹೆಣ್ಣು ಮಗುವನ್ನು ಬಿಟ್ಟು ನಿಧನರಾದರು. ಈಗ ತ್ರಿವೇಣಿಯವರ ಕೃತಿಗಳ ಹಕ್ಕುಗಳು ಅವರ ಮಗಳಾದ ಮೀರಾ ಕುಮಾರ್ ಅವರಲ್ಲಿವೆ. == ಉಲ್ಲೇಖ ==