ದುರ್ಯೋಧನ (ಸಂಸ್ಕೃತ:दुर्योधन)ಮಹಾಭಾರತ ಕಥಾನಕದಲ್ಲಿ ಒಂದು ಪ್ರಮುಖ ಪಾತ್ರ.ಧೃತರಾಷ್ಟ್ರ ಮತ್ತು ಗಾಂಧಾರಿಯಿಂದ ನೂರು ಜನ ಪುತ್ರರು ಒಬ್ಬಳು ಪುತ್ರಿ. ಇವರೇ ಕೌರವರು ಎಂದು ಪ್ರಸಿದ್ಧರಾದವರು. ಮಗಳು ದುಶ್ಶಲೆ . ಇವರಲ್ಲಿ ದುರ್ಯೋಧನ ಮತ್ತು ದುಶ್ಶಾಸನ ಮೊದಲಿಬ್ಬರು. ದುರ್ಯೋಧನ ದೃತರಾಷ್ಟ್ರ ಹಾಗು ಗಾಂಧಾರಿಯರಿಗೆ ಜನಿಸಿದ ನೂರು ಪುತ್ರರಲ್ಲಿ ಹಿರಿಯವನು. ಹಸ್ತಿನಾಪುರದ ಕಾರ್ಯಕಾರಿ ಮಹಾರಾಜನ (ದೃತರಾಷ್ಟ್ರನ) ಹಿರಿಯ ಮಗನಾದರೂ, ಕಾಡಿನ ವಾಸದಿಂದ ಹಿಂದಿರುಗಿದ ಪಾಂಡವರ ಕಾರಣದಿಂದ ಯುವರಾಜನಾಗುವ ಅವಕಾಶ ಕೈ ತಪ್ಪಿ ಹೋಗುತ್ತದೆ. ಈ ಕಾರಣದಿಂದ ದುರ್ಯೋಧನ ಮನದಲ್ಲಿ ಪಾಂಡವರ ವಿರುದ್ಧ ದ್ವೇಷದ ಬೀಜ ಮೊಳಕೆ ಒಡೆಯುತ್ತದೆ. ಕರ್ಣನು ದುರ್ಯೋಧನನ ಆಪ್ತಮಿತ್ರ. ಪಾಂಡವರನ್ನು ವನವಾಸಕ್ಕೆ ಅಟ್ಟಿದ ನಂತರ ದುರ್ಯೋಧನ, ಕರ್ಣನ ಗಮನಾರ್ಹ ನೆರವಿನೊಂದಿಗೆ, ವಿಶ್ವದ ಎಲ್ಲ ದಿಕ್ಕಿನ ಎಲ್ಲ ರಾಜರನ್ನು ಮಣಿಸಿ, ದಿಗ್ವಿಜಯ ಯಾತ್ರೆ ನಡೆಸಿ, ಚಕ್ರವರ್ತಿಯಾಗುತ್ತಾನೆ.