ಅಕ್ಕಿನೇನಿ ನಾಗಾರ್ಜುನ ರಾವ್ (ಜನನ ೨೯ ಆಗಸ್ಟ್ ೧೯೫೯) ಇವರು ನಾಗಾರ್ಜುನ ಎಂದು ಕರೆಯಲ್ಪಡುವ ಭಾರತೀಯ ನಟ, ಚಲನಚಿತ್ರ ನಿರ್ಮಾಪಕ, ದೂರದರ್ಶನ ನಿರೂಪಕ ಮತ್ತು ಉದ್ಯಮಿಯಾಗಿದ್ದಾರೆ. ನಾಗಾರ್ಜುನರವರು ಮುಖ್ಯವಾಗಿ ತೆಲುಗು ಚಿತ್ರರಂಗದಲ್ಲಿ ನಟಿಸಿದ್ದಾರೆ ಹಾಗೂ ಕೆಲವು ಹಿಂದಿ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ನಾಗಾರ್ಜುನರವರು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವುಗಳೆಂದರೆ, ನಿನ್ನೆ ಪೆಲ್ಲದಾಟ (೧೯೯೬), ಇದು ಅವರು ನಿರ್ಮಿಸಿದ ತೆಲುಗಿನ ಅತ್ಯುತ್ತಮ ಚಲನಚಿತ್ರವಾಗಿದೆ ಮತ್ತು ಅನ್ನಮಯ್ಯ (೧೯೯೭) ಈ ಚಿತ್ರದಲ್ಲಿ ನಟನಾಗಿ ವಿಶೇಷ ಉಲ್ಲೇಖವನ್ನು ಗಳಿಸಿದರು. ಇವರು ಹತ್ತು ರಾಜ್ಯ ನಂದಿ ಪ್ರಶಸ್ತಿಗಳು ಮತ್ತು ಮೂರು ದಕ್ಷಿಣ ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ೧೯೮೯ ರಲ್ಲಿ, ನಾಗಾರ್ಜುನರವರು ಮಣಿರತ್ನಂ ಅವರ ನಿರ್ದೇಶನದ ಪ್ರಣಯ ನಾಟಕ ಚಿತ್ರವಾದ ಗೀತಾಂಜಲಿಯಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿತು. ಅದೇ ವರ್ಷ, ಅವರು ರಾಮ್ ಗೋಪಾಲ್ ವರ್ಮಾ ಅವರ ನಿರ್ದೇಶನದ ಯಶಸ್ವಿಯಾದ ಶಿವ ಎಂಬ ಕಾರ್ಯತಂತ್ರದ ಚಿತ್ರದಲ್ಲಿ ಹಾಗೂ ೧೩ ನೇ ಐಎಫ್ಎಫ್ಐ '೯೦ ರಲ್ಲಿ ಕಾಣಿಸಿಕೊಂಡರು. ನಾಗಾರ್ಜುನರವರು ೧೯೯೦ ರ ಶಿವ ಚಿತ್ರದ ಹಿಂದಿ ರಿಮೇಕ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅನ್ನಮಯ್ಯ (೧೯೯೭) ಚಿತ್ರದಲ್ಲಿ, ೧೫ ನೇ ಶತಮಾನದ ಸಂಗೀತ ಸಂಯೋಜಕರಾದ ಅನ್ನಮಾಚಾರ್ಯ ಮೂಲಕ, ಅಗ್ನಿ ವರ್ಷ (೨೦೦೨) ಚಿತ್ರದಲ್ಲಿ ಯವಕ್ರಿಯಾಗಿ (ಸಂನ್ಯಾಸಿ ಭಾರದ್ವಾಜ ಅವರ ಮಗ), ಎಲ್ಒಸಿ: ಕಾರ್ಗಿಲ್ (೨೦೦೩) ಯುದ್ಧ ಚಿತ್ರದಲ್ಲಿ ಮೇಜರ್ ಪದ್ಮಪಾಣಿ ಆಚಾರ್ಯರಾಗಿ, ೧೭ ನೇ ಶತಮಾನದ ಶ್ರೀ ರಾಮದಾಸು (೨೦೦೬) ಚಿತ್ರದಲ್ಲಿ ಸಂಗೀತ ಸಂಯೋಜಕ ಕಂಚೆರ್ಲಾ ಗೋಪಣ್ಣನಾಗಿ, ರಾಜಣ್ಣ (೨೦೧೧) ಚಿತ್ರದಲ್ಲಿ ಸುದ್ದಲ ಹನ್ಮಂತು ಎಂಬ ಪಾತ್ರದಲ್ಲಿ, ಶಿರಡಿ ಸಾಯಿಯಲ್ಲಿ ಶಿರಡಿಯ ಸಾಯಿಬಾಬಾನಾಗಿ (೨೦೧೨), ಜಗದ್ಗುರು ಆದಿಶಂಕರ (೨೦೧೩) ಚಿತ್ರದಲ್ಲಿ ಚಂಡಾಲುಡು ಎಂಬ ಪಾತ್ರದಲ್ಲಿ ಮತ್ತು ಓಂ ನಮೋ ವೆಂಕಟೇಶಾಯ (೨೦೧೭) ಚಿತ್ರದಲ್ಲಿ ಹಾಥಿರಾಮ್ ಭಾವಾಜಿ ಪಾತ್ರದಲ್ಲಿ ಹೀಗೆ, ಹಲವಾರು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಗಾರ್ಜುನರವರು ಹೆಚ್ಚಾಗಿ ಕಾರ್ಯತಂತ್ರದ ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳೆಂದರೆ: ಆಖಾರಿ ಪೊರಟಮ್ (೧೯೮೮), ವಿಕ್ಕಿ ದಾದಾ (೧೯೮೯), ಶಿವ (೧೯೮೯), ನೇತಿ ಸಿದ್ಧಾರ್ಥ (೧೯೯೦), ಚೈತನ್ಯ (೧೯೯೧), ನಿರ್ನಾಯಂ (೧೯೯೧), ಅಂತಮ್ (೧೯೯೨), ಕಿಲ್ಲರ್ (೧೯೯೨), ಖುದಾ ಗವಾ (೧೯೯೨), ರಕ್ಷಣಾ (೧೯೯೩), ಹಲೋ ಬ್ರದರ್ (೧೯೯೪), ಗೋವಿಂದ ಗೋವಿಂದ (೧೯೯೪), ಕ್ರಿಮಿನಲ್ (೧೯೯೪), ರಚ್ಚಗನ್ (೧೯೯೭), ಆಜಾದ್ (೨೦೦೦), ಶಿವಮಣಿ (೨೦೦೩), ಮಾಸ್ (೨೦೦೪), ಸೂಪರ್ (೨೦೦೫), ಮತ್ತು ಡಾನ್ (೨೦೦೭). ೨೦೧೩ ರಲ್ಲಿ, ದೆಹಲಿ ಚಲನಚಿತ್ರೋತ್ಸವದ ಭಾರತೀಯ ಸಿನೆಮಾದ ೧೦೦ ವರ್ಷಗಳ ಆಚರಣೆಯಲ್ಲಿ ಅವರು ಬಾಲಿವುಡ್‌ನ ರಮೇಶ್ ಸಿಪ್ಪಿ ಮತ್ತು ವಿಶಾಲ್ ಭಾರದ್ವಾಜ್ ಅವರೊಂದಿಗೆ ದಕ್ಷಿಣ ಭಾರತದ ಸಿನೆಮಾವನ್ನು ಪ್ರತಿನಿಧಿಸಿದರು. ೧೯೯೫ ರಲ್ಲಿ, ಅವರು ಸೀಶೆಲ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ನಿರ್ಮಾಣ ಘಟಕದೊಂದಿಗೆ ಚಲನಚಿತ್ರ ನಿರ್ಮಾಣಕ್ಕೆ ಕಾಲಿಟ್ಟರು ಮತ್ತು ಹಾರ್ಟ್ ಅನಿಮೇಷನ್ ಎಂಬ ಎಮ್ಮಿ ಪ್ರಶಸ್ತಿ ವಿಜೇತ ಚಲನಚಿತ್ರ ಅನಿಮೇಷನ್ ಕಂಪನಿಯ ಸಹ-ನಿರ್ದೇಶಕರಾಗಿದ್ದರು. ನಾಗಾರ್ಜುನರವರು ಅನ್ನಪೂರ್ಣ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆಯ ಸಹ ಮಾಲೀಕರಾಗಿದ್ದಾರೆ. ಅವರು ಹೈದರಾಬಾದ್ ಮೂಲದ ಲಾಭರಹಿತ ಚಲನಚಿತ್ರ ಶಾಲೆ ಅನ್ನಪೂರ್ಣ ಇಂಟರ್ನ್ಯಾಷನಲ್ ಸ್ಕೂಲ್ ಆಫ್ ಫಿಲ್ಮ್ ಅಂಡ್ ಮೀಡಿಯಾದ ಅಧ್ಯಕ್ಷರಾಗಿದ್ದಾರೆ. == ಆರಂಭಿಕ ಜೀವನ ಮತ್ತು ಕುಟುಂಬ == ನಾಗಾರ್ಜುನರವರು ೨೯ ಆಗಸ್ಟ್ ೧೯೫೯ ರಂದು ಮದ್ರಾಸ್‌ನಲ್ಲಿ (ಇಂದಿನ ಚೆನ್ನೈ) ತೆಲುಗು ಕುಟುಂಬದಲ್ಲಿ ಹಿರಿಯ ನಟರಾದ ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ಅವರ ಪತ್ನಿ ಅನ್ನಪೂರ್ಣ ದಂಪತಿಗಳಿಗೆ ಮಗನಾಗಿ ಜನಿಸಿದರು. ಅವರ ಕುಟುಂಬವು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ರಾಮಪುರಂ ಮೂಲದವರು. ಅವರ ತಂದೆ ನಟನಾಗಿ ಅವರ ವೃತ್ತಿಜೀವನವನ್ನು ಹುಡುಕಿಕೊಂಡು ಮದ್ರಾಸ್‌ಗೆ ತೆರಳಿದರು. ನಂತರ ಕುಟುಂಬವು ಹೈದರಾಬಾದ್‌ಗೆ ಸ್ಥಳಾಂತರಗೊಂಡಿತು. ಅಲ್ಲಿ ಅವರು ಹೈದರಾಬಾದ್‌ನ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಣವನ್ನು ಪಡೆದರು ಮತ್ತು ಹೈದರಾಬಾದ್‌ನ ಲಿಟಲ್ ಫ್ಲವರ್ ಜೂನಿಯರ್ ಕಾಲೇಜಿನಲ್ಲಿ ಮಧ್ಯಂತರ ಶಿಕ್ಷಣವನ್ನು ಪಡೆದರು. ಅವರು ಮದ್ರಾಸ್‌ನ ಅಣ್ಣಾ ವಿಶ್ವವಿದ್ಯಾಲಯದ ಗಿಂಡಿಯ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನ ಒಂದು ವರ್ಷವನ್ನು ಪೂರ್ಣಗೊಳಿಸಿದರು. ಮಾಜಿ ಭಾರತೀಯ ಕ್ರಿಕೆಟಿಗರಾದ ಕೃಷ್ಣಮಾಚಾರಿ ಶ್ರೀಕಾಂತ್ ಅವರೊಂದಿಗೆ ಎಂಜಿನಿಯರಿಂಗ್ ವಿದ್ಯಾಭ್ಯಾಸದ ದಿನಗಳಲ್ಲಿ ಅವರ ಕಾಲೇಜು ಸಹಪಾಠಿಯಾಗಿದ್ದರು ಮತ್ತು ಮಿಚಿಗನ್‌ನ ಯಿಪ್ಸಿಲಾಂಟಿಯಲ್ಲಿರುವ ಈಸ್ಟರ್ನ್ ಮಿಚಿಗನ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಎಸ್ ಪದವಿ ಪಡೆದರು. ಫೆಬ್ರವರಿ ೧೯೮೪ ರಲ್ಲಿ, ಅವರು ಪ್ರಮುಖ ಚಲನಚಿತ್ರ ನಿರ್ಮಾಪಕರಾದ ಡಿ.ರಾಮಾನಾಯ್ಡು ಅವರ ಪುತ್ರಿ ಲಕ್ಷ್ಮಿ ದಗ್ಗುಬಾಟಿ ಅವರನ್ನು ವಿವಾಹವಾದರು. ಇವರು ನಟ ವೆಂಕಟೇಶ್ ಮತ್ತು ನಿರ್ಮಾಪಕ ಸುರೇಶ್ ಬಾಬು ಅವರ ಸಹೋದರಿ. ಲಕ್ಷ್ಮಿ ಮತ್ತು ನಾಗಾರ್ಜುನ ದಂಪತಿಗೆ ನಟ ನಾಗಚೈತನ್ಯ ಇವರು (೨೩ ನವೆಂಬರ್ ೧೯೮೬) ರಂದು ಜನಿಸಿದರು. ಆದಾಗ್ಯೂ, ದಂಪತಿಗಳು ೧೯೯೦ ರಲ್ಲಿ ವಿಚ್ಛೇದನ ಪಡೆದರು. ನಾಗಾರ್ಜುನರವರು ನಂತರ ೧೧ ಜೂನ್ ೧೯೯೨ ರಂದು ನಟಿ ಅಮಲಾ ಅವರನ್ನು ವಿವಾಹವಾದರು ಮತ್ತು ಈ ದಂಪತಿಗೆ ನಟ ಅಖಿಲ್ (೮ ಏಪ್ರಿಲ್ ೧೯೯೪) ಇವರು ಮಗನಾಗಿ ಜನಿಸಿದರು. == ವೃತ್ತಿಜೀವನ == ನಾಗಾರ್ಜುನರವರು ೧೯೬೭ ರಲ್ಲಿ, ಅದುರ್ತಿ ಸುಬ್ಬರಾವ್ ಅವರ ನಿರ್ದೇಶನದ ತೆಲುಗು ಚಿತ್ರವಾದ ಸುಡಿಗುಂಡಲು ಇದರಲ್ಲಿ ಬಾಲ ಕಲಾವಿದನಾಗಿ ನಟಿಸಲು ಪ್ರಾರಂಭಿಸಿದರು. ಶ್ರೀ ಶ್ರೀ ಅವರು ಬರೆದ ವೇಲುಗು ನೀಡಲು ಚಿತ್ರದಲ್ಲಿ ಅವರು ಶಿಶುವಿನ ಪಾತ್ರದಲ್ಲಿ ಕಾಣಿಸಿಕೊಂಡರು. ನಾಗಾರ್ಜುನರವರ ಎರಡೂ ಚಲನಚಿತ್ರಗಳಲ್ಲಿ ಅವರ ತಂದೆ ಅಕ್ಕಿನೇನಿ ನಾಗೇಶ್ವರ ರಾವ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅವರು ೧೯೮೬ ರಲ್ಲಿ, ವಿ.ಮಧುಸೂದನ ರಾವ್ ಅವರ ನಿರ್ದೇಶನದ ತೆಲುಗು ಚಿತ್ರವಾದ ವಿಕ್ರಮ್ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು. ಈ ಚಿತ್ರವು ೧೯೮೩ ರ, ಹಿಂದಿ ಚಿತ್ರವಾದ ಹೀರೋ ಇದರ ರಿಮೇಕ್ ಆಗಿದೆ. ನಂತರ, ಈ ಚಿತ್ರವು ಯಶಸ್ವಿಯಾಯಿತು ಹಾಗೂ ನಾಗಾರ್ಜುನರವರಿಗೆ ಉತ್ತಮ ಆರಂಭವನ್ನು ನೀಡಿತು. ನಂತರ, ಅವರು ದಾಸರಿ ನಾರಾಯಣ ರಾವ್ ಅವರ ನಿರ್ದೇಶನದ ಮಜ್ನು ಎಂಬ ಚಿತ್ರದಲ್ಲಿ ಹಾಗೂ ಹೀಗೆ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಈ ಚಿತ್ರವು ಇದು ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಹೃದಯ ಒಡೆದ ಮನುಷ್ಯನ ಪಾತ್ರದಲ್ಲಿ ನಾಗಾರ್ಜುನರವರು ಸಕಾರಾತ್ಮಕ ವಿಮರ್ಶೆಗಳನ್ನು ಪಡೆದರು. ನಂತರ, ಅವರು ಇಳಯರಾಜಾ ಅವರ ಸಂಗೀತದೊಂದಿಗೆ ಗೀತಾ ಕೃಷ್ಣ ನಿರ್ದೇಶನದ ಸರಾಸರಿಗಿಂತ ಕಡಿಮೆ ಗಳಿಕೆಯ ಸಂಕೀರ್ತನ ಚಿತ್ರದಲ್ಲಿ ನಟಿಸಿದರು. ಈ ಚಿತ್ರವು ವಿಷಯ ಮತ್ತು ಸಂಗೀತಕ್ಕಾಗಿ ಮೆಚ್ಚುಗೆಯನ್ನು ಪಡೆಯಿತು. ೧೯೮೮ ರಲ್ಲಿ, ನಾಗಾರ್ಜುನರವರು ಬ್ಲಾಕ್ಬಸ್ಟರ್ ಆಕಾರಿ ಪೊರಾಟಮ್ ಚಿತ್ರದಲ್ಲಿ ನಟಿಸಿದರು. ಈ ಚಿತ್ರದ ಚಿತ್ರಕಥೆಯನ್ನು ಯಂಡಮೂರಿ ವೀರೇಂದ್ರನಾಥ್ ಅವರು ಹಾಗೂ ನಿರ್ದೇಶನವನ್ನು ಕೆ. ರಾಘವೇಂದ್ರ ರಾವ್ ಅವರು ಮಾಡಿದರು. ಅಲ್ಲಿ ಅವರು ಶ್ರೀದೇವಿ ಮತ್ತು ಸುಹಾಸಿನಿಯೊಂದಿಗೆ ಜೋಡಿಯಾದರು. ೧೯೮೮ ರಲ್ಲಿ, ಅವರು ವಿಜಯಶಾಂತಿ ಅವರೊಂದಿಗೆ ಜಾನಕಿ ರಾಮುಡು ಚಿತ್ರದಲ್ಲಿ ನಟಿಸಿದರು. ರಾಘವೇಂದ್ರ ರಾವ್ ನಿರ್ದೇಶನದ ಈ ಚಿತ್ರವೂ ಪ್ರಖ್ಯಾತಿಯಾಗಿತ್ತು. ೧೯೮೯ ರಲ್ಲಿ, ಅವರು ಮಣಿರತ್ನಂ ಅವರ ನಿರ್ದೇಶನದ ಪ್ರಣಯ ನಾಟಕವಾದ ಗೀತಾಂಜಲಿಯಲ್ಲಿ ನಟಿಸಿದರು. ಈ ಚಿತ್ರವು ೧೯೯೦ ರಲ್ಲಿ, ಆರೋಗ್ಯಕರ ಮನರಂಜನೆಯನ್ನು ಒದಗಿಸುವ ಜನಪ್ರಿಯ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ತಕ್ಷಣ, ಅವರು ಶಿವ ಚಿತ್ರದಲ್ಲಿ ಮತ್ತೊಂದು ಯಶಸ್ಸನ್ನು ನೋಡಿದರು. ಈ ಚಿತ್ರದ ಮೂಲಕ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರವು ನಾಗಾರ್ಜುನ ಅವರನ್ನು ಸೂಪರ್ಸ್ಟಾರ್ ಆಗಿ ಮಾಡಿತು. ೧೯೯೦ ರಲ್ಲಿ, ಅವರು ಅದೇ ಚಿತ್ರದ ಹಿಂದಿ ರಿಮೇಕ್ ಶಿವದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.. ಹಿಂದಿ ಆವೃತ್ತಿ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸನ್ನು ಕಂಡಿತು. ನಂತರ ಅವರು ಜೈತ್ರ ಯಾತ್ರೆ ಚಿತ್ರದಲ್ಲಿ ನಟಿಸಿದರು. ಇದಕ್ಕಾಗಿ ಅವರು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು. ನಂತರ, ಪ್ರೇಮಯುದ್ಧಮ್ ಮತ್ತು ಇಡ್ಡಾರು ಇಡ್ಡಾರೆ ಹೀಗೆ ಮುಂತಾದ ಉಪಚಿತ್ರಗಳ ಮೂಲಕ ಅವರು ಮೆಚ್ಚುಗೆ ಪಡೆದರು ಹಾಗೂ ಅಮಲಾ ಅವರೊಂದಿಗೆ ಮತ್ತೆ ನಟಿಸಿದ ನಿರ್ನಾಯಂ ಚಿತ್ರವು ಯಶಸ್ವಿಯಾಯಿತು. == ತೆರೆ-ಮರೆಯಲ್ಲಿ ಮತ್ತು ಇತರ ಕೆಲಸಗಳು == === ದೂರದರ್ಶನ === ನಾಗಾರ್ಜುನರವರು ೨೦೦೯ ರಲ್ಲಿ, ಯುವ ಧಾರಾವಾಹಿಯ ಮೂಲಕ ದೂರದರ್ಶನ ನಿರ್ಮಾಪಕರಾಗಿ ಪಾದಾರ್ಪಣೆ ಮಾಡಿದರು. ಸ್ಟಾರ್ ನೆಟ್ವರ್ಕ್‌ಗೆ ಮಾರಾಟವಾಗುವ ಮೊದಲು ಅವರು ದೂರದರ್ಶನ ಚಾನೆಲ್ ಆಗಿದ್ದ ಮಾ ಟಿವಿಯ ಪ್ರಮುಖ ಷೇರುದಾರರಾಗಿದ್ದರು. ನಾಗಾರ್ಜುನ ಅವರು ಹೂ ವಾಂಟ್ಸ್ ಟು ಬಿ ಎ ಮಿಲಿಯನೇರ್‌? ನ ಭಾರತೀಯ ತೆಲುಗು ಭಾಷೆಯ ಆವೃತ್ತಿಯನ್ನು ನಡೆಸಿದರು ಹಾಗೂ ಇದಕ್ಕೆ ಮೀಲೋ ಎವರು ಕೋಟೀಶ್ವರಡು ಎಂದು ಹೆಸರಿಡಲಾಗಿದೆ. ಈ ಕಾರ್ಯಕ್ರಮದ ಮೊದಲ ಭಾಗವನ್ನು ಮಾ ಟಿವಿಯಲ್ಲಿ ೯ ಜೂನ್ ೨೦೧೪ ರಿಂದ ೭ ಆಗಸ್ಟ್ ೨೦೧೪ ರವರೆಗೆ (೪೦ ಕಂತುಗಳು) ಪ್ರಸಾರ ಮಾಡಲಾಯಿತು. ಎರಡನೇ ಭಾಗವನ್ನು ೯ ಡಿಸೆಂಬರ್ ೨೦೧೪ ರಿಂದ ೨೭ ಫೆಬ್ರವರಿ ೨೦೧೫ ರವರೆಗೆ (೫೫ ಕಂತುಗಳು) ಮಾ ಟಿವಿಯಲ್ಲಿ ಪ್ರದರ್ಶಿಸಲಾಯಿತು. ೨೦೧೫ ರಲ್ಲಿ, ಟಿವಿ ೫ ಬಿಸಿನೆಸ್ ಲೀಡರ್ಸ್ ಪ್ರಶಸ್ತಿ ಸಮಾರಂಭದಲ್ಲಿ ಪ್ರದರ್ಶನದಲ್ಲಿ ಮಾಡಿದ ಕೆಲಸಕ್ಕಾಗಿ ಅವರಿಗೆ ಮನರಂಜನಾ ನಾಯಕ ಪ್ರಶಸ್ತಿ (ದೂರದರ್ಶನ) ನೀಡಿ ಗೌರವಿಸಲಾಯಿತು. ಅವರು ೨೦೧೯, ೨೦೨೦, ೨೦೨೧, ೨೦೨೨ ಮತ್ತು ೨೦೨೩ ರಲ್ಲಿ, ಬಿಗ್ ಬಾಸ್‌ನ ಮೂರನೇ, ನಾಲ್ಕನೇ, ಐದನೇ, ಆರನೇ ಮತ್ತು ಏಳನೇ ಭಾಗವನ್ನು ಮತ್ತು ೨೦೨೨ ರಲ್ಲಿ, ಬಿಗ್ ಬಾಸ್‌ನ ಮೊದಲ ಭಾಗವನ್ನು ತಡೆರಹಿತವಾಗಿ ಆಯೋಜಿಸಿದ್ದರು. === ಮಾಲೀಕತ್ವ, ಅನುಮೋದನೆ ಮತ್ತು ಗಳಿಕೆಗಳು === ೨೦೧೩ ರಿಂದ, ನಾಗಾರ್ಜುನರವರು ಸುನಿಲ್ ಗವಾಸ್ಕರ್ ಮತ್ತು ಎಂಎಸ್ ಧೋನಿ ಅವರೊಂದಿಗೆ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್‌ನ ಮುಂಬೈ ಮಾಸ್ಟರ್ಸ್‌ನ ಸಹ ಮಾಲೀಕರಾಗಿದ್ದರು. ನಾಗಾರ್ಜುನರವರು ಪ್ರಸ್ತುತ ತೆಲಂಗಾಣ ಮತ್ತು ಆಂಧ್ರಪ್ರದೇಶದ ಕಲ್ಯಾಣ್ ಜ್ಯುವೆಲ್ಲರ್ಸ್ ಅನ್ನು ಅನುಮೋದಿಸುತ್ತಿದ್ದಾರೆ. ೨೦೧೨ ಮತ್ತು ೨೦೧೩ ನೇ ಸಾಲಿನ ಫೋರ್ಬ್ಸ್ ಇಂಡಿಯಾದ ಮೊದಲ ೧೦೦ ಖ್ಯಾತಿ ಪಡೆದವರ ಪಟ್ಟಿಯಲ್ಲಿ ಅವರು ೩೬ ಮತ್ತು ೪೩ ನೇ ಸ್ಥಾನ ಪಡೆದಿದ್ದಾರೆ. ಅವರು ಇಂಡಿಯನ್ ಸೂಪರ್ ಲೀಗ್ ಕ್ಲಬ್ ಕೇರಳ ಬ್ಲಾಸ್ಟರ್ಸ್ ಎಫ್‌ಸಿಯ ಸಹ ಮಾಲೀಕರಲ್ಲಿ ಒಬ್ಬರಾಗಿದ್ದಾರೆ. === ಎನ್‌೩ ರಿಯಾಲ್ಟಿ ಎಂಟರ್ಪ್ರೈಸಸ್ === ನಾಗಾರ್ಜುನರವರು ಎನ್‌೩ ರಿಯಾಲ್ಟಿ ಎಂಟರ್ಪ್ರೈಸಸ್‌ನ ಸ್ಥಾಪಕ ಪಾಲುದಾರರಾಗಿದ್ದಾರೆ. ಇದು ಎನ್ ಸಮಾವೇಶ ಕೇಂದ್ರ, ಎನ್-ಗ್ರಿಲ್ ಮತ್ತು ಡಿಸ್ಟ್ರಿಕ್ಟ್ ಎನ್‌ನ ಮೂಲ ಘಟಕವಾಗಿದೆ. ನಂತರದ, ಎರಡು ಸಂಸ್ಥೆಗಳು ಈಗ ಅಸ್ತಿತ್ವದಲ್ಲಿಲ್ಲ. ೨೦೧೪ ರಲ್ಲಿ, ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಎನ್ ಸಮಾವೇಶ ವ್ಯಾಜ್ಯ ಆವರಣವನ್ನು ಅತಿಕ್ರಮಿಸಿದೆ ಎಂದು ಗುರುತಿಸಿತು. ತರುವಾಯ, ಕಾನೂನು ಅಭಿಪ್ರಾಯಗಳ ಮೂಲಕ, ಸ್ಥಳೀಯ ಆಡಳಿತಗಾರರು ಭೂಮಿಯ ತಿದ್ದುಪಡಿ ಮಾರ್ಗವನ್ನು ಪ್ರಾರಂಭಿಸಿದರು. === ದಾನ === ನಾಗಾರ್ಜುನರವರು ಮತ್ತು ಅವರ ಪತ್ನಿ ಅಮಲಾ ಅವರು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿದಿಂದ ಮಾನ್ಯತೆ ಪಡೆದ ಹೈದರಾಬಾದ್‌ನ ಬ್ಲೂ ಕ್ರಾಸ್‌ನ ಸಹ ಸಂಸ್ಥಾಪಕರಾಗಿದ್ದಾರೆ. ಇದು ಹೈದರಾಬಾದ್‌ನ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಆಗಿದ್ದು, ಇದು ಪ್ರಾಣಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ. ನಾಗಾರ್ಜುನ ಅವರು ಮಾ ಟಿವಿ ಅಸೋಸಿಯೇಷನ್ ಕೈಗೊಂಡ ಕಲ್ಯಾಣ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು ಮತ್ತು ಪ್ರಸ್ತುತ ಎಚ್ಐವಿ/ಏಡ್ಸ್ ಜಾಗೃತಿ ಅಭಿಯಾನಗಳ ಬ್ರಾಂಡ್ ಅಂಬಾಸಿಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ೨೦೧೦ ರಲ್ಲಿ, ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾದ ಲಾಭರಹಿತ ಸಂಸ್ಥೆಯಾದ ಟೀಚ್ಏಡ್ಸ್ ರಚಿಸಿದ ಎಚ್ಐವಿ/ಏಡ್ಸ್ ಅನಿಮೇಟೆಡ್ ಸಾಫ್ಟ್ವೇರ್ ಟ್ಯುಟೋರಿಯಲ್‌ನಲ್ಲಿ ನಾಗಾರ್ಜುನರವರು ನಟಿಸಿದ್ದಾರೆ. == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == ನಾಗಾರ್ಜುನರವರು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಹತ್ತು ನಂದಿ ಪ್ರಶಸ್ತಿಗಳು ಮತ್ತು ಮೂರು ದಕ್ಷಿಣ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿ == ಬಾಲಿವುಡ್ ಹಂಗಾಮಾದಲ್ಲಿ ನಾಗಾರ್ಜುನರವರು.