ಪಿಬಿಎಸ್ ಎಂದು ವ್ಯಾಪಕವಾಗಿ ಕರೆಯಲ್ಪಡುವ ಪ್ರತಿವಾದಿ ಭಯಂಕರ ಶ್ರೀನಿವಾಸ್(೨೨ ಸೆಪ್ಟೆಂಬರ್ ೧೯೨೮ - ೧೪ ಏಪ್ರಿಲ್ ೨೦೧೩)ರವರು ಭಾರತೀಯ ಹಿನ್ನೆಲೆ ಗಾಯಕ, ಸಂಯೋಜಕ, ಹಾರ್ಮೋನಿಯಂ ವಾದಕ, ಗೀತರಚನೆಕಾರ ಮತ್ತು ಕವಿ. ಇವರು ದಕ್ಷಿಣ ಚಿತ್ರರಂಗ ಮತ್ತು ಬಾಲಿವುಡ್‌ನಲ್ಲಿ‌ ತಮ್ಮ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಪ್ರಮುಖ ಕೃತಿಗಳು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿವೆ. ತಮಿಳು, ತೆಲುಗು, ಮಲಯಾಳಂ ಚಿತ್ರರಂಗಗಳಲ್ಲೂ ಜನಪ್ರಿಯರಾಗಿದ್ದ ಇವರು, ಕನ್ನಡ, ತಮಿಳು, ತೆಲುಗು, ಮಲಯಾಳಂ, ಉರ್ದು, ಹಿಂದಿ, ಸಂಸ್ಕೃತ ಈ ಎಂಟು ಭಾಷೆಗಳಲ್ಲೂ ಸಂಪೂರ್ಣ ಪಾಂಡಿತ್ಯ ಹೊಂದಿದ್ದರು. ಅವರು ಸಂಗೀತ ಮತ್ತು ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ತಮಿಳು ಕಲೈಮಾಮಣಿ ಪ್ರಶಸ್ತಿ ಮತ್ತು ಆಂಧ್ರ ಶಿವ ಪ್ರತಿಷ್ಠಾನದ ಮಾಧವಪೆದ್ದಿ ಸತ್ಯಂ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರ ಗೌರವಾರ್ಥವಾಗಿ, ಚೆನ್ನೈನ ಶ್ರೀ ಕಲಾ ಸುಧಾ ತೆಲುಗು ಸಂಘವು ಹಿರಿಯ ಗಾಯಕರನ್ನು ಗೌರವಿಸಲು ಪಿ.ಬಿ.ಶ್ರೀನಿವಾಸ್ ಮಹಾಪುರುಷ ಪ್ರಶಸ್ತಿಯನ್ನು ಸ್ಥಾಪಿಸಿತು. == ಆರಂಭಿಕ ಜೀವನ == ಪ್ರತಿವಾದಿ, ಭಯಂಕರ ಶ್ರೀನಿವಾಸ್ ಅವರು ಆಂಧ್ರಪ್ರದೇಶ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡದಲ್ಲಿ ತೆಲುಗು ಮಾತನಾಡುವ ವೈಷ್ಣವ ಬ್ರಾಹ್ಮಣ ಸಂಗೀತ ಕುಟುಂಬದಲ್ಲಿ ಪ್ರತಿವಾದಿ ಭಯಂಕರ ಫಣೀಂದ್ರಸ್ವಾಮಿ ಮತ್ತು ಶೇಷಗಿರಿಯಮ್ಮ ಅವರ ಕಿರಿಯ ಮಗನಾಗಿ ಜನಿಸಿದರು. ಇವರ ವಂಶಸ್ಥರು ವಾದ ಮಾಡುವುದರಲ್ಲಿ ತುಂಬಾ ಪ್ರಸಿದ್ಧರಾಗಿದ್ದರಂತೆ. ಹಾಗಾಗಿ 'ಪ್ರತಿವಾದಿ ಭಯಂಕರ' ಎನ್ನುವುದು ಇವರ ಮನೆತನಕ್ಕೆ ಇದ್ದ ಹೆಸರು. ಅವರ ತಂದೆ ನಾಗರಿಕ ಸೇವಕರಾಗಿದ್ದರು ಮತ್ತು ಅವರ ತಾಯಿ ಸಂಗೀತಗಾರ್ತಿಯಾಗಿದ್ದರು. ಆತನ ತಂದೆ ಆತ ಸರ್ಕಾರಿ ಅಧಿಕಾರಿಯಾಗಬೇಕೆಂದು ಬಯಸಿದ್ದರು ಮತ್ತು ಶ್ರೀನಿವಾಸ್‌ರವರಿಗೆ ಬ್ಯಾಚುಲರ್ ಆಫ್ ಕಾಮರ್ಸ್ ಪದವಿಯನ್ನು ನೀಡಲಾಯಿತು. ನಂತರ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿ ವಿಶಾರದ್ ಅನ್ನು ಉತ್ತೀರ್ಣಗೊಳಿಸಿದರು. == ಸಂಗೀತ ವೃತ್ತಿ == ಅವರ ಚಿಕ್ಕಪ್ಪ ಕಿಡಂಬಿ ಕೃಷ್ಣಸ್ವಾಮಿ ನಾಟಕ ಕಲಾವಿದ ಮತ್ತು ಗಾಯಕರಾಗಿದ್ದರು. ಶ್ರೀನಿವಾಸ್‌ರವರು ೧೨ ವರ್ಷದವರಾಗಿದ್ದಾಗ, ಕೃಷ್ಣಸ್ವಾಮಿ ಅವರಿಗೆ ನಾಟಕವೊಂದರಲ್ಲಿ ಹಾಡಲು ಅವಕಾಶ ನೀಡಿದರು. ನಂತರ, ತರಬೇತಿ ಪಡೆದ ಹಾರ್ಮೋನಿಯಂ ವಾದಕ ಮತ್ತು ಗಾಯಕನಾದ ಶ್ರೀನಿವಾಸ್, ಮದ್ರಾಸ್‌ನ ಜೆಮಿನಿ ಸ್ಟುಡಿಯೋಸ್‌ಗೆ ಹೋದರು. ವೀಣಾ ವಾದಕನಾದ ಏಮಾನಿ ಶಂಕರ ಶಾಸ್ತ್ರಿಯವರು , ಜೀವಂತ ಸಂಗೀತಗಾರರಲ್ಲಿ ಒಬ್ಬರಾಗಿದ್ದರು. ಅವರು ಶ್ರೀನಿವಾಸ್‌ರನ್ನು ಜೆಮಿನಿ ಸ್ಟುಡಿಯೋಸ್‌ನ ಮಾಲೀಕ ಎಸ್. ಎಸ್. ವಾಸನ್‌ಗೆ ಪರಿಚಯಿಸಿದನು. ಅಲ್ಲಿ, ಶ್ರೀನಿವಾಸ್‌ರವರು ತಮ್ಮ ನೆಚ್ಚಿನ ಗಾಯಕ ಮೊಹಮ್ಮದ್ ರಫಿ ಹಾಡಿದ ಸೂಪರ್ ಹಿಟ್ ಹಾಡನ್ನು ಹಾಡಿದರು. ನೌಶಾದ್ ಅಲಿ ಸಂಯೋಜಿಸಿದ ದೀದಾರ್ (೧೯೫೧) ಚಿತ್ರದ "ಹುಯೆ ಹಮ್ ಜಿಂಕೆ ಲಿಯೆ ಬರ್ಬಾದ್" ಅವರಿಗೆ ವೃತ್ತಿಪರ ಹಿನ್ನೆಲೆ ಗಾಯಕರಾಗುವ ಅವಕಾಶವನ್ನು ತಂದುಕೊಟ್ಟಿತು. ಅವರು ಹಾಡಿದ ಮೊದಲ ಕನ್ನಡ ಹಾಡು ಜಾತಕಫಲ(೧೯೫೩) ಚಿತ್ರದ್ದಾಗಿದೆ. == ಬರಹಗಾರರಾಗಿ == ಪಿ ಬಿ ಶ್ರೀನಿವಾಸರು ಹಿನ್ನೆಲೆ ಗಾಯಕರಲ್ಲದೆ ಸಹಸ್ರಾರು ಹಾಡುಗಳನ್ನು ಸುಮಾರು ಎಂಟು ಭಾಷೆಗಳಲ್ಲಿ ಬರೆದಿದ್ದಾರೆ. ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ಮೊದಲ ಬಾರಿಗೆ ಇಳಿದಾಗ, ಪಿ.ಬಿ. ಶ್ರೀನಿವಾಸ್‌ರವರು ಎಸ್. ಜಾನಕಿ ಜೊತೆಗೆ "ಮ್ಯಾನ್ ಆನ್ ಮೂನ್" ಎಂಬ ಇಂಗ್ಲೀಷ್ ಗೀತೆಯನ್ನು ರೆಕಾರ್ಡ್ ಮಾಡಿ ಅವರಿಗೆ ಕಳುಹಿಸಿದರು. ಆ ದಿನಗಳಲ್ಲಿ ಅದು ಅವರಿಗೆ ದೊಡ್ಡ ಚಪ್ಪಾಳೆ ನೀಡಿತು ಎಂದು ಅವರು ತಮ್ಮ ಸಂದರ್ಶನವೊಂದರಲ್ಲಿ ಉಲ್ಲೇಖಿಸಿದ್ದಾರೆ. ಅವರು ಅಮೆರಿಕದಲ್ಲಿದ್ದ ಸಂದರ್ಭದಲ್ಲಿದ್ದಾಗ ಒಂದು ಸಮಾರಂಭದಲ್ಲಿ ಈ ಹಾಡನ್ನು ಕೇಳಿದ ಪ್ರಸಿದ್ಧ ವಿಶ್ವವಿದ್ಯಾಲಯದ ಮುಖ್ಯಸ್ಥರು ಅವರನ್ನು ಡಾಕ್ಟರೇಟ್ ಪದವಿಗೆ ಶಿಫಾರಸ್ಸು ಮಾಡಿದರು. ಹೀಗಾಗಿ ಪಿ ಬಿ ಎಸ್ ಅವರಿಗೆ ದೊರೆತ ಮೊದಲ ಡಾಕ್ಟರೇಟ್ ಗೌರವ ಅಮೆರಿಕದ ವಿಶ್ವವಿದ್ಯಾಲಯದ್ದು. ಅವರು ಹಲವಾರು ಗಝಲ್‌ಗಳನ್ನು ಕನ್ನಡದಲ್ಲಿ ಬರೆದಿದ್ದಾರೆ. ಭಾಗ್ಯಜ್ಯೋತಿ ಚಿತ್ರಕ್ಕೆ ಅವರು ವಾಣಿ ಜಯರಾಂ ಅವರೊಂದಿಗೆ ಹಾಡಿರುವ "ದಿವ್ಯಗಗನ ವನವಾಸಿನಿ" ಎಂಬ ಸಂಸ್ಕೃತ ಗೀತೆ ಅವರ ಸ್ವಂತ ರಚನೆಯಾಗಿದೆ. "ನವನೀತ ಸುಮಸುಧಾ" ಎಂಬ ರಾಗ ಅವರ ಸ್ವಯಂ ಸೃಷ್ಟಿಯಾಗಿದೆ. 'ಶ್ರೀನಿವಾಸ ಗಾಯತ್ರಿ ವ್ರತ', 'ಗಾಯಕುಡಿ ಗೇಯಲು', ‘ಪ್ರಣವಂ’ ಎನ್ನುವ ಪುಸ್ತಕಗಳನ್ನೂ ಇವರು ಪ್ರಕಟಿಸಿದ್ದಾರೆ. ಕನ್ನಡ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಪಿ. ಬಿ. ಶ್ರೀನಿವಾಸರು ತಮ್ಮ ಜೇಬಿನಲ್ಲಿನ ಹಲವು ಪೆನ್ನುಗಳು, ಅವರೊಂದಿಗಿದ್ದ ಹಲವು ಪುಸ್ತಕಗಳು ಹಾಗೂ ಅವರು ರಚಿಸಿದ ಹಾಡುಗಳ ಬಗ್ಗೆ ಮಾತನಾಡಿ, ಪಿಬಿಎಸ್‌ ಎಂದರೆ ಪ್ಲೇ ಬ್ಯಾಕ್‌ ಸಿಂಗರ್‌ ಅಲ್ಲದೆ 'ಪೆನ್ಸ್‌, ಬುಕ್ಸ್ ಯ್ಯಾಂಡ್ ಸಾಂಗ್ಸ್‌' (ಪೆನ್ನುಗಳು, ಪುಸ್ತಕಗಳು ಮತ್ತು ಹಾಡುಗಳು) ಎಂದೂ ಅರ್ಥ ನೀಡಬಲ್ಲದು ಎಂದು ಹೇಳಿದ್ದರು. == ರಾಜ್ ಕುಮಾರ್ ಅವರಿಗೆ ಹೊಂದಿದ್ದ ಧ್ವನಿ == ಕನ್ನಡದ ಮುಖ್ಯ ನಾಯಕ ನಟರಾಗಿದ್ದ ಡಾ.ರಾಜ್‍ಕುಮಾರ್ ಅವರಿಗೆ ಪಿ.ಬಿ. ಶ್ರೀನಿವಾಸ್ ಅವರ ಕಂಠ ಬಹಳ ಸೂಕ್ತವಾಗಿ ಹೊಂದುತ್ತಿತ್ತು. ಡಾ.ರಾಜಕುಮಾರ್ ಸ್ವತ: ಹಾಡಲು ಪ್ರಾರಂಭಿಸುವವರೆಗೆ, ಅವರ ಬಹುತೇಕ ಚಿತ್ರಗಳಿಗೆ ಪಿ.ಬಿ.ಶ್ರೀನಿವಾಸ್ ಧ್ವನಿ ನೀಡಿದ್ದರು. ಒಮ್ಮೆ ರಾಜ್‌ಕುಮಾರ್ ಹೀಗೆ ಹೇಳಿದ್ದರು: “ಪಿ.ಬಿ. ಶ್ರೀನಿವಾಸ್ ಧ್ವನಿ ನನಗೆ ಆತ್ಮವಿದ್ದಂತೆ”. ಸುಮಾರು ಇನ್ನೂರಕ್ಕೂ ಹೆಚ್ಚು ಹಾಡುಗಳನ್ನು ರಾಜ್ ಕುಮಾರ್ ಅವರಿಗೆ ಹಿನ್ನೆಲೆ ಗಾಯಕರಾಗಿ ಹಾಡಿದ್ದಾರೆ. == ಪಿಬಿಎಸ್‌ರ ಜೀವನಚರಿತ್ರೆ == ಮಾಧುರ್ಯ ಸಾರ್ವಭೌಮ ಡಾ. ಪಿ. ಬಿ. ಶ್ರೀನಿವಾಸ್-ನಾದಯೋಗಿಯ ಸುನದಯಾನ (ಬರಹ:ಆರ್. ಶ್ರೀನಾಥ್ , ಪ್ರಕಾಶಕರು: ಸುರಭಿ ಪ್ರಕಾಶನ, ಬೆಂಗಳೂರು) ಎಂಬ ಶೀರ್ಷಿಕೆಯ ಜೀವನಚರಿತ್ರೆಯನ್ನು ಗಾಯಕರಾದ ಎಸ್. ಪಿ. ಬಾಲಸುಬ್ರಮಣ್ಯಂ, ವಾಣಿ ಜೈರಾಮ್ ಮತ್ತು ಕೆ. ಜೆ. ಯೇಸುದಾಸ್‌ರವರು ೨೦೧೩ರ ಮೇ ೭ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಡುಗಡೆ ಮಾಡಿದರು. ಈ ಕೃತಿಗೆ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಿರ್ಮಾಪಕ, ನಟ ಮತ್ತು ಗಾಯಕರಾದ ಕೆ.ಎಸ್.ಎಲ್. ಸ್ವಾಮೀ (ರವೀ) ಅವರ ಮುನ್ನುಡಿ ಮತ್ತು ಹಿರಿಯ ಪತ್ರಕರ್ತೆ ಮತ್ತು ಸಾಹಿತಿಯಾಗಿರುವ ಡಾ|| ವಿಜಯಾ ಅವರ ಬೆನ್ನುಡಿಯಿದೆ. ಅಮರ ಗಾಯಕನ ಕುರಿತಾದ ಈ ಮಹತ್ವದ ಕೃತಿಗೆ ೨೦೧೩ರ ಸಾಲಿನ "ಅತ್ಯುತ್ತಮ ಚಲನಚಿತ್ರ ಸಾಹಿತ್ಯಕೃತಿ" ರಾಜ್ಯ ಪ್ರಶಸ್ತಿ ಲಭಿಸಿದೆ. == ಪ್ರಶಸ್ತಿಗಳು == ರಾಜ್ಯದ ಮುಖ್ಯಮಂತ್ರಿಗಳು ಪ್ರದಾನ ಮಾಡುವ ಕರ್ನಾಟಕ ರಾಜ್ಯದ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ. ತಮಿಳುನಾಡು ರಾಜ್ಯದ ಗೌರವಾನ್ವಿತ ಕಲೈಮಾಮಣಿ ಪ್ರಶಸ್ತಿ. ಡಾ. ರಾಜ್‌ಕುಮಾರ್ ಅವರ ಕುಟುಂಬದಿಂದ ನೀಡಲಾಗುವ ಡಾ.ರಾಜ್ ಕುಮಾರ್ ಸೌಹಾರ್ದ ಪ್ರಶಸ್ತಿ. ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಸ್ಥಾಪಿಸಿದ, ಕರ್ನಾಟಕದ ರಾಜ್ಯಪಾಲರು ನೀಡುವ ಪ್ರತಿಷ್ಠಿತ ಕರ್ನಾಟಕ ನಾಡೋಜ ಪ್ರಶಸ್ತಿ. ತಮಿಳುನಾಡು ರಾಜ್ಯ ಚಲನಚಿತ್ರ ಗೌರವ ಪ್ರಶಸ್ತಿ-ಕಲೈವನಾರ್ ಪ್ರಶಸ್ತಿ(೨೦೦೨). == ಚಲನಚಿತ್ರಗಳ ಪಟ್ಟಿ == === ಪಿ.ಬಿ.ಶ್ರೀನಿವಾಸ್ ಹಾಡಿರುವ ಕೆಲವು ಚಿತ್ರಗಳು === === ಪಿ.ಬಿ.ಶ್ರೀನಿವಾಸ್ ಹಾಡಿರುವ ಕೆಲವು ಮಧುರ ಗೀತೆಗಳು === === ತಮಿಳು ಹಾಡುಗಳು === == ನಿಧನ == ಶ್ರೀನಿವಾಸ್ ಅವರು ಏಪ್ರಿಲ್ ೧೪, ೨೦೧೩ ರಂದು ತಮ್ಮ ೮೪ ನೇ ವಯಸ್ಸಿನಲ್ಲಿ ಚೆನ್ನೈನ ತಮ್ಮ ಮನೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಮರುದಿನ ಅವರ ಅಂತ್ಯಸಂಸ್ಕಾರ ಮಾಡಲಾಯಿತು. ಮೃತರು ಪತ್ನಿ ಹಾಗೂ ಮಕ್ಕಳನ್ನು ಅಗಲಿದರು. == ಉಲ್ಲೇಖಗಳು ==