ಪ್ರೋಟೊಜ಼ೋವ ಎಂದರೆ ಕೋಶೀಯ ಹಂತದಲ್ಲಿರುವ ಏಕಕೋಶ ಜೀವಿಗಳು ಅಥವಾ ಗುಂಪಾಗಿ, ಸ್ವತಂತ್ರವಾಗಿ ಬದುಕುವ ಏಕಕೋಶ ಜೀವಿಗಳು. == ವರ್ಗಗಳು == ಚಲನಾಂಗಗಳನ್ನು ಆಧರಿಸಿ ನಾಲ್ಕು ಮುಖ್ಯ ವರ್ಗಗಳಾಗಿ ವಿಂಗಡಿಸಲಾಗಿದೆ: ಕೋಶದ್ರವ್ಯದ ಮಿಥ್ಯಾಪಾದಗಳ ಮೂಲಕ ಚಲಿಸುವ ಜೀವಿಗಳು ಸಾರ್ಕೊಡೈನಾ ಅಥವಾ ರೈಜೊಪೊಡ. ಅತ್ಯಂತ ಸರಳಜೀವಿಗಳಾದ ಅಮೀಬಗಳು, ಸಮುದ್ರದಲ್ಲಿ ವಾಸಿಸುವ ಫೊರಾಮಿನಿಫೆರ, ರೇಡಿಯೊಲೇರಿಯ, ಹೀಲಿಯೋಜ಼ೋವಗಳು ರೈಜ಼ೊಪೊಡ ವರ್ಗಕ್ಕೆ ಸೇರುತ್ತವೆ. ಕೆಲವು ಸ್ತನಿಗಳಲ್ಲಿ ಭೇದಿ ಉಂಟುಮಾಡುವ ಎಂಟಮೀಬ ಕೂಡ ಇದೇ ವರ್ಗಕ್ಕೆ ಸೇರುತ್ತದೆ. ಉದ್ದ ಕಶಾಂಗಗಳ ಮೂಲಕ ಚಲಿಸುವವು ಮ್ಯಾಸ್ಟಿಗೊಫೊರ. ಸಿಹಿನೀರಿನಲ್ಲಿ ವಾಸಿಸುವ ಯುಗ್ಲಿನಾ, ಅನೇಕ ಸ್ತನಿ ಹಾಗೂ ಕಶೇರುಕಗಳಲ್ಲಿ ಹಾಗೂ ಮಾನವನಲ್ಲಿ ನಿದ್ರಾಜ್ವರವುಂಟುಮಾಡುವ ಟ್ರಿಪಾನೊಸೋಮಗಳು, ಭೇದಿ ಉಂಟುಮಾಡುವ ಗಯಾರ್ಡಿಯಗಳು, ಸಮುದ್ರದಲ್ಲಿ ಜೈವಿಕ ಪ್ರಜ್ವಲನೆಯ ಮೂಲಕ ಮಿನುಗುವ ಡೈನೊಫ್ಲಾಜಿಲ್ಲೆಟಗಳೂ ಮ್ಯಾಸ್ಟಿಗೊಫೊರ ವರ್ಗಕ್ಕೆ ಸೇರುತ್ತವೆ. ಸೀಲಿಯ ಅಥವಾ ಶಿಲಿಕಾಂಗಗಳ ಮೂಲಕ ಚಲಿಸುವವು ಸೀಲಿಯೋಫೊರ. ಶಿಲಿಕಾಂಗಗಳಿರುವ ಪ್ಯಾರಾಮೇಸಿಯಮ್, ವರ್ಟಿಸೆಲಗಳು ಸೀಲಿಯೋಫೊರ ವರ್ಗಕ್ಕೆ ಸೇರುತ್ತವೆ. ಮಿಥ್ಯಾಪಾದಗಳು ಅಥವಾ ಶಿಲಿಕಾಂಗಗಳೆರಡೂ ಇರುವ, ಚಲನೆಯಿಲ್ಲದ ಜೀವಿಗಳು ಸ್ಪೊರೊಜೋವ. ಮಲೇರಿಯ ಉಂಟುಮಾಡುವ ಪ್ಲಾಸ್ಮೋಡಿಯಮ್, ತಲೆಶೂಲೆ, ಉದರಶೂಲೆ ತರಿಸುವ ಅನೇಕ ಪ್ರಭೇದಗಳು, ರೇಷ್ಮೆ ಕೀಟಗಳಲ್ಲಿ ಉಂಟಾಗುವ ಪೆಬ್ರಿನ್ ರೋಗಕಾರಕ ನೋಸಿಮಾ ಮುಂತಾದವು ಸ್ಪೊರೊಜ಼ೋವ ವರ್ಗಕ್ಕೆ ಸೇರುತ್ತವೆ. == ದೇಹರಚನೆ == ಪ್ರೊಟೊಜ಼ೋವಾಗಳು ಸರಳ ಜೀವಿಗಳಾಗಿದ್ದು ಅವುಗಳ ಕೋಶದಲ್ಲಿ ಒಂದು ಅಥವಾ ಎರಡು ಕೋಶಕೇಂದ್ರಗಳು ಹಾಗೂ ಇನ್ನುಳಿದ ಕೋಶಾಂಗಗಳಿರುತ್ತವೆ. ಸಾಮಾನ್ಯವಾಗಿ ಇವುಗಳಲ್ಲಿ ವರ್ಣಕಗಳಿರುವುದಿಲ್ಲ. ಅನೇಕ ಪ್ರಭೇದಗಳಲ್ಲಿ ನಿರ್ಲಿಂಗ ಪ್ರಜನನವನ್ನು ಮಾತ್ರ ಕಾಣುತ್ತೇವೆ. ಕೆಲವು ಪ್ರಭೇದಗಳಲ್ಲಿ ಲೈಂಗಿಕ ಪ್ರಜನನವಿದ್ದರೂ ಅದರ ವಿಧಾನ ಸರಳವಾಗಿಯೇ ಇರುತ್ತದೆ. ಮಾನವನಲ್ಲಿ ಹಾಗೂ ಇತರ ಪ್ರಾಣಿಗಳಲ್ಲಿ ರೋಗ ಉಂಟುಮಾಡುವ ಸೂಕ್ಷ್ಮಜೀವಿಗಳನ್ನೊಳಗೊಂಡ ಈ ಗುಂಪು ಸೂಕ್ಷ್ಮಜೀವಿ ಪ್ರಪಂಚದಲ್ಲಿ ಮುಖ್ಯವಾದುದು. == ಉಲ್ಲೇಖಗಳು ==