ಫಿಜಿ ದಕ್ಷಿಣ ಶಾಂತಸಾಗರದಲ್ಲಿರುವ ಒಂದು ದ್ವೀಪರಾಷ್ಟ್ರ. ಇದು ಆಸ್ಟ್ರೇಲಿಯಾದ ಈಶಾನ್ಯಕ್ಕೆ ಇದೆ. ಸುಮಾರು ೩೨೨ ದ್ವೀಪಗಳಿಂದ ಕೂಡಿದ ಈ ದ್ವೀಪಸಮೂಹದಲ್ಲಿ ೧೦೬ ದ್ವೀಪಗಳಲ್ಲಿ ಜನವಸತಿಯಿದೆ. ವಿಟಿ ಲೇವು ಮತ್ತು ವನುವಾ ಲೇವು ಎಂಬ ಎರಡು ಮುಖ್ಯ ದ್ವೀಪಗಳಲ್ಲಿಯೇ ದೇಶದ ಜನಸಂಖ್ಯೆಯ ೮೭% ಭಾಗ ನಲೆಸಿದ್ದಾರೆ. ದೇಶದ ವಿಸ್ತೀರ್ಣ ೧೮,೨೭೪ ಚ.ಕಿ.ಮೀ. ಮತ್ತು ಜನಸಂಖ್ಯೆ ಸುಮಾರು ೮.೫ ಲಕ್ಷ. ರಾಷ್ಟ್ರದ ರಾಜಧಾನಿ ಸುವಾ. == ಇತಿಹಾಸ == ಕ್ರಿ.ಪೂ. ೧೦೦೦ರ ಸುಮಾರಿಗೆ ಇಲ್ಲಿ ಜನವಸತಿಯಿತ್ತೆಂಬುವುದರ ಬಗ್ಗೆ ಪುರಾವೆಗಳು ದೊರೆತಿವೆ. ನಂತರ ಆಗ್ನೇಯ ಏಷ್ಯಾದ ಜನರು ಇಲ್ಲಿ ನೆಲೆಯಾದರು. ಕ್ರಿ.ಶ. ೧೯ನೆಯ ಶತಮಾನದಲ್ಲಿ ಇಲ್ಲಿ ಯುರೋಪಿಯನ್ನರು ಶಾಶ್ವತವಾಗಿ ನೆಲೆಸಿದರು. ೧೮೭೪ರಲ್ಲಿ ಫಿಜಿ ಬ್ರಿಟಿಷರ ವಸಾಹತಾಯಿತು. ಇವರು ಭಾರತದಿಂದ ಗುತ್ತಿಗೆ ನೌಕರರನ್ನು ಕರೆತಂದರು. ೧೯೭೦ರಲ್ಲಿ ಫಿಜಿಯು ಸ್ವಾತಂತ್ರ್ಯ ಪಡೆಯಿತು. ರಾಷ್ಟ್ರದ ಜನತೆಯ ಸುಮಾರು ೫೪.೩% ಭಾಗದವರು ಪಾಲಿನೇಷ್ಯನ್ ಹಾಗೂ ಮೆಲನೇಷ್ಯನ್ ಸಂತತಿಯವರು. ೩೮.೧% ಪಾಲು ಮಂದಿ ಭಾರತೀಯ ಮೂಲದವರು. ರಾಜಕೀಯ ಅಸ್ಥಿರತೆಯ ಕಾರಣಗಳಿಂದಾಗಿ ಗಣನೀಯ ಪ್ರಮಾಣದ ಭಾರತೀಯ ಮೂಲದವರು ಫಿಜಿಯನ್ನು ತೊರೆಯುತ್ತಿದ್ದಾರೆ. ಈ ಎರಡೂ ಸಮುದಾಯಗಳ ನಡುವೆ ರಾಜಕೀಯ ಹಾಗೂ ಧಾರ್ಮಿಕ ಕಾರಣಗಳಿಂದಾಗಿ ತಿಕ್ಕಾಟ ನಡೆಯುತ್ತಲೇ ಇದೆ. ಪಾಲಿನೇಷ್ಯನ್ ಹಾಗೂ ಮೆಲಾನೇಷ್ಯನ್ ಜನತೆ ಬಹುಪಾಲು ಕ್ರೈಸ್ತಧರ್ಮೀಯರಾದರೆ ಭಾರತೀಯ ಮೂಲದವರಲ್ಲಿ ಹೆಚ್ಚಿನವರು ಹಿಂದೂಗಳು ಮತ್ತು ಮುಸ್ಲಿಮರು. ದಕ್ಷಿಣ ಭಾರತದ ಕೇರಳೀಯರ ಸಂಘಟನೆ ಯಾಗಿದೆ ಮಊನತ್ತುಲ್ ಇಸ್ಲಾಂ == ಆರ್ಥಿಕ ಸ್ಥಿತಿ == ಫಿಜಿಯು ವಿಪುಲವಾದ ಅರಣ್ಯ ಸಂಪತ್ತು , ಖನಿಜಗಳು ಹಾಗೂ ಮೀನುಗಾರಿಕೆಯನ್ನು ಹೊಂದಿ ಶಾಂತಸಾಗರದ ದ್ವೀಪರಾಷ್ಟ್ರಗಳ ಪೈಕಿ ಹೆಚ್ಚಿನ ಆರ್ಥಿಕಬಲವನ್ನು ಹೊಂದಿದೆ. ಕಬ್ಬು ದೇಶದ ಪ್ರಮುಖ ವಾಣಿಜ್ಯ ಬೆಳೆ. ಸಕ್ಕರೆ ಉದ್ಯಮ ನಾಡಿನ ಅತಿ ದೊಡ್ಡ ಕೈಗಾರಿಕೆ. ಉಳಿದಂತೆ ಪ್ರವಾಸೋದ್ಯಮ ದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ವಿದೇಶಿ ವಿನಿಮಯ ಒದಗಿಸುತ್ತಿದೆ. ಆದರೆ ಪ್ರಕ್ಷುಬ್ಧ ರಾಜಕೀಯ ವಾತಾವರಣದಿಂದಾಗಿ ಆರ್ಥಿಕ ಪ್ರಗತಿಯು ಕುಂಠಿತವಾಗಿದೆ.