ಸೊರೇಲಿಯಾ ಕೋರಿಲಿಪೋಲಿಯ ( ) ಎಂದು ಕರೆಯಲ್ಪಟ್ಟ ಬಾವಂಚಿಯು ಲೆಗ್ಯುಮಿನೇಸಿ ಕುಟುಂಬದ ಪೆಪಿಲಿಯೋನೇಸಿ ಎಂಬ ಉಪ ಕುಟುಂಬಕ್ಕೆ ಸೇರಿದೆ. ಸೊರೋಲಿನ್ ಮತ್ತು ಇಸೋಸೊರೇಲಿನ್ ಇದರಲ್ಲಿರುವ ಮುಖ್ಯ ರಾಸಾಯನಿಕ ವಸ್ತುಗಳು. ಸೊರೇಲಿಯಾ ಪ್ರಭೇಧವು ವಿಶ್ವದ ಉಷ್ಣ ಮತ್ತು ಸಮಶೀತೋಷ್ಣವಲಯಗಳಲ್ಲಿ ವ್ಯಾಪಿಸಿದೆ. ಈ ಪ್ರಭೇಧವು ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದ ದಕ್ಷಿಣ ಪೂರ್ವ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಬೀಜಗಳನ್ನು ವಾಣಿಜ್ಯಕ್ಕಾಗಿ ಸಂಗ್ರಹಿಸುತ್ತಾರೆ. ರಾಜಾಸ್ಥಾನ್, ಆಂಧ್ರ ಪ್ರದೇಶ, ಬಿಹಾರ ಮತ್ತು ಗುಜರಾತ್ ರಾಜ್ಯಗಳಲ್ಲಿಯೂ ಈ ಸಸ್ಯವನ್ನು ಬೆಳೆಸಲಾಗುತ್ತದೆ. ಇದಕ್ಕೆ ಸೂಕ್ಷ್ಮ ಜೀವಿನಿರೋಧಕ, ಭಕ್ಷನಿರೋಧಕ ಮತ್ತು ಕೀಟನಿರೋಧಕ ಗುಣಗಳಿವೆ. == ಸಸ್ಯವರ್ಣನೆ == ನೇರವಾಗಿ ಬೆಳೆಯುವ ವಾರ್ಷಿಕ ಪೊದರು. ಸ್ವಾಭಾವಿಕವಾಗಿ ೩೦-೬೦ ಸೆಂ. ಮೀ. ಎತ್ತರವಾಗಿದ್ದು, ಬೇಸಾಯಕ್ಕೆ ಒಳಪಟ್ಟಾಗ ೧೬೦ ಸೆಂ. ಮೀ. ಎತ್ತರಕ್ಕೆ ಬೆಳೆಯುತ್ತದೆ. ಗಿಡಗಳಿಗೆ ಹಲವಾರು ಕವಲುಗಳಿರುತ್ತವೆ. ಕಾಂಡ ಮತ್ತು ಕವಲುಗಳು ಸ್ವಷ್ಟವಾದ ಗ್ರಂಥಿಗಳನ್ನು ಮತ್ತು ಬಿಳಿ ರೋಮಗಳನ್ನು ಹೊಂದಿದೆ. ಇದು ಸಾಧಾರಣ ಪತ್ರಗಳನ್ನು ಬಿಡುತ್ತದೆ. ಎಲೆಯ ಹೂಗೊಂಚಲು ೧೦-೩೦ ಹೂಗಳನ್ನು ಒಳಕೊಡಿದೆ. ಪುಷ್ಪಪಾತ್ರೆ ೩-೪ ಮೀ. ಮೀ. ಇದ್ದು, ಹೊರಭಾಗದಲ್ಲಿ ರೋಮಗಳಿರುತ್ತದೆ. ಹೂದಳವು ಹಳದಿ- ನೇರಳೆ ಬಣ್ಣವಾಗಿದೆ. ಅಂಡಾಶಯವು ಸಣ್ಣದಾಗಿದ್ದು, ಏಕ ಬೀಜದ ಕಾಯಿಗಳನ್ನು ಬಿಡುತ್ತದೆ. ಕಾಯಿಗಳು ಸೀಳುವುದಿಲ್ಲ. ಬೀಜವು ಸಿಪ್ಪೆಯ ಒಳಗೋಡೆಗೆ ಅಂಟಿಕೊಂಡಿರುತ್ತದೆ. ಬಾವಂಚಿಯು ಸ್ವಕೀಯ ಪರಾಗ ಸ್ಪರ್ಷ ಹೊಂದುವ ಬೆಳೆ. ೧೭-೧೮ ದಿನಲ್ಲಿ ಮೊದಲ ಹೂಮೊಗ್ಗುಗಳು ಕಾಣಿಸಿಕೊಳ್ಳುತ್ತವೆ. ಹೂಗಳು ಬೆಳಗಿನ ವೇಳೆ ಮತ್ತು ಸಂಜೆಯ ವೇಳೆಯಲ್ಲಿ ಅರಳುತ್ತದೆ. ಇದರ ವರ್ಣ ತಂತುಗಳ ಸಂಖ್ಯೆ ೨n=೨೦ ಮತ್ತು ೨೨. == ಬೇಸಾಯ ಕ್ರಮಗಳು == ಮಣ್ಣು ಮರಳುಮಿಶ್ರಿತ ಗೋಡಿನಿಂದ ಹಿಡಿದು ಹತ್ತಿ ಬೆಳೆಯುವ ಕಪ್ಪು ಮಣ್ಣಿನವರೆಗೆ ವಿವಿಧ ಮಣ್ಣುಗಳಲ್ಲಿ ಬೆಳೆಸಲಾಗುತ್ತದೆ. ಫಲವತ್ತಾದ ಮರಳು ಮಿಶ್ರಿತ ಗೋಡುಮಣ್ಣು ಸೂಕ್ತವಾಗಿದ್ದೂ, ರಸಸಾರ ಹೊಂದಿರುವ ಮಣ್ಣಿನಲ್ಲಿಯೂ ಬೆಳೆಯುತ್ತದೆ. ಆಮ್ಲ ಮತ್ತು ಕ್ಷಾರತೆಯುಳ್ಳ ಮಣ್ಣುಗಳು ಸೂಕ್ತವಲ್ಲ. ಹವಾಗುಣ ಈ ಬೆಳೆಗೆ ಒಣ ಹವಾಗುಣ ಸೂಕ್ತವಾಗಿದೆ. ಸಾಮಾನ್ಯವಾಗಿ ಮುಂಗಾರಿನಲ್ಲಿ ಬೆಳೆಸಲಾಗುತ್ತದೆ. ಇದು ಗಡುತರ ಸಸ್ಯವಾಗಿದ್ದು, ಕಡಿಮೆಯಿಂದ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಬೆಳೆಯುತ್ತದೆ. === ಸಸ್ಯಾಭಿವೃದ್ಧಿ === ಬಾವಂಚಿಯನ್ನು ಬೀಜಗಳಿಂದ ವೃದ್ಧಿಮಾಡಲಾಗುತ್ತದೆ. ಮೊಳಕೆಯ ಪ್ರಮಾಣ ಅತೀ ಕಡಿಮೆ ಇರುತ್ತದೆ (ಶೇ. ೫-೭). ಮೊಳಕೆಯ ಪ್ರಮಾಣವನ್ನು ಹೆಚ್ಚಿಸಲು ಬೀಜಗಳನ್ನು ಶೇ. ೧ರ ಸಲ್ಪ್ಯುರಿಕ್ ಆಮ್ಲದಲ್ಲಿ ಒಂದು ನಿಮಿಷದ ಕಾಲ ಇಡಬೇಕು. ಅವುಗಳನ್ನು ಬಿತ್ತುವ ಮೊದಲು ಸಲ್ಫ್ಯೂರಿಕ್ ಆಮ್ಲ ಹೋಗುವಂತೆ ನೀರಿನಲ್ಲಿ ತೊಳೆಯಬೇಕು. === ಭೂಮಿಸಿದ್ಧತೆ === ಮುಂಗಾರಿನ ಮೊದಲು ಭೂಮಿಯನ್ನು ಲಘುವಾಗಿ ಉಳುಮೆಮಾಡಬೇಕು. ನಂತರ ಎರಡು ಬಾರಿ ಕುಂಟೆ ಹೊಡೆದು, ಕಳೆ ಕೂಳೆಗಳನ್ನು ಆರಿಸಿ ಸಿದ್ಧಗೊಳಿಸಬೇಕು. ನಂತರ ನಿರ್ವಾಹಣೆಗೆ ಅನುಕೂಲವಾಗುವಂತೆ ಭೂಮಿಯನ್ನು ಸಣ್ಣ ಸಣ್ಣ ಮಡಿಗಳನ್ನು ಹಾಗೂ ನೀರು ಕಾಲುವೆಗಳನ್ನು ಮಾಡಬೇಕು. === ಬಿತ್ತನೆ === ಬೀಜಗಳನ್ನು ೪೫-೬೦ ಸೆಂ. ಮೀ. ಅಂತರದ ಸಾಲುಗಳಲ್ಲಿ ಗಿಡದಿಂದ ಗಿಡಕ್ಕೆ ೩೦-೪೫ ಸೆಂ. ಮೀ. ಅಂತರವಿರುವಂತೆ ಬಿತ್ತಬೇಕು. ಒಂದು ಹೆಕ್ಟೇರ್ ಪ್ರದೇಶಕ್ಕೆ ೭ಕಿ. ಗ್ರಾಂ. ಬೀಜಗಳು ಬೇಕಾಗುತ್ತದೆ. === ಗೊಬ್ಬರ === ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳನ್ನು ಬಳಸಲಾಗುತ್ತದೆ. ಹೆಕ್ಟೇರಿಗೆ ಮೂಲ ಗೊಬ್ಬರವಾಗಿ ೨೦ ಟನ್ ಕೊಟ್ಟಿಗೆ ಗೊಬ್ಬರ ಕೊಡುವುದರಿಂದ ಪ್ರಾರಂಭಿಕ ಬೆಳವಣಿಗೆ ಮತ್ತು ಬೀಜದ ಇಳುವರಿ ಹೆಚ್ಚಾಗುತ್ತದೆ. === ನೀರಾವರಿ === ಇದಕ್ಕೆ ನೀರಿನ ಅವಶ್ಯಕತೆ ಕಡಿಮೆ ಇದೆ. ಮಳೆಗಾಲ ಕಳೆದ ಮೇಲೆ(ಜೂನ್- ಸೆಪ್ಟೆಂಬರ್) ೧೫ ದಿನಗಳಿಗೊಮ್ಮೆ ನೀರನ್ನು ಕೊಡಬೇಕು. ಬೆಳೆಯ ಅವಧಿಯಲ್ಲಿ ೬-೮ ಬಾರಿ ನೀರನ್ನು ಹಾಯಿಸಿದರೆ ಸಾಕು. === ಕಳೆ ಹತೋಟಿ ಮತ್ತು ಬೇಸಾಯ === ಬೆಳೆಯಿರುವ ಪ್ರದೇಶವು ಕಳೆ ರಹಿತವಾಗಿರಬೇಕು. ಬೆಳವಣಿಗೆಯ ಪ್ರಾರಂಭದಲ್ಲಿ ೨- ೩ ಬಾರಿ ಕಳೆ ತೆಗೆಯಬೇಕು. === ಕೀಟ ಮತ್ತು ರೋಗಗಳು === ಇದು ಗಡುತರವಾದ ಸಸ್ಯವಾದ್ದರಿಂದ ಕೀಟ ಮತ್ತು ರೋಗಗಳ ಸಮಸ್ಯೆ ಕಡಿಮೆ. ಆದರೆ ಲೆಪೆಡಾಪ್ಟೆರ ವರ್ಗದ ಕೀಟಗಳಾದ ಎಲೆ ಸುರುಳಿ ಹುಳು (ಆರ್ಕಿಪ್ಸ್ ಮೈಕ್ಯಾಸಿಯಾನ), ಕಂಬಳಿ ಹುಳುಗಳು ಹಾನಿ ಮಾಡುತ್ತವೆ. ಈ ಕೀಟಗಳನ್ನು ಶೇ. ೦.೧೫ ರ ಪ್ರಮಾಣದ ಮಾನೊಕ್ರೋಟೋಫಾಸ್ ಸಿಂಪಡಿಸಿ ನಿಯಂತ್ರಿಸಬಹುದು. ಈ ಸಸ್ಯದಲ್ಲಿ ಕಾಣುವ ಮುಖ್ಯ ರೋಗ- ಬೂದಿ ರೋಗ. ಇದನ್ನು ನಿಯಂತ್ರಿಸಲು ನೀರಿನಲ್ಲಿ ಕರಗುವ ಗಂಧಕವನ್ನು(ಶೇ. ೦.೩) ೨-೩ ಬಾರಿ ನಿಗದಿತ ಅಂತರದಲ್ಲಿ ಸಿಂಪಡಿಸಬೇಕು. === ಕೊಯ್ಲು ಮತ್ತು ಇಳುವರಿ === ಬಾವಂಚಿಯು ೭-೮ ತಿಂಗಳ ಬೆಳೆ. ಕೊಯ್ಲಿನ ಸಮಯದಲ್ಲಿ ಗಿಡದಲ್ಲಿ ಬೀಜಗಳು ನಿರಂತರವಾಗಿ ಬಲಿತು ಕೊಯ್ಲಿಗೆ ಬರುತ್ತವೆ. ಸಾಮನ್ಯವಾಗಿ ಡಿಸೆಂಬರ್ ಮಧ್ಯ ಭಾಗದಲ್ಲಿ ಬೆಳೆ ಕೊಯ್ಲಿಗೆ ಬರುತ್ತದೆ. ಕೊಯ್ಲು ಕಾಲದಲ್ಲಿ ೪-೫ ಬಾರಿ ಕಾಯಿಗಳನ್ನು ಬಿಡಿಸಬಹುದು. ಬೀಜಗಳು ಬಲಿತಾಗ ಕಂದು- ಕಪ್ಪು ಬಣ್ಣಕ್ಕೆ ತಿರುಗಿ ಪರಿಮಳವನ್ನು ಬೀರುತ್ತದೆ. ಪ್ರತೀ ಹೆಕ್ಟೇರ್ ಪ್ರದೇಶದ ಬೆಳೆಯಿಂದ ೨ ಟನ್ ಗಳಷ್ಟು ಒಣಗಿದ ಬೀಜಗಳ ಇರುವರಿ ದೊರೆಯುತ್ತದೆ. == ಬಾಹ್ಯಸಂಪರ್ಕಗಳು == ://../. == ಉಲ್ಲೇಖಗಳು ==