ಬಿ. ಎಮ್. ಹೆಗ್ಡೆ (ಬೆಳ್ಳೆ ಮೋನಪ್ಪ ಹೆಗ್ಡೆ) ಇವರು ಖ್ಯಾತ ಹೃದ್ರೋಗ ತಜ್ಞರಲ್ಲೊಬ್ಬರು. ಇವರು ೧೮ ಆಗಸ್ಟ್ ೧೯೩೮ ರಲ್ಲಿ ಜನಿಸಿದರು. ವೈದ್ಯರಾಗಿ, ಅಧ್ಯಾಪಕರಾಗಿ, ಪರೀಕ್ಷಕರಾಗಿ, ಸಂಶೋಧಕರಾಗಿ, ಬರಹಗಾರರಾಗಿ, ಲೇಖಕರಾಗಿ, ಶಿಕ್ಷಣ ತಜ್ಞರಾಗಿ, ಉಪಕುಲಪತಿಗಳಾಗಿ, ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಡಾ. ಬಿ.ಸಿ.ರಾಯ್ ಪ್ರಶಸ್ತಿಯನ್ನು ೧೯೯೯ರಲ್ಲಿ ಪಡೆದ ಹೆಗ್ಡೆಯವರಿಗೆ ಭಾರತ ಸರ್ಕಾರವು ೨೦೧೦ ರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ. ಮಣಿಪಾಲ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿಗಳಾದ ಹೆಗ್ಡೆಯವರು ಪ್ರಸ್ತುತ ಭಾರತೀಯ ವಿದ್ಯಾಭವನ ಮಂಗಳೂರು ಘಟಕದ ಮುಖ್ಯಸ್ಥರಾಗಿರುವರು. == ಜನನ == ಹೆಗ್ಡೆಯವರು ಆಗಸ್ಟ್ ೧೮, ೧೯೩೮ ರಂದು ಉಡುಪಿಯ ಬೆಳ್ಳೆ ಗ್ರಾಮದಲ್ಲಿ ಜನಿಸಿದರು. == ವಿದ್ಯಾಭ್ಯಾಸ == ಹಿರಿಯಡ್ಕದ ಬೋರ್ಡ್ ಹೈಸ್ಕೂಲ್‍ನಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಮುಗಿಸಿದರು. ಉಡುಪಿಯ ಎಂ ಜಿ ಎಮ್ ಕಾಲೇಜ್ ನಲ್ಲಿ ಇಂಟರಮೀಡಿಯೇಟ್ ಶಿಕ್ಷಣವನ್ನು ಮುಗಿಸಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ವೈದ್ಯ (ಎಂಬಿಬಿಎಸ್) ಪದವಿಯನ್ನು ೧೯೬೦ ರಲ್ಲಿ ಪಡೆದರು. ಲಕ್ನೋ ವಿಶ್ವವಿದ್ಯಾಲಯದಲ್ಲಿ ಎಂ.ಡಿ.ಪದವಿ. ಹೆಗ್ಡೆಯವರು ಉನ್ನತ ಶಿಕ್ಷಣಕ್ಕಾಗಿ ಲಂಡನ್ನಿಗೆ ತೆರಳಿ, ಅಲ್ಲಿರುವ ಎಲ್ಲಾ ರಾಯಲ್ ಕಾಲೇಜುಗಳ ಫೆಲೋ ಆದ ಪ್ರಪ್ರಥಮ ಕನ್ನಡಿಗ ಹಾಗೂ ಭಾರತೀಯನೆನಿಸಿಕೊಂಡರು. ಇವರು , , , , ಮುಂತಾದ ಅನೇಕ ವಿದೇಶಿ ಪದವಿಗಳನ್ನು ಪಡೆದಿರುವರು. == ವೃತ್ತಿಜೀವನ == ಪ್ರೊ. ಬೆರ್ನಾರ್ಡ್ ಲೋವ್ನ್ ನಂತಹ ನೋಬೆಲ್ ಪಾರಿತೋಷಕ ಪುರಸ್ಕೃತ ವೈದ್ಯರ ಹತ್ತಿರ ಕೆಲಸ ಮಾಡಿದ ಹೆಗ್ಡೆಯವರು ಲಂಡನ್ನಿನ ಕಾಲೇಜುಗಳ ಎಂ.ಆರ್.ಸಿ.ಪಿ. ಪರೀಕ್ಷಕರಾಗಿ ಆಯ್ಕೆಯಾದ ಪ್ರಥಮ ಭಾರತೀಯರಾಗಿರುವರು. ಸ್ನಾತಕ, ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ ಪರೀಕ್ಷಕರಾಗಿ ದಕ್ಷಿಣ ಅಮೇರಿಕ ಒಂದನ್ನು ಬಿಟ್ಟು ಜಗತ್ತಿನ ಉಳಿದ ಎಲ್ಲಾ ಖಂಡಗಳ ಪ್ರಮುಖ ವಿ.ವಿ.ಗಳಿಗೆ ಹೋಗಿರುವರು. ೧೯೮೨ ರಿಂದ ಲಂಡನ್ ವಿ.ವಿ ಯ ಶಾಶ್ವತ ಸಂದರ್ಶನ ಪ್ರಾಧ್ಯಪಕರಾಗಿ ಕೆಲಸ ಮಾಡುತ್ತಿರುವ ಗಣ್ಯರು, ಕಸ್ತೂರಬಾ ವೈದ್ಯಕೀಯ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ, ಪ್ರಾಚಾರ್ಯರಾಗಿ, ಡೀನ್ ಆಗಿದ್ದರು. ಮಣಿಪಾಲ, ಹೊಸದೆಹಲಿಗಳ ವೈದ್ಯಕೀಯ ಕಾಲೇಜುಗಳ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇಂಗ್ಲೆಂಡಿನಲ್ಲಿ 1988ರಿಂದ ಪದವಿ ಪರೀಕ್ಷೆಯ ಪರೀಕ್ಷಿತರಾಗಿ ನೇಮಕಗೊಂಡಿರುವ ಇವರು ಭಾರತದಿಂದ ಆಯ್ಕೆಯಾದ ಅಪರೂಪದ ಜ್ಞಾನನಿಧಿ. ಕೊನೆಗೆ ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆಯ (ಮಾಹೆ) ಉಪಕುಲಪತಿಗಳಾಗಿ ಸೇವೆ ಸಲ್ಲಿಸಿ ಈಗ ಮಂಗಳೂರಿನಲ್ಲಿ ನಿವೃತ್ತ ಜೀವನವನ್ನು ನಡೆಸುತ್ತಿರುವರು. == ಇತರ ಮಾಹಿತಿಗಳು == ಡಾ.ಬಿ.ಎಂ.ಹೆಗ್ಡೆಯವರು ಆಸ್ತಿಕರು. ಭಾರತೀಯ ವಿದ್ಯಾಭವನದೊಡನೆ ನಿಕಟ ಸಂಪರ್ಕ ಹೊಂದಿರುವ ಡಾ.ಬಿ.ಎಂ.ಹೆಗ್ಡೆಯವರು ಆಯುರ್ವೇದದ ಸತ್ವವನ್ನು ಮನಗಂಡು ಲಂಡನ್ನಿನ ಥೇಮ್ಸ್ ವ್ಯಾಲಿ ವಿ.ವಿಯ ಆಶ್ರಯದಲ್ಲಿ ಒಂದು ಆಯುರ್ವೇದ ವೈದ್ಯಕೀಯ ಕಾಲೇಜು ಆರಂಭವಾಗಲು ಕಾರಣರಾಗಿರುವರು. ಇದೇ ರೀತಿಯ ಮತ್ತೊಂದು ಕಾಲೇಜು ಜಪಾನ್‌ನಲ್ಲಿ ಆರಂಭವಾಗಿದೆ. ಭಾರತದ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕುವೈತ್ ವಿಶ್ವವಿದ್ಯಾಲಯದ ಸಂಶೋಧಕ ರೆಫ್ರಿಯಾಗಿದ್ದಾರೆ. ಇವರು ಅಸಂಖ್ಯಾತ ವೈದ್ಯಕೀಯ ಲೇಖನಗಳನ್ನು ಬರೆದಿದ್ದಾರೆ. ವೈದ್ಯಲೋಕ ಆರೋಗ್ಯ ಮಾಸಪತ್ರಿಕೆಯ ಸಂಪಾದಕರಾಗಿದ್ದಾರೆ. ಅಲ್ಲದೇ ಅಮೆರಿಕಾ, ಇಂಗ್ಲೆಂಡ್, ಜರ್ಮನಿ, ಚೈನಾ, ಕುವೈತ್ ಮುಂತಾದೆಡೆಗಳಿಂದ ಪ್ರಕಟಗೊಳ್ಳುವ ಪತ್ರಿಕೆಗಳಲ್ಲೂ ಇವರು ರಚಿಸಿದ ಸಂಶೋಧನಾ ಲೇಖನಗಳು ಪ್ರಕಟಗೊಂಡಿವೆ. ನಿಷ್ಠೂರವಾದಿ: ಡಾ.ಬಿ.ಎಂ.ಹೆಗ್ಡೆ ಅವರು ಯಾವುದೇ ರೀತಿಯ ಸಂಕೋಚವಿಲ್ಲದೆ ವೈದ್ಯಕೀಯ ರಂಗದಲ್ಲಿರುವ ಹುಳುಕುಗಳನ್ನು ಎತ್ತಿ ತೋರಿಸಬಲ್ಲ ಸತ್ಯಪ್ರಿಯ ನಿಷ್ಠೂರವಾದಿಗಳು. ಆಧುನಿಕ ವೈದ್ಯಕೀಯದಲ್ಲಿರುವ ಅನಗತ್ಯ ತಪಾಸಣೆಗಳ, ಅನಗತ್ಯ ಔಷಧಗಳ ಹಾಗೂ ಅನಗತ್ಯ ಚಿಕಿತ್ಸೆಗಳ ಬಗ್ಗೆ ಉಗ್ರವಾಗಿ ಖಂಡಿಸುವ ಪ್ರವೃತ್ತಿ ರಕ್ತಗತವಾಗಿ ಬಂದಿದೆ. ಹಾಗಾಗಿ ಇವರಿಗೆ ಸಾಕಷ್ಟು ಹಿತಶತ್ರುಗಳಿರುವರು. ಅನೇಕ ವೈದ್ಯಕೀಯ ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವ ಗಣ್ಯರು ಅಂತಾರಾಷ್ಟ್ರೀಯ ವೈದ್ಯಕೀಯ ನಿಯತಕಾಲಿಕಗಳ (ಭಾರತ, ಬ್ರಿಟನ್, ಅಮೆರಿಕ, ಜರ್ಮನಿ, ಕುವೈಟ್, ಚೈನಾ) ಸಂಪಾದಕ ಮಂಡಳಿಯಲ್ಲಿ ಹಾಗೂ ಸಲಹಾಮಂಡಳಿಯಲ್ಲಿರುವರು ಹಾಗೂ ಪ್ರತಿಷ್ಠಿತ ಬ್ರಿಟಿಶ್ ಮೆಡಿಕಲ್ ಜರ್ನಲ್ (ಬಿ.ಎಂ.ಜೆ) ‘ರೆಫ್ರಿ‘ಯಾಗಿಯೂ ಕೆಲಸ ಮಾಡುತ್ತಿರುವರು. == ಬರಹಗಾರ ಮತ್ತು ವಾಗ್ಮಿ == ಡಾ. ಬಿ.ಎಂ.ಹೆಗ್ಡೆ ಅವರು ಭಾಷಣಕಾರರು. ಇದುವರೆಗೆ ಚಿನ್ನದ ಪದಕಗಳನ್ನು ಒಳಗೊಂಡ ೮೦ ಜಾಗತಿಕ ದತ್ತಿ ಭಾಷಣಗಳನ್ನು ನೀಡಿರುವರು. ಆಕಾಶವಾಣಿ, ದೂರದರ್ಶನ, ಜ಼ೀ ಟಿವಿ ಲಂಡನ್, ಬಿಬಿಸಿ ಮುಂತಾದ ವಾಹಿನಿಗಳ ಮೂಲಕ ಆರೋಗ್ಯ ಕಾರ್ಯಕ್ರಮಗಳನ್ನು ನೀಡಿರುವರು. ಇಂಗ್ಲಿಷಿನಲ್ಲಿ ಹಾಗೂ ಕನ್ನಡದಲ್ಲಿ ೩೦ ಕ್ಕೂ ಹೆಚ್ಚಿನ ಪುಸ್ತಕಗಳನ್ನು ಬರೆದಿರುವರು. == ಪ್ರಶಸ್ತಿಗಳು == ಬೆಳ್ಳೆ ಮೋನಪ್ಪ ಹೆಗ್ಡೆ ಅವರಿಗೆ ಲಭಿಸಿರುವ ಕೆಲವು ಪ್ರಮುಖ ಪ್ರಶಸ್ತಿಗಳು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ: ೧೯೯೭ ಪ್ರೆಡ್ಸ್ ಆಪ್ ಇಂಡಿಯಾ ಡಾ.ಬಿ.ಸಿ.ರಾಯ್ ರಾಷ್ಟ್ರೀಯ ಪ್ರಶಸ್ತಿ (ಅತ್ಯುತ್ತಮ ಶಿಕ್ಷಕ) ೧೯೯೯ ಜಗದೀಶ್ ಚಂದ್ರ ಬೋಸ್ ಪ್ರಶಸ್ತಿ ಪದ್ಮಭೂಷಣ ೨೦೧೦ ಪದ್ಮ ವಿಭೂಷಣ ೨೦೨೧ == ಉಲ್ಲೇಖಗಳು ==