ಬಿ.ಎಸ್.ಪಾಟೀಲ(ಬಸನಗೌಡ ಸೋಮನಗೌಡ ಪಾಟೀಲ)(ಮನಗೂಳಿ)ರು ಕಾಂಗ್ರೇಸಿನ ಹಿರಿಯ ರಾಜಕಾರಿಣಿ ಮತ್ತು ಮಾಜಿ ಸಚಿವರು. ಇವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿ ಗ್ರಾಮದವರು. == ರಾಜಕೀಯ == ಕಾಂಗ್ರೇಸಿನ ಬಿ.ಎಸ್.ಪಾಟೀಲ(ಮನಗೂಳಿ)ರು ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದಿಂದ 6 ಬಾರಿ ಆಯ್ಕೆಯಾಗಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದರು. ಬಿ.ಎಸ್.ಪಾಟೀಲ(ಮನಗೂಳಿ)ರು ವಿಜಯಪುರ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಬಾರಿ (6 ಬಾರಿ) ಆಯ್ಕೆಯಾಗಿ ದಾಖಲೆ ಹೊಂದಿದ್ದಾರೆ. ಪಾಟೀಲರು ೨೦೦೪ರಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಿತರಾದರು. == ನಿಧನ == ಬಿ.ಎಸ್.ಪಾಟೀಲ(ಮನಗೂಳಿ)ರು 16ನೇ ನವೆಂಬರ್ 2005ರಲ್ಲಿ 74ನೇ ವಯಸ್ಸಿನಲ್ಲಿ ನಿಧನರಾದರು. == ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ == ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಬಸವನ ಬಾಗೇವಾಡಿ ಮತಕ್ಷೇತ್ರ(2018)ದಲ್ಲಿ 1,01,345 ಪುರುಷರು, 95,044 ಮಹಿಳೆಯರು ಸೇರಿ ಒಟ್ಟು 1,96,389 ಮತದಾರರಿದ್ದಾರೆ. ಕ್ಷೇತ್ರದ ಇತಿಹಾಸ ಬಸವನ ಬಾಗೇವಾಡಿ ಎಂದೊಡನೆ ನೆನಪಾಗುವುದು ವಚನ ಕ್ರಾಂತಿಯ ಹರಿಕಾರ ಬಸವಣ್ಣ. ಅವರು ಹುಟ್ಟಿದ, ಲಿಂಗೈಕ್ಯರಾದ ಸ್ಥಳವಾಗಿರುವುದರಿಂದ ಇದು ಪುಣ್ಯಕ್ಷೇತ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ. 12 ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ, ಸಾಮಾಜಿಕ ಜಾಗೃತಿಗೆ ಮುನ್ನುಡಿ ಬರೆದ ಬಸವಣ್ಣನವರು ಲಿಂಗೈಕ್ಯರಾದ ಕೂಡಲಸಂಗಮ ವಿಜಯಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರಗಳಲ್ಲೊಂದು. ಕೃಷ್ಣಾ ನದಿಗೆ ಕಟ್ಟಲಾದ ಆಲಮಟ್ಟಿ ಜಲಾಶಯ ಏಷ್ಯಾ ಖಂಡದಲ್ಲೇ ಅತೀ ದೊಡ್ಡದು ಎಂಬ ಖ್ಯಾತಿ ಗಳಿಸಿದೆ. ಆಲಮಟ್ಟಿ ಜಲಾಶಯದಿಂದಾಗಿ ಜಮೀನು, ಮನೆ ಕಳೆದುಕೊಂಡವರು ನೂರಾರು ಜನ. ಇಲ್ಲಿನ ಇಳಕಲ್ಲು ಸೀರೆ ಮತ್ತು ಖಾದಿ ಬಟ್ಟೆ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಲಂಬಾಣಿ ಜನರನ್ನೂ ಕಾಣಬಹುದು. ಸಮಾನತೆಯ ಹರಿಹಾರ, ಜಗತ್ತಿನ ಮೂಢನಂಬಿಕೆ ತೊಡೆಯಲು ವೈಚಾರಿಕ ಪ್ರಜ್ಞೆಯ ಬೆಳಕು ನೀಡಿದ ಬಸವೇಶ್ವರ ಜನ್ಮಭೂಮಿ ಬಸವನಬಾಗೇವಾಡಿ ಕ್ಷೇತ್ರ ಜಿಲ್ಲೆಯ ಇತರೆ ಕ್ಷೇತ್ರಗಳಂತೆ ಅಭಿವೃದ್ಧಿ ಹೀನ ತಾಲೂಕುಗಳಲ್ಲಿ ಒಂದು. ಕೃಷ್ಣೆಯನ್ನೇ ಒಡಲಲ್ಲಿ ಇರಿಸಿಕೊಂಡರೂ ಕ್ಷೇತ್ರದಲ್ಲಿ ಕುಡಿಯುವ ನೀರಿನ ದಾಹ ಇದ್ದೇ ಇದೆ. ಕಾಂಗ್ರೆಸ್‌ ಭದ್ರಕೋಟೆ ಎನಿಸಿರುವ ಈ ನೆಲವನ್ನು ಮತ್ತೆ ಸ್ವಾಧೀನಕ್ಕೆ ಪಡೆಯಲು ಬಿಜೆಪಿ ಹವಣಿಸುತ್ತಿದ್ದರೆ, ಒಂದು ಬಾರಿಯಾದರೂ ಖಾತೆ ತೆರೆಯಲು ಜೆಡಿಸ್‌ ಪೈಪೋಟಿ ನಡೆಸಿದೆ. ನೀರಾವರಿ ಈ ಕ್ಷೇತ್ರದ ಬಹು ದೊಡ್ಡ ಬಲವಾದರೆ, ನೀರಾವರಿ ಹಾಗೂ ವಿದ್ಯುತ್‌ ಯೋಜನೆಗಳಿಗೆ ಭೂಮಿ ಕಳೆದುಕೊಂಡು ಸಂತ್ರಸ್ತರ ಸಮಸ್ಯೆಯೇ ಇಲ್ಲಿನ ಬಲಹೀನತೆ. ಕೃಷ್ಣಾ ನದಿಗೆ ನಿರ್ಮಿಸಿರುವ ಲಾಲಬಹದ್ದೂರ ಶಾಸ್ತ್ರಿ ಜಲಾಶಯ ಇರುವುದು ಇದೇ ಕ್ಷೇತ್ರದ ಆಲಮಟ್ಟಿಯಲ್ಲಿ. ಸಂತ್ರಸ್ತರ ಪುನರ್ವಸತಿ ಕೇಂದ್ರಗಳು ಅಭಿವೃದ್ಧಿಗೆ ಕಾಯುತ್ತಿವೆ. ಈಚೆಗಷ್ಟೇ ತಲೆ ಎತ್ತಿರುವ ದೇಶಕ್ಕೆ ಬೆಳಕು ನೀಡುವ ಮಹತ್ವಾಕಾಂಕ್ಷೆಯ ಎನ್‌ಟಿಪಿಸಿ ಕೂಡಗಿ ಯೋಜನೆ ಕೂಡ ಈ ಕ್ಷೇತ್ರದಲ್ಲೇ ಇದೆ. ಪರಿಸರಕ್ಕೆ ಹಾನಿ ಎಂಬ ಕಾರಣಕ್ಕೆ ಈ ಯೋಜನೆ ವಿರೋಧಿಸಿ ರೈತರು ಗುಂಡೇಟು ತಿಂದಿದ್ದು, ನೂರಾರು ರೈತರು ಜೈಲು ಪಾಲಾಗಿ ಕೋರ್ಟ್‌ ಅಲೆಯುತ್ತಿದ್ದರು. ಈಚೆಗಷ್ಟೇ ಈ ರೈತರ ಮೇಲಿನ ಮೊಕದ್ದಮೆ ಹಿಂಪಡೆಯುವ ಮೂಲಕ ಸರ್ಕಾರ ರೈತರಿಗೆ ಸಂಕಷ್ಟದಿಂದ ಮುಕ್ತಿ ನೀಡಿದೆ. ಇಂಥ ನೆಲಕ್ಕೆ ಒಂದೂವರೆ ದಶಕದ ಹಿಂದೆ ಕಾಲಿಟ್ಟವರು ತಿಕೋಟಾ ಕ್ಷೇತ್ರದಲ್ಲಿ ಜನತಾದಳ ಹಾಗೂ ಬಿಜೆಪಿಯಿಂದ ಎರಡು ಬಾರಿ ಶಾಸಕರಾಗಿದ್ದ ಶಿವಾನಂದ ಪಾಟೀಲ. ಈ ಕ್ಷೇತ್ರದಿಂದಲೂ ಮೂರು ಬಾರಿ ಶಾಸಕರಾಗಿರುವ ಶಿವಾನಂದ ಪಾಟೀಲ ಅವರು ಐದು ಬಾರಿ ಶಾಸಕರಾಗಿ ಸಚಿವರಾಗಿದ್ದಾರೆ.ಇದೇ ಕ್ಷೇತ್ರದಿಂದ ಸೋಮನಗೌಡ(ಅಪ್ಪು) ಪಾಟೀಲ ಅವರ ತಂದೆ ಬಿ.ಎಸ್‌.ಪಾಟೀಲ(ಮನಗೂಳಿ) ಅವರನ್ನು 6 ಬಾರಿ ಆಯ್ಕೆ ಮಾಡಿದ್ದ ಕ್ಷೇತ್ರದ ಮತದಾರರು, ಅವರು ಸಚಿವರಾಗಲು ನೆರವಾಗಿದ್ದರು. ಮಾಜಿ ಸಿಎಂ ಬಂಗಾರಪ್ಪ ಅವರ ಕೆಸಿಪಿ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ಸಂಗಪ್ಪ ಕಲ್ಲಪ್ಪ ಬೆಳ್ಳುಬ್ಬಿ ಬಿಜೆಪಿ ಸೇರುವ ಮೂಲಕ ಬಸವನಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್‌ ಭದ್ರಕೋಟೆ ಛಿದ್ರಗೊಳಿಸಿ ಎರಡು ಬಾರಿ ಗೆದ್ದವರು. ತಮ್ಮ ಮೂಲಕ ಬಿಜೆಪಿ ಖಾತೆ ತೆರೆದ ಎಸ್‌.ಕೆ. ಬೆಳ್ಳುಬ್ಬಿ ಅಪ್ಪಟ ಹಳ್ಳಿ ಸೊಗಡಿನ ರಾಜಕೀಯ ನಾಯಕ. ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಪಂಚಾಯಿತಿ ಮಟ್ಟದಿಂದಲೇ ವಿಧಾನಸಭೆ ತನಕ ರಾಜಕಾರಣದಲ್ಲಿ ಯಶಸ್ಸು ಕಂಡವರು. 1978ರಲ್ಲಿ ಗ್ರಾಪಂ ಸದಸ್ಯರಾಗಿ ಆಯ್ಕೆಯಾದ ಬೆಳ್ಳುಬ್ಬಿ, 1983ರಲ್ಲಿ ಕೊಲ್ಹಾರ ಗ್ರಾಪಂ ಅಧ್ಯಕ್ಷರಾಗಿದ್ದರು. 1987ರಲ್ಲಿ ಮಂಡಲ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಮಂಡಲ ಪ್ರಧಾನ ಹುದ್ದೆಯನ್ನೂ ಗಿಟ್ಟಿಸಿಕೊಂಡರು. 1994ರಲ್ಲಿ ಕೆಸಿಪಿ ಪಕ್ಷದಿಂದ ಬಸವನಬಾಗೇವಾಡಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸುವ ಮೊದಲ ಪ್ರಯತ್ನ ಫಲಿಸಲಿಲ್ಲ. ಮತ್ತೆ 1999ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಬೆಳ್ಳುಬ್ಬಿ ಶಾಸಕರಾಗಿ ಆಯ್ಕೆಯಾದರು. 2008ರಲ್ಲಿ 2ನೇ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕೆಲ ತಿಂಗಳು ಮಂತ್ರಿಸ್ಥಾನವನ್ನೂ ಅಲಂಕರಿಸಿದ್ದರು. 2004 ಹಾಗೂ 2013ರ ಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದಾರೆ. 13 ಚುನಾವಣೆ ಕಂಡಿರುವ ಬಸವ ಜನ್ಮಭೂಮಿ ಬಸವನಬಾಗೇವಾಡಿ ಕ್ಷೇತ್ರದಲ್ಲಿ 8 ಬಾರಿ ಗೆದ್ದಿರುವ ಕಾಂಗ್ರೆಸ್‌, ಒಂದು ಬಾರಿ ಅಂಗ ಪಕ್ಷ ಕಾಂಗ್ರೆಸ್‌-ಐ ಅಭ್ಯರ್ಥಿಯನ್ನೂ ಆಯ್ಕೆ ಮಾಡಿ ಕಾಂಗ್ರೆಸ್‌ ಭದ್ರಕೋಟೆ ಎನಿಸಿದೆ. ಕ್ಷೇತ್ರಕ್ಕೆ ನಡೆದ ಮೊದಲ ಎರಡು ಚುನಾವಣೆಯಲ್ಲಿ ಸುಶೀಲಾಬಾಯಿ ಶಹಾ ಎಂಬ ಮಹಿಳೆ ಗೆದ್ದಿರುವುದು ವಿಶೇಷ. ಮಹಿಳಾ ಸಮಾನತೆ ಹರಿಕಾರ ಬಸವ ಜನ್ಮಭೂಮಿ ಜನರು ಮಹಿಳೆಯನ್ನು ಆಯ್ಕೆ ಮಾಡಿದ್ದೇ ಬಸವ ತತ್ವಕ್ಕೆ ಆದ್ಯತೆ ನೀಡಿದ್ದಕ್ಕೆ ಸಾಕ್ಷಿ. ವ್ಯಕ್ತಿ ಪೂಜೆಗೆ ಆದ್ಯತೆ ನೀಡಿರುವ ಈ ಕ್ಷೇತ್ರ ಮನಗೂಳಿಯ ಬಿ.ಎಸ್‌. ಪಾಟೀಲ ಅವರನ್ನು 6 ಬಾರಿ ವಿಧಾನಸೌಧಕ್ಕೆ ಕಳಿಸಿದ್ದು, ಎಸ್‌.ಕೆ.ಬೆಳ್ಳುಬ್ಬಿ ಅವರ ಮೂಲಕ ಬಿಜೆಪಿ ಎರಡು ಬಾರಿ ಇಲ್ಲಿ ನೆಲೆ ಕಂಡುಕೊಂಡಿದೆ. ಕುಮಾರಗೌಡ ಪಾಟೀಲ ಸೇರಿ ಇಬ್ಬರು ಈ ಕ್ಷೇತ್ರದಲ್ಲಿ ಜನತಾಪಕ್ಷದಿಂದ ಗೆದ್ದಿದ್ದಾರೆ. ಕ್ಷೇತ್ರದ ವಿಶೇಷತೆ ಕಾಂಗ್ರೇಸಿನ ಬಿ.ಎಸ್.ಪಾಟೀಲ(ಮನಗೂಳಿ)ರು 6 ಸಲ ಆಯ್ಕೆಯಾಗಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ನೀರಾವರಿ ಸಚಿವರಾಗಿದ್ದರು. ಕ್ಷೇತ್ರದಿಂದ 1957 ಮತ್ತು 1962ರಲ್ಲಿ ಕಾಂಗ್ರೇಸಿನಿಂದ ಸುಶಿಲಾಬಾಯಿ ಶಹಾ ಅವರನ್ನು ಆಯ್ಕೆ ಮಾಡಿ ವಿಜಯಪುರ ಜಿಲ್ಲೆಯ ಪ್ರಪ್ರಥಮ ಮಹಿಳಾ ಶಾಸಕಿಯಾಗಿದ್ದರು. ಬಿಜೆಪಿಯಿಂದ ಎಸ್.ಕೆ.ಬೆಳ್ಳುಬ್ಬಿಯವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ 2008ರಲ್ಲಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ತೋಟಗಾರಿಕಾ ಸಚಿವರಾಗಿದ್ದರು. ಕ್ಷೇತ್ರದಿಂದ ಕಾಂಗ್ರೇಸಿನ ಶಿವಾನಂದ ಪಾಟೀಲ ಮೂರು ಬಾರಿ ಆಯ್ಕೆಯಾಗಿ 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರದ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು. ಜನಪ್ರತಿನಿಧಿಗಳ ವಿವರ == ಉಲ್ಲೇಖಗಳು ==