ಭೂತಾರಾಧನೆ ತುಳುನಾಡಿನ ಆರಾಧನೆಗಳಲ್ಲಿ ಪ್ರಮುಖವಾದದ್ದು, ಇದನ್ನು 'ದೈವಾರಾಧನೆ' ಎಂದೂ ಕರೆಯುತ್ತಾರೆ ಎಂದೂ ಕರೆಯುತ್ತಾರೆ. ದಕ್ಷಿಣ ಕನ್ನಡ, ಉಡುಪಿ, ಕೇರಳ ರಾಜ್ಯದ ಉತ್ತರ ಜಿಲ್ಲೆಗಳಲ್ಲಿ ವಿಶೇಷವಾಗಿ ಕಂಡುಬರುವ ಒಂದು ರೀತಿಯ ಆರಾಧಾನೆ. == ಹಿನ್ನಲೆ == ಸಾಮಾನ್ಯವಾಗಿ ಆರಾಧನೆಗೊಳ್ಳುವ ಭೂತಗಳನ್ನು ಸ್ಥೂಲವಾಗಿ ಮೂರು ರೀತಿಯಲ್ಲಿ ವರ್ಗೀಕರಿಸಬಹುದು. ಪ್ರಾಣಿರೂಪದಲ್ಲಿರುವ ಭೂತ, ಮನುಷ್ಯನ ಮರಣಾನಂತರ ದೈವೀಕೃತವಾದ ಭೂತ, ಪುರಾಣದಿಂದ ಆಯ್ದುಕೊಂಡ ವ್ಯಕ್ತಿಗಳ ಭೂತ. ಹುಲಿ, ಹಂದಿ, ನಂದಿ, ಕೋಣ ಇತ್ಯಾದಿ(ಪಿಲಿಚಂಡಿ, ಪಂಜುರ್ಲಿ, ಮೈಸಂದಾಯ) ಪ್ರಾಣಿಗಳು ಮೊದಲನೆಯ ವರ್ಗದ ರೂಪದಲ್ಲಿ ಆರಾಧನೆಗೊಳ್ಳುತ್ತವೆ. ಜುಮಾತಿ, ಕಲ್ಕುಡ-ಕಲ್ಕುರ್ಚಿ, ಕೋಟಿ - ಚನ್ನಯ,ಕುಜುಂಬ-ಕಂಜ, ಕಾಂತಾಬಾರೆ-ಬೂದಾ ಬಾರೆ ಮೊದಲಾದ ವ್ಯಕ್ತಿಗಳು ಮಾನವರಾಗಿದ್ದಾಗ ವೀರ ಕೆಲಸ ಮಾಡಿ ಅಕಾಲ ಮರಣಕ್ಕೆ ತುತ್ತಾಗಿ ಅನಂತರ ಭೂತಗಳಾಗಿ ದೈವತ್ವ ಹೊಂದಿ ಆರಾಧನೆಗೊಳ್ಳುತ್ತವೆ. ಇವು ಎರಡನೆಯ ವರ್ಗಕ್ಕೆ ಸೇರುತ್ತವೆ. ಕೊಡಮಣಿತ್ತಾಯ, ಕಿಕ್ಕುಣಂತಾಯ, ಶಿವತ್ತಾಯ, ಅಣ್ಣಪ್ಪ, ಅಡ್ಕತ್ತಾಯ ಮೊದಲಾದ ದೈವಗಳನ್ನೂ ಈ ಗುಂಪಿಗೇ ಸೇರಿಸಬಹುದು. ತುಳುನಾಡಿನಲ್ಲಿ ಬೆರ್ಮೆ ಎಂಬ ದೈವ ಬ್ರಹ್ಮನ ಪ್ರತಿರೂಪವೇ ಆಗಿದೆ. ವೇದಬ್ರಹ್ಮನ ನಿರ್ದೇಶನ ಒಂದು ಕ್ರಮದಲ್ಲಿದ್ದರೆ ಬೆರ್ಮೆ ಎಂಬ ದೈವ ಭೂತಬ್ರಹ್ಮವಾಗಿ ಇನ್ನೊಂದು ರೀತಿಯಲ್ಲಿ ಆರಾಧನೆಗೊಳ್ಳುತ್ತದೆ. ಇವನಿಗೆ ನಾಲ್ಕು ಮುಖ ಮತ್ತು ನಾಲ್ಕು ಕೈಗಳು, ಕೈಗಳಲ್ಲಿ ಖಡ್ಗ, ಡಮರು ಕಪಾಲ ಮತ್ತು ಕಠಾರಿ ಮೊದಲಾದ ಆಯುಧಗಳಿವೆ. ತುಳುವರ ಮೂಲ ದೇವರು "ಬೆಮ್ಮೆರ್" == ಭೂತಸ್ಥಾನ == ಭೂತನೆಲೆಯ ಸ್ಥಳವನ್ನು ಭೂತಸ್ಥಾನ, ಭೂತಸಾನ ಎಂದು ಕರೆಯುತ್ತಾರೆ. ಭೂತಸ್ಥಾನಕ್ಕೆ ಅಲೆಡೆ, ಗರಡಿ, ಕಟ್ಟೆ, ತಾನೊ, ಚಾವಡಿ ಎಂಬ ಹೆಸರುಗಳೂ ಇವೆ. ಇವು ಸಾಮಾನ್ಯವಾಗಿ 3.5 ಮೀ ಉದ್ದ, 2.5 ಮೀ ಅಗಲ, 3.5 ಮೀ ಎತ್ತರದ ಸಾಧಾರಣ ಗುಡಿಗಳಾಗಿರುತ್ತವೆ. ಇವಕ್ಕೆ ಕಿಟಕಿಗಳಿರುವುದಿಲ್ಲ. ರಾಜನ್ ದೈವಗಳಿಗೆ ಭೂತಗಳಿಗೆ ಇದಕ್ಕೂ ದೊಡ್ಡದಾದ ಭೂತಸ್ಥಾನಗಳಿರುವುದುಂಟು. ಸ್ಥಾನದ ಒಳಗೆ ಮನುಷ್ಯರಂತೆ, ಪ್ರಾಣಿಗಳಂತೆ ರೂಪವಿರುವ ಹಿತ್ತಾಳೆಯ ಹಲವಾರು ಉರುಗಳಿರುತ್ತವೆ, ಜೊತೆಗೆ ಮಣೆಮಂಚ(ತೂಗುಮಂಚ) ಅಥವಾ ಕಾಲುಳ್ಳ ಮಂಚವಿರುತ್ತದೆ. ಇದನ್ನು ಉಜ್ಜಾಲ್ ಮಣೆಮಂಚ ಎನ್ನುತ್ತಾರೆ. ಇದರ ಮೇಲೆ ಭೂತದ ಖಡ್ಗ ಹಾಗೂ ಗುಂಟೆ ಇರುತ್ತವೆ. ಭೂತಸ್ಥಾನದಲ್ಲಿ ಕಂಡುಬರುವ ಹುಲಿ, ಹಂದಿ, ಕೋಣ, ಎತ್ತು ಮೊದಲಾದವುಗಳು ವಿಗ್ರಹಗಳನ್ನು ಭೂತವಾಹನಗಳಾಗಿ ಉಪಯೋಗಿಸುವುದರ ಜೊತೆಗೆ, ಅವನ್ನೂ ಭೂತಗಳ ಪರಿವಾರವೆಂದು ಕರೆದು ವಿಶೇಷ ಸಂದರ್ಭಗಳಲ್ಲಿ ಪೂಜಿಸುವುದೂ ಉಂಟು. ಹೀಗೆ ಪೂಜಿಸುವಾಗ ಭೂತದ ಬಳಿ ಒಂದು ಕತ್ತಿ, ಕಂಚಿನ ಕಳಸದಲ್ಲಿ ನೀರು ದೀಪ ಇಟ್ಟಿರುತ್ತಾರೆ. == ಭೂತಾರಾಧನೆ-ದೈವಾರಾಧನೆ == ತುಳುನಾಡ ಸಾಂಸ್ಕೃತಿಕ ಪದಕೋಶದಲ್ಲಿ ಸಾಮಾಜಿಕ ಬದುಕಿನಲ್ಲಿ ಮುಖ್ಯವಾಗಿ ತಿಳಿಯುವ ಪದ ಭೂತ. ಕನ್ನಡ ಭಾಷೆಯ ಸಾಂಸ್ಕೃತಿಕ ಪದಕೋಶದಲ್ಲಿ ಭೂತ ಪದ ಬಳಕೆಯಲ್ಲಿಲ್ಲ. ಸಂಸ್ಕೃತ ಭಾಷೆಯಲ್ಲೂ ಇಲ್ಲ. ಮಲಯಾಳಿಗಳು ತೆಯ್ಯಂ ಎಂದು ಕರೆಯುವ ತುಳುವರ ಭೂತವು ದೈವ, ದೈವಂಕುಲು ಆಗಿ ಬಳಕೆಯಲ್ಲಿದೆ. ಪಾಶ್ಚಿಮಾತ್ಯದಿಂದ ಬಂದ ವಿದ್ವಾಂಸರು ಡೆವಿಲ್ ಬಳಸಿದರು. ಎ.ಸಿ.ಬರ್ನೆಲ್ ಎಂಬ ಕೃತಿಯನ್ನು ಬರೆದ. ಆರಾಧನೆಯ ಪರಂಪರೆಯ ತುಳುನಾಡಿನಲ್ಲಿ ದೈವ(ಭೂತೊ) ಮತ್ತು ದೇವರು ಬೇರೆಬೇರೆ ಎಂದು ನೋಡುವುದಿಲ್ಲ. ದೈವ ಮತ್ತು ದೇವರು ಎರಡನ್ನು ಭಿನ್ನ ನೆಲೆಯಲ್ಲಿ ನಂಬಿ ಬದುಕುತ್ತಿದ್ದಾರೆ. ೧೪ನೆಯ ಶತಮಾನದಿಂದ ಈಚೆಗೆ ದೈವೊ ಪದದ ಬಳಕೆ ಆಗುತ್ತಿದೆ. ಭೂತ+ಆರಾಧನೆ=ಭೂತಾರಾಧನೆ. ಭೂತವನ್ನು ನಂಬಿದವರಿಗೆ ಜಯ ಕೊಡುತ್ತದೆ, ನಂಬದವನಿಗೆ ಅಪಜಯವಾಗುತ್ತದೆ(ಭೂತೊ ನಂಬಿನಕ್ಲೆಗ್ ಇಂಬು ಕೊರ್ಪುಂಡು ನಂಬಂದ್‍ನಕ್ಲೆಗ್ ಅಂಬು ಕೊರ್ಪುಂಡು) ಎಂಬ ನಂಬಿಕೆಯಿದೆ. ತುಳುವಿನ ಅಂಬು' ಎಂಬ ಪದಕ್ಕೆ ಶಿಕ್ಷೆ ಎಂಬ ಅರ್ಥವಿರುವುದರಿಂದ ಶಿಕ್ಷೆ ಆಗದೆ ರಕ್ಷೆಗಾಗಿ ಭೂತವನ್ನು ನಂಬಿದರೆ ತಮಗೆ ಏನಾದರೂ ಒಳಿತಾಗಬಹುದೆಂದು ತುಳುನಾಡಿನ ಜನರು ನಂಬಿದ್ದಾರೆ. ನಂಬುವವರಿಗೆ ಭೂತ ಮೈಸೇರುತ್ತದೆಂದು ನಂಬಿಕೆಯಿದೆ. ಅಂದರೆ ಭೂತ ನಂಬಿಕೆಯಿರುವವರಿಗೆ ವಶವಾಗುತ್ತದೆ. ಹೀಗೆ ವಶವಾಗುವ ಭೂತ ನಂಬಿದವನಿಗೆ ಒಳ್ಳೆಯ ಮದಿಪು ನೀಡುತ್ತದೆ. ನಂಬುವವರು ದೇವರಿಗೆ ಹರಕೆ ನೀಡುವಂತೆ ಭೂತಕ್ಕೂ ಹರಕೆ ನೀಡುತ್ತಾರೆ. ಕೋಲ ಕೊಡುವ, ನೇಮೊ ಮಾಡುವ, ತಂಬಿಲ, ಅಗೆಲ್ ಬಡಿಸುವ ಕ್ರಮ ಇಂದಿಗೂ ನಡೆದುಕೊಂಡು ಬಂದಿದೆ. ಭೂತಾರಾಧನೆ ಸಮಯದಲ್ಲಿ ಭೂತದ ವೇಷ ಹಾಕುವವನು ಮೈಗೆ ಅಲಂಕಾರಯುಕ್ತವಾದ ವೇಷಭೂಷಣ ತೊಡುತ್ತಾರೆ. ಸ್ತ್ರೀ ಪುರುಷ ಭೂತಗಳಿಗೆ ಪ್ರತ್ಯೇಕವಾದ ವೇಷಭೂಷಣಗಳಿರುತ್ತವೆ. ಅಣಿ ಕಟ್ಟಿಕೊಂಡು ಮುಗೊಕಟ್ಟಿಕೊಂಡು, ಕೈಯಲ್ಲಿ ಸುರಿಯೆ(ಕತ್ತಿ) ಹಿಡಿದುಕೊಂಡು, ಬಿಲ್ಲ್‌ ಪಗರಿ(ಬಲ್ಲುಬಾಣ) ಹಿಡಿದುಕೊಂಡು,ಕಾಲಿಗೆಗಗ್ಗರೊ ಕಟ್ಟಿಕೊಂಡು ಕುಣಿಯುವ ಕಾರ್ಯಕ್ರಮಕ್ಕೆ ಭೂತಾರಾಧನೆ ಎಂದು ಕರೆಯುತ್ತಾರೆ. ಭೂತಾರಾಧನೆ ಎಂಬ ಪದ ಆರಾಧನಾ ಪರಂಪರೆಯಿಂದ ಹುಟ್ಟಿದ ಪದವಲ್ಲ. ಅದು ತೌಳವ ಸಂಸ್ಕೃತಿಯನ್ನು ಒಟ್ಟಾಗಿ ಸೂಚಿಸುವ ಪದ. ದೈವ+ಆರಾಧನೆ=ದೈವಾರಾಧನೆ. ಭೂತಾರಾಧನೆಯನ್ನು ದೈವಾರಾಧನೆಯೆಂದು ಕರೆಯುತ್ತಾರೆ. ದೇವೆರ ಆರಾಧನೆಯಂತೆ ಭಯಭಕ್ತಿಯಿಂದ ವರ್ಷಕ್ಕೊಮ್ಮೆ ದೈವಕ್ಕೂ ಆರಾಧನೆ ನಡೆಯುತ್ತದೆ. == ಭೂತಾರಾಧನೆಯ ಬಗೆ == ಕೆಂಡಸೇವೆ ಕೋಲ ಜಾಲಾಟ ನೇಮ ಧರ್ಮನೇಮ ಬಂಡಿಜಾತ್ರೆ ಮೈಮೆ ಮೆಚ್ಚಿ ದರ್ಶನ ಮಾಣಿಚ್ಚಿಲ್ == ಭೂತಾರಾಧನೆಯ ಇತಿಹಾಸ == ಕ್ರಿ.ಶ, ೧೩೭೯ರಲ್ಲಿ ಕಾರ್ಕಳ ತಾಲೂಕಿನ ಕಾಂತೇಶ್ವರ ದೇವಸ್ಥಾನದಲ್ಲಿ ಸಿಕ್ಕಿರುವ ಶಾಸನ ಆಧಾರ. ಈ ಶಾಸನದಲ್ಲಿ ದೈವಕ್ಕೆ ತಪ್ಪಿದವರು ಎಂಬ ಪದದ ಬಳಕೆಯಿದೆ.' ಕಾರ್ಕಳ ತಾಲೂಕಿನ ಉದ್ಯಾವರದಲ್ಲಿ ಕ್ರಿ.ಶ. ೧೫೪೩ರಲ್ಲಿ ದೊರೆತಿರುವ ಶಾಸನದಲ್ಲಿ ನಂದಳಿಕೆ ದೈವೊ ಪದದ ಉಲ್ಲೇಖವಿದೆ. ಕ್ರಿ.ಶ.೧೪೯೯ಡ್ ಉಡುಪಿ ತಾಲೂಕಿನ ಕಾಪು ಪ್ರದೇಶದಲ್ಲಿಇ ದೊರೆತ ಶಾಸನದಲ್ಲಿ ನಂದಳಿಕೆ ದೈವದ ಪ್ರಸ್ತಾಪವಿದೆ. ಕ್ರಿ.ಶ.೧೪೪೬ರಲ್ಲಿ ದೊರೆತ ಬಸ್ರೂರು ಶಾಸನದಲ್ಲಿ ಮತ್ತು ಕ್ರಿ.ಶ.೧೫೬೬ರಲ್ಲಿ ದೊರೆತ ಬಾರಕೂರು ಶಾಸನದಲ್ಲಿ ಬೊಬ್ಬರ್ಯ ಭೂತದ ಹೆಸರಿದೆ. ಕ್ರಿ.ಶ. ೧೪೩೨ರಲ್ಲಿ ದೊರೆತ ಸುಳ್ಯದ ಎಡಮಂಗಿಲ ಶಾಸನದಲ್ಲಿ ಸಿರಾಡಿ ದೈವಕ್ಕೆ ಪ್ರಸಾದ ತುಪ್ಪದೊಳು ಎಂಬ ಪದದ ಬಳಕೆಯಿದೆ. == ಭೂತಾರಾಧನೆ ಮತ್ತು ಪಾಡ್ದನ == ಪಾಡ್ದನಗಳು ಭೂತಗಳ ಹುಟ್ಟು, ಪ್ರಸರಣ, ಕಾರಣಿಕವನ್ನು ನಿರೂಪಣೆ ಮಾಡುವ ಪದ್ಯರೂಪದ ಕಥನಕವನಗಳು. ಪಾಡ್ದನವನ್ನು ತುಳುವರು ಪಾರ್ತನೊ, ಸಂದ್, ಸಂದಿ, ಹೀಗೆ ಬೇರೆಬೇರೆ ರೂಪದಲ್ಲಿ ಬಳಕೆ ಮಾಡುತ್ತಾರೆ. == ಭೂತಾರಾಧನೆಯ ಕಟ್ಟು ಕಟ್ಟಳೆಗಳು == ದೇವರಿಗೆ ದೇವಸ್ಥಾನ ಹೇಗೆ ಇದೆಯೋ ? ಹಾಗೆ ತಲುವರ ನಂಬುವ ದೈವಗಳಿಗೆ ದೈವಸಾನ... ಭೂತ ಕೋಲ ಭೂತಾರತುಲುವರ್ಉತ್ಸವ ಲಿ ಸಾಮಾನ್ಯವಾಗಿ ೧೬ ಕಟ್ಟುಕಟ್ಟಲೆಗಳನ್ನು ಕಾಣಬಹುದು. ನೇಮದ ವೇಳೆ ಕಟ್ಟುವ ಭೂತವೇಷಗಳು ಆಯಾ ಭೂತದ ಸ್ವಭಾವ ಸ್ವರೂಪಗಳಿಗೆ ತಕ್ಕುದಾಗಿರುತ್ತವೆ. ಮುಖವರ್ಣಿಕೆ, ಉಡುಪು ತೊಡುಪು, ಅಣಿಗಳಲ್ಲಿ (ಬೆನ್ನುಹಿಂದಕ್ಕೆ ಕಟ್ಟಿ ಕೊಳ್ಳುವ ಅಗಲವಾದ ರಚನೆ) ಸಾಕಷ್ಟು ವೈವಿಧ್ಯವಿರುತ್ತದೆ. ಕುಣಿತದ ವೈಖರಿಯಲ್ಲೂ ಹಾಗೆಯೇ. ನೇಮಕ್ಕೆ ಸಂಬಂಧಪಟ್ಟಂತೆ ವಾಲಸಿರಿ, ಬಂಡಿ ಮೊದಲಾದ ಸಮಾರಂಭಗಳೂ ಜರಗುವುದುಂಟು. ವಾಲ ಸಿರಿ ಭೂತಸ್ಥಾನದ ಆವರಣದ ಹೊರಗೆ ನಡೆಯುತ್ತದೆ. ಎಲ್ಲ ಭೂತಸ್ಥಾನಗಳಲ್ಲಿ ಬಂಡಿ ಇರಬೇಕೆಂದಲ್ಲ. ಬಂಡಿ ಇದ್ದಲ್ಲ ಅದನ್ನು ಸಿಂಗರಿಸಿ ಎಳೆಯುತ್ತಾರೆ. ಬಂಡಿಗಳಲ್ಲಿ ಹುಲಿ, ಹಂದಿ, ಕುದುರೆ ಮುಂತಾದವುಗಳ ಮೇಲೆ ಕುಳಿತಿರುವ ಭೂತಗಳ ವಿಗ್ರಹಗಳಿರುತ್ತವೆ. ವಿಗ್ರಹಗಳಿಲ್ಲದಿದ್ದಲ್ಲಿ ಭೂತವೇಷವನ್ನು ತೊಟ್ಟ ವ್ಯಕ್ತಿಯೇ ಕುಳಿತುಕೊಳ್ಳುತ್ತಾನೆ. ನೇಮದ ಅಂಗವಾಗಿ ತಪ್ಪಂಗಾಯಿ, ಸೊಟೆದಾರೆ ಮೊದಲಾದ ವಿನೋದಗಳೂ ಕೋಳಿ ಅಂಕವೂ ನಡೆಯುವುದುಂಟು. ಭೂತಗಳಲ್ಲಿಯೂ ಸೀಮೆಯ ರಾಜಂದೈವ, ಗ್ರಾಮದ ದೈವ, ಜಾಗದ ದೈವ, ಕುಟುಂಬದ ದೈವ, ಮನೆಯ ದೈವ—ಹೀಗೆ ಪ್ರತ್ಯೇಕವಾದ ವ್ಯವಸ್ಥೆ ಇದೆ. ಕೆಲವೊಮ್ಮೆ ವಿಶಿಷ್ಟ ಕಾರಣಗಳಿಗಾಗಿ ಧರ್ಮನೇಮ ಎಂಬ ವಿಶೇಷೋತ್ಸವವನ್ನು ಜರಗಿಸುವುದುಂಟು. ಅದರ ಅಂಗವಾಗಿ ಅನ್ನಸಂತರ್ಪಣೆಯೂ ನಡೆಯುವುದಿದೆ. ಕೋಲ ಎಂದರೆ ಅಲಂಕಾರ ಎಂದರ್ಥ. ಭೂತ ವೇಷಧಾರಿಗೆ ತೊಡಿಸುವ ವಿಶೇಷ ವೇಷ ಪರಿಕರಗಳ ಬೆಡಗಿನಿಂದಾಗಿ ಸಂಬಂಧಪಟ್ಟ ಉತ್ಸವಕ್ಕೂ ಅದೇ ಹೆಸರು ಬಂದಿದೆ. ಕೋಲವನ್ನು ವಾಡಿಕೆಯಂತೆ ವರ್ಷಕ್ಕೊಂದು ಬಾರಿ ನಿರ್ದಿಷ್ಟ ಸ್ಥಳದಲ್ಲಿ ನಿಶ್ಚಿತ ದಿನಗಳಲ್ಲಿ ಜರಗಿಸಬಹುದು; ಅಥವಾ ವಿಶೇಷ ಸೇವೆಯಾಗಿ ಬೇರೆಯೇ ಸಂದರ್ಭಗಳಲ್ಲಿಯೂ ನಡೆಯಿಸಬಹುದು. ಕೋಲದ ಚಪ್ಪರಕ್ಕೆ ಪತಾಕೆಯ ರೂಪದಲ್ಲಿ ಮಡಿವಾಳನು ಬಿಳಿ ಅಥವಾ ಕೆಂಪು ಬಟ್ಟೆ ಕಟ್ಟುವುದಿದೆ. ಎಳನೀರು, ಸೌತೆ, ಕುಂಬಳ ಮುಂತಾದವನ್ನು ಚಪ್ಪರದಲ್ಲಿ ತೂಗಿಸುತ್ತಾರೆ. ಕೋಲಕ್ಕೆ ಮೊದಲು ಮಣ್ಣು ಮುಹೂರ್ತ ಎಂಬ ವಿಧಿ ಜರುಗುವುದಿದೆ. ಕೋಲ ಜರಗಬೇಕಾದ ಸ್ಥಳದ ತುಸು ಮಣ್ಣನ್ನು ಆಯಾಸ್ಥಾನದ ಪೂಜಾರಿ ತಂದು, ಗಂಧಿ ಪ್ರಸಾದ ಸ್ವೀಕರಿಸಿ ಒಳಗೆ ಹೊರಗೆ ತುಲಸಿಕಟ್ಟೆ, ಪಾಗಾರ ಮುಂತಾದ ಎಡೆಗಳಲ್ಲಿ ಎಲ್ಲೆಲ್ಲಿ ಬಿರುಕುಗಳಿವೆಯೋ ಅಲ್ಲಿಗೆ ಮಣ್ಣನ್ನು ಮೆತ್ತಿ ಜಾಗವನ್ನು ಪ್ರಶಸ್ತಗೊಳಿಸುವನು. ಕೋಲದ ಚಪ್ಪರದ ನಡುವೆ ಗರಡಿಯ ಒಳಗೆ ನೆಲದಲ್ಲಿ ವಿವಿಧ ರೀತಿಯ ಮಂಡಲಗಳನ್ನು ಬಣ್ಣದ ಪುಡಿಗಳಿಂದ ಬರೆಯುವುದುಂಟು. ಮಂಡಲದ ಮೇಲಕ್ಕೆ ನೇರವಾಗಿ ಒಂದು ತೆಂಗಿನಕಾಯನ್ನು ವಿಧಿಪೂರ್ವಕವಾಗಿ ತೂಗಿಸುತ್ತಾರೆ. ಇದಕ್ಕೆ ಕುಕ್ಯಾಲಿ ಎಂದು ಹೆಸರು. ಕೆಲವು ಕೋಲಗಳಿಗೆ ಭಂಡಾರ ಹೋಗುವ ಕ್ರಮವಿದೆ, ಭೂತದ ಮೊಗ, ಬೆಳ್ಳಿ ಒಂಗಾರದ ನಗನಾಣ್ಯಗಳೇ ಮುಂತಾದ ವೇಷ ಸಾಮಗ್ರಿಗಳೂಸುರಿಗೆ ಮುಂತಾದ ಆಯುಧಗಳೂ ನಿಶಾನಿ, ಗಣಿ, ದೀವಟಿಗೆ, ಸತ್ತಿಗೆ ಮುಂತಾದ ಬಿರ್ದಿನಿಂದ ಕೊಂಬುವಾಲಗದೊಂದಿಗೆ ಕೋಲದ ಚಪ್ಪರದದೆಡೆಗೆ ಸಾಗುವುವು. ಭೂತದ ವೇಷಕ್ಕೆ ತೆಂಗಿನ ಎಳೆಯಗರಿ, ಕೇಪಳದಹೂ, ಅರದಾಳ, ಮಸಿ, ಇಂಗಳಿಕ, ಕೆಂಪುವಸ್ತ್ರ, ದಗಲೆ, ಗೆಜ್ಜೆ, ಗಗ್ಗರ, ಕೈದಂಡೆ, ನೆತ್ತಿಪಟ್ಟ, ಚಪ್ಪರಕೊಂಬು, ಮಾಲೆಗಳು, ಅಣಿ ಮೊದಲಾದವನ್ನು ಉಪಯೋಗಿಸುತ್ತಾರೆ. ಆಯಾ ಭೂತದ ಸ್ವರೂಪ, ಸ್ವಭಾವಗಳಿಂದ ತಕ್ಕ ಅಣಿಯನ್ನೂ ಮಖವರ್ಣಿಕೆಯನ್ನೂ ಇತರ ಪರಿಕರಗಳನ್ನೂ ಬಳಸುತ್ತಾರೆ. ಪೂಜೆ ರೀತಿಯಲ್ಲಿ ಆಯಾ ಭೂತದ ರೌದ್ರಭಾವನೆಗೆ ಅನುಗುಣವಾಗಿ ಕುಣಿತದ ಮೂಲಕ ಪೂಜೆಯಾಗುತ್ತದೆ. ಭೂತವನ್ನು ಪ್ರತಿನಿಧಿಸುವ ವ್ಯಕ್ತಿಯನ್ನು ಬೂತ ಕಟ್ಟುನಾಯೆ(ಪಾತ್ರಿ) ಎನ್ನುತ್ತಾರೆ. ಒಂದೊಂದು ಭೂತಕ್ಕೂ ಅದಕ್ಕೊಪ್ಪುವ ಅರದಳವಿರುತ್ತದೆ. ಅಲಂಕಾರ, ವೇಷ, ಮುಖ ವರ್ಣಿಕೆ ಇರುತ್ತವೆ. ಮೈಗೆ ಕೆಂಪುಬಟ್ಟೆ, ನಡುವಿಗೆ ನೆರಿಗೆಯುಳ್ಳ ಲಂಗ, ತಲೆಗೆ ಕಿರೀಟ (ಅಣಿ), ಕಾಲಿಗೆ ಗಗ್ಗರ, ಸೊಂಟಕ್ಕೆ ದಟ್ಟಿ, ತೋಳಿಗೆ ವಂಕಿ, ಕೈಗೆ ಬಳೆ, ಎದೆಗೆ ಕಂಚಿನ ರಕ್ಷೆ, ಕಿವಿಗೆ ಮತ್ತು ಹಣೆಗೆ ಅಲಂಕಾರ ಇರುತ್ತದೆ. ಒಮ್ಮೊಮ್ಮೆ ಆಯಾ ಭೂತದ ಮುಖವಾಡ ಧರಿಸಿ ಕುಣಿಯುವುದೂ ಉಂಟು. ಭೂತಾರಾಧನೆ ಕೆಲವೊಮ್ಮೆ ಸಾರ್ವಜನಿಕವಾಗಿಯೂ ಒಂದೊಂದೆ ಮನೆಯಲ್ಲಿಯೂ ನಡೆಯುತ್ತದೆ. ಬತ್ತ, ಅಕ್ಕಿ, ಬತ್ತದ ಅರಳು, ಎಳನೀರು, ತೆಂಗಿನಕಾಯಿ, ಅಡಿಕೆ, ಹೊಂಬಾಳೆ, ತೆಂಗಿನ ಗರಿ—ಇವು ಭೂತಾರಾಧನೆಯ ಮುಖ್ಯ ವಸ್ತುಗಳು. ಎಲ್ಲ ರೀತಿಯ ಭೂತ ಕಟ್ಟುವಾಗಲೂ ಕೈಯಲ್ಲಿ ದೀವಟಿಗೆಯಿರುತ್ತದೆ. == ಭೂತಾರಾಧನೆಯ ಸಾಂಸ್ಕೃತಿಕ ವಿವರ == === ಕೋರಿ ಗೂಂಟ === ಉತ್ಸವಕ್ಕೆ ಕೊಡಿ (ಧ್ವಜ) ಏರಿಸುವ ಕ್ರಮವಿದೆ. ನೇಮಕ್ಕೆ ಕೆಲವು ದಿನ ಮುಂಚೆ ಕೋಳಿಕುಂಟ ಎಂಬ ವಿಧಿ ಜರುಗುವುದುಂಟು. ಅಂದು ನೇಮಕ್ಕಾಗಿ ಬಾಳೆಗೊನೆ ಕಡಿಯುವ ಗೊನೆಮುಹೂರ್ತ ಎಂಬ ಕ್ರಮ ಇದೆ (ಕೋಳಿಕುಂಟವಾದ ಮೇಲೆ ಆ ಊರನ್ನು ಬಿಟ್ಟು ಯಾರೂ ದೂರ ಪ್ರಯಾಣ ಕೈಗೊಳ್ಳಬಾರದೆಂಬ ಕಟ್ಟಳೆ ಇದೆ). ಊರ ಜನವರ್ಗದ ಪ್ರತಿನಿಧಿಗಳೂ ದೈವದ ಸೇವೆಗೆ ಸಂಬಂಧಪಟ್ಟ ಪೂಜಾರಿ ಮುಂತಾದ ವ್ಯಕ್ತಿಗಳೂ ಸಕಲ ಬಿರುದಾವಳಿಗಳಿಂದ ಭೂತದ. ಭಂಡಾರವನ್ನು (ಆಯುಧ, ಮೊಗ ಮುಂತಾದ ಪೂಜಾ ಸಾಮಗ್ರಿಗಳನ್ನು) ಭೂತಸ್ಥಾನಕ್ಕೆ ಒಯ್ಯುತ್ತಾರೆ. ಉತ್ಸವದ ಸಂದರ್ಭದಲ್ಲಿ ಆಯಾ ಭೂತದ ಹುಟ್ಟುಕಟ್ಟುಗಳನ್ನು ಭೂತಕ್ಕೆ ಕಟ್ಟುವವರೂ ಅವರ ಸಂಗಡಿಗರೂ ತೆಂಬರೆ ಎಂಬ ವಾದ್ಯದ ಬಡಿತದೊಂದಿಗೆ ರಾಗವಾಗಿ ಹಾಡುತ್ತಾರೆ. ಒಂದೇ ವೇಳೆ ಎರಡು ಅಥವಾ ಮೂರು ಭೂತಗಳು ಕಾಣಿಸಿಕೊಳ್ಳಬಹುದು. ಬೇರೆ ಬೇರೆ ಭೂತಗಳನ್ನು ಒಬ್ಬನೇ ವ್ಯಕ್ತಿ ಒಂದಾದ ಮೇಲೆ ಒಂದರಂತೆ ಆವೇಶ ಬರಿಸಿಕೊಳ್ಳಬಹುದು. == ಭೂತಾರಾಧನೆಯ ವಾದ್ಯಗಳು == ಡೋಲು ದುಡಿ ತಾಸೆ ತೆಂಬರೆ ಸಮ್ಮೇಲ ನಾಗಸ್ವರ ಬ್ಯಾಂಡ್ ವಾಲಗ ಶ್ರುತಿ == ಭೂತ ಕಟ್ಟುವ ಸಮುದಾಯ == ನಲಿಕೆ ಪಂಬದ ಪರವ ಪಾಣಾರ ದಕ್ಷಿಣ ಕನ್ನಡ ಜಿಲ್ಲೆಯ ತುಳು ಮಾತನಾಡುವ ಪ್ರದೇಶದ ಭೂತಾರಾಧನೆಗೂ ಕನ್ನಡ ಮಾತನಾಡುವ ಪ್ರದೇಶದ ಭೂತಾರಾಧನೆಗೂ ಕೆಲವು ವೈಶಿಷ್ಟ್ಯಗಳೂ ವ್ಯತ್ಯಾಸಗಳೂ ಕಂಡುಬರುತ್ತವೆ. ತುಳು ಮಾತನಾಡುವಲ್ಲಿ ಕೆಲವೇ ನಿಶ್ಚಿತ ಜಾತಿಗೆ ಸೇರಿದ—ಮುಖ್ಯವಾಗಿ ಬೈದ್ಯ, ನಲಿಕೆ, ಪರವ, ಪಂಬರ, ಪಾಣಾರ—ಜನ ಮಾತ್ರ ಭೂತಾರಾಧನೆಯಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಒಂದು ಭೂತವನ್ನು ಇಂಥವನೇ ಪೂಜಿಸಬೇಕೆಂಬ ನಿಯಮವಿದೆ ಅದಕ್ಕೆ ಅಜಲು ಎನ್ನುವರು. ಒಂದೇ ಗುಡಿಯಲ್ಲಿ ಅನೇಕ ದೈವಗಳ ಉರು, ಮುಗೊಗಳಿರುತ್ತವೆ. ಈ ಭೂತಗಳಿಗೆ ಪಾಡ್ಡನಗಳಿಲ್ಲ; ಸರಿಯಾದ ಕಥೆಯಿಲ್ಲ. ಈ ದೈವಗಳಿಗೆ ವರ್ಷಕ್ಕೊಂದು ಸಲ ಎಥವಾ ವಿಶಿಷ್ಟ ಸಂದರ್ಭಗಳಲ್ಲಿ ಕೋಲ, ನೇಮ, ಬಲಿ, ಅಗಲು, ತಂಬಿಲ. ಬಂಡಿ ಮೊದಲಾದ ವಿವಿಧ ರೀತಿಯ ಉತ್ಸವ ಹಾಗೂ ಸೇವೆ ಜರುಗುತ್ತವೆ. ಕೋಲ ಮತ್ತು ನೇಮ ದೈವದ ನೃತ್ಯಸಹಿತ ಉತ್ಸವದ ರೂಪದಲ್ಲಿ ನಡೆಯುತ್ತವೆ. ನೇಮ ಹೆಚ್ಚಾಗಿ ರಾತ್ರಿ ನಡೆಯತ್ತದೆ. ಅಗಲು ಸಾಮಾನ್ಯವಾಗಿ ಕೋಲದ ಹಿಂದಿನ ರಾತ್ರಿ ನಡೆಯುತ್ತದೆ. ಕೋಲವನ್ನು ಹೆಚ್ಚಾಗಿ ಪಂಬರರು, ಪರವರು, ನಲಿಕೆಯವರು ಕಟ್ಟುತ್ತಾರೆ. 'ಪರ್ವ ಭೂತಗಳಿಗೆ ಇನ್ನೊಂದು ರೀತಿಯಲ್ಲಿ ನಡೆಯುವ ಪೂಜೆ. ನೇಮ, ಊರವರೆಲ್ಲ ಸೇರಿ ನಡೆಸುವ, ಸ್ವಲ್ಪ ಹಿರಿಯ ಪ್ರಮಾಣದ ಉತ್ಸವ. ಎರಡೋ ಮೂರೋ ದಿನ ನಡೆಯಬಹುದು. == ಭೂತಗಳ ಉಗಮ ಮತ್ತು ವರ್ಗೀಕರಣ == ಸೀಮೆಯ ಭೂತಗಳು ಮಾಗಣೆ ಭೂತಗಳು ಗ್ರಾಮ ಭೂತಗಳು ಗುತ್ತಿನ ಭೂತಗಳು ಕುಟುಂಬದ ಭೂತಗಳು == ಭೂತಾರಾಧನೆಯ ಬಣ್ಣಗಾರಿಕೆ == ಪ್ರಾಣಿ ಸೂಚಕ ಭೂತಗಳ ಮುಖವರ್ಣಿಕೆ ರಾಜಸ ಸ್ವಭಾವದ ಅರಸು ಭೂತಗಳ ಮುಖವರ್ಣಿಕೆ ಹೆಣ್ಣು ಭೂತಗಳ ಮುಖವರ್ಣಿಕೆ ನೀಚ ಭೂತಗಳ ಮುಖವರ್ಣಿಕೆ ಮನುಷ್ಯ ಸತ್ತು ಭೂತ ಆದ ಭೂತಗಳ ಮುಖವರ್ಣಿಕೆ == ಭೂತದ ಮುಗ == ಮುಗವನ್ನು ಮುಖವಾಡವೆಂದು ತಿಳಿಯಬಹುದು. ಮುಖವಾಡಗಳನ್ನು ಹಿತ್ತಾಲೆ ಮತ್ತು ತಾಮ್ರ ಮಿಶ್ರಿತ ಕಂಚಿನಿಂದ ತಯಾರಿಸಲಾಗಿರುತ್ತದೆ. ಮನುಷ್ಯರನ್ನು ಹೋಲಿಕೆ ಮಾಡಿ ತಯಾರಾದ ಮುಖವಾಡ ಪ್ರಾಣಿಗಳನ್ನು ಹೋಲಿಕೆ ಮಾಡಿ ತಯಾರಾದ ಮುಖವಾಡ == ಭೂತಗಳು ಹಿಡಿವ ಆಯುಧ == ಅಡ್ಯಾಣೊ ಎಂದರೆ ಗುರಾಣಿಯೆಂದು ತಿಳಿಯಬಹುದು. ಕಡ್ತಲೆ ಎಂದರೆ ಬಾಳ್ ಕತ್ತಿ ಕತ್ತಿ ಕೆಂಡೊ ಚವಲೊ ಬಾಣ ಬಿಲ್ಲು ಬೆತ್ತ - ಜೋಡಿ ಬೆತ್ತವನ್ನು ಬೆಳ್ಳಿಕಟ್ಟದಲ್ಲಿ ತಯಾರಿಸಲಾಗುತ್ತದೆ. ಸುರಿಯೆ - ಒಂದು ವಿಧದ ಕತ್ತಿ ಸೂಟೆ - ತೆಂಗಿನ ಮಡಲಿನಿಂದ ಅಥವಾ ಬಿದಿರಿನಿಂದ ತಯಾರಿಸಲಾದ ಸೂಟೆಯು ಒಂದು ಕೈಯಲ್ಲಿ ಹಿಡಯುವಷ್ಟು ಉದ್ದ ಇರುತ್ತದೆ. ಕೆಲವು ಕಡೆ ರಾತ್ರಿಯಿಡೀ ಉರಿಯುವ ದೊಡ್ಡ ಸೂಟೆ ಕಟ್ಟುತ್ತಾರೆ. == ಉಲ್ಲೇಖಗಳು ==