ಮಡ್‍ಸ್ಕಿಪ್ಪರ್ ಗೋಬಿಡೆ ಕುಟುಂಬದ ಪೆರಿಯಾಫ್ತಾಲ್ಮಿನೆ ಅಧಿಕುಟುಂಬಕ್ಕೆ ಸೇರಿದ ಕಡಲ ಮೀನು. ಸಮುದ್ರದ ಕಿನಾರೆಯ ಜೌಗು ಅಳಿವೆ ಪ್ರದೇಶಗಳಲ್ಲಿ, ಉಬ್ಬರವಿಳಿತ ಪ್ರದೇಶಗಳಲ್ಲಿ ಕಾಣಸಿಗುತ್ತದೆ. ಸಿಹಿನೀರು-ಉಪ್ಪು ನೀರೆಡರಲ್ಲೂ ಬದುಕಬಲ್ಲದು (ಆಂಫಿಡ್ರೊಮಸ್). == ವ್ಯಾಪ್ತಿ == ಪೆರಿಯಾಫ್ತಾಲ್ಮಸ್ ಜಾತಿಯ ಮೀನು ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರಗಳಲ್ಲಿ ಪೂರ್ವ ಆಫ್ರಿಕಾದಿಂದ ಆಸ್ಟ್ರೇಲಿಯಾವರೆಗಿನ ವಿಸ್ತಾರ ಪ್ರದೇಶಗಳಲ್ಲಿ ಇವು ಕಂಡುಬರುತ್ತವೆ. == ದೇಹರಚನೆ == ಇದೊಂದು ಚಿಕ್ಕ ಗಾತ್ರದ ವಿಚಿತ್ರಾಕೃತಿಯ ಮೀನು. ಸುಮಾರು 25 ಸೆಂ.ಮೀ ವರೆಗೆ ಬೆಳೆಯಬಲ್ಲದು. ಎದೆಯ ಈಜುರೆಕ್ಕೆಗಳು ಉದ್ದವಾಗಿದ್ದು ಬಲವಾದ ಸ್ನಾಯುಗಳಿಂದ ರಚಿತವಾಗಿವೆ. ಇವುಗಳ ಸಹಾಯದಿಂದ ಕೆಸರಿನಲ್ಲಿ ನೆಗದು ಚಲಿಸುತ್ತವೆ. ಬಾಲದ ಈಜುರೆಕ್ಕೆಯ ಕೆಳ ಅಂಚು ಅಲಗಿನಂತಿದೆ. ಕಣ್ಣುಗಳು ವಿಚಿತ್ರವಾಗಿದ್ದು ನೆತ್ತಿ ಮೇಲೆ ಹೊರಬಂದಂತೆ ಕಾಣುತ್ತವೆ. ಎರಡು ಕಣ್ಣುಗಳೂ ಒಂದಕ್ಕೊಂದು ಸಮೀಪವಿದ್ದು ಆಚೀಚೆ ತಿರುಗಬಲ್ಲುದಾಗಿವೆ (ಹೆಚ್ಚು ಕಡಿಮೆ ಕಪ್ಪೆಯ ಕಣ್ಣನ್ನು ಹೋಲುತ್ತವೆ). ಮೇಲ್ದವಡೆ ಕೆಳಗಿನದಕ್ಕಿಂತ ಹೆಚ್ಚು ಮುಂಚಾಚಿದೆ. ಉಭಯವಾಸಿಯಂತೆ ನೀರಿನಲ್ಲೂ ಗಾಳಿಯಲ್ಲೂ ಉಸಿರಾಡಬಲ್ಲುದು. ಎದೆಯ ಈಜುರೆಕ್ಕೆಗಳನ್ನು ಮುಂಗಾಲಿನಂತೆ ಉಪಯೋಗಿಸಿ ಕೆಸರಿನಲ್ಲಿ ನೆಗೆಯುವುದು, ಕಿನಾರೆಯಲ್ಲಿರುವ ಮ್ಯಾಂಗ್ರೋವ್ ಸಸ್ಯಗಳ ಬೇರುಗಳ ಮೇಲೆ ಹತ್ತುವುದು ಇದರ ಸ್ವಭಾವ. ಇದರಿಂದಾಗಿ ಇದಕ್ಕೆ ಮಡ್ ಸ್ಕಿಪ್ಪರ್ ಎಂದು ಹೆಸರು. == ಆಹಾರ == ಕೆಸರಿನಲ್ಲಿರುವ ಸಣ್ಣ ಏಡಿಗಳು, ಕೀಟಗಳು, ಹುಳುಗಳು ಇದರ ಆಹಾರ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == 2019-04-24 ವೇಬ್ಯಾಕ್ ಮೆಷಿನ್ ನಲ್ಲಿ. :