ಪತ್ರಕರ್ತ, ಬಾನುಲಿ ಪ್ರಸಾರಕ ಹಾಗು ಸಾಹಿತಿ ಮಾ.ನಾ. ಚೌಡಪ್ಪನವರು ಹುಟ್ಟಿದ್ದು ೧೯೦೯ರ ಜುಲೈ ೨೯ ರಂದು. ತುಮಕೂರು ಜಿಲ್ಲೆ, ತುರುವೇಕೆರೆ ತಾಲೂಕಿನ ಮಾಯಸಂದ್ರ ನಾರಸೀದೇವರಯ್ಯ ಹಾಗು ಲಕ್ಷ್ಮೀದೇವಮ್ಮ ಅವರ ಮೊದಲ ಮಗನಾದ ಚೌಡಪ್ಪ, ಮೈಸೂರಿನಲ್ಲಿ ಇಂಟರ್ರ್ಮೀಡಿಯೆಟ್ ಓದುತ್ತಿದ್ದಾಗ, ತಮ್ಮ ಗುರುಗಳಾದ ನಾ.ಕಸ್ತೂರಿ ಅವರ ಪ್ರಭಾವದಿಂದ ಸಾಹಿತ್ಯ, ಬಾನುಲಿ ಪ್ರಸಾರ ಮತ್ತು ಇತಿಹಾಸಗಳಲ್ಲಿ ಆಸಕ್ತಿ ಬೆಳೆಸಿಕೊಂಡರು. == ವೃತ್ತಿ ಜೀವನ == ಮೈಸೂರು ಮತ್ತು ಮದರಾಸು ಆಕಾಶವಾಣಿಗಳಲ್ಲಿ ಉದ್ಘೋಷಕ ಮತ್ತು ವಾರ್ತಾವಿಭಾಗದಲ್ಲಿ ದುಡಿಮೆ. ನಂತರ ಪತ್ರಿಕೋದ್ಯಮಿ ಬಿ.ಎನ್.ಗುಪ್ತ ಅವರ ಜೊತೆ ಸೇರಿ ಪ್ರಜಾಮತ ವಾರಪತ್ರಿಕೆ ಸ್ಥಾಪನೆ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಬ್ರಿಟಿಷರ ಆಡಳಿತ ವ್ಯಾಪ್ತಿಯಲ್ಲಿದ್ದ ಮೈಸೂರು ಸಂಸ್ಥಾನದವರು ಪ್ರಜಾಮತ ಪ್ರಕಟಣೆಯನ್ನು ನಿಷೇಧಿಸಿದಾಗ, ರಾತ್ರೋರಾತ್ರಿ ಮುಂಬಯಿ ಕರ್ನಾಟಕದ ಭಾಗವಾಗಿದ್ದ ಹುಬ್ಬಳ್ಳಿಗೆ ಹೋಗಿ, ಅಲ್ಲಿಂದ ಪ್ರಜಾಮತವನ್ನು ಹೊರಡಿಸಿದ ಸಾಹಸಿ ಚೌಡಪ್ಪ. ಸಂಯುಕ್ತಕರ್ನಾಟಕ, ಕನ್ನಡದ ಮೊದಲ ಸಿನೆಮಾ ಪತ್ರಿಕೆ ವಾಕ್ಚಿತ್ರ, ಕಥಾಂಜಲಿ ಹೀಗೆ ಹಲವಾರು ಪತ್ರಿಕೆಗಳಲ್ಲಿ ಕೆಲಸಮಾಡಿ ನಂತರ ಬೆಂಗಳೂರು ಆಕಾಶವಾಣಿಯಲ್ಲಿ ಸಹನಿರ್ಮಾಪಕರಾಗಿ ಕಾರ್ಯ ನಿರ್ವಹಣೆ. ಆಕಾಶವಾಣಿಯಿಂದ ನಿವೃತ್ತರಾದ ಮೇಲೆ, ಕೆಲಕಾಲ ಕಾಂಗ್ರೆಸ್ ಪಕ್ಷದ ಕಾಂಗ್ರೆಸ್ ಸಂದೇಶ ಎಂಬ ಪತ್ರಿಕೆಯ ಪ್ರಕಟಣೆಯ ಜವಾಬ್ದಾರಿ ನಿರ್ವಹಣೆ. ೧೯೭೨ರಲ್ಲಿ ದೇವರಾಜ ಅರಸು ಅವರು ಕರ್ನಾಟಕದ ಮುಖ್ಯಮಂತ್ರಿಗಳಾದಾಗ, ಚೌಡಪ್ಪನವರನ್ನು ಮತ್ರಿಕಾ ಕಾರ್ಯದರ್ಶಿಗಳನ್ನಾಗಿ ಮಾಡಿಕೊಳ್ಳುವ ಇಂಗಿತ ವ್ಯಕ್ತಪಡಿಸಿದರು. ಇದೇ ಸಮಯಕ್ಕೆ ನಿರಂಜನ ಅವರು ತಾವು ಪ್ರಧಾನ ಸಂಪ್ಪಾದಕರಾಗಿದ್ದ ಕಿರಿಯರ ವಿಶ್ವಕೋಶ-ಜ್ಞಾನಗಂಗೋತ್ರಿಗೆ ಸಾಹಿತ್ಯ ಸಂಪಾದಕರಾಗಿ ಬರುವಂತೆ ಆಹ್ವಾನಿಸಿದರು. ಚೌಡಪ್ಪನವರು ಆಯ್ದುಕೊಂಡದ್ದು ಜ್ಞಾನಗಂಗೋತ್ರಿ ಕೆಲಸವನ್ನು!! == ಸಾಹಿತ್ಯ == ಆಕಾಶವಾಣಿ ನಿಲಯಗಳಲ್ಲಿ ಕೆಲಸ ಮಾಡುವಾಗ ಚೌಡಪ್ಪನವರು ರಚಿಸಿ ಪ್ರಸ್ತುತ ಪಡಿಸುತ್ತಿದ್ದ ಶಬ್ದಚಿತ್ರಗಳು, ರೇಡಿಯೋ ರೂಪಕಗಳು ಬಾನುಲಿ ಕೇಳುಗರಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದವು. ಇತಿಹಾಸದ ಬಗ್ಗೆ ಅಪಾರ ಒಲವು ಹೊಂದಿದ್ದ ಚೌಡಪ್ಪನವರು ಬರೆದ ಐತಿಹಾಸಿಕ ಕಾದಂಬರಿ "ಶ್ರೀ ಕೃಷ್ಣಭೂಪಾಲ" ಮೈಸೂರು ರಾಜವಂಶದ ದೊರೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಲಾವಧಿಯ ಹಂದರದ ಈ ಕಾದಂಬರಿಗೆ ಮೈಸೂರು ಸರ್ಕಾರದ ಪ್ರಶಸ್ತಿ ದೊರೆಯಿತು. ಚೌಡಪ್ಪನವರು ರಚಿಸಿದ ಮತ್ತೊಂದು ಕಾದಂಬರಿ "ಕುಂತಿ" ಮಹಾಭಾರತದ ಕುಂತಿ ಪಾತ್ರದ ಮನಸ್ಸಿನ ಒಳನೋಟಗಳನ್ನು ಸೂಕ್ಷ್ಮವಾಗಿ ಚಿತ್ರಿಸುವ ಕೃತಿ. "ಕುಂತಿ" ಹೈಸ್ಕೂಲು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿ ಸೂಚಿತವಾಗಿತ್ತು. ಚೌಡಪ್ಪನವರು ಇತಿಹಾಸ, ಸಾಹಿತ್ಯ, ರಂಗಭೂಮಿ, ಚಲನಚಿತ್ರೋದ್ಯಮ - ಈ ವಿಷಯಗಳ ಬಗ್ಗೆ ವಿವಿದ ವಿಷಯ ವಿಶ್ವಕೋಶಗಳಿಗೆ ಪಾಂಡಿತ್ಯಪೂರ್ಣ ಲೇಖನಗಳನ್ನು ಬರೆದರು. ಕನ್ನಡ ಚಲನಚಿತ್ರ ಪತ್ರಿಕೋದ್ಯಮದ ಆದ್ಯಪ್ರವರ್ತಕರಲ್ಲಿ ಒಬ್ಬರಾದ ಚೌಡಪ್ಪನವರನ್ನು ಕನ್ನಡ ವಾಕ್ಚಿತ್ರ ಸುವರ್ಣ ಮಹೋತ್ಸವ, ಭಾರತೀಯ ವಾಕ್ಚಿತ್ರ ಮಹೋತ್ಸವಗಳ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕರ್ನಾಟಕ ಸರ್ಕಾರವು ಅವರಿಗೆ ಗೌರವ ಮಾಸಾಶನವನ್ನು ನೀಡಿ ಗೌರವಿಸಿತು. ಮಾ.ನಾ.ಚೌಡಪ್ಪನವರು ೧೯೮೫ರ ಫೆಬ್ರವರಿ ೨೦ ರಂದು ಬೆಂಗಳೂರಿನಲ್ಲಿ ನಿಧನರಾದರು. ೨೦೦೯ ಮಾ.ನಾ.ಚೌಡಪ್ಪನವರ ಜನ್ಮ ಶತಮಾನೋತ್ಸವ ವರ್ಷ. ಆ ಸಂದರ್ಭದಲ್ಲಿ ಶ್ರೀ ಕೃಷ್ಣ ಭೂಪಾಲ ಕಾದಂಬರಿಯನ್ನು ಮರುಪ್ರಕಟಣೆ ಮಾಡಲಾಯಿತು. == ಕಾದಂಬರಿಗಳು == ಕುಂತಿ ಶ್ರೀಕೃಷ್ಣ ಭೂಪಾಲ == ನಾಟಕಗಳು == ಚಂದ್ರಗುಪ್ತ ಕುಮಾರ ಸಂಭವ == ಮಕ್ಕಳ ಪುಸ್ತಕಗಳು == ರಾಷ್ಟ್ರೋತ್ಥಾನದ ಭಾರತ ಭಾರತಿ ಮಕ್ಕಳ ಪುಸ್ತಕ ಮಾಲಿಕೆಗಾಗಿ ಬರೆದ ಕೃತಿಗಳು ವಿಧುರ ಸರ್. ಕೆ ಶೇಷಾದ್ರಿ ಅಯ್ಯರ್ ಪಿ. ಕೋದಂಡ ರಾವ್ == ಉಪಸಂಪಾದಕ/ಸಂಪಾದಕರಾಗಿ ಕೆಲಸ == ಪ್ರಜಾಮತ ಕಥಾಂಜಲಿ ಸಂಯುಕ್ತ ಕರ್ನಾಟಕ ಜ್ಞಾನ ಗಂಗೋತ್ರಿ (ಕಿರಿಯರ ವಿಶ್ವಕೋಶ) == ಉಲ್ಲೇಖಗಳು ==