ಮಾಧವೀಲತೆ ಒಂದು ಮರಬಳ್ಳಿ. ಮಾಲ್ಪೀಘಿಯೇಸೀ ಕುಟುಂಬಕ್ಕೆ ಸೇರಿದ ಹಂಬುಸಸ್ಯ. ವಸಂತದೂತಿ, ಚಂದ್ರವಳ್ಳಿ, ಮಧುಮಾಲತಿ ಮುಂತಾದ ಆಕರ್ಷಕ ಪರ್ಯಾಯ ನಾಮಗಳಿವೆ. ಇದನ್ನು ಮಲೆನಾಡಿನಲ್ಲಿ ಗಂಚೀ ಹಂಬು ಎಂದು ಕರೆಯಲಾಗುತ್ತದೆ. ಇದರ ಸಸ್ಯವೈಜ್ಞಾನಿಕ ಹೆಸರು ಹಿಪ್ಟೇಜ್ ಬೆಂಗಾಲೆನ್ಸಿಸ್. ದಕ್ಷಿಣ ಏಷಿಯಾ ಪ್ರದೇಶದ ಮೂಲನಿವಾಸಿ. ಈ ಸಸ್ಯಗಳ ಸಂಖ್ಯೆ ಬಹಳ ಕಡಿಮೆಯಾಗಿದ್ದು, ಇದರ ಸಂರಕ್ಷಣೆ ಮಾಡಬೇಕಾಗಿದೆ. ಸದಾಹಸುರಾಗಿರುವ ಇದು ತನ್ನ ಚೆಲುವಾದ ರೂಪದಿಂದಲೂ ಸುಗಂಧಪೂರಿತ ಹೂವುಗಳಿಂದಲೂ ಬಲು ಪ್ರಾಚೀನ ಕಾಲದಿಂದ ಅಲಂಕಾರ ಸಸ್ಯವಾಗಿ ಪ್ರಸಿದ್ಧವಾಗಿದೆ. ಕಾಳೀದಾಸನ ನಾಟಕದಲ್ಲಿ ಇದರ ಉಲ್ಲೇಖವಿದೆ. ಹರಿಹರನ ರಗಳೆಗಳಲ್ಲೂ ಈ ಹೂವಿನ ವರ್ಣನೆಯನ್ನು ಕಾಣಬಹುದು. == ವ್ಯಾಪ್ತಿ == ಭಾರತಾದ್ಯಂತ ಇದನ್ನು ನೋಡಬಹುದು. ಅಂಡಮಾನ್ ದ್ವೀಪಸ್ತೋಮಗಳಲ್ಲೂ ಉಂಟು. ಮೈದಾನಗಳಿಂದ ಹಿಡಿದು ಸುಮಾರು 2000 ಮೀ ಎತ್ತರದ ಬೆಟ್ಟ ಪ್ರದೇಶಗಳಲ್ಲಿ ಪ್ರಧಾನವಾಗಿ ಆರ್ದ್ರತೆ ಹೆಚ್ಚಾಗಿರುವಂಥ ನೆಲೆಗಳಲ್ಲಿ, ಹುಲುಸಾಗಿ ಬೆಳೆಯುತ್ತದೆ. == ವಿವರಗಳು == ತೊಗಟೆ ಕಂದುಬಣ್ಣದ್ದು, ಸಿಪ್ಪೆ ಸಿಪ್ಪೆಯಾಗಿ ಸುಲಿದುಕೊಳ್ಳುತ್ತದೆ. ಎಲೆಗಳು ಸರಳ, ಅಭಿಮುಖ ರೀತಿಯಲ್ಲಿ ಜೋಡಣೆಗೊಂಡಿದೆ. ಒಂದೊಂದೂ 10-15 ಸೆ.ಮೀ ಉದ್ದದವೂ ದೀರ್ಘವೃತ್ತದಾಕಾರವೂ ಆಗಿವೆ. ಹೂಗಳು ಸುಗಂಧಯುಕ್ತ, ರೇಷ್ಮೆಯಂತೆ ಮೃದು; ಅಸೀಮಾಕ್ಷಿ ಮಂಜರಿಗಳಲ್ಲಿ ಅರಳುವುವು. ದಳಗಳು ಬಿಳಿ ಬಣ್ಣದವು; ಇವುಗಳ ಅಂಚು ಕುಚ್ಚುಗಳಿಂದ ಕೂಡಿದೆ. ಕಾಯಿ ಮೂರು ರೆಕ್ಕೆಗಳುಳ್ಳ ಪಕ್ಷಫಲ (ಸಮಾರ). ಮಧ್ಯದ ರೆಕ್ಕೆ ಅಕ್ಕಪಕ್ಕದವಕ್ಕಿಂತ ದೊಡ್ಡದಾಗಿದೆ. ಫಲಪ್ರಸಾರ ಗಾಳಿಯ ಮೂಲಕ ನಡೆಯುತ್ತದೆ. == ಕೃಷಿ == ಮಾಧವೀಲತೆಯನ್ನು ಬೀಜಗಳಿಂದ ಇಲ್ಲವೆ ಕಸಿತುಂಡುಗಳಿಂದ ವೃದ್ಧಿಸಬಹುದು. ಇದು ಶೀಘ್ರಗತಿಯಲ್ಲಿ ಬೆಳೆಯುವುದರಿಂದಲೂ ವರ್ಷಪೂರ್ತಿ ಎಲೆಗಳಿಂದ ಕೂಡಿದ್ದು ತಂಪಾದ ನೆರಳು ನೀಡುವುದರಿಂದಲೂ ಜೊತೆಗೆ ಸುವಾಸನಾಯುಕ್ತ ಹೂಗಳಿರುವುದರಿಂದಲೂ ತೋಟಗಳಲ್ಲಿ ಬೆಳೆಸಲು ಯೋಗ್ಯವೆನಿಸಿದೆ. == ಉಪಯೋಗಗಳು == ಎಲೆಗಳನ್ನು ಚರ್ಮವ್ಯಾಧಿ ಚಿಕಿತ್ಸೆಯಲ್ಲೂ ಕಜ್ಜಿ ನಿವಾರಣೆಗೂ ಬಳಸುವುದಿದೆ. ದೀರ್ಘಕಾಲಿಕ ಸಂಧಿವಾತ, ಉಬ್ಬಸಗಳಿಗೂ ಇದು ಔಷಧಿಯಾಗಿ ಬಳಕೆಯಲ್ಲಿದೆ. ಚೌಬೀನೆಯಿಂದ ಹತ್ಯಾರುಗಳ ಹಿಡಿ ಮಾಡುವುದುಂಟು. ಇದನ್ನು ಅಲಂಕಾರಕ್ಕಾಗಿ ಬೆಳೆಸುತ್ತಾರೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಇದರ ಬೇರು ಹಾಗೂ ಎಲೆಗಳು ಉಪಯೋಗವಾಗುತ್ತದೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == 2022-12-02 ವೇಬ್ಯಾಕ್ ಮೆಷಿನ್ ನಲ್ಲಿ. () , () " ". (). (), (). - , , , 2013-12-03 ವೇಬ್ಯಾಕ್ ಮೆಷಿನ್ ನಲ್ಲಿ.- .