ಮಾಲಿ (ಅಧಿಕೃತ ಹೆಸರು - ಮಾಲಿ ಗಣರಾಜ್ಯ) ಪಶ್ಚಿಮ ಆಫ್ರಿಕಾದಲ್ಲಿ ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿರುವ ಒಂದು ರಾಷ್ಟ್ರ. ಆಫ್ರಿಕಾ ಖಂಡದಲ್ಲಿ ಮಾಲಿ ೭ನೆಯ ಅತಿ ದೊಡ್ಡ ರಾಷ್ಟ್ರ. ಮಾಲಿ ಉತ್ತರಕ್ಕೆ ಅಲ್ಜೀರಿಯ, ಪೂರ್ವಕ್ಕೆ ನೈಜರ್, ದಕ್ಷಿಣದಲ್ಲಿ ಬುರ್ಕಿನಾ ಫಾಸೊ ಮತ್ತು ಕೋತ್ ದ ಐವರಿ, ನೈಋತ್ಯದಲ್ಲಿ ಗಿನಿ ಹಾಗೂ ಪಶ್ಚಿಮಕ್ಕೆ ಸೆನೆಗಾಲ್ ಮತ್ತು ಮಾರಿಟಾನಿಯ ದೇಶಗಳಿವೆ. ಮಾಲಿಯ ಉತ್ತರ ಭಾಗವು ಸಹಾರಾ ಮರುಭೂಮಿಯ ಅಂಗವಾಗಿದೆ. ಹೆಚ್ಚಿನ ಜನವಸತಿಯುಳ್ಳ ದಕ್ಷಿಣದ ಭಾಗವು ನೈಜರ್ ಮತ್ತು ಸೆನೆಗಾಲ್ ನದಿಗಳ ಬಯಲು ಪ್ರದೇಶವಾಗಿದೆ. ಹಿಂದೆ ಫ್ರೆಂಚ್ ಸುಡಾನ್ ಎಂದು ಕರೆಯಲ್ಪಡುತ್ತಿದ್ದ ಈ ದೇಶದ ಹೆಸರು ಈಗ ಮಾಲಿ ಸಾಮ್ರಾಜ್ಯದ ನೆನಪಿಗಾಗಿ ಮಾಲಿ ಎಂದಾಗಿದೆ. ಸ್ಥಳೀಯ ಬಂಬಾರಾ ಭಾಷೆಯಲ್ಲಿ ಮಾಲಿ ಪದದ ಅರ್ಥ ನೀರುಕುದುರೆ.