ಮಿಲೊಲೋಂತಿಡೀ ಕೋಲಿಯಾಪ್ಟರ ಗಣದ ಸ್ಕಾರಬಾಯ್ಡಿಯ ಅಧಿಕುಟುಂಬಕ್ಕೆ ಸೇರಿದ ಕೀಟಕುಟುಂಬ. ಈ ಕುಟುಂಬದಲ್ಲಿ ೭೫೦ ಕ್ಕಿಂತ ಹೆಚ್ಚು ಜಾತಿಗಳಿದ್ದು ೧೧,೦೦೦ ಕ್ಕಿಂತ ಹೆಚ್ಚು ಪ್ರಭೇದಗಳಿವೆ. ಇದಕ್ಕೆ ಸೇರಿದ ಕೀಟಗಳು ಗಿಡಮರಗಳಿಗೆ ಹಾನಿಕಾರಕವಾಗಿದ್ದು ಮೇ ಬೀಟಲ್ಸ್, ಜೂನ್ ಬೀಟಲ್ಸ್ ಅಥವಾ ಕಾಕ್‌ಷೇಫರ್‌ಗಳೆಂಬ ಹೆಸರಿನಿಂದ ಪ್ರಸಿದ್ಧವಾಗಿವೆ. ಇವುಗಳ ಗಾತ್ರದಲ್ಲೂ ಮೈಬಣ್ಣದಲ್ಲೂ ಅಪಾರ ವೈವಿಧ್ಯವನ್ನು ಕಾಣಬಹುದು. ಭಾರತಾದ್ಯಂತ ಇವುಗಳ ವ್ಯಾಪ್ತಿಯುಂಟು. == ದೇಹರಚನೆ == ದೇಹದ ಗಾತ್ರ 10-15 ಮಿಮೀ. ದೃಢವಾದ ಮೈಕಟ್ಟು. ಮಣ್ಣು ತೋಡಲು ಅನುಕೂಲವಾಗಿರುವ ಗರಗಸದಂಥ ರಚನೆಗಳುಳ್ಳ ಮುಂಗಾಲುಗಳು, ಆಹಾರವನ್ನು ಕತ್ತರಿಸಲು ಸಹಾಯಕವಾಗುವಂಥ ಬಾಯಿ, ಆಂಟೆನದ ಕೊನೆಯ ಮೂರು ಖಂಡಗಳು ಎಲೆಯಾಕಾರದವಾಗಿರುವುದು. ಚಿಪ್ಪಿನಾಕಾರದ ಎಲಿಟ್ರ ಇವು ಈ ಜೀರುಂಡೆಗಳ ಲಕ್ಷಣಗಳ ಪೈಕಿ ಕೆಲವು. == ನಡವಳಿಕೆ == ಇವು ಹಗಲಿನ ವೇಳೆಯನ್ನು ಭೂಮಿಯೊಳಗೆ 10-20 ಸೆಂಮೀ ಆಳದಲ್ಲಿ ಕಳೆಯುತ್ತವೆ. ರಾತ್ರಿ ಹೊತ್ತು ಮಾತ್ರ ನೆಲದಿಂದ ಹೊರಬಂದು ಗಿಡಮರಗಳನ್ನು ತಿನ್ನುವುವು. == ಸಂತಾನೋತ್ಪತ್ತಿ == ಬೇಸಗೆ ಕಳೆದು ಮೇ-ಜೂನ್ ತಿಂಗಳುಗಳಲ್ಲಿ ಮಾತ್ರ ಗಂಡು ಹೆಣ್ಣು ಕೀಟಗಳು ಭೂಮಿಯ ಮೇಲಕ್ಕೆ ಬಂದು ಸಂತಾನ ಕ್ರಿಯೆಯಲ್ಲಿ ತೊಡಗುವುವು. ಆ ಸಮಯದಲ್ಲಿ ಮಾತ್ರ ಹೊರಗೆ ಕಾಣಿಸಿಕೊಳ್ಳುವುದರಿಂದ ಇವಕ್ಕೆ ಮೇ ಅಥವಾ ಜೂನ್ ಬೀಟಲ್ಸ್ ಎಂಬ ಹೆಸರು ಬಂದಿದೆ. ಸಂಭೋಗಾನಂತರ ಎರಡು ಮೂರು ವಾರಗಳಲ್ಲಿ ಹೆಣ್ಣು ನೆಲದೊಳಗೆ ಮಣ್ಣಿನ ಕುಡಿಕೆಯಂಥ ರಚನೆ ರೂಪಿಸಿ ಅದರೊಳಗೆ 30-50 ಮೊಟ್ಟಿಯಿಟ್ಟು ಸತ್ತುಹೋಗುತ್ತದೆ. 10-15 ದಿವಸಗಳ ತರುವಾಯ ಮೊಟ್ಟೆಯೊಡೆದು ಮರಿ ಹೊರಬರುತ್ತದೆ. ಸುಮಾರು 3-6 ತಿಂಗಳ ತನಕ ಮಣ್ಣಿನೊಳಗೇ ಹುದುಗಿದ್ದು ಬೇರುಗಳನ್ನು ತಿಂದು ಬೆಳೆದು ಅನಂತರ ಕೋಶಾವಸ್ಥೆ ತಲುಪುವ ಈ ಮರಿಗಳನ್ನು ಗೊಬ್ಬರದ ಹುಳು, ಗೊಣ್ಣೆ ಹುಳು ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಕೋಶಾವಸ್ಥೆಯ ಅವಧಿ 10-14 ದಿವಸಗಳು. ಇದರಿಂದ ಬರುವ ಪ್ರೌಢಕೀಟ ಮುಂದಿನ ಮುಂಗಾರು ಮಳೆಯ ತನಕ ಮಣ್ಣಿನಲ್ಲಿಯೇ ಅಡಗಿದ್ದು, ಅನಂತರ ಹೊರಬಂದು ತನ್ನ ಎಂದಿನ ಗುಪ್ತ ಜೀವನ ಆರಂಭಿಸುತ್ತದೆ. == ಭಾರತದಲ್ಲಿ == ಭಾರತದಲ್ಲಿ ಕಾಣದೊರೆಯುವ ಈ ಜೀರುಂಡೆಗಳ ಹೆಸರುಗಳನ್ನೂ, ಅವು ಹಾಳುಮಾಡುವ ಬೆಳೆಗಳನ್ನೂ ಈ ಮುಂದೆ ಉಲ್ಲೇಖಿಸಿದೆ: ಹೊಲೊಟ್ರೈಕಿಯ ಸೆರೇಟ, ಹೋ. ಕಾನ್‌ಸ್ಯಾಂಗ್ವೀನಿಯ - ಕಬ್ಬು, ಸೇಂಗ, ಜೋಳ, ತರಕಾರಿ ಗಿಡಗಳು ಹೋ. ನೀಲಗಿರಕ - ಕಾಫಿಗಿಡ ಲ್ಯೂಕೊಫೋಲಿಸ್ - ತೆಂಗು, ಅಡಕೆ. == ಉಲ್ಲೇಖಗಳು ==