ಮುಂಜವೆಂಬುದು ಒಂದು ಹುಲ್ಲಿನ ಜಾತಿ. ಭಾರತದಲ್ಲಿ ಇದು ನದಿಯ ಇಕ್ಕೆಲದಲ್ಲಿ ಬೆಳೆಯುವುದನ್ನು ಕಾಣಬಹುದು. ಮಳೆ ಹೆಚ್ಚು ಬೀಳ ಒಣ ಪ್ರದೇಶಗಳಲ್ಲಿಯೂ ಮುಂಜ ಬೆಳೆಯುತ್ತದೆ. ಇದರ ಶಾಸ್ತ್ರೀಯ ನಾಮ (ಸ್ಯಾಕ್ಕರಂ ಮುಂಜಾ). == ಬಳಕೆ == ಮುಂಜದಿಂದ ಹಗ್ಗವನ್ನು ಹೊಸೆಯುತ್ತಾರೆ. ಒಣಗಿದ ಹುಲ್ಲಿನಿಂದ ಬುಟ್ಟಿ, ಬೀಸಣಿಗೆ, ಚಾಪೆ, ಚಪ್ಪರಗಳನ್ನು ನೇಯುತ್ತಾರೆ. ಕಸಪೊರಕೆಯಾಗಿಯೂ ಬಳಸುತ್ತಾರೆ. ಮುಂಜವು ತನ್ನ ಬೇರುಗಳನ್ನು ನೆಲದೊಳಗೆ ಅಗಲವಾಗಿ ಹಬ್ಬಿಸಿ ಗಟ್ಟಿಯಾಗಿ ತಳವೂರಿ ನಿಲ್ಲುವ ಹುಲ್ಲು. ಅಂತಲೆ ಇದನ್ನು ಬೇಲಿಯಾಗಿಯೂ ಬೆಳೆಸಲು ಬರುತ್ತದೆ. ಮಳೆ ಗಾಳಿಗಳಿಗೆ ಮಣ್ಣು ಕೊಚ್ಚಿಹೋಗದಂತೆ ತಡೆಯಲು ಮುಂಜವನ್ನು ಬೆಳೆಸಬಹುದು. ಉಪನಯನ ಸಂಸ್ಕಾರದಲ್ಲಿ ಮುಂಜದಿಂದ ಹೊಸೆದ ಹಗ್ಗವನ್ನು ಉಡಿದಾರದಂತೆ ವಟುವಿನ ಸೊಂಟಕ್ಕೆ ಕಟ್ಟುತ್ತಾರೆ. ಈ ಹಗ್ಗವನ್ನು ಮೌಂಜೀ ಎನ್ನುತ್ತಾರೆ. ಅಂತಲೆ ಉಪನಯನಕ್ಕೆ ಮುಂಜಿ, ಮುಂಜಿವೆ ಎಂಬ ಪದಗಳು ಪರ್ಯಾಯವಾಗಿ ಬಳಕೆಯಾಗುತ್ತವೆ.