ಮುಹರ್‍ರಮ್ (ಅರಬ್ಬಿ: المحرم) — ಹಿಜರಿ ಕ್ಯಾಲೆಂಡರ್‌ನ ಪ್ರಥಮ ತಿಂಗಳು. ಇಸ್ಲಾಮೀ ನಂಬಿಕೆಯ ಪ್ರಕಾರ ನಾಲ್ಕು ಪವಿತ್ರ ತಿಂಗಳುಗಳಲ್ಲೊಂದು. ಇಸ್ಲಾಮೀ ವರ್ಷವು ಈ ತಿಂಗಳ ಒಂದನೇ ದಿನಾಂಕದಿಂದ ಆರಂಭವಾಗುತ್ತದೆ. ಇದನ್ನು ದೇವರ ತಿಂಗಳು (ಅರಬ್ಬಿ: شهر الله) ಎಂದು ಕೂಡ ಕರೆಯಲಾಗುತ್ತದೆ. ಈ ತಿಂಗಳ ಹತ್ತನೇ ದಿನಕ್ಕೆ ಮುಸಲ್ಮಾನರು ವಿಶೇಷ ಮಹತ್ವ ಕಲ್ಪಿಸುತ್ತಾರೆ. ಸುನ್ನಿ ಮುಸ್ಲಿಮರು ಆ ದಿನ ಉಪವಾಸ ಆಚರಿಸಿದರೆ ಶಿಯಾ ಮುಸ್ಲಿಮರು ಹುಸೈನ್ ಬಿನ್ ಅಲಿಯವರ ನಿಧನಕ್ಕಾಗಿ ಶೋಕಾಚರಣೆ ಮಾಡುತ್ತಾರೆ. ಮುಹರ್‍ರಮ್ ತಿಂಗಳಿಗೆ ಇಸ್ಲಾಮೀ ಪೂರ್ವ ಕಾಲದಿಂದಲೇ ಅರಬ್ಬರು ವಿಶೇಷ ಪಾವಿತ್ರ್ಯತೆ ನೀಡುತ್ತಿದ್ದರು. ಅವರು ಈ ತಿಂಗಳಲ್ಲಿ ಯುದ್ಧ ಮಾಡುತ್ತಿರಲಿಲ್ಲ. == ಅರ್ಥ == ಅರಬ್ಬಿ ಭಾಷೆಯಲ್ಲಿ ಮುಹರ್‍ರಮ್ ಎಂದರೆ ನಿಷಿದ್ಧ. ಈ ತಿಂಗಳನ್ನು ಅರಬ್ಬರು ಯುದ್ಧ ನಿಷಿದ್ಧ ತಿಂಗಳೆಂದು ಪರಿಗಣಿಸುತ್ತಿದ್ದ ಕಾರಣ ಇದಕ್ಕೆ ಈ ಹೆಸರು ಬಂತೆಂದು ಹೇಳಲಾಗುತ್ತದೆ. ಇದಕ್ಕೆ ಪವಿತ್ರ ಎಂಬ ಅರ್ಥವೂ ಇದೆ. ಇಸ್ಲಾಂ ಧರ್ಮದ ನಂತರವೂ ಈ ತಿಂಗಳನ್ನು ಪವಿತ್ರ ಮತ್ತು ಯುದ್ಧ ನಿಷೇಧಿತ ತಿಂಗಳೆಂದು ಪರಿಗಣಿಸಲಾಗುತ್ತಿದೆ. == ವಿಶೇಷ ದಿನಗಳು == === ಆಶೂರಾ === ಈ ತಿಂಗಳ ಹತ್ತನೇ ದಿನವನ್ನು ಆಶೂರಾ ದಿನ (ಅರಬ್ಬಿ: يوم عاشوراء) ಎಂದು ಕರೆಯಲಾಗುತ್ತದೆ. ಇಸ್ಲಾಮೀ ಪೂರ್ವ ಅರಬ್ಬರು ಈ ದಿನವನ್ನು ಗೌರವಿಸಿ ಉಪವಾಸ ಆಚರಿಸುತ್ತಿದ್ದರು. ಮುಹಮ್ಮದ್ ಪೈಗಂಬರರ ಕಾಲದಲ್ಲಿ ಕುರೈಷರು ಈ ದಿನ ಉಪವಾಸ ಆಚರಿಸುತ್ತಿದ್ದರು. ಈ ದಿನ ದೇವರು ಪ್ರವಾದಿ ಮೋಶೆ ಮತ್ತು ಅವರ ಅನುಯಾಯಿಗಳನ್ನು ಫರೋಹನ ಹಿಂಸೆಯಿಂದ ಪಾರು ಮಾಡಿದ ಕಾರಣ ದೇವರಿಗೆ ಧನ್ಯವಾದ ಸಲ್ಲಿಸುವುದಕ್ಕಾಗಿ ಯಹೂದಿಗಳು ಈ ದಿನ ಉಪವಾಸ ಆಚರಿಸುತ್ತಿದ್ದರು. ಆಶೂರಾ ದಿನದಂದು ಮುಹಮ್ಮದ್ ಪೈಗಂಬರರ ಮೊಮ್ಮಗ (ಅಲಿ ಬಿನ್ ಅಬೂ ತಾಲಿಬ್‌ರ ಮಗ) ಹುಸೈನ್ ಬಿನ್ ಅಲಿ ಕರ್ಬಲಾ ಯುದ್ಧದಲ್ಲಿ ಮಡಿದರು. ಅವರ ಸಾವಿಗೆ ಶೋಕವನ್ನು ವ್ಯಕ್ತಪಡಿಸುತ್ತಾ ಶಿಯಾ ಮುಸ್ಲಿಮರು ಈ ದಿನ ಶೋಕಾಚರಣೆ ಮಾಡುತ್ತಾರೆ. ಆದರೆ ಸುನ್ನಿ ಮುಸ್ಲಿಮರು ಮುಹಮ್ಮದ್‌ರ ಆದೇಶದಂತೆ ಈ ದಿನ ಉಪವಾಸ ಆಚರಿಸುತ್ತಾರೆ. === ತಾಸೂಆ === ಈ ತಿಂಗಳ ಒಂಬತ್ತನೇ ದಿನವನ್ನು ತಾಸೂಆ (ಅರಬ್ಬಿ: تاسوعاء) ಎಂದು ಕರೆಯಲಾಗುತ್ತದೆ. ಈ ದಿನಕ್ಕೆ ಯಾವುದೇ ವಿಶೇಷ ಮಹತ್ವವಿಲ್ಲದಿದ್ದರೂ ಮುಹಮ್ಮದ್‌ರ ಆದೇಶದಂತೆ ಸುನ್ನಿ ಮುಸ್ಲಿಮರು ಈ ದಿನ ಉಪವಾಸ ಆಚರಿಸುತ್ತಾರೆ. == ಇದನ್ನೂ ನೋಡಿ == ಹಿಜರಿ ಕ್ಯಾಲೆಂಡರ್ == ಉಲ್ಲೇಖಗಳು ==