ರಾಮಫಲ (' ) ಮೂಲತಃ ವೆಸ್ಟ್ ಇಂಡೀಸ್ ದ್ವೀಪ ಸಮೂಹಗಳ ನಿವಾಸಿ. ಈಗ ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ಬೆಳೆಯಲ್ಪಡುತ್ತಿದೆ. ಸೀತಾಫಲ, ಹನುಮಾನ್ ಫಲ ಮುಂತಾದ ಸಸ್ಯಗಳಿಗೆ ಹತ್ತಿರದ ಸಂಬಂಧಿ. == ಸಸ್ಯಶಾಸ್ತ್ರೀಯ ವರ್ಗೀಕರಣ == ಇದು ಅನೋನಾಸಿ () ಕುಟುಂಬಕ್ಕೆ ಸೇರಿದ್ದು, ಅನೋನ ರೆಟಿಕುಲೇಟ ( ) ಎಂದು ಸಸ್ಯಶಾಸ್ತ್ರೀಯ ಹೆಸರು ಇದೆ. == ಸಸ್ಯದ ಗುಣಲಕ್ಷಣಗಳು == ಇದೊಂದು ಪರ್ಣಪಾತಿ ಅಥವಾ ಅರ್ಧಪರ್ಣಪಾತಿ ಮರ. ಎಲೆ ಉದುರಿಸುವಂತಹ ರಾಮಫಲದ ಗಿಡವು ಸಾಮಾನ್ಯವಾಗಿ 6-10 ಮೀ.ವರೆಗೆ ಬೆಳೆಯುತ್ತದೆ. ರಾಮಫಲ ಹಣ್ಣಿನ ಮೇಲೈಯು ನುಣುಪಾಗಿದ್ದು, ಸೀತಾಫಲದ ಹೊರಮೈ ಒರಟಾಗಿರುತ್ತದೆ. ಇದೇ ರೀತಿ ಲಕ್ಷ್ಮಣಫಲವೂ ಇದ್ದು, ಇದರ ಮೈ ಮುಳ್ಳುಗಳಿಂದ ಕೂಡಿರುತ್ತದೆ. ಕಾಂಡ ಗಟ್ಟಿಯಾಗಿದೆ. ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಬಲಿತ ರೆಂಬೆಯ ಕಕ್ಷದಲ್ಲಿ 2-4 ಹೂಗಳು ಪುಟ್ಟಗೊಂಚಲಿನ ರೂಪದಲ್ಲಿ ಅರಳುವುವು. ಹೂ ಬಿಡುವ ಶ್ರಾಯ ಫೆಬ್ರವರಿ-ಮಾರ್ಚ್ ತಿಂಗಳುಗಳು. ಹಣ್ಣು, ಮಾಸಲು ಬಣ್ಣದ್ದು. ಹೆಚ್ಚು ಕಡಿಮೆ ಮನುಷ್ಯನ ಹೃದಯದ ಆಕಾರದಲ್ಲಿದೆ. ಹಣ್ಣಿನ ಒಳಗೆ ತಿರುಳು ಹೆಚ್ಚಾಗಿರುತ್ತದೆ. ರಾಮಫಲ ಒಂದು ಸಮೂಹ ಫಲ; ಹಲವಾರು ಬೆರಿಗಳು ಕೂಡಿಕೊಂಡು, ಮೃದುವಾದ ಹೂಗೊಂಚಲಿನ ಪೀಠದೊಂದಿಗೆ ಸೇರಿಕೊಂಡು ಮಾಂಸಲವಾದ ತಿರುಳಿನಿಂದ ಕೂಡಿದ ರಚನೆ; ತಿರುಳಿನಲ್ಲಿ ಸಕ್ಕರೆ, ಪಿಷ್ಠ ಅಧಿಕ ಪ್ರಮಾಣದಲ್ಲಿವೆ. ಹಣ್ಣಿನ ಮೇಲಿನ ಸಿಪ್ಪೆ ಬಲೆಬಲೆಯಂತೆ ಹುರುಪೆಯುಳ್ಳದ್ದಾಗಿರುತ್ತದೆ. ಹಣ್ಣು ಮಾಗಿದಾಗ ತಿನ್ನಬಹುದು. ರುಚಿ ಅಷ್ಟಾಗಿರದು. ರಾಮಫಲದ ಬೀಜಗಳು ಹಣ್ಣಿನಲ್ಲಿ ಹುದುಗಿದ್ದು, ಒಳ್ಳೆಯ ಔಷಧೀಯ ಗುಣವನ್ನು ಹೊಂದಿರುತ್ತದೆ. ರಾಮಫಲವು ಹೆಚ್ಚು ಆರೈಕೆ ಇಲ್ಲದೆ, ಗೊಬ್ಬರವನ್ನು ಅರಸದೆ, ರೋಗಬಾಧೆ ಇಲ್ಲದೆ ಬೆಳೆಯುತ್ತದೆ. ಇದು ಹೆಚ್ಚು ಕಾಂಡಗಳನ್ನು ಹೊಂದಿದ ಸಾಧಾರಣ ಎತ್ತರದ ಗಿಡ. ಅರೆ ನಿತ್ಯಹರಿದ್ವರ್ಣ ಮರ. == ಬೇಸಾಯ == ರಾಮಫಲವನ್ನು ಬೀಜದಿಂದ ಅಭಿವೃದ್ಧಿ ಮಾಡುತ್ತಾರೆ. ಇದು ಎಲ್ಲ ಬಗೆಯ ಮಣ್ಣುಗಳಲ್ಲೂ ಹುಲುಸಾಗಿ ಬೆಳೆಯಬಲ್ಲುದು. ರಾಮಫಲವನ್ನು ಉದ್ಯಾನಗಳಲ್ಲಿ, ಶಾಲೆ, ಕಛೇರಿ ಮತ್ತು ಬಂಗಲೆಯ ಆವರಣಗಳಲ್ಲಿ ಬೆಳೆಸುತ್ತಾರೆ. ರೈತಾಪಿಜನ ತೋಪುಗಳಲ್ಲಿ, ಹೊಲಗದ್ದೆಗಳ ಅಂಚಿನಲ್ಲಿ ಮತ್ತು ಮನೆಯ ಹಿತ್ತಲುಗಳಲ್ಲಿ ಬೆಳೆಸುತ್ತಾರೆ. ರಾಮಫಲದ ಇನ್ನೊಂದು ಹತ್ತಿರ ಸಂಬಂಧಿ ಮುಳ್ಳುರಾಮಫಲ. == ಉಪಯೋಗಗಳು == ಇದರ ಹಣ್ಣು ರುಚಿಕರ. ಒಳ್ಳೆಯ ಬೇಡಿಕೆ ಹೊಂದಿದೆ. ಇದರ ಬೀಜದಲ್ಲಿ ಸಿ ವಿಟಮಿನ್‌, ಕ್ಯಾಲ್ಸಿಯಂ, ಫಾಸ್ಪರಸ್‌, ಪೊಟಾಷಿಯಂ, ಮೆಗ್ನೇಷಿಯಂಗಳು ಇರುತ್ತವೆ. ರಾಮಫಲದ ತಿರುಳಿನ ರಸ ಶಕ್ತಿವರ್ಧಕ. ಇದರ ಬೀಜದ ಎಣ್ಣೆಯನ್ನು ಕ್ರಿಮಿನಾಶಕವಾಗಿಯೂ ಉಪಯೋಗಿಸುತ್ತಾರೆ. ಇದರ ತೊಗಟೆಯಲ್ಲಿ ಅನೋನೇನ್ ಎಂಬ ಆಲ್ಕಲಾಯ್ಡ್ ಇದೆ : ಇದು ತುಂಬ ಶಕ್ತಿಶಾಲಿ ಪ್ರತಿಬಂಧಕ (ಅಸ್ಟ್ರಿಂಜೆಂಟ್) ಎನಿಸಿದೆ. ಅನೇಕ ತರದ ಖಾಯಿಲೆಗಳನ್ನು ತಡೆಗಟ್ಟುವ ಸಾಮರ್ಥ್ಯ ಈ ಪ್ರತಿಬಂಧಕಕ್ಕೆ ಇದೆ. ಪಕ್ವವಾಗದ ಮತ್ತು ಒಣಗಿದ ಹಣ್ಣು ಆಮಶಂಕೆ ಭೇದಿ ನಿವಾರಣೆಗೆ ಒಳ್ಳೆಯ ಮದ್ದು ಮತ್ತು ಜಂತುನಾಶಕವೂ ಹೌದು. ಬೀಜದ ಪೊಪ್ಪು ಬಹಳ ವಿಷಭರಿತವಾದುದು. == ಆಧಾರ ಗ್ರಂಥಗಳು == 'ವನಸಿರಿ':ಅಜ್ಜಂಪುರ ಕೃಷ್ಣಸ್ವಾಮಿ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ( .) . , 5 1998.