ರಾರ್ಕ್ವಲ್ ಸಿಟೇಸಿಯ ಗಣದ ಬಲೀನಾಪ್ಟಿರಿಡೀ ಕುಟುಂಬಕ್ಕೆ ಸೇರಿದ ಸಾಗರವಾಸಿ ತಿಮಿಂಗಿಲ. ಬಲೀನಾಪ್ಟಿರ ಜಾತಿಯ ಪೈಸೇಲಸ್, ಬೋಯಾಲಿಸ್, ಅಕ್ಯೂಟೊರಾಸ್ಟ್ರೇಟ್ ಮತ್ತು ಎಡೆನಿ ಎಂಬ ಪ್ರಭೇದಗಳಿಗೂ ಸಿಬಾಲ್ಡಸ್ ಜಾತಿಯ ಮಸ್ಕ್ಯುಲಸ್ ಪ್ರಭೇದಕ್ಕೂ ಸಾಮಾನ್ಯವಾಗಿ ಈ ಹೆಸರನ್ನು ಅನ್ವಯಿಸುವುದುಂಟು. == ಶಾರೀರಿಕ ಲಕ್ಷಣಗಳು == ಇವುಗಳ ಗಂಟಲು ಮತ್ತು ಎದೆಗಳ ಮೇಲೆ 2.5-5 ಸೆಂಮೀ ಆಳದ 10-1000 ಉದ್ದುದ್ದನೆಯ ಮಡಿಕೆಗಳಂಥ ತೋಡುಗಳುಂಟು. ಇದು ಇವುಗಳ ಬಲುಮುಖ್ಯ ಲಕ್ಷಣ. ಈ ಮಡಿಕೆಗಳಿಂದಲೇ ಈ ತಿಮಿಂಗಿಲಗಳಿಗೆ ರಾರ್ಕ್ವಲ್ ಎಂದು ಹೆಸರು ಬಂದಿರುವುದು. ಬಾಯಿ ತೆರೆದಾಗ ಅದರ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಈ ಮಡಿಕೆಗಳು ಹೆಚ್ಚಿಸುತ್ತವೆ. ಇವುಗಳ ಇನ್ನೊಂದು ಮುಖ್ಯ ಲಕ್ಷಣವೆಂದರೆ, ಮರಿಗಳು ಬೆಳೆದು ಪ್ರೌಢಾವಸ್ಥೆ ತಲುಪುತ್ತಿದ್ದಂತೆ ಅವುಗಳ ಬಾಯಲ್ಲಿರುವ ಹಲ್ಲುಗಳು ಉದುರಿಹೋಗಿ ಬದಲಿಗೆ ಆಹಾರವನ್ನು ಸೋಸುವ ಸಾಮರ್ಥ್ಯವುಳ್ಳ ಬಲೀನ್ ಎಂಬ ಸೋಸುಕ ರೂಪುಗೊಳ್ಳುವುದು. ರಾರ್ಕ್ವಲ್‌ಗಳೆಲ್ಲವೂ ದೊಡ್ಡಗಾತ್ರದ ಪ್ರಾಣಿಗಳು. ದೇಹದ ಉದ್ದ ೯-೨೦ ಮೀ ಇರುತ್ತದೆ. ದೇಹದ ಆಕಾರ ಈಜಲು ಸಹಾಯಕವಾಗಿರುವಂತೆ ರೂಪಿತವಾಗಿದೆ. ಬಾಯಿಗಿಂತ ಕೊಂಚ ಹಿಂದೆ ದೇಹದ ಎರಡು ಪಾರ್ಶ್ವಗಳಲ್ಲಿ ಎರಡು ಈಜುರೆಕ್ಕೆಗಳೂ ಬೆನ್ನಮೇಲೆ ಒಂದು ಈಜುರೆಕ್ಕೆಯೂ ಇವೆ. ಈಜುವುದರಲ್ಲಿ ಬಲು ನಿಷ್ಣಾತವೆಂದು ಎನಿಸಿರುವ ಈ ತಿಮಿಂಗಿಲಗಳು ತುಂಬ ಶೀಘ್ರಗತಿಯಲ್ಲಿ ಈಜಬಲ್ಲವು; ಗಂಟೆಗೆ ೮ ಕಿಮೀ. ವೇಗದಲ್ಲಿ ಈಜುತ್ತವೆ ಎನ್ನಲಾಗಿದೆ. ಒಂಟೊಂಟಿಯಾಗಿಯೋ ದೊಡ್ಡ ಮಂದೆಗಳಲ್ಲೋ ಈಜುತ್ತ, ಬೆಳಗ್ಗೆ ಮತ್ತು ಸಾಯಂಕಾಲ ಆಹಾರವನ್ನು ಹುಡುಕುತ್ತಾ ಸಾಗುತ್ತವೆ. == ಆಹಾರ == ಮುಖ್ಯವಾಗಿ ಸೀಗಡಿ, ಕೋಪಿಪೋಡ, ಮುಂತಾದ ಸಣ್ಣಗಾತ್ರದ ಪ್ರಾಣಿಗಳನ್ನು ತಿಂದು ಬದುಕುತ್ತವೆ. ಕೆಲವು ಬಗೆಯವು ಮೀನು, ಷಾರ್ಕ್, ಸ್ಕ್ವಿಡ್ಡು ಮುಂತಾದವನ್ನೂ ಕಬಳಿಸುತ್ತವೆ. == ಸಂತಾನೋತ್ಪತ್ತಿ == ಇವುಗಳ ಸಂತಾನವೃದ್ಧಿಯ ಕಾಲ ಚಳಿಗಾಲ. ಒಂದು ಸೂಲಿಗೆ ಸಾಮಾನ್ಯವಾಗಿ ಒಂದೇ ಒಂದು ಮರಿ ಹುಟ್ಟುತ್ತದೆ. ಅಪೂರ್ವವಾಗಿ ಅವಳಿಗಳು ಹುಟ್ಟುವುದೂ ಉಂಟು. ಗರ್ಭಾವಸ್ಥೆಯ ಅವಧಿ ೧೦-೧೨ ತಿಂಗಳು; ೩ ೧/೨ - ೪ ವರ್ಷಗಳಲ್ಲಿ ಮರಿಗಳು ಪ್ರೌಢಾವಸ್ಥೆ ತಲುಪುತ್ತವೆ. == ನೀಲಿ ತಿಮಿಂಗಿಲ == ಸಿಬಾಲ್ಡಸ್ ಜಾತಿಯ ರಾರ್ಕ್ವಲ್ ತಿಮಿಂಗಿಲಕ್ಕೆ ನೀಲಿ ತಿಮಿಂಗಿಲ ಎಂಬ ಹೆಸರೂ ಇದೆ. ಅತ್ಯಂತ ದೊಡ್ಡ ಗಾತ್ರದ ತಿಮಿಂಗಿಲ ಇದು; ಲಭ್ಯ ಮಾಹಿತಿಯ ಪ್ರಕಾರ ಇದೇ ಅತ್ಯಂತ ಭಾರಿಗಾತ್ರದ ಸ್ತನಿ. ವಯಸ್ಕ ತಿಮಿಂಗಿಲ ಸುಮಾರು ೩೦ಮೀ. ಉದ್ದವೂ ೧೧೦ ಟನ್ ಭಾರವೂ ಇರುತ್ತದೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == "" . Encyclopædia (11th .). 1911. {{ }}: : |= |HIDE_PARAMETER= ()