ರೂಪಕ ಎಂದರೆ ದೃಶ್ಯಕಾವ್ಯ ; ನಾವೀಗ ಇದೇ ಅರ್ಥದಲ್ಲಿ ನಾಟಕ ಎಂಬ ಪದ ಬಳಸುತ್ತೇವೆ. ರೂಪಕ ಮತ್ತು ಉಪರೂಪಕಗಳ ವಿಷಯ ಭರತನ ಕಾಲದಿಂದಲೂ ರೂಢಿಯಲ್ಲಿದೆ. == ಪ್ರಕಾರಗಳು == ಭರತ ರೂಪಕಗಳನ್ನು ಹತ್ತು ರೀತಿಯಾಗಿಯೂ ಉಪರೂಪಕಗಳನ್ನು ಹದಿನಾಲ್ಕು ರೀತಿಯಾಗಿಯೂ ವಿಭಾಗಿಸಿದ. ಅವನ ಶಿಷ್ಯ ಕೋಹಲ ರೂಪಕದಲ್ಲಿ 20 ಭೇದಗಳಿವೆಯೆನ್ನುತ್ತಾನೆ. ಶಾರದಾತನಯ ತನ್ನ ಭಾವ ಪ್ರಕಾಶನದ ಪ್ರಕಾರ ರೂಪಕ 10, ಉಪರೂಪಕಗಳು 20 ಎಂದಿದ್ದಾನೆ. ದಶರೂಪದ ಧನಂಜಯನ ಪ್ರಕಾರ ರೂಪಕಗಳು 20. ವಿಶ್ವನಾಥ ಇಪ್ಪತ್ತೆಂಟು ಎನ್ನುತ್ತಾನೆ. ಅಗ್ನಿಪುರಾಣದಲ್ಲಿ 27 ಎಂದಿದೆ. ರೂಪಕ ಉಪರೂಪಕವೆಂಬ ಭೇದ ರಸಕ್ಕಿಂತಲೂ ಅವುಗಳ ಪ್ರಯೋಗವನ್ನಾಶ್ರಯಿಸಿದೆ ಎನ್ನುವುದು ಉಚಿತ. ಕೋಹಲ ರೂಪಕಗಳನ್ನು ಮಾರ್ಗ ಮತ್ತು ದೇಶೀ ಎಂದು ವಿಂಗಡಿಸಿದ್ದಾನೆ. ನೃತ್ಯಗೀತೆಗಳು ಗಂಭೀರವಾಗಿದ್ದ ಶಾಸ್ತ್ರೀಯವಾಗಿದ್ದರೆ ಮಾರ್ಗ, ಆಯಾ ದೇಶದ ಪದ್ಧತಿಯಂತೆ ಸ್ವಚ್ಚಂಧವಾಗಿದ್ದರೆ ದೇಶೀ ಎಂದು ಆತನ ತಾತ್ಪರ್ಯವಿರಬಹುದು. ನಾಟಿಕಾ, ಪ್ರಕಟಣಿಕಾ, ಬಾಣಿಕಾ, ಹಾಸಿಕಾ, ಅಯೋಗಿನೀ, ಡಮಿಕಾ, ಕಲೋತ್ಸಾಹವತೀ, ಚಿತ್ರಾ, ಜುಗುಪ್ಸಿತಾ, ಚಿತ್ರಶಾಲಾ ಎಂಬ ಹತ್ತು ಮತ್ತು ಪ್ರಸಿದ್ಧ ನಾಟಕಾದಿ ಹತ್ತು ಒಟ್ಟು ರೂಪಕಗಳು ಇಪ್ಪತ್ತು ಎಂದು ಕೋಹಲನ ಅಭಿಪ್ರಾಯ. ಸಂಗೀತವಾಗಲಿ, ನೃತ್ಯವಾಗಲಿ ಈ ಇಪ್ಪತ್ತರಲಿಲ್ಲ. ದೇಶೀ ರೂಪಕಗಳಾದ ದೊಂಬಿಕಾ, ಭಾಣಕಾ, ಪ್ರಸ್ಥಾನ ಷಿಡ್ಗಕಾ, ಭಾಣಿಕಾ, ಪ್ರೇರಣ, ರಾಮಕ್ರೀಡಾ, ರಾಗಕಾವ್ಯ, ರಾಸಕಾ-ಇವು ರಮ್ಯ ಹಾಗೂ ಭಯಂಕರ ವಸ್ತುವನ್ನುಳ್ಳ ನೃತ್ಯನಾಟಕಗಳು. ದತ್ತಿಲನೂ 16 ರೀತಿ ಸದ್ವಕಗಳನ್ನು ಹೇಳುತ್ತಾನೆ. ಧನಂಜಯ ನ ಪ್ರಕಾರ ದಶರೂಪಕಗಳು ಯಾವುವು, ಅವುಗಳ ವೈಶಿಷ್ಟ್ಯವೇನು ಎಂಬುದನ್ನು ಈ ಕೆಳಗಿನ ಪಟ್ಟಿಯಲ್ಲಿ ತಿಳಿಸಿದೆ.