ವಿಕಿಪೀಡಿಯವು (ಇಂಗ್ಲಿಷ್: ) ಒಂದು ಅಂತರಜಾಲ-ಆಧಾರಿತ ಬಹುಭಾಷೀಯ ವಿಶ್ವಕೋಶವಾಗಿದೆ. ಹಾಗೆಯೇ ಇದು ಒಂದು ವಿಶ್ವಕೋಶೀಯ ಜಾಲತಾಣವು ಸಹ ಆಗಿದೆ. ಇದು ಪ್ರಸ್ತುತ ವಿಕಿಮೀಡಿಯ ಫೌ಼ಂಡೇಷನ್ ( ) ಎಂಬ ಅಮೆರಿಕದ ಸ್ಯಾನ್‌ಫ್ರ್ಯಾ಼ನ್ಸಿಸ್ಕೊ ನಗರದಲ್ಲಿ ತನ್ನ ಕೇಂದ್ರಕಾರ್ಯಲಯವನ್ನು ಹೊಂದಿರುವ ಒಂದು ಲಾಭೋದ್ದೇಶರಹಿತ ಹಾಗೂ ದಾನಶೀಲ ಸಂಘಟನೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ. ಇದರ ಸೇವೆಯು ಉಚಿತವಾಗಿದ್ದು, ಅಂತರಜಾಲ ಸಂಪರ್ಕವನ್ನು ಹೊಂದಿರುವ ಯಾರು ಬೇಕಾದರೂ ಸೇವೆಯನ್ನು ಪಡೆಯಬಹುದಾಗಿದೆ. ಪ್ರಸ್ತುತ ಇದು ಏಳನೇ ಅತಿ ಪ್ರಸಿದ್ಧ ಜಾಲತಾಣವಾಗಿದೆ (ಜನವರಿ ೨೦೧೫ ಕ್ಕೆ ಇದ್ದಂತೆ). == ವ್ಯುತ್ಪತ್ತಿ == 'ವಿಕಿಪೀಡಿಯ' ಎಂಬ ಪದವು ಒಂದು ಮಿಶ್ರಪದ ( ) ಆಗಿದ್ದು, ಹವಾಯಿ ಭಾಷೆಯ 'ವಿಕಿ' (ಅಂದರೆ 'ಶೀಘ್ರ' ಎಂದರ್ಥ) ಹಾಗು ಇಂಗ್ಲಿಷ್‌ನ 'ಎನ್‌ಸೈಕ್ಲೊಪೀಡಿಯ' ಎಂಬ ಎರಡು ಪದಗಳು ಸೇರಿ ರಚನೆಯಾಗಿದೆ. == ಚರಿತ್ರೆ == ವಿಕಿಪೀಡಿಯವು ಮೂಲತಃ ನ್ಯುಪೀಡಿಯ () ಎಂಬ ಇನ್ನೊಂದು ಇಂಗ್ಲಿಷ್ ವಿಶ್ವಕೋಶೀಯ ಜಾಲತಾಣದ ಯೋಜನೆಯಿಂದ ಮೂಡಿಬಂದಿತು. ಜಿಮ್ಮಿ ವೇಲ್ಸ್ ( ) ಮತ್ತು ಲ್ಯಾರಿ ಸ್ಯಾಂಗರ್ ( ) ಎಂಬುವವರು ಇದನ್ನು ಜನವರಿ ೧೫, ೨೦೦೧ ರಂದು ಆರಂಭಿಸಿದರು. ಪ್ರಸ್ತುತ ಇದು ವಿಕಿಮೀಡಿಯ ಫೌಂಡೇಷನ್ ಎಂಬ ಒಂದು ಲಾಭೋದ್ದೆಶರಹಿತ ಸಂಸ್ಥೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ. == ವೈಶಿಷ್ಟ್ಯಗಳು == ವಿಕಿಪೀಡಿಯವು ಒಂದು ಬಹುಭಾಷೀಯ ವಿಶ್ವಕೋಶವಾಗಿದ್ದು, ಇದರಲ್ಲಿನ ಲೇಖನಗಳು ಜಗತ್ತಿನ ೨೦೦ ಕ್ಕಿಂತಲು ಹೆಚ್ಚಿನ ಭಾಷೆಗಳಲ್ಲಿ ಲಭ್ಯವಿದೆ. ಇದು ಇತರ ಇಂಗ್ಲಿಷ್ ಅಂತರಜಾಲ-ಆಧಾರಿತ ವಿಶ್ವಕೋಶಗಳ ಪೈಕಿ ಗಾತ್ರದಲ್ಲಿ ಅತ್ಯಂತ ದೊಡ್ಡದಾಗಿದೆ. ಪ್ರಸ್ತುತ ಇದರ ಇಂಗ್ಲಿಷ್ ಆವೃತ್ತಿಯಲ್ಲಿ ೪.೭ ದಶಲಕ್ಷಕ್ಕಿಂತಲೂ ಹೆಚ್ಚಿನ ಲೇಖನಗಳು ಲಭ್ಯವಿದೆ. ಇದರ ಅತಿ ಪ್ರಮುಖ ವೈಶಿಷ್ಟ್ಯವೆಂದರೆ ಇದು ಮುಖ್ತವಾಗಿದ್ದು, ಅಂತರಜಾಲ ಸಂಪರ್ಕವನ್ನು ಹೊಂದಿರುವ ಯಾರು ಬೇಕಾದರೂ ಇದರಲ್ಲಿನ ಲೇಖನಗಳನ್ನು ಪರಿಷ್ಕರಿಸಬಹುದಾಗಿದೆ ಹಾಗೆಯೇ ಹೊಸದಾಗಿ ಲೇಖನಗಳನ್ನು ಸೇರಿಸಲು ಬಹುದಾಗಿದೆ. ಈ ರೀತಿಯ ಬಹಿರಂಗ ವ್ಯವಸ್ಥೆಯ ಕಾರಣದಿಂದ ಇಂದು ಜಗತ್ತಿನ ಹಲವು ವಿಷಯಗಳ ಮಾಹಿತಿಯ ಲೇಖನಗಳು ಇಲ್ಲಿ ಲಭ್ಯವಾಗಲು ಸಾಧ್ಯವಾಗಿದೆ. ವಿಕಿಪೀಡಿಯದಲ್ಲಿನ ಲೇಖನಗಳು ಒಂದಕ್ಕೊಂದು ಬೆಸುಗೆಗೊಂಡಿದ್ದು ಅವು ಪಾರಸ್ಪರಿಕ ಆಕರಗಳನ್ನು ಹೊಂದಿರುತ್ತವೆ. ಗಣಕಯಂತ್ರದ ಮೂಷಿಕವನ್ನು ಯಾವುದಾದರೂ ಬೆಸುಗೆಯ () ಮೇಲೆ ಇರಿಸಿದಾಗ ಆ ಬೆಸುಗೆಯು ಯಾವ ಲೇಖನದ ಬಗ್ಗೆ ಮಾಹಿತಿಗಳನ್ನು ನೀಡಬಲ್ಲದೆಂದು ಸೂಚಿಸುತ್ತದೆ. ಪ್ರತಿಯೊಂದು ಲೇಖನದ ಅಂತ್ಯದಲ್ಲಿಯೂ ಹಲವಾರು ಪ್ರತ್ಯೇಕ ಬೆಸುಗೆಗಳಿದ್ದು, ಅವು ಇತರ ಕುತೂಹಲಕಾರಿ ಲೇಖನಗಳು ಅಥವಾ ಸೂಕ್ತ ಬಾಹ್ಯ ಜಾಲತಾಣಗಳು, ಪುಟಗಳು, ಆಕರ ವಿಷಯಗಳು ಅಥವಾ ನಿರ್ದಿಷ್ಟ ಜ್ಞಾನಕ್ಷೇತ್ರದ ವ್ಯವಸ್ಥಿತ ವಿಭಾಗಗಳ ಬಗ್ಗೆ ಮಾಹಿತಿ ಯನ್ನು ನೀಡಬಲ್ಲವು. ಯಾವುದಾದರೂ ಕೆಲವು ನಿರ್ದಿಷ್ಟ ಬೆಸುಗೆಗಳು ಅಲಭ್ಯವಾಗಿದ್ದಲ್ಲಿ ಅವುಗಳನ್ನು ಸೇರಿಸಲೂ ಸಹ ಇಲ್ಲಿ ಅವಕಾಶವಿದೆ. ಇದರಲ್ಲಿ ಪರಿಷ್ಕರಿಸಿದ ಲೇಖನಗಳು ಓದುಗರಿಗೆ ತಕ್ಷಣವೇ ಕಾಣ ಸಿಗುತ್ತವೆ. ಅಲ್ಲದೆ ಒಂದು ವಿಷಯವನ್ನು ಪ್ರತಿ ಬಾರಿ ಪರಿಷ್ಕರಿಸಿದಾಗಲೂ ಆ ವಿಷಯ ಪುಟದ ಬದಲಾವಣೆಗಳು 'ಇತಿಹಾಸ' ಪುಟದಲ್ಲಿ ದಾಖಲಾಗುತ್ತದೆ. ಇದರಿಂದಾಗಿ ಯಾವುದೇ ಹಿಂದಿನ ಮತ್ತು ಅದರ ನಂತರದ ಆವೃತ್ತಿಯ ಬದಲಾವಣೆಗಳನ್ನು ನೋಡಬಹುದು ಹಾಗು ಅವಶ್ಯವಿಲ್ಲದ ಬದಲಾವಣೆಗಳನ್ನು ತೆಗೆದುಹಾಕಬಹುದು. 'ಚರ್ಚೆ' ಪುಟಗಳು ಹಲವು ಸಂಪಾದಕರ ಕೆಲಸಗಳನ್ನು ಸರಿಯಾಗಿ ರಚಿಸಲು ಸಹಕರಿಸುತ್ತವೆ. == ವಿಶ್ವಾಸಾರ್ಹತೆ == ವಿಕಿಪೀಡಿಯದಲ್ಲಿನ ದಾಖಲೆಗಳು ಮತ್ತು ಮಾಹಿತಿಗಳನ್ನು ಅವು ಸ್ವಯಂ ಪರಿಪೂರ್ಣವೆಂದು ಭಾವಿಸಬಾರದು. ಅವುಗಳನ್ನು ನಿರಂತರವಾಗಿ ಪರಿಷ್ಕರಣೆ ಹಾಗೂ ಸುಧಾರಣೆಗೆ ಒಳಪಡಿಸಲಾಗುತ್ತಿರುತ್ತದೆ. ಇದರಿಂದ ಕ್ರಮೇಣ ಅವುಗಳ ದರ್ಜೆ ಮತ್ತೆ ಗುಣಮಟ್ಟಗಳ ಮೌಲ್ಯವರ್ಧನೆಗೆ ಸಹಾಯ ವಾಗುತ್ತದೆ. ಇಲ್ಲಿನ ಎಲ್ಲ ಮಾಹಿತಿಗಳೂ ಪ್ರಾರಂಭದಲ್ಲಿಯೇ ಮಾಹಿತಿಕೋಶಿಯ ದರ್ಜೆಯವೆಂದು ಬಳಕೆದಾರರು ಭಾವಿಸಬಾರದು. ಇಲ್ಲಿ ದೊರೆಯುವ ಹಲವಾರು ಮಾಹಿತಿಗಳು ಸತ್ಯದೂರ ಅಥವಾ ಚರ್ಚಾಸ್ಪದ ವಿಷಯಗಳಾಗಿರುವ ಸಾಧ್ಯತೆಗಳಿವೆ. ವಾಸ್ತವವಾಗಿ ಅನೇಕ ಮಾಹಿತಿಗಳು ಕೇವಲ ಒಂದು ದೃಷ್ಟಿಕೋನವನ್ನು ಮಾತ್ರ ಪ್ರತಿನಿಧಿಸಬಹುದು. ವಾದ ವಿವಾದಗಳು ಮತ್ತು ಚರ್ಚೆಗಳಿಂದ ಕೂಡಿದ ಸುದೀರ್ಘ ವೈಚಾರಿಕ ಪ್ರಕ್ರಿಯೆಯ ನಂತರವೇ ಒಂದು ಒಮ್ಮತದ ಮತ್ತು ಅಲಿಪ್ತ ದೃಷ್ಟಿಕೋನವನ್ನು ನಿರ್ಧರಿಸಲಾಗುವುದು. ಅಲ್ಲದೆ ತಜ್ಞ ಪರಿಷ್ಕರಣಕಾರರು ಯಾವುದೇ ಒಂದು ಲೇಖನದ ವಿಷಯ ಅಥವಾ ವಿಧಾನಗಳ ಬಗ್ಗೆ ಅಭಿಪ್ರಾಯ ಭೇದವನ್ನು ತೋರಿದರೆ ಅಂತಹ ಸಂದರ್ಭಗಳಲ್ಲಿ ಅವರು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಅವರಿಗೆ ನೆರವಾಗಲು ವಿಕಿಪೀಡಿಯಾ ಹಲವಾರು ಆಂತರಿಕ ವಿವಾದ ನಿವಾರಣಾ ಪ್ರಕ್ರಿಯೆಗಳನ್ನು ವ್ಯವಸ್ಥೆಗೂಳಿಸಿದೆ. ವಿಕಿಪೀಡಿಯದಲ್ಲಿನ ಲೇಖನಗಳು ಕೆಲವು ಆದರ್ಶ ಲಕ್ಷಣಗಳನ್ನು ಹೊಂದಿರುತ್ತವೆ. ಅವು ಉತ್ತಮ ಶಬ್ದ ಸಂಪತ್ತಿನಿಂದ ಕೂಡಿದ್ದು ಸಮತೋಲಿತ, ತಟಸ್ಥ ಹಾಗೂ ಮಾಹಿತಿಕೋಶಿಯ ದರ್ಜೆಯ ಮಾಹಿತಿಗಳನ್ನು ಹೊಂದಿರುತ್ತವಲ್ಲದೆ ಅವು ವ್ಯಾಪಕ ಹಾಗೂ ಪುರಾವೆಗಳನ್ನು ಒದಗಿಸಲು ಸಮರ್ಥವಾದ ದಾಖಲೆಗಳಾಗಿರುತ್ತವೆ. ವಿಕಿಪೀಡಿಯದಲ್ಲಿ ಕಂಡು ಬರುವ ಮಾಹಿತಿಗಳನ್ನು ಸಂಶೋಧನ ಆಕರಗಳನ್ನಾಗಿ ಬಳಸಬೇಕಾದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದುದು ಅವಶ್ಯಕ. ಏಕೆಂದರೆ ಇಲ್ಲಿನ ಹಲವಾರು ಲೇಖನಗಳು ಸ್ವಾಭಾವಿಕವಾಗಿ ತಮ್ಮ ಪ್ರಬುದ್ಧತೆ ಮತ್ತು ಬೌದ್ಧಿಕ ದರ್ಜೆಗಳಲ್ಲಿ ಗಣನೀಯ ಪ್ರಮಾಣದ ಏರುಪೇರುಗಳನ್ನು ತೋರಿಸಬಹುದು. ಸಂಶೋಧಕರು ಈ ಬಗ್ಗೆ ಜಾಗೃತರಾಗುವಂತೆ ನೆರವಾಗಲು ಹಲವಾರು ಮಾರ್ಗಸೂಚಿಗಳು ಮತ್ತು ಸೂಚನಾಪುಟಗಳನ್ನು ವ್ಯವಸ್ಥೆಗೂಳಿಸಲಾಗಿದೆ. ವಿಕಿಪೀಡಿಯದಲ್ಲಿನ ಮಾಹಿತಿಗಳನ್ನು ಯಾರು ಬೇಕಾದರೂ ಪರಿಷ್ಕರಿಸಲು ಸಾಧ್ಯವಿರುವುದರಿಂದ ಕೆಲವು ತಪ್ಪು ಮಾಹಿತಿಗಳು ಸೇರ್ಪಡೆಯಾಗುವ ಹಾಗೂ ಸೇರ್ಪಡೆಯಾಗಿರುವ ಸಾಧ್ಯತೆಗಳೂ ಉಂಟು. ಹಾಗಾಗಿ ಅಂತಹ ಮಾಹಿತಿಗಳನ್ನು ತಗೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ಆಗಾಗ್ಗೆ ತಲೆದೋರಬಹುದಾದ ದುರ್ಬಳಕೆ ಅಥವಾ ವಿವಾದಗಳನ್ನು ಪರಿಹರಿಸಲು ವಿಕಿಪೀಡಿಯಾ ಸಮೃದ್ಧವಾದ ವಿಧಾನಗಳನ್ನು ಹೂಂದಿದೆ. ಆ ವಿಧಾನಗಳನ್ನು ತೀವ್ರ ಪರೀಕ್ಷೆಗಳಿಗೆ ಒಳಪಡಿಸಲಾಗಿದ್ದು, ಅವುಗಳ ವಿಶ್ವಾಸಾರ್ಹತೆ ಅತಿ ಉನ್ನತ ಮಟ್ಟದ್ದಾಗಿದೆ. == ವಿಕಿಪೀಡಿಯಾದಲ್ಲಿರುವ ಮಾಹಿತಿಗಳ ವಿವರ == ವಿಕಿಪೀಡಿಯಾದಲ್ಲಿರುವ ಮಾಹಿತಿಗಳನ್ನು ವಗೀ‍ಕರಿಸಿದಾಗ ಅವುಗಳಲ್ಲಿ ಸಂಸ್ಕ್ರತಿ ಮತ್ತು ಕಲೆ - ೩೦% ವ್ಯಕ್ತಿಗಳ ಚರಿತ್ರೆ - ೧೫% ಬೌಗೋಳಿಕ ಮತ್ತು ಸ್ಥಳ ಮಾಹಿತಿ -14% ಸಮಾಜ ಮತ್ತು ಸಮಾಜ ವಿಜ್ಞಾನ - ೧೨ % ಐತಿಹಾಸಿಕ ಘಟನೆಗಳು - ೧೧% ನೈಸರ್ಗಿಕ ಮತ್ತು ಬೌತ ವಿಜ್ಞಾನ - ೯% ತಂತ್ರಜ್ಞಾನ ಮತ್ತು ಅನ್ವಯಿಕ ವಿಜ್ಞಾನ - ೪% ಧರ್ಮ ಮತ್ತು ನಂಬಿಕೆ - ೨% ಆರೋಗ್ಯ - ೨% ಗಣಿತ ಮತ್ತು ಅದರ ತಂತ್ರಗಳು - ೧% ಚಿಂತನೆಗಳು ಮತ್ತು ತತ್ವಶಾಸ್ತ್ರ - ೧% == ಉಲ್ಲೇಖಗಳು ==