ವೃಷಭರಾಶಿ ರಾಶಿಚಕ್ರದ ನಕ್ಷತ್ರಪುಂಜಗಳಲ್ಲಿ ಒಂದಾಗಿದೆ. ವೃಷಭರಾಶಿಯು ಉತ್ತರ ಖಗೋಳ ಗೋಲಾರ್ಧದ ಒಂದು ದೊಡ್ಡ ಮತ್ತು ಪ್ರಮುಖ ನಕ್ಷತ್ರಪುಂಜವಾಗಿದೆ. ಇದು ಅತ್ಯಂತ ಹಳೆಯ ನಕ್ಷತ್ರಪುಂಜಗಳಲ್ಲಿ ಒಂದಾಗಿದೆ. ಇದು ಆರಂಭಿಕ ಕಂಚಿನ ಯುಗದಷ್ಟು ಹಿಂದಿನದು. ಇದು ವಸಂತ ವಿಷುವತ್ ಸಂಕ್ರಾಂತಿಯ ಸಮಯದಲ್ಲಿ ಸೂರ್ಯನ ಸ್ಥಳವನ್ನು ಗುರುತಿಸುತ್ತದೆ. ಇದರ ಹಳೆಯ ಖಗೋಳ ಚಿಹ್ನೆ (♉︎). ಇದು ಗೂಳಿಯ ತಲೆಯನ್ನು ಹೋಲುತ್ತದೆ. ಬಾನಿಗೆ ಒಳಮುಚ್ಚಿಗೆ ಅಥವಾ ಚತ್ತು ಹೊದೆಸಿರುವಂತೆ ಭಾಸವಾಗುವ ಅಸಂಖ್ಯ ನಕ್ಷತ್ರ ಚಿತ್ರಗಳನ್ನು ಖಗೋಳವಿಜ್ಞಾನಿಗಳು 88 ವಿವಿಧ ನಕ್ಷತ್ರಪುಂಜಗಳಾಗಿ ವಿಭಾಗಿಸಿದ್ದಾರೆ. ಈ ಪೈಕಿ ಒಂದು ವೃಷಭರಾಶಿ (ಟಾರಸ್). ದ್ವಾದಶ ಅಥವಾ 12 ರಾಶಿಗಳ ಪೈಕಿ ಎರಡನೆಯದು-ಮೊದಲನೆಯದು ಮೇಷ, ಮೂರನೆಯದು ಮಿಥುನ. ಈ 12 ರಾಶಿಗಳೂ ರಾಶಿಚಕ್ರದ (ಝೋಡಿಯಕ್) ಮೇಲಿವೆ. ಸೂರ್ಯ, ಚಂದ್ರ ಮತ್ತು ಗ್ರಹಗಳ ಸಂಚಾರ ಪಥಗಳು ಅಥವಾ ಕಕ್ಷೆಗಳು ರಚಿಸುವ ಇಕ್ಕಟ್ಟು ಪಟ್ಟಿಯೇ ರಾಶಿಚಕ್ರ. ವೃಷಭರಾಶಿಯ ಆಕಾರವನ್ನು ಬಲಕ್ಕಿರುವ ಚಿತ್ರದಲ್ಲಿ ಕಾಣಿಸಿದೆ. ಸುಮಾರು 5 ಬಿಡಿ ನಕ್ಷತ್ರಗಳು ರಚಿಸುವ -ಆಕಾರದಿಂದ ಇದನ್ನು ಗುರುತಿಸುತ್ತೇವೆ. -ಯ ಕೋನಶೃಂಗ ಪಶ್ಚಿಮದತ್ತ ತಿರುಗಿದೆ. == ಪ್ರಮುಖ ನಕ್ಷತ್ರಗಳು == ದಕ್ಷಿಣ ಬಾಹುವಿನ ತುದಿ ನಕ್ಷತ್ರದ ಬಣ್ಣ ಮಾಣಿಕ್ಯ ಕೆಂಪು. ಇದು ರೋಹಿಣಿ (ಆಲ್ಡೆಬರಾನ್). ಇದೊಂದು ರಕ್ತದೈತ್ಯ ನಕ್ಷತ್ರ (ರೆಡ್ ಜಯಂಟ್ ಸ್ಟಾರ್). ಭೂಮಿಯಿಂದ ದೂರ 69 ಜ್ಯೋತಿರ್ವರ್ಷಗಳು. ಇದರ ಅರ್ಥ ಇಂದಿನಿರುಳು ನಮಗೆ ಕಾಣುವ ರೋಹಿಣಿ ವಾಸ್ತವವಾಗಿ 69 ವರ್ಷ ಹಿಂದಿನದು! ಇದರ ಉಜ್ಜ್ವಲತಾಂಕ (ಮ್ಯಾಗ್ನಿಟ್ಯೂಡ್) 0.86. ವೃಷಭರಾಶಿಯ ಇನ್ನೊಂದು ಮುಖ್ಯ ನಕ್ಷತ್ರವಿದು: ಅಗ್ನಿ (ಎಲ್‍ನಾಥ್), ಉಜ್ಜ್ವಲತಾಂಕ 1.65, ನೀಲದೈತ್ಯ (ಬ್ಲೂ ಜಯಂಟ್), ದೂರ 140 ಜ್ಯೋತಿರ್ವರ್ಷ. ಬಿಡಿ ಬಿಡಿಯಾಗಿ ಎಣಿಸಬಲ್ಲ 7 ನಕ್ಷತ್ರಗಳ ನಿಬಿಡ ನಿತ್ಕಟ ಒಕ್ಕೂಟ ಕೃತ್ತಿಕಾಗುಚ್ಛ (ಪ್ಲಿಯಡಿಸ್) ವೃಷಭರಾಶಿಯಲ್ಲಿದೆ. ಪುಟ್ಟ ಸೌಟಿನಂತೆ ಇದರ ಆಕಾರ. ಸುಮಾರು 200 ಬಿಡಿ ನಕ್ಷತ್ರಗಳ ವಿಸ್ತಾರ ಒಕ್ಕೂಟ ವೃಷಭ ರಾಶಿಯಲ್ಲಿದೆ. ಇದಕ್ಕೆ ಹಯಡಿಸ್ ಎಂದು ಹೆಸರು. == ಉಲ್ಲೇಖಗಳು ==