ವೈಜಯಂತಿಮಾಲಾ ಬಾಲಿ (ಆಗಸ್ಟ್ ೧೩, ೧೯೩೬) ಭಾರತೀಯ ಕಲಾಲೋಕದಲ್ಲಿ ಪ್ರಖ್ಯಾತ ಹೆಸರು. ಚಲನಚಿತ್ರ ಕಲಾವಿದೆಯಾಗಿ ಮತ್ತು ಭರತನಾಟ್ಯ ಕಲೆಯಲ್ಲಿ ಪ್ರಸಿದ್ಧರಾದ ವೈಜಯಂತಿಮಾಲಾ ದಕ್ಷಿಣ ಭಾರತದಿಂದ ಹಿಂದಿ ಚಿತ್ರರಂಗದಲ್ಲಿ ಪ್ರಖ್ಯಾತಿ ಪಡೆದ ಕಲಾವಿದೆಯರಲ್ಲಿ ಪ್ರಥಮಸಾಲಿನವರು. == ಜೀವನ == ಚಲನಚಿತ್ರ ಮತ್ತು ಭರತನಾಟ್ಯ ಕಲಾವಿದೆಯಾಗಿ ಪ್ರಖ್ಯಾತರಾಗಿರುವ ವೈಜಯಂತಿಮಾಲಾ ಅವರು ಆಗಸ್ಟ್ ೧೩, ೧೯೩೬ರಂದು ತಮಿಳುನಾಡಿನ ಅಂದಿನ ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ್ದ ಟ್ರಿಪ್ಜಲಿಕೇನ್ ಎಂಬಲ್ಲಿ ಜನಿಸಿದರು. ತಂದೆ ಎಂ. ಡಿ. ರಾಮಸ್ವಾಮಿ ಅವರು ಮತ್ತು ತಾಯಿ ವಸುಂಧರಾ ದೇವಿ ಅವರು. == ಚಲನಚಿತ್ರ ರಂಗದಲ್ಲಿ == ೧೯೪೯ರ ವರ್ಷದಲ್ಲಿ ತಮ್ಮ ಹದಿಮೂರನೆಯ ವಯಸ್ಸಿನಲ್ಲೇ ‘ವಾಳ್ಗೈ’ ಎಂಬ ತಮಿಳು ಚಿತ್ರದ ಮೂಲಕ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವೈಜಯಂತಿಮಾಲಾ ಮುಂದೆ ತಮಿಳು ಮತ್ತು ಹಿಂದಿ ಭಾಷೆಗಳೆರಡರಲ್ಲೂ ಪ್ರಖ್ಯಾತಿ ಪಡೆದ ತಾರೆಯೆನಿಸಿದರು. ಬಹಾರ್, ನಾಗಿನ್, ದೇವದಾಸ್, ಕಟ್ಪುತ್ಲಿ, ಸಾಧನಾ, ನಯಾ ದೌರ್, ಮಧುಮತಿ, ಗಂಗಾ ಜಮುನಾ, ಸಂಗಮ್, ಲೀಡರ್, ಪೆಹ್ಲಿ ಜಲಕ್, ಆಮ್ರಪಾಲಿ, ಜ್ಯೂಯೆಲ್ ಥೀಫ್, ಸಂಘರ್ಷ್ ಹೀಗೆ ಹಲವಾರು ಚಿತ್ರಗಳಲ್ಲಿ ದಿಲೀಪ್ ಕುಮಾರ್, ರಾಜ ಕಫೂರ್, ದೇವಾನಂದ್, ಕಿಶೋರ್ ಕುಮಾರ್ ಮುಂತಾದ ಪ್ರಸಿದ್ಧರೊಂದಿಗೆ ನಟಿಸಿ ಪ್ರಸಿದ್ಧಿ ಪಡೆದರು. ತಮ್ಮ ಸೌಂಧರ್ಯ, ನೃತ್ಯ, ಅಭಿನಯಗಳಿಂದ ಪ್ರೇಕ್ಷಕರಿಗೆ ಮೋಡಿ ಮಾಡಿದ್ದ ವೈಜಯಂತಿಮಾಲಾ ಅವರ ಹೆಸರು ಅಂದಿನ ಈ ಮಹಾನ್ ನಟರುಗಳ ಹೆಸರುಗಳ ಜೊತೆಯಲ್ಲಿ ನಿರಂತರವಾಗಿ ಸುದ್ಧಿಯಲ್ಲಿತ್ತು. ಮುಂದೆ ಅವರ ಚಮನ್ ಲಾಲ್ ಬಾಲಿ ಅವರನ್ನು ವರಿಸಿದರು. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಪ್ರಸಿದ್ಧ ಚಿತ್ರಗಳಲ್ಲಿ ನಟಿಸಿದ್ದ ವೈಜಯಂತಿಮಾಲಾ ಅವರು ಜಿ. ಡಿ. ವೆಂಕಟರಾಂ ಎಂಬುವರು ನಿರ್ಮಿಸಿದ್ದ "ಆಶಾ ನಿರಾಶಾ" ಎಂಬ ಕನ್ನಡ ಚಿತ್ರದಲ್ಲೂ ನಟಿಸಿದ್ದರು. ಆದರೆ ಆ ಚಿತ್ರ ತೆರೆಕಾಣಲಿಲ್ಲ. == ನೃತ್ಯ ಕಲೆಯಲ್ಲಿ == ವಿವಾಹದ ನಂತರದಲ್ಲಿ ಇನ್ನೂ ಪ್ರಸಿದ್ಧಿಯಲ್ಲಿರುವಗಲೇ ಚಿತ್ರರಂಗವನ್ನು ತ್ಯಜಿಸಿದ ವೈಜಯಂತಿಮಾಲಾ ಬಾಲಿ ಅವರು ಮುಂದೆ ಹೆಚ್ಚಿನ ಸಮಯವನ್ನು ಭರತನಾಟ್ಯ ಕಲೆಗೆ ಮೀಸಲಿಟ್ಟರು. ತಮ್ಮ ನೃತ್ಯ ಪ್ರದರ್ಶನ ಮತ್ತು ನೃತ್ಯ ಸಂಯೋಜನೆಗಳಿಂದ ಅವರು ವಿಶ್ವದಾದ್ಯಂತ ಜನರನ್ನು ನೃತ್ಯಕಲೆಯತ್ತ ಆಕರ್ಷಿಸಿದ್ದಾರೆ. == ಕ್ರೀಡೆ ಮತ್ತು ರಾಜಕಾರಣದಲ್ಲಿ == ಗೋಲ್ಫ್ ಆಟದಲ್ಲಿ ಸಹಾ ಅವರು ಪರಿಣತರು. ರಾಜಕೀಯದಾಟದಲ್ಲಿ ಸಹಾ ಇವರು ಕಾಂಗ್ರೆಸ್ ಮತ್ತು ಭಾಜಪ ಪಕ್ಷಗಳ ಮೂಲಕ ಅನೇಕ ಬಾರಿ ಲೋಕಸಭೆ ಇಲ್ಲವೇ ರಾಜ್ಯಸಭೆಗಳ ಸದಸ್ಯತ್ವ ನಿರ್ವಹಿಸಿದ್ದಾರೆ. == ನಿರ್ಮಾಪಕಿಯಾಗಿ == == ಪ್ರಶಸ್ತಿ ಮತ್ತು ಗೌರವಗಳು == ನಾಟ್ಯಕಲೆಯಲ್ಲಿನ ಮಹತ್ಸಾಧನೆಗಾಗಿ ವೈಜಯಂತಿಮಾಲಾ ಅವರು ಸಂಗೀತ ನಾಟಕ ಅಕಾಡೆಮಿಯ ಗೌರವವನ್ನು ಪಡೆದಿದ್ದಾರೆ. ಸಂಗಮ್, ದೇವದಾಸ್, ಸಾಧನಾ, ಮಧುಮತಿ, ಗಂಗಾ ಜಮುನಾ, ಸಂಘರ್ಷ್ ಮುಂತಾದ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಫಿಲಂಫೇರ್, ಬಿ.ಎಫ್.ಜೆ.ಎ ಮುಂತಾದ ಪ್ರಶಸ್ತಿಗಳು, ಪದ್ಮಶ್ರೀ ಪ್ರಶಸ್ತಿ, ಕಲೈಮಾಮಣಿ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿವೆ. === ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗೌರವಗಳು === ೧೯೬೮ - ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ೧೯೭೯ - ತಮಿಳುನಾಡು ಸರ್ಕಾರದಿಂದ ತಮಿಳುನಾಡು ರಾಜ್ಯ ಕಲಾವಿದ ಪ್ರಶಸ್ತಿ ೧೯೭೯ - ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ೧೯೯೫ - ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ === ಫಿಲ್ಮ್ ಫೇರ್ ಪ್ರಶಸ್ತಿ === == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==