ಶಿರಪಾದಿ ಎಂಬುದು ಮೃದ್ವಂಗಿಸಂಕುಲದ ಒಂದು ವರ್ಗ (ಸಿಫೆಲೊಪೋಡಾ). ಇದರಲ್ಲಿ ೮೦೦ ಕ್ಕಿಂತ ಹೆಚ್ಚು ಪ್ರಭೇದಗಳಿವೆ. ಸಾಗರವಾಸಿ ಕಡಲಿನ ಅತ್ಯಂತ ಆಳದ ಪಾತಳಿಯಿಂದ ಮೇಲ್ಭಾಗದ ಸ್ತರಗಳವರೆಗೂ ಹರಡಿವೆ. ಇವು ಎಲ್ಲ ಸಮುದ್ರಗಳಲ್ಲೂ ಮಹಾಸಾಗರಗಳಲ್ಲೂ ಕಂಡುಬರುತ್ತವೆ. ಗಾತ್ರಗಳಲ್ಲಿ ಅಗಾಧ ವ್ಯತ್ಯಾಸವಿದೆ. ಅತ್ಯಂತ ಚಿಕ್ಕ ಶಿರಪಾದಿ 2 ಸೆಂಮೀ, ದೈತ್ಯ ಸ್ಕ್ವಿಡ್‌ನದು 18 ಮೀ. == ದೇಹರಚನೆ == ಶಿರಪಾದಿಯಲ್ಲಿ ತಲೆ ಮತ್ತು ಪಾದ ಒಂದುಗೂಡಿರುವುದರಿಂದ ಈ ಹೆಸರು. ದೇಹದ ಹಿಂಭಾಗದಲ್ಲಿ ಒಳಾಂಗಗಳು ಹಾಗೂ ಚಿಪ್ಪುಗಳಿವೆ. ಪಾದ ಅನೇಕ ತೋಳುಗಳಾಗಿ ವಿಭಾಗಗೊಂಡಿದ್ದು ಇವುಗಳ ಒಳಭಾಗದಲ್ಲಿ ಹೀರುಬಟ್ಟಲುಗಳಿವೆ. ವಿವಿಧ ಪ್ರಭೇದಗಳ ತೋಳುಗಳ ಸಂಖ್ಯೆಯಲ್ಲಿ ವ್ಯತ್ಯಾಸ ಉಂಟು. ತಲೆಯ ಎರಡೂ ಕಡೆ ಒಂದೊಂದು ಉತ್ತಮವಾಗಿ ಬೆಳೆದ ಕಣ್ಣುಗಳೂ ಕೆಳಭಾಗದಲ್ಲಿ ಒಂದು ನಳಿಕೆಯೂ ಇವೆ. ಶಿರಪಾದಿಗಳ ಆಕಾರ ವಿಚಿತ್ರ. ಶರೀರದ ಎರಡೂ ಕಡೆ ಒಂದೊಂದು ತ್ರಿಕೋಣಾಕಾರದ ರೆಕ್ಕೆ ಉಂಟು. ಚಿಪ್ಪು ಶರೀರದ ಒಳಭಾಗದಲ್ಲಿದೆ. ನಾಟಿಲಸ್ ಎಂಬ ಗಣಕ್ಕೆ ಸೇರುವ ಪ್ರಭೇದಗಳಲ್ಲಿ ಮಾತ್ರ ಚಿಪ್ಪು ಶರೀರದ ಹೊರಭಾಗದಲ್ಲಿರುವುದು. ಚಿಪ್ಪು ಸುಣ್ಣದಿಂದಾಗಿದೆ. ಇದರ ಒಳಮೈಯಲ್ಲಿ ಮುತ್ತಿನ ಸ್ತರವಿದೆ. ನಾಟಿಲಸ್‌ನಲ್ಲಿ ಹೊರಭಾಗಕ್ಕೂ ಈ ಸ್ತರ ಆವರಿಸಿರುವುದರಿಂದ ಚಿಪ್ಪಿಗೆ ಅಪೂರ್ವ ಸೌಂದರ್ಯ ಬಂದಿದೆ. ಆಕ್ಟೋಪಸ್‌ನಲ್ಲಿ ಚಿಪ್ಪು ಸಂಪೂರ್ಣವಾಗಿ ಮಾಯ. ಚಿಪ್ಪಿನಲ್ಲಿ ಅನಿಲ ಕೋಣೆಗಳು ತುಂಬಿರುವುದರಿಂದ ಶಿರಪಾದಿ ತೇಲುವುದಕ್ಕೆ ಅನುಕೂಲ. ಶಿರಪಾದಿಗಳ ನರಮಂಡಲ ಉತ್ತಮವಾಗಿ ವಿಕಾಸಗೊಂಡಿದೆ. ಅಕಶೇರುಕಗಳ ಪೈಕಿ ಇವು ಬುದ್ಧಿವಂತ ಪ್ರಾಣಿಗಳು. ನರವ್ಯೂಹದಲ್ಲಿ ಒಂದು ಜೊತೆ ನರಗ್ರಂಥಿಗಳಿಂದಾದ ಮಿದುಳು, ಅನೇಕ ನರಗ್ರಂಥಿಗಳು, ಕೆಲವು ದೈತ್ಯನರಗಳಿವೆ. ದೈತ್ಯನರಗಳ ಮೂಲಕ ಸಂದೇಶಗಳು ವೇಗವಾಗಿ ಸಾಗುತ್ತವೆ. ಇಂದ್ರಿಯಗಳ ಪೈಕಿ ಕಣ್ಣು ಕಶೇರುಕಗಳ ತೆರದಲ್ಲೇ ಉತ್ತಮವಾಗಿ ವಿಕಾಸಗೊಂಡಿದೆ. ನೀರಿನ ಶುದ್ಧತೆಯನ್ನು ಅಳೆಯಲು ಆಸ್ಪ್ರೇಡಿಯಮ್ ಎಂಬ ಇಂದ್ರಿಯವೂ, ಗುರುತ್ವಾಕರ್ಷಣ ತಿಳಿದು ಸಮತೋಲನವನ್ನು ನೀಡಲು ಸ್ಟ್ಯಾಟೋಸಿಸ್ಟ ಎಂಬ ಇಂದ್ರಿಯವೂ ಇವೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == . . – – : ?