ಸಬ್ಬಕ್ಕಿ ಎನ್ನುವುದು ಮರಗೆಣಸಿನಿಂದ ತಯಾರಿಸಲಾಗುವ ಪಿಷ್ಠ. ಇದನ್ನು ಆಹಾರಪದಾರ್ಥವಾಗಿ ಅಡುಗೆ ಮಾಡಲು ಬಳಸಲಾಗುತ್ತದೆ. ಶಾಬಕ್ಕಿ, ಸಾಬೂದಾನಿ, ಸೀಮೆಅಕ್ಕಿ ಎನ್ನುವ ಹೆಸರುಗಳಿಂದಲೂ ಇದು ಕರೆಯಲ್ಪಡುತ್ತದೆ. ಭಾರತದಲ್ಲಿ ೯೫% ಸಬ್ಬಕ್ಕಿಯನ್ನು ತಮಿಳುನಾಡಿನಲ್ಲಿ (ಸೇಲಂನಲ್ಲಿ ಹೆಚ್ಚು) ತಯಾರಿಸಲಾಗುತ್ತದೆ. ಸಬ್ಬಕ್ಕಿಯಿಂದ ಉಪ್ಪಿಟ್ಟು, ವಡೆ, ಪಾಯಸ ಮುಂತಾದ ತಿನಿಸುಗಳನ್ನು ತಯಾರಿಸಲಾಗುತ್ತದೆ. ಭಾರತದ ವಿವಿಧ ಭಾಷೆಗಳಲ್ಲಿ ಇದರ ಹೆಸರು ಹೀಗಿದೆ - (ಉರ್ದು: ساگودانه;ಹಿಂದಿ: साबुदाना; ಮರಾಠಿ : साबुदाणा; ಗುಜರಾತಿ: સાબુદાણા; ತೆಲುಗು: సగ్గు బియ్యం ತಮಿಳು : ஜவ்வரிசி). == ತಯಾರಿಕೆಯ ವಿಧಾನ == ಮೊದಲು ರಾಶಿರಾಶಿ ಗೆಣಸುಗಳನ್ನು ತೊಳೆದು ಸಿಪ್ಪೆ ಸುಲಿಯಲಾಗುತ್ತದೆ. ನಂತರ ಅವುಗಳನ್ನು ಕ್ರಶರ್‍ಗಳಲ್ಲಿ ಹಿಸುಕಲಾಗುತ್ತದೆ. ಈ ಕ್ರಶಿಂಗ್ ಪ್ರಕ್ರಿಯೆಯಲ್ಲಿ ನಾರಿನ ಭಾಗವು ಬೇರೆಯಾಗುತ್ತದೆ. ಹಿಸುಕಿದಾಗ ಬಂದ ಹಾಲಿನಂತ ದ್ರವವನ್ನು ಟ್ಯಾಂಕ್ ಗಳಲ್ಲಿ ಶೇಖರಿಸಿ ೨-೮ ತಾಸಿನವರೆಗೆ ಸೆಟ್ಲ್ ಆಗಲು ಬಿಡಲಾಗುತ್ತದೆ. ಅ ಹಾಲಿನಲ್ಲಿ ಕಲ್ಮಶಗಳು ಮೇಲೆ ತೇಲುತ್ತವೆ ಮತ್ತು ಕೆಳಗೆ ಪೇಸ್ಟಿನಂತಹ (ಪಿಷ್ಟ,ಹಿಟ್ಟು) ವಸ್ತುವು ಉಳಿಯುತ್ತದೆ. ತೇಲುವ ಕೊಳೆ ಇತ್ಯಾದಿಗಳನ್ನು ತೆಗೆದ ನಂತರ ಉಳಿದ ಪೇಸ್ಟನ್ನು ಭಾಗಶಃ ಒಣಗಿಸಿ ಪಡೆಯಲಾಗುತ್ತದೆ. ನಂತರ ತೂತುಗಳುಳ್ಳ ಉಕ್ಕಿನ ಹಾಳೆಗಳನ್ನು ಅಥವಾ ಯಂತ್ರಗಳನ್ನು ಬಳಸಿ ಬೇಕಾದ ಗಾತ್ರದಲ್ಲಿ ಸಣ್ಣ ಸಣ್ಣ ಗುಂಡುಗಳ ಆಕಾರಕ್ಕೆ ತರಲಾಗುತ್ತದೆ. ಅವುಗಳನ್ನು ೧೦೦ ಡಿಗ್ರಿ ಸೆಲಿಷಿಯಸ್ ಬಿಸಿಯಲ್ಲಿ ೬-೮ ನಿಮಿಷಗಳು ಹುರಿಯಲಾಗುತ್ತದೆ (). ಸೂರ್ಯನ ಬೆಳಕಿನಲ್ಲಿ ೮-೧೨ ಗಂಟೆಗಳ ಕಾಲ ಒಣಗಿಸಲಾಗುತ್ತದೆ. ಕೊನೆಯದಾಗಿ ಪಾಲಿಶಿಂಗ್ ಮಾಡಿದ ಮೇಲೆ ಸಬ್ಬಕ್ಕಿ ತಯಾರಾಗುತ್ತದೆ. == ಉಲ್ಲೇಖಗಳು == == ಹೊರಕೊಂಡಿಗಳು == ಕೆಲವು ಸಬ್ಬಕ್ಕಿ ತಿನಿಸುಗಳು, ಪ್ರಜಾವಾಣಿ, , 02/08/2014