ಕಾದಂಬರಿಗಾರ್ತಿ ಸಾಯಿಸುತೆ ಕಾವ್ಯನಾಮದಲ್ಲಿ ಬರೆಯುತ್ತಿರುವ ರತ್ನಾ ಇವರು ೧೯೪೨ರಲ್ಲಿ ಜನಿಸಿದರು. == ಜೀವನ == ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ., ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು. == ಸಾಹಿತ್ಯಕೃಷಿ == ಪ್ರಾರಂಭದಲ್ಲಿ ಸಾಯಿಸುತೆ ಅವರೂ ಬಹುತೇಕ ಬರಹಗಾರರಂತೆ ಪದ್ಯಗಳನ್ನು ಬರೆದರು. ಮುಂದೆ ಅವರಲ್ಲಿ ಕಾದಂಬರಿ ಲೋಕದ ಕಡೆ ಒಲವು ಹರಿಯಿತು. ಸಾಯಿಸುತೆ ಅವರು ಮೊದಲು ಕಾದಂಬರಿ ಬರೆದದ್ದು 1970ರ ವರ್ಷದಲ್ಲಿ. ‘ಮಿಂಚು’ ಎಂಬ ಕಾದಂಬರಿಯನ್ನು ಬರೆದು ಕೆಲವು ವರ್ಷಗಳ ಕಾಲ ಹಾಗೇ ಇಟ್ಟುಕೊಂಡಿದ್ದರು. ‘ಪ್ರಜಾಮತ’ದಲ್ಲಿ ಇವರ ‘ವಿವಾಹ ಬಂಧನ’ ಧಾರವಾಹಿಯಾಗಿ ಪ್ರಕಟವಾಯಿತು. ರತ್ನ ಆಗಿದ್ದವರು ಸಾಯಿಬಾಬಾ ಅವರ ಮೇಲಿನ ಭಕ್ತಿಯಿಂದ ತಮ್ಮನ್ನು ‘ಸಾಯಿಸುತೆ’ಯಾಗಿಸಿಕೊಂಡ ಸಾಯಿಸುತೆ ಅವರಿಗೆ ಬರವಣಿಗೆ ಎಂಬುದು ಸಹಜ ಅಭಿವ್ಯಕ್ತಿಯ ಮಾಧ್ಯಮ. ಅವರು ಇದುವರೆಗೆ ಬರೆದಿರುವ ಕಾದಂಬರಿಗಳ ಸಂಖ್ಯೆ ಸುಮಾರು 140ರ ಸಮೀಪದ್ದು. ಸಾಯಿಸುತೆಯವರ ಸಣ್ಣಕಥೆಗಳೂ ಕೂಡ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವರ ಶಿಶುಸಾಹಿತ್ಯ ಕೂಡ ‘ಪಾಪಚ್ಚಿ’ ಮುಂತಾದ ಶಿಶುಸಾಹಿತ್ಯ ಪತ್ರಿಕೆಗಳನ್ನು ಅಲಂಕರಿಸಿವೆ. ಸಾಕ್ಷರತಾ ಆಂದೋಲನದ ಕಾರ್ಯಕ್ರಮದಡಿ ವಯಸ್ಕರ ಶಿಕ್ಷಣಕ್ಕಾಗಿ ಹಲವಾರು ಪಠ್ಯ ಪುಸ್ತಕಗಳನ್ನು ಅವರು ರೂಪಿಸಿದ್ದಾರೆ. ಬಾನುಲಿಗಾಗಿ ಹಲವು ನಾಟಕಗಳನ್ನು ಬರೆದಿದ್ದಾರೆ. === ಕಾದಂಬರಿಗಳು === ಅಗ್ನಿದಿವ್ಯ ಅನಘಾ ಬಿಡಿಸಿದ ಚಿತ್ತಾರ ಅನುಬಂಧದ ಕಾರಂಜಿ ಅಭಿಲಾಷ ಅಮೃತ ಸಿಂಧು ಅರುಣ ಕಿರಣ ಆಡಿಸಿದಳು ಜಗದೋದ್ಧಾರನಾ ಆರಾಧಿತೆ ಆಶಾ ಸೌರಭ ಇಂದ್ರ ಧನುಸ್ಸು ಇಬ್ಬನಿ ಕರಗಿತು ಕರಗಿದ ಕಾರ್ಮೋಡ ಕಲ್ಯಾಣಮಸ್ತು ಕಲ್ಯಾಣ ರೇಖೆ ಕಾರ್ತೀಕದ ಸಂಜೆ ಕೊಳಲನೂದುವ ಚತುರನಾರೆ ಕೋಗಿಲೆ ಹಾಡಿತು ಗಂಧರ್ವ ಗಿರಿ ಗಿರಿಧರ ಚಿರ ಬಾಂಧವ್ಯ ಚೈತ್ರದ ಕೋಗಿಲೆ ಜನನೀ ಜನ್ಮಭೂಮಿ ಜೀವನ ಸಂಧ್ಯ ಡಾ| ವಸುಧಾ ದಂತದ ಗೊಂಬೆ ದೀಪಾಂಕುರ ಧವಳ ನಕ್ಷತ್ರ ನನ್ನ ಭಾವ ನಿನ್ನ ರಾಗ ನನ್ನೆದೆಯ ಹಾಡು ನಮ್ರತಾ ನಲಿದ ಸಿಂಧೂರ ನವಚೈತ್ರ ನಾ ನಿನ್ನ ಧ್ಯಾನದೊಳಿರಲು ನಾಟ್ಯ ಸುಧಾ ನಾತಿಚರಾಮಿ ನಿನ್ನಿಂದಲೇ ಅರುಣೋದಯ ನಿನ್ನೊಲುಮೆ ನಿಶಾಂತ್ ನಿಶೆಯಿಂದ ಉಷೆಗೆ ನೂರು ನೆನಪು ಪಂಚವಟಿ ಪಸರಿಸಿದ ಶ್ರೀಗಂಧ ಪಾಂಚಜನ್ಯ ಪುಷ್ಕರಿಣಿ ಪೂರ್ಣೋದಯ ಪ್ರಿಯಸಖೀ ಪ್ರೀತಿಯ ಹೂಬನ ಪ್ರೇಮ ಸಾಫಲ್ಯ ಬಣ್ಣದ ಚುಂಬಕ ಬನದ ಮಲ್ಲಿಗೆ ಬಾಂದಳದ ನಕ್ಷತ್ರ ಬಾಡದ ಹೂ ಬಾನು ಮಿನುಗಿತು ಬಿರಿದ ನೈದಿಲೆ ಬಿರಿದ ಮೊಗ್ಗು ಬಿಳಿ ಮೋಡಗಳು ಬೆಳದಿಂಗಳ ಚೆಲುವೆ ಬೆಳ್ಳಿ ದೊಣಿ ಭಾವ ಸರೋವರ ಮಂಗಳ ದೀಪ ಮಂಜಿನಲ್ಲಿ ಮಿಂದ ಪುಷ್ಪ ಮಂದಾರ ಕುಸುಮ ಮತ್ತೊಂದು ಬಾಡದ ಹೂ ಮಧುರ ಆರಾಧನ ಮಧುರ ಗಾನ ಮಧುರಿಮ ಮಮತೆಯ ಸಂಕೋಲೆ ಮಾಗಿಯ ಮಂಜು ಮಾನಸ ವೀಣಾ ಮಿಂಚು ಮಿಡಿದ ಶೃತಿ ಮುಂಜಾನೆಯ ಮುಂಬೆಳಕು ಮುಗಿಲ ತಾರೆ ಮೂಡಿಬಂದ ಶಶಿ ಮೆಲು ತಂಗಾಳಿ ಮೇಘವರ್ಷಿಣಿ ಮೌನ ಆಲಾಪನ ರಜತನಂದನ ರಜತಾದ್ರಿಯ ಕನಸು ರಾಗ ಬೃಂದಾವನ ರಾಗಸುಧಾ ರಾಧ ಮೋಹನಾ ವರ್ಷ ಬಿಂದು ವಸಂತದ ಚಿಗುರು ವಸುಂಧರ ವಿಧಿವಂಚಿತೆ ವಿವಾಹ ಬಂಧನ ಶರದೃತುವಿನ ಚಂದ್ರ ಶರಧಿ ಹೋಗಿ ಬಾ ಶುಭಮಿಲನ ಶ್ಯಾನುಭೋಗರ ಮಗಳು ಶ್ರಾವಣ ಪೂರ್ಣಿಮ ಶ್ರೀರಸ್ತು ಶುಭಮಸ್ತು ಶ್ವೇತ ಗುಲಾಬಿ ಸಂಧ್ಯಾ ಗಗನ ಸಪ್ತಪದಿ ಸಪ್ತರಂಜನಿ ಸಮ್ಮಿಲನ ಸಿಸ್ಟರ್ ಅರುಣ ಸುಪ್ರಭಾತದ ಹೊಂಗನಸು ಸುಭಾಷಿಣಿ ಸುಮಧುರ ಭಾರತಿ ಸುಮಧುರ ಸಂಗಮ ಸೊಬಗಿನ ಪ್ರಿಯದರ್ಶಿನಿ ಸ್ನೇಹ ಮಾಧುರಿ ಸ್ವಪ್ನ ಸಂಭ್ರಮ ಸ್ವರ್ಗದ ಹೂ ಸ್ವರ್ಣ ಮಂದಿರ ಸ್ವಯಂ ವಧು ಹಂಸ ಪಲ್ಲಕ್ಕಿ ಹಿಮಗಿರಿ ನವಿಲು ಹೃದಯ ರಾಗ ಹೇಮ ವಿಹಾರಿ ಹೇಮಂತದ ಸೊಗಸು ಹೊಂಬೆಳಕು == ಚಲನಚಿತ್ರ ಮಾಧ್ಯಮದಲ್ಲಿ == ಸಾಯಿಸುತೆ ಅವರ ಕಥೆಗಳನ್ನಾಧರಿಸಿದ ಸಪ್ತಪದಿ, ಬಾಡದ ಹೂವು, ಕಲ್ಯಾಣ ರೇಖೆ, ಇಬ್ಬನಿ ಕರಗಿತು, ಗಂಧರ್ವ ಗಿರಿ, ಶ್ವೇತ ಗುಲಾಬಿ, ಮಿಡಿದ ಶೃತಿ ಮುಂತಾದ ಹತ್ತಾರು ಸಿನಿಮಾಗಳು ಮೂಡಿಬಂದಿವೆ. 'ಬಾಡದ ಹೂವು', 'ಮಿಡಿದ ಶೃತಿ' ಚಿತ್ರಗಳು ಉತ್ತಮ ಚಿತ್ರಕ್ಕಾಗಿನ ಪ್ರಶಸ್ತಿ ಗಳಿಸಿವೆ. 'ಶ್ವೇತ ಗುಲಾಬಿ' ಇತರ ಭಾಷೆಗಳಲ್ಲೂ ಚಲನಚಿತ್ರವಾಗಿ ಯಶಸ್ಸು ಸಾಧಿಸಿದೆ. == ಪ್ರಶಸ್ತಿ ಗೌರವ == ಸಾಯಿಸುತೆ ಅವರಿಗೆ ಸಾಹಿತ್ಯಕ ಮತ್ತು ಚಲನಚಿತ್ರ ಮಾಧ್ಯಮದ ಹಲವಾರು ಪ್ರಶಸ್ತಿ ಗೌರವಗಳು ಅರಸಿ ಬಂದಿವೆ. ರಾಜ್ಯೋತ್ಸವ ಸಂದರ್ಭದಲ್ಲಿ ಸನ್ಮಾನ, ದಾನಚಿಂತಾಮಣಿ ಅತ್ತಿಮಬ್ಬೆ ಸ್ಮಾರಕ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿಯ WHOನಲ್ಲಿ ಸೇರ್ಪಡೆ. ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಶ್ರೀ ಪ್ರಶಸ್ತಿ, ತುಮಕೂರು ಜಿಲ್ಲಾ ಲೇಖಕಿಯರ ಸಂಘದಿಂದ ಸಾಹಿತ್ಯ ಸಂಪನ್ನೆ ಪ್ರಶಸ್ತಿ. ಕರ್ನಾಟಕ ಸಾಹಿತ್ಯ ಅಕಾಡೆಮಿಯ 2018ನೆಯ ವರ್ಷದ ಗೌರವ ಪ್ರಶಸ್ತಿ ಪುರಸ್ಕೃತರು.