ಸಿರ್ಸಿ, ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಒಂದು ನಗರ, ತಾಲ್ಲೂಕು ಮತ್ತು ವಾಣಿಜ್ಯ ಕೇಂದ್ರವಾಗಿದೆ. ಇದನ್ನು "ಸಿರಸಿ" ಹಾಗೂ "ಶಿರಸಿ" ಎಂದೂ ಕರೆಯಲಾಗುತ್ತದೆ. ಸಿರ್ಸಿ ತಾಲ್ಲೂಕು ಪ್ರದೇಶವು ಅಡಿಕೆ ತೋಟಗಳು, ಕಾಡುಗಳು ಹಾಗೂ ಜಲಪಾತಗಳಿಂದ ಕೂಡಿದ್ದು ಅಡಿಕೆ ಬೆಳೆ ಮತ್ತು ಮಾರಾಟ ಇಲ್ಲಿನ ಆರ್ಥಿಕತೆಯ ಬೆನ್ನೆಲುಬು. ಈ ಊರಿನಲ್ಲಿ ಪ್ರಸಿದ್ಧವಾದ ಸಿರ್ಸಿ ಮಾರಿಕಾಂಬಾ ದೇವಸ್ಥಾನ ಇದೆ. ಎರಡು ವರ್ಷಕೊಮ್ಮೆ ಸಿರ್ಸಿಯಲ್ಲಿ ನಡೆಯುವ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯು ಭಾರತದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ. == ಹೆಸರು == ಈ ಪ್ರದೇಶದಲ್ಲಿ ಹೆಚ್ಚಾಗಿ ಕಾಣಸಿಗುತ್ತಿದ್ದ ಸಿರಿಸ ಮರಗಳ ಕಾರಣದಿಂದ ಈ ಊರನ್ನು ಸಿರಿಸೆ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಕಾಲಕ್ರಮೇಣ ಇದು ಸಿರಸಿಯಾಗಿ, ಅನಂತರ 'ಸಿರ್ಸಿ'ಯಾಗಿ ಬಳಕೆಗೆ ಬಂದಿತು. ಸಿರ್ಸಿಯನ್ನ ಸೋಂದಾ ಅರಸರ ಕಾಲದಲ್ಲಿ ಕಲ್ಯಾಣ ಪಟ್ಟಣ ಎಂಬ ಹೆಸರಿನಿಂದ ಸಹ ಕರೆಯುತ್ತಿದ್ದರು. == ಪ್ರವಾಸೀ ತಾಣಗಳು == === ಬನವಾಸಿ === ಕ್ರಿಸ್ತಶಕ ೩೪೫ – ೫೨೫ ವರೆಗೆ ಆಳಿದ ಕದಂಬ ಅರಸರ ರಾಜಧಾನಿಯಾಗಿದ್ದ ಬನವಾಸಿ ಸಿರ್ಸಿಯಿಂದ ೨೪ ಕಿ.ಮಿ. ದೂರದಲ್ಲಿದೆ. ಇಲ್ಲಿ ಕದಂಬರು ಕಟ್ಟಿಸಿದ ಮಧುಕೇಶ್ವರ ದೇವಸ್ಥಾನ ತುಂಬ ಸುಂದರವಾಗಿದೆ. === ಸಹಸ್ರಲಿಂಗ === ಸಿರ್ಸಿಯಿಂದ ೧೭ ಕಿ.ಮಿ. ದೂರದಲ್ಲಿರುವ ಸಹಸ್ರಲಿಂಗದಲ್ಲಿ, ನದಿಯ ಮಧ್ಯದಲ್ಲಿ ಕಲ್ಲುಗಳಲ್ಲಿ ಕೆತ್ತಲಾದ ನೂರಾರು ಶಿವಲಿಂಗಗಳಿವೆ. ಕಾಡಿನ ಮಧ್ಯ ಇರುವ ಸಹಸ್ರಲಿಂಗಕ್ಕೆ ಶಿವರಾತ್ರಿಯಂದು ಬಹಳ ಜನ ಬರುತ್ತಾರೆ. === ಸೋಂದಾ === ಸಿರ್ಸಿಯಿಂದ 20 ಕಿ.ಮಿ. ದೂರದಲ್ಲಿರುವ ಸೋಂದಾದಲ್ಲಿ (ಇತರೆ ಹೆಸರುಗಳು ಸೋದೆ, ಸ್ವಾದಿ) ಪ್ರಸಿದ್ಧ ವಾದಿರಾಜ ಮಠವಿದೆ. ಮತ್ತು ಅಲ್ಲಿ ಕೆಲ ಶತಮಾನಗಳ ಹಿಂದಿನ ಸುಂದರವಾದ ಕೋಟೆಯಿದೆ. === ಉಂಚಳ್ಳಿ ಜಲಪಾತ === ೧೧೬ ಮಿಟರ್ ಎತ್ತರದಿಂದ ಧುಮುಕುವ ಈ ಜಲಪಾತ ರಮಣೀಯವಾಗಿದೆ. ಸಿರ್ಸಿಯಿಂದ ೩೦ ಕಿ.ಮಿ. ದೂರದಲ್ಲಿರುವ ಈ ಜಲಪಾತದಲ್ಲಿ ವರ್ಷದ ಬಹು ಭಾಗದಲ್ಲಿ ನೀರು ಇರುತ್ತದೆ. === ಯಾಣ === ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಶ್ರೇಣಿಯಲ್ಲಿದೆ. ಇದು ಶಿರಸಿಯಿಂದ ೪೫ ಕಿ.ಮಿ. ದೂರದಲ್ಲಿದೆ. === ಶ್ರೀ ಮಾರಿಕಾಂಬಾ ದೇವಸ್ಥಾನ === ಸಿರ್ಸಿಯಿಂದ ಬನವಾಸಿಗೆ ಹೋಗುವ ರಸ್ತೆಯ ಬಲಭಾಗದಲ್ಲಿ ಸುಮಾರು ೧೬ನೇ ಶತಮಾನದ ಶ್ರೀ ಮಾರಿಕಾಂಬಾ ದೇವಾಲಯವಿದೆ. ೧೯೩೩ರಲ್ಲಿ ಗಾಂಧೀಜಿಯವರು ಸಹ ಇಲ್ಲಿಗೆ ಭೇಟಿ ನೀಡಿದ್ದರು ಎಂಬ ಉಲ್ಲೇಖವಿದೆ. === ಮುಂಡಿಗೆಕೆರೆ ಪಕ್ಷಿಧಾಮ === ಸಿರ್ಸಿ ತಾಲೂಕಿನ ಸುಧಾಪುರ ಕ್ಷೇತ್ರದ ಸೋಂದಾ ಗ್ರಾಮದಲ್ಲಿರುವ ಬಾಡಲಕೊಪ್ಪ ಮಜರೆಯಲ್ಲಿರುವ ಮುಂಡಿಗೆಕೆರೆ ಪಕ್ಷಿಧಾಮಕ್ಕೆ ಪ್ರತಿವರ್ಷ ಸಾವಿರಾರು ಬೆಳ್ಳಕ್ಕಿಗಳು ವಂಶಾಭಿವೃದ್ಧಿಗೆ ಜೂನ್ ತಿಂಗಳಲ್ಲಿ ಬಂದು ನೂರಾರು ಗೂಡುಗಳನ್ನು ಕಟ್ಟಿ ವಾಸಿಸುತ್ತವೆ. ಅಕ್ಟೋಬರ್‌ ತಿಂಗಳ ಕೊನೆಯವರೆಗೆ ಸಂತಾನೋತ್ಪತ್ತಿ ಮಾಡಿಕೊಂಡು ಹಾರಿಹೋಗುತ್ತವೆ. ಸುಮಾರು ೪ ಎಕರೆ ವಿಸ್ತಾರದ ಈ ಕೆರೆಯನ್ನು ಸಂಪೂರ್ಣ ಆವರಿಸಿವ ಮುಂಡಿಗೆ ಗಿಡಗಳ ಮೇಲೆಯೇ ಗೂಡು ಕಟ್ಟಿಕೊಳ್ಳುತ್ತವೆ. ಕೆರೆಯ ಪಕ್ಕದಲ್ಲೇ ೪೦ ಅಡಿ ಎತ್ತರದ ವೀಕ್ಷಣಾ ಗೋಪುರ ಸಹ ಇದೆ. === ಮುಸುಕಿನ ಬಾವಿ === ಸದ್ಯ ಸಿರ್ಸಿ ನಗರದ ನಾಡಿಗಲ್ಲಿಯ ಕೊನೆಯಲ್ಲಿರುವ ಮುಸುಕಿನ ಬಾವಿಯನ್ನು ೧೭ನೇ ಶತಮಾನದಲ್ಲಿ ಸೋದೆಯ ಅರಸ ಸದಾಶಿವರಾಯ ತನ್ನ ಪ್ರೇಯಸಿ ಸ್ನಾನಕ್ಕೆ ಅನುಕೂಲ ಕಲ್ಪಿಸಲು ಕಟ್ಟಿಸಿದ್ದ. == ಇತಿಹಾಸ == ==== ರಾಜ ಮನೆತನಗಳು ==== ==== ಪ್ರಮುಖ ಇಸವಿಗಳು ==== ==== ದೊರೆತ ನಾಣ್ಯಗಳು ==== ಬೆಳ್ಳಿ, ಪೊಟಿನ್ ಮತ್ತು ಸೀಸದ ನಾಣ್ಯಗಳು ಶಾತವಾಹನ, ಚುಟು, ರೋಮನ್ (ಲಿಸಿತಿಸ್, ಡೆಮೆಟ್ರಿಯಸ್, ಟೊಲೆಮಿ, ಆಗಥೊಕ್ಲಿಯಸ್) ==== ಪ್ರಮುಖ ಉಲ್ಲೇಖಗಳು ==== ಸಿರ್ಸಿ ಹತ್ತಿರದ ಸಿದ್ದಾಪುರ ತಾಲೂಕಿನ ತಮಡಿ ಕಲ್ಲಾಳದಲ್ಲಿ ದೊರೆತ "ಡಿಸೆಂಬರ್ ೨೬, ೧೦೭೨ (ಗುರುವಾರ)" ತಿಥಿಯ ವೀರಗಲ್ಲಿನಲ್ಲಿ, ಸಿರಿಸೆ' ಎಂಬ ಸ್ಥಳದಲ್ಲಿ ಅಣ್ಣ ತಮ್ಮಂದಿರಾದ ಚಟ್ಟಯ್ಯದೇವ ಮತ್ತು ತೈಲಪದೇವರ ನಡುವೆ ಯುದ್ಧವಾಗಿತ್ತು ಎಂದು ಉಲ್ಲೇಖವಿದೆ. ಜರ್ನಿ ಥ್ರೋ ದಿ ನಾರ್ಥನ್ ಪಾರ್ಟ್ಸ್ ಆಫ್ ಕೆನರಾ: ಕ್ರಿ.ಶ. ೧೮೦೧ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವೈದ್ಯ ಪದವಿಧರ ಡಾ|| ಫ್ರಾನ್ಸಿಸ್ ಬುಕಾನನ್. ಟಿಪ್ಪೂ ಮರಣಾನಂತರ ಕಂಪನಿ ವಶಪಡಿಸಿಕೊಂಡ ಮೈಸೂರು ಮತ್ತು ಮಲಬಾರ್ ಪ್ರಾಂತ್ಯಗಳಲ್ಲಿ ಪ್ರವಾಸ ಕೈಗೊಂಡನು. ಆತ ತನ್ನ ' ' ಹೊತ್ತಿಗೆಯಲ್ಲಿ, ಉತ್ತರಕನ್ನಡದ ಸೋಂದಾದ ತಹಶೀಲ್ದಾರನಿರುವ ಒಂದು ಸಣ್ಣ ಹಳ್ಳಿ 'ಸೆರ್ಸಿ' ಎಂದು ದಾಖಲಿಸಿದ್ದಾನೆ. == ಜನಸಂಖ್ಯೆ == ೨೦೧೧ ಜನಗಣತಿಯ ಪ್ರಕಾರ ಈ ಊರಿನ ಜನಸಂಖ್ಯೆ ೧,೧೦,೨೧೫. ಇವರಲ್ಲಿ 81 ಶೇಕಡಾ ಜನರು ಸಾಕ್ಷರರು. ಸಿರ್ಸಿಯಲ್ಲಿ ಕನ್ನಡ, (ಹವ್ಯಕ ಕನ್ನಡ), ಕೊಂಕಣಿ, ಮರಾಠಿ ಭಾಷೆಗಳನ್ನು ಮಾತಾಡುವ ಜನರಿದ್ದು ಮುಖ್ಯ ವ್ಯಾವಹಾರಿಕ ಭಾಷೆ ಕನ್ನಡವಾಗಿದೆ. == ಪಾರಂಪರಿಕ ಸ್ಥಳಗಳು == ==== ಪಂಡಿತ್ ಜನರಲ್ ವಾಚನಾಲಯ ==== ೧೮೭೦ರಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಗಳು ಸಂಗ್ರಹಿಸಿದ ೩೦೦ ಪುಸ್ತಕಗಳೊಂದಿಗೆ ಕಂದಾಯ ಕಛೇರಿಯಲ್ಲಿ ಪ್ರಾರಂಭವಾಗಿತ್ತು. ನಂತರ ಪುರಸಭಾ ಕಟ್ಟಡಕ್ಕೆ ಸ್ಥಳಾಂತರಗೊಂಡು ೧೯೦೦ರ ಸುಮಾರಿಗೆ ದಿ. ರಾವಬಹದ್ದೂರ್ ಪುಂಡಲೀಕರಾವ್ ಪಂಡಿತರು (ಪುರಸಭಾಧ್ಯಕ್ಷ) ೨೦೦೮ ಚಮೀ ಜಾಗವನ್ನು ೯೯ವರ್ಷಗಳ ಲೀಸಿಗೆ ನೀಡಿದರು. ೧೯೦೪ರಲ್ಲಿ ಕಟ್ಟಡ ನಿರ್ಮಾಣ ಆರಂಭಗೊಂಡು, ೧೯೦೭ರಲ್ಲಿ ಶ್ರೀಮತಿ ಸಿ. ಸಿ. ಬೋಯ್ಡ್‌ರವರಿಂದ ಉದ್ಘಾಟನೆಯಾಯಿತು. ೧೯೭೦ರಲ್ಲಿ ಪದ್ಮಶ್ರೀ ಟಾಕೀಸಿನಲ್ಲಿ ನೃತ್ಯ ಪ್ರದರ್ಶನದಿಂದ ೨೧,೦೦೦ ರೂಪಾಯಿಗಳನ್ನು ಸಂಗ್ರಹಿಸಿ ವಾಚನಾಲಯದ ಶತಮಾನೋತ್ಸವ ಆಚರಿಸಲಾಯಿತು. ರಾಜ್ಯಪಾಲರ ಆಡಳಿತವಿದ್ದ ಕಾಲದಲ್ಲಿ ಅಂದಿನ ರಾಜ್ಯಪಾಲರಾಗಿದ್ದ ಧರ್ಮವೀರರು ಉದ್ಘಾಟಿಸಿ ೧೫,೦೦೦ ರೂಪಾಯಿಗಳ ಅನುದಾನವನ್ನು ಕಟ್ಟಡನಿಧಿಗೆ ನೀಡಿದರು. ೮-೫-೧೯೭೧ರಂದು ಲಕ್ಷ್ಮೀ ಟಾಕೀಸನಲ್ಲಿ ಶತಮಾನೋತ್ಸವ ಕಾರ್ಯಕ್ರಮ ಕಾರ್ಯಕ್ರಮ ನಡೆಯಿತು. ೧೯೭೧ರಲ್ಲಿ ೭೦೦೦ ಪುಸ್ತಕಗಳಿದ್ದ ವಾಚನಾಲಯ ಇಂದು ೨೫೦೦೦ದಷ್ಟು ಬೆಳೆದಿದೆ. ಆ ಸಂಗ್ರಹದಲ್ಲಿ ೨೭-೧೨-೧೯೩೧ರಂದು ರವೀಂದ್ರನಾಥ ಠಾಗೋರ್ರು ಶರಾ ಬರೆದು ಸಹಿಮಾಡಿರುವ 'ಗೋಲ್ಡನ್ ಬುಕ್ ಆಫ಼್ ಟಾಗೋರ್' ಪ್ರಮುಖ ಆಕರ್ಷಣೆಯಾಗಿದೆ. ಮತ್ತೂರು ಕೃಷ್ಣಮೂರ್ತಿ, ಯಂಡಮೂರಿ ವೀರೇಂದ್ರನಾಥ್‌, ಎಂ. ಕೆ. ಇಂದಿರ, ಸಾಯಿಸುತೆ, ಎಸ್.ಎಲ್. ಭೈರಪ್ಪ, ಎಲ್. ಎಸ್. ಶೇಷಗಿರಿ ರಾವ್, ಮುಂತಾರವರು ಭೇಟಿ ನೀಡಿ ಶರಾ ಬರೆದಿದ್ದಾರೆ. ==== ನಾಗೂಬಾಯಿ ಓಣಿ ==== ರಾಯರಪೇಟೆಯ ವಿಷ್ಣು ಮಠದ ಎದುರಿಗಿರುವ ರಸ್ತೆಗೆ ನಾಗೂಬಾಯಿ ಓಣಿ ಎಂದು ಕರೆಯುತ್ತಾರೆ. ೧೯೨೦ರಲ್ಲಿ ಸಿರ್ಸಿಗೆ ಬಂದ ಶ್ರೀಮತಿ ನಾಗೂಬಾಯಿ ಭಟ್ಕಳ್ಕರ್ (೧೮೯೭-೧೯೬೯) ಎಂಬ ಶುಶ್ರೂಕಿಯ ನೆನಪಿಗಾಗಿ ಹೆಸರಿಟ್ಟಿದ್ದಾರೆ. ಇವರು ದಶಕಗಳ ಕಾಲ ಸಿರ್ಸಿ ಭಾಗದ ಬಾಣಂತಿ ಮತ್ತು ನವಜಾತ ಶಿಶುಗಳ ಆರೈಕೆಮಾಡುತ್ತಿದ್ದಲ್ಲದೇ ೧೯೫೪-೫೬ರ ಕಾಲದಲ್ಲಿ ರಾಯರಪೇಟೆ ವಾರ್ಡಿನಿಂದ ಪುರಸಭೆಗೆ ನಾಮಕರಣ ಸದಸ್ಯರಾಗಿಯೂ ಸೇವೆಸಲ್ಲಿಸಿದ್ದಾರೆ. ಇವರ ಹೆಸರಿನ ದತ್ತಿನಿಧಿಯಿಂದ ಪ್ರತಿವರ್ಷ ಎಂ. ಇ. ಎಸ್. ನರ್ಸಿಂಗ್ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಶುಶ್ರೂಕಿಗೆ ವಿಶೇಷ ಪುರಸ್ಕಾರವನ್ನು ನೀಡಲಾಗುತ್ತದೆ. ==== ಪಂಡಿತ್ ಜನರಲ್ ಆಸ್ಪತ್ರೆ ==== ಶ್ರೀಮಾರಿಕಾಂಬಾ ಮೆಟರ್ನಿಟಿ ವಾರ್ಡ: ೧೯೩೦ರಲ್ಲಿ ಮಾರಿಕಾಂಬಾ ದೇವಸ್ಥಾನದ ಧನಸಹಾಯದಿಂದ ನಿರ್ಮಾಣಗೊಂಡು, ೧೯೩೨ರಲ್ಲಿ ಮುಂಬೈ ಪ್ರೆಸಿಡೆನ್ಸಿಯ ಗವರ್ನರ್ ಕೌನ್ಸಿಲ್‌ನ ಆರೋಗ್ಯ ಇಲಾಖಾ ಸದಸ್ಯರಾಗಿದ್ದ ಶಾನ್‌ವಾಜ್‌ಖಾನ್‌ರಿಂದ ಉದ್ಘಾಟನೆಗೊಂಡಿತು. ==== ಇತರ ಕಟ್ಟಡಗಳು: ==== ರಾಯಪ್ಪ ಹುಲೇಕಲ್ ಶಾಲೆ (ಸು. ೧೫೦ ವರ್ಷ) ಕೇಶವೈನ್ ಬಂಗಲೆ - ೧೯೩೧ರಲ್ಲಿ ಗಾಂಧೀಜಿಯವರು ವಾಸ್ತವ್ಯ ಮಾಡಿದ ಕಟ್ಟಡ == ವೃತ್ತ ಪತ್ರಿಕೆಗಳು == ಲೋಕಧ್ವನಿ ಜನಮಾಧ್ಯಮ == ವಾಣಿಜ್ಯ ಸಂಸ್ಥೆಗಳು == ಟಿ. ಎಸ್. ಎಸ್. (ದಿ ತೋಟಗಾರ್ಸ್ ಕೊ-ಆಪರೇಟಿವ್ ಸೇಲ್ ಸೊಸೈಟಿ ಲಿಮಿಟೆಡ್) == ಪ್ರಮುಖ ಶಿಕ್ಷಣ ಸಂಸ್ಥೆಗಳು == ಅರಣ್ಯ ಮಹಾವಿದ್ಯಾಲಯ, ಸಿರ್ಸಿ (೧೯೮೫) ಎಮ್. ಇ. ಎಸ್ ಎಜುಕೇಶನ್ ಟ್ರಸ್ಟ್ (ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಕಾನೂನು ಮಹಾವಿದ್ಯಾಲಯ, ವಾಣಿಜ್ಯ ಮಹಾವಿದ್ಯಾಲಯ) ಆವೆ ಮರಿಯಾ ಎಜುಕೇಶನ್ ಟ್ರಸ್ಟ್ (೧೯೪೫) ಪ್ರೋಗ್ರೆಸ್ಸಿವ್ ಎಜುಕೇಶನ್ ಟ್ರಸ್ಟ್ ಡೊನ್ ಬೊಸ್ಕೊ ಎಜುಕೇಶನ್ ಟ್ರಸ್ಟ್ ಆರ್.ಎನ್.ಎಸ್ ಪೊಲಿಟೇಕ್ನಿಕ್ ಎಜುಕೇಶನ್ ಟ್ರಸ್ಟ್ ಶ್ರೀ ಮಾತಾ ವಿದ್ಯಾನಿಕೇತನ, ಚಂದನ ಪ್ರೌಢಶಾಲೆ ಜಿ.ಎಸ್.ಎಸ್. ವಾನಳ್ಳಿ ಶ್ರೀದೇವಿ ಪ್ರೌಢಶಾಲೆ, ಹುಲೇಕಲ್ ಲಯನ್ಸ್ ಶಿಕ್ಷಣ ಸಂಸ್ಥೆ (೧೯೯೪) ಶ್ರೀ ಸಿದ್ಧಿ ವಿನಾಯಕ ಪ್ರೌಢಶಾಲೆ, ಗೋಳಿ (೧೯೬೧) ಶ್ರೀ ಕಾಳಿಕ ಭವಾನಿ ಸೆಕೆಂಡರಿ ಶಾಲೆ, ಕಾನಸೂರು == ಪ್ರಮುಖ ವ್ಯಕ್ತಿಗಳು == ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜಕಾರಣಿ ಹರ್ಡೇಕರ ಮಂಜಪ್ಪ, ರಾಜಕಾರಣಿ == ಇವನ್ನೂ ನೋಡಿ == ಉತ್ತರ ಕನ್ನಡ ಸಿರ್ಸಿ ಮಾರಿಕಾಂಬಾ ದೇವಸ್ಥಾನ ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸಿರ್ಸಿ ಸಿರ್ಸಿ ವಿಧಾನಸಭಾ ಕ್ಷೇತ್ರ ಸಿರ್ಸಿ ತಾಲೂಕು ಪಶ್ಚಿಮ ಘಟ್ಟಗಳು ಮಲೆನಾಡು == ಉಲ್ಲೇಖಗಳು ==